ಮಾಗಡಿ: ತಾಲ್ಲೂಕಿನ ಅಗಲಕೋಟೆ ಗ್ರಾಮದಲ್ಲಿ ನಾಲ್ಕು ತಲೆಮಾರುಗಳಿಂದಲೂ ಸಲಾಕೆ ಬೊಂಬೆ ಕಲೆಯನ್ನು ಕುಟುಂಬವೊಂದು ಜತನದಿಂದ ಕಾಪಾಡಿಕೊಂಡು ಬಂದಿದ್ದು; ಇದೀಗ ಅಳಿವಿನಂಚಿಗೆ ದೂಡಲ್ಪಟ್ಟಿರುವ ಈ ಕಲಾ ಪರಂಪರೆಯನ್ನು ರಕ್ಷಿಸಬೇಕಿದೆ.
ಕಲಾವಿದ ಎ.ಆರ್.ಸತ್ಯನಾರಾಯಣ ಬೊಂಬೆ ಕಲೆ ಪೋಷಿಸಿಕೊಂಡು, ಆರಾಧಿಸುತ್ತಿರುವ ಕುಟುಂಬದ ಕುಡಿ.
16 ಕೆ.ಜಿ ತೂಕದ ಆಲೆ ಮರದ ಬೊಂಬೆಗಳಿಗೆ ಸಲಾಕೆ ಜೋಡಿಸಿ, ತಲೆಗೆ ಸಿಕ್ಕಿಸಿಕೊಂಡು ಕಲಾ ಪ್ರದರ್ಶನ ನೀಡುವುದನ್ನು ಕಣ್ತುಂಬಿಕೊಳ್ಳುವುದೇ ಆನಂದ.
ಅರಸರ ಆಸ್ಥಾನದಲ್ಲಿ ಪ್ರದರ್ಶನ: ಸತ್ಯನಾರಾಯಣ ಅವರ ಪೂರ್ವಿಕರಾದ ಅಗಲಕೋಟೆ ನರಸಿಂಗರಾಯರು ತಮ್ಮ ಜಮೀನಿನಲ್ಲಿ ಬೆಳೆದಿದ್ದ ಮರೋಳೆ ಮರದಿಂದ ಈ ಬೊಂಬೆಗಳನ್ನು ತಯಾರಿಸಿಕೊಂಡರು. ಇವು ತೂಕವಿದ್ದುದರಿಂದ ಸಲಾಕೆ ಸೇರಿಸಿ, ತಮ್ಮ ತಲೆಗೆ ಜೋಡಿಸಿಕೊಂಡು ಪ್ರದರ್ಶನ ನೀಡಿದರು. ಮೈಸೂರಿನ ಅರಸರ ಆಸ್ಥಾನದಲ್ಲಿ ಪ್ರದರ್ಶನ ನೀಡಿ, ‘ಸೂತ್ರ ಬ್ರಹ್ಮ’ ಎಂಬ ಬಿರುದು ಪಡೆದಿದ್ದರು.
ನರಸಿಂಗರಾಯರ ಪುತ್ರ ಎಂ.ಎನ್.ರಾಮಯ್ಯ ಬೊಂಬೆಕಲೆಯನ್ನು ಕರಗತ ಮಾಡಿಕೊಂಡರು. ಇವರ ಪುತ್ರ ಎಂ.ಆರ್.ಸತ್ಯನಾರಾಯಣ ಬಾಲ್ಯದಿಂದಲೂ ತಂದೆಯವರೊಂದಿಗೆ ನವದೆಹಲಿ, ಚೆನ್ನೈ, ತಿರುಪತಿ ಇತರೆಡೆ ಬೊಂಬೆಗಳ ಪ್ರದರ್ಶನ ನೀಡಿದ್ದಾರೆ. ಮೃದುವಾದ ಮರದಿಂದ ಸ್ವತಃ ಬೊಂಬೆಗಳ ತಯಾರಿಕೆಯನ್ನು ಕರಗತ ಮಾಡಿಕೊಂಡಿದ್ದಾರೆ. ತಮ್ಮ ಪುತ್ರ ರಂಗನಾಥರಾವ್‌ಗೂ ಕಲೆಯನ್ನು ಧಾರೆಯೆರೆದಿದ್ದಾರೆ.
ಆರಂಭದಿಂದಲೂ ಈ ಕುಟುಂಬವೊಂದೇ ಸಲಾಕೆ ಬೊಂಬೆ ಕಲೆಯಲ್ಲಿ ತೊಡಗಿಸಿಕೊಂಡಿದೆ.
ಶ್ರೀಕೃಷ್ಣ ತುಲಾಭಾರ, ಶ್ರೀಕೃಷ್ಣ ಪಾರಿಜಾತ, ಲವಕುಶ ಸೇರಿದಂತೆ ಇತರೆ ಪೌರಾಣಿಕ ಕಥಾಪ್ರಸಂಗಗಳನ್ನು 12 ಜನರ ತಂಡದೊಂದಿಗೆ 2 ಗಂಟೆ ಅವಧಿಯಲ್ಲಿ ಪ್ರದರ್ಶಿಸುವ ಸತ್ಯನಾರಾಯಣ ನೋಡುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಆರಂಭದಲ್ಲಿ ನರಸಿಂಗರಾಯರು ಗಿಡಮೂಲಿಕೆಗಳಿಂದ ತಯಾರಿಸಿಕೊಂಡು ಬೊಂಬೆಗಳಿಗೆ ಬಳಿದಿರುವ ಬಣ್ಣ ಇಂದಿಗೂ ಮಾಸಿಲ್ಲ.
ಕೊರೊನಾ ನಂತರ ಬೊಂಬೆಗಳ ಪ್ರದರ್ಶನ ಕಲೆ ನಡೆಯುವುದು ಕಡಿಮೆಯಾಗಿದೆ. ದೊಂಬಿದಾಸರ ಬಯಲು ನಾಟಕ, ತೊಗಲು ಬೊಂಬೆಗಳ ಕುಣಿತ, ಭಜನೆ, ಹರಿಕಥೆಗಳು ಮೂಲೆಗುಂಪಾಗಿರುವಂತೆ ಸಲಾಕೆ ಬೊಂಬೆಗಳ ಪ್ರದರ್ಶನವೂ ಮೂಲೆಗುಂಪಾಗುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.