ಆನೆಗಳ ಕಾರ್ಯಾಚರಣೆಗಾಗಿ ಮೊದಲ ಸಲ ಅತ್ಯಾಧುನಿಕ ಥರ್ಮಲ್ ಡ್ರೋನ್ ಕ್ಯಾಮೆರಾ ಬಳಸುತ್ತಿದ್ದೇವೆ. ಆನೆಗಳನ್ನು ಶೀಘ್ರ ಹಚ್ಚಲು ಕ್ಯಾಮೆರಾ ಸಹಕಾರಿಯಾಗಿದೆ.
ದೇವರಾಜ್ ಡಿಸಿಎಫ್ ರಾಮನಗರ
ಜಿಲ್ಲೆಯ ಎಲ್ಲಾ ವಲಯದಲ್ಲೂ ಡ್ರೋನ್ ಕ್ಯಾಮೆರಾ ಬಳಸಿ ಆನೆಗಳ ಮೇಲೆ ನಿಗಾ ಇಡಬೇಕು. ಅಲ್ಲದೆ ಶೀಘ್ರ ಆನೆ ಕಾರ್ಯಪಡೆಯನ್ನು ರಚಿಸಬೇಕು.
ಸಿ. ಪುಟ್ಟಸ್ವಾಮಿ ರೈತ ಮುಖಂಡ ರಾಮನಗರ
ಡ್ರೋನ್ ವಿಶೇಷತೆ ಏನು?
ಥರ್ಮಲ್ ಡ್ರೋನ್ ಹಗಲು ಮತ್ತು ರಾತ್ರಿ ಕಾಡಾನೆಗಳ ಚಲನವಲನಗಳನ್ನು ಸೆರೆ ಹಿಡಿಯುವ ಸಾಮರ್ಥ್ಯ ಹೊಂದಿದೆ. ₹24 ಲಕ್ಷ ವೆಚ್ಚದ ಇದು ಎಲ್ಲಾ ರೀತಿಯ ವಾತಾವರಣದಲ್ಲೂ ಕಾರ್ಯನಿರ್ವಹಿಸಬಲ್ಲದು. ಮೇಲಿನಿಂದ ಸುಮಾರು 2 ಕಿ.ಮೀ. ಸುತ್ತಮುತ್ತಲಿನ ಪ್ರದೇಶದ ವ್ಯಾಪ್ತಿಯಲ್ಲಿರುವ ಆನೆಗಳ ಚಿತ್ರವನ್ನು ಸ್ಪಷ್ಟವಾಗಿ ತೆಗೆಯುತ್ತದೆ. ಹಗಲು ಹೊತ್ತು ಮಾಮೂಲಿ ಚಿತ್ರ ಹಾಗೂ ರಾತ್ರಿ ನೆಗೆಟೀವ್ ಮಾದರಿಯ ಚಿತ್ರಗಳನ್ನು ತೆಗೆಯುತ್ತದೆ. ‘ಕ್ಯಾಮೆರಾಗೆ ಮೂರು ಬ್ಯಾಟರಿಗಳಿದ್ದು ತಲಾ 40 ನಿಮಿಷದವರೆಗೆ ಚಾರ್ಜ್ ಇರುತ್ತವೆ. ಆನೆಗಳ ಎಲ್ಲಿವೆ ಎಂಬುದರ ಆಧಾರದ ಮೇಲೆ ರಾತ್ರಿ ಮತ್ತು ಹಗಲು ಕ್ಯಾಮೆರಾ ಆಪರೇಟ್ ಮಾಡಲಾಗುತ್ತದೆ. ಆನೆಗಳು ಪತ್ತೆಯಾದ ತಕ್ಷಣ ಕ್ಯಾಮೆರಾದಲ್ಲಿ ಲೋಕೇಷನ್ ಸಮೇತ ಚಿತ್ರ ಸೆರೆ ಹಿಡಿದು ಅರಣ್ಯ ಇಲಾಖೆ ಸಿಬ್ಬಂದಿಗೆ ಕಳಿಸಲಾಗುತ್ತದೆ. ಕೂಡಲೇ ಅವರು ಕಾರ್ಯಪ್ರವೃತ್ತರಾಗಿ ಆನೆಗಳನ್ನು ಮರಳಿಗೆ ಕಾಡಿಗಟ್ಟುತ್ತಾರೆ’ ಎಂದು ನಾಗರಹೊಳೆಯ ಡ್ರೋನ್ ಪೈಲಟ್ ಡಿಆರ್‌ಎಫ್‌ಒ ಯೋಗೇಶ್ವರಿ ಹೇಳಿದರು.