ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಜಿಲ್ಲಾ ಆಸ್ಪತ್ರೆ ಕಾಮಗಾರಿ ಪೂರ್ಣಗೊಳಿಸಲು ಡಿಸಿಎಂ ಅಶ್ವತ್ಥನಾರಾಯಣ ಮನವಿ

Last Updated 13 ಜುಲೈ 2020, 18:57 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯಲ್ಲಿರುವ 150 ಹಾಸಿಗೆ ಸಾಮರ್ಥ್ಯದ ಜಿಲ್ಲಾ ಆಸ್ಪತ್ರೆಯಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ಆದಷ್ಟು ಬೇಗನೆ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತವಾಗಿಸಲು ನೆರವಾಗುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಿದರು.

ಕೋವಿಡ್ ಪರಿಸ್ಥಿತಿ ಕುರಿತಂತೆ ಸೋಮವಾರ ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಿಂದ ಮುಖ್ಯಮಂತ್ರಿಗಳು ಜಿಲ್ಲಾಡಳಿತದೊಂದಿಗೆ ನಡೆಸಿದ ವಿಡಿಯೊ ಕಾನ್ಫರೆನ್ಸ್ ವೇಳೆ ಬೆಂಗಳೂರಿನಿಂದಲೇ ಭಾಗಿಯಾದ ಸಚಿವರು, ಜಿಲ್ಲೆಯಲ್ಲಿ ಆಸ್ಪತ್ರೆ ಕಟ್ಟಡ ಪೂರ್ಣಗೊಂಡಿದ್ದು, ಅದಕ್ಕೆ ಅಗತ್ಯವಾದ ಪರಿಕರಗಳು ಸೇರಿದಂತೆ ಬೆಡ್ ಹಾಗೂ ಪೀಠೋಪಕರಣಗಳ ಅವಶ್ಯಕತೆ ಇದೆ. ಇವುಗಳನ್ನು ಆದಷ್ಟು ಬೇಗ ಪೂರೈಸಿ, ಜಿಲ್ಲಾ ಆಸ್ಪತ್ರೆಯನ್ನು ತೆರೆಯಲು ಆರೋಗ್ಯ ಇಲಾಖೆಗೆ ನಿರ್ದೇಶನ ನೀಡುವಂತೆ ಮನವಿ ಮಾಡಿದರು.

ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ಇಲ್ಲ. ಅದರಲ್ಲೂ ಕೋವಿಡ್-19ನಂತಹ ಸಂದರ್ಭದಲ್ಲಿ ಆಸ್ಪತ್ರೆಯನ್ನು ಉದ್ಘಾಟಿಸಿದರೆ ರೋಗಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಹೀಗಾಗಿ ಆಸ್ಪತ್ರೆಯು ಬೇಗನೆ ಸಾರ್ವಜನಿಕ ಸೇವೆಗೆ ತೆರೆದುಕೊಳ್ಳುವಂತಾಗಬೇಕು ಎಂದು ಹೇಳಿದರು.

ನಾಲ್ಕು ತಾಲ್ಲೂಕುಗಳಲ್ಲಿ ತಲಾ 50 ಹಾಸಿಗೆಗಳ ಆಸ್ಪತ್ರೆಗಳು ಕೋವಿಡ್-19ರ ಹೊರತಾಗಿ ಇನ್ನಿತರ ರೋಗಗಳ ಚಿಕಿತ್ಸೆಗಾಗಿ ಲಭ್ಯವಿದೆ. ಹೀಗಾಗಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಕೋವಿಡ್ ಕೇರ್ ಸೆಂಟರ್‌ಗಳನ್ನು ತೆರೆಯಲಾಗುತ್ತಿದೆ. ಜಿಲ್ಲೆಯಲ್ಲಿ ಜಿಲ್ಲಾ ಆಸ್ಪತ್ರೆಯೇ ಇರುವುದಿಲ್ಲ. ಇಂತಹ ಸ್ಥಿತಿಯಲ್ಲಿ ಕಂದಾಯ ಭವನವನ್ನು ಕೋವಿಡ್-19 ರೆಫೆರಲ್ ಆಸ್ಪತ್ರೆಯನ್ನಾಗಿ ಪರಿವರ್ತಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ಮುಖ್ಯಮಂತ್ರಿ ಗಮನಕ್ಕೆ ತಂದರು.

ಆಂಬ್ಯುಲೆನ್ಸ್ ಒದಗಿಸಿ: ಜಿಲ್ಲೆಯಲ್ಲಿ ಕೇವಲ 15 ಆಂಬುಲೆನ್ಸ್‌ಗಳಿವೆ. ಮುಂದಿನ ಪರಿಸ್ಥತಿಯನ್ನು ಅವಲೋಕಿಸಿದಲ್ಲಿ ಹೆಚ್ಚು ವಾಹನಗಳ ಅವಶ್ಯಕತೆ ಇದೆ. ಹೀಗಾಗಿ ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಂಬುಲೆನ್ಸ್‌ಗಳನ್ನು ನೀಡಿದಲ್ಲಿ ಅನುಕೂಲವಾಗುತ್ತದೆ ಎಂದು ಉಸ್ತುವಾರಿ ಸಚಿವರು ಮನವಿ ಮಾಡಿದರು.

ಕೆಂಗೇರಿ ಸಮೀಪದಲ್ಲಿರುವ ರಾಜರಾಜೇಶ್ವರಿ ವೈದ್ಯಕೀಯ ಕಾಲೇಜಿನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಜಿಲ್ಲಾಡಳಿತಕ್ಕೆ 600 ಹಾಸಿಗೆಗಳನ್ನು ಕೋವಿಡ್ ಚಿಕಿತ್ಸೆಗಾಗಿ ನೀಡಲಾಗಿದೆ. ಇದರಲ್ಲಿ 120 ಹಾಸಿಗೆಗಳಿಗೆ ಮಾತ್ರ ಆಕ್ಸಿಜನ್ ಪೂರೈಸುವ ವ್ಯವಸ್ಥೆ ಇತ್ತು. ವೈದ್ಯಕೀಯ ಕಾಲೇಜಿನ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿದ ಫಲವಾಗಿ ಈಗ 270 ಹಾಸಿಗೆಗಳು ಆಮ್ಲಜನಕ ಪೂರೈಸುವ ವ್ಯವಸ್ಥೆಯನ್ನು ಹೊಂದಿರುವುದಾಗಿ ಸಚಿವರು ವಿವರಿಸಿದರು.

ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಮಾಹಿತಿ ನೀಡಿ, ಜಿಲ್ಲೆಯಾದ್ಯಂತ ಕೋವಿಡ್ ನಿಯಂತ್ರಣದಲ್ಲಿದೆ. ಇದುವರೆಗೆ ಒಟ್ಟು 389 ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 224 ಮಂದಿ ಗುಣಮುಖರಾಗಿದ್ದಾರೆ. ಇನ್ನೂ 157 ಪ್ರಕರಣಗಳು ಸಕ್ರಿಯವಾಗಿದೆ ಎಂದರು.

ಉತ್ತಮ ಮಳೆ: ಜಿಲ್ಲೆಯಲ್ಲಿ ವಾಡಿಕೆಗಿಂತ ಉತ್ತಮವಾಗಿ ಮಳೆಯಾಗಿದ್ದು, ಶೇ. 35ರಷ್ಟು ಹೆಚ್ಚಿಗೆ ಆಗಿದೆ. ಜಿಲ್ಲೆಯಲ್ಲಿ ಜುಲೈ ಕೊನೆಯ ಮತ್ತು ಆಗಸ್ಟ್ ಮೊದಲ ವಾರದಲ್ಲಿ ಬಿತ್ತನೆ ಕಾರ್ಯವನ್ನು ರೈತರು ಕೈಗೊಳ್ಳುತ್ತಾರೆ. ಜಿಲ್ಲೆಯಲ್ಲಿ ಬಿತ್ತನೆ ಬೀಜ ಹಾಗೂ ಗೊಬ್ಬರದ ಸಂಗ್ರಹವಿದ್ದು, ಯಾವುದೇ ಕೊರತೆ ಇಲ್ಲದಿರುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು.

ಮಾಗಡಿ ಹೊರತು ಪಡಿಸಿ ಇನ್ನುಳಿದ ಮೂರು ತಾಲ್ಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿಲ್ಲ. ಮಾಗಡಿ ತಾಲ್ಲೂಕಿನ ಕೆಲವು ಕಡೆಗಳಲ್ಲಿ ಮಾತ್ರ ಮಾಸಿಕ ಬಾಡಿಗೆ ಆಧಾರದ ಮೇಲೆ ಟ್ಯಾಂಕರ್ ನೀರನ್ನು ಪೂರೈಸಲಾಗುತ್ತಿದೆ. ಇಂತಹ ಪ್ರದೇಶಗಳಲ್ಲಿ ನೀರಿನ ವ್ಯವಸ್ಥೆಗಾಗಿ ಬೋರ್‌ವೆಲ್ ಕೊರೆಯಿಸಿದರೂ ನೀರು ಲಭ್ಯವಾಗದ ಕಾರಣ ಅನಿವಾರ್ಯವಾಗಿ ಟ್ಯಾಂಕರ್‌ನಿಂದ ನೀರು ಪೂರೈಸಲಾಗುತ್ತಿದೆ ಎಂದು ಅರ್ಚನಾ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT