ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬರ: ಜಿಲ್ಲೆಗೆ ₹10.61 ಕೋಟಿ ಪರಿಹಾರ ಬಿಡುಗಡೆ

ಬೆಳೆ ಹಾನಿ: ಗರಿಷ್ಠ 2 ಹೆಕ್ಟೇರ್‌ಗೆ ಸೀಮಿತಗೊಳಿಸಿ ಪರಿಹಾರ ನಿಗದಿ
Published 19 ಜನವರಿ 2024, 15:37 IST
Last Updated 19 ಜನವರಿ 2024, 15:37 IST
ಅಕ್ಷರ ಗಾತ್ರ

ರಾಮನಗರ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಮಾರ್ಗಸೂಚಿಯಂತೆ, ಬರದಿಂದಾಗಿರುವ ಬೆಳೆಹಾನಿಗೆ ಜಿಲ್ಲೆಗೆ ₹10.61 ಕೋಟಿ ಪರಿಹಾರ ಪರಿಹಾರ ಬಿಡುಗಡೆ ಮಾಡಲಾಗಿದೆ.

ಬರದಿಂದಾಗಿ ಶೇ 33ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಉಂಟಾದ ಬೆಳೆ ಹಾನಿಗೆ ಗರಿಷ್ಠ 2 ಹೆಕ್ಟೇರ್‌ಗೆ ಸೀಮಿತಗೊಳಿಸಿ ಮಳೆಯಾಶ್ರಿತ ಬೆಳೆಗೆ ಪ್ರತಿ ಹೆಕ್ಟೇರ್‌ಗೆ ₹8,500, ನೀರಾವರಿ ಬೆಳೆಗೆ ಪ್ರತಿ ಹೆಕ್ಟೇರ್‌ಗೆ ₹17 ಸಾವಿರ ಹಾಗೂ ಬಹು ವಾರ್ಷಿಕ ಬೆಳೆಗೆ ಪ್ರತಿ ಹೆಕ್ಟೇರ್‌ಗೆ ₹22,500 ಸಾವಿರ ಪರಿಹಾರ ನಿಗದಿಪಡಿಸಲಾಗಿದೆ.

ರೈತರಿಗೆ ಪರಿಹಾರದ ಮೊದಲನೇ ಕಂತಾಗಿ ಬೆಳೆಹಾನಿಗೆ ಅನುಗುಣವಾಗಿ ಪ್ರತಿ ರೈತರಿಗೆ ಗರಿಷ್ಠ ₹2 ಸಾವಿರದವರೆಗೆ ಪಾವತಿಸಲು ಸರ್ಕಾರ ಅನುಮತಿ ನೀಡಿದೆ. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದಿಂದ ಎನ್‌ಡಿಆರ್‌ಎಫ್ ಅನುದಾನ ಬಿಡುಗಡೆಯಾದ ನಂತರ, ಎಸ್‌ಡಿಆರ್‌ಎಫ್ ಮಾರ್ಗಸೂಚಿಗಳ ಪ್ರಕಾರ ಹೆಚ್ಚುವರಿ ಮೊತ್ತಕ್ಕೆ ಅರ್ಹತೆಯಿರುವ ರೈತರಿಗೆ ಹೆಚ್ಚುವರಿ ಪರಿಹಾರ ಬಿಡುಗಡೆಗೊಳಿಸಲಾಗುವುದು.

ಸರ್ಕಾರದ ನಿರ್ದೇಶನದಂತೆ, ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ರೈತರಿಗೆ ಡಿಜಿಟಲ್ ಬೆಳೆ ಸಮೀಕ್ಷೆ ಮಾಹಿತಿ ಮತ್ತು ಎಫ್.ಐ.ಡಿ ಹೊಂದಿರುವ ರೈತರ ಮಾಹಿತಿಯನ್ನಾಧರಿಸಿ ಪರಿಹಾರ ತಂತ್ರಾಂಶದ ಮೂಲಕ ಹಂತ ಹಂತವಾಗಿ ಪರಿಹಾರ ವಿತರಣೆ ಪ್ರಕ್ರಿಯೆ ಪ್ರಾರಂಭವಾಗಿದೆ. ಅದರಂತೆ ಮೊದಲನೇ, 2ನೇ ಹಾಗೂ 3ನೇ ಹಂತಗಳಲ್ಲಿ ಒಟ್ಟು 59,850 ರೈತರಿಗೆ ₹10.61 ಕೋಟಿ ಇನ್‌ಪುಟ್ ಸಬ್ಸಿಡಿ ಜಮೆ ಮಾಡಲು ಅನುಮೋದನೆ ನೀಡಲಾಗಿದೆ.

ಸರ್ಕಾರದಿಂದ ನೇರವಾಗಿ ಆಧಾರ್ ಸಂಖ್ಯೆ ಜೋಡಣೆಯಾಗಿರುವ ರೈತರ ಬ್ಯಾಂಕ್ ಖಾತೆಗಳಿಗೆ ಪರಿಹಾರ ಧನವನ್ನು ಪಾವತಿಸಲಾಗಿದೆ. ಉಳಿದ ರೈತರಿಗೆ ಹಂತ ಹಂತವಾಗಿ ಪರಿಹಾರ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ರೈತರು ಆಯಾ ತಾಲ್ಲೂಕಿನ ತಹಶೀಲ್ದಾರ್ ಕಾರ್ಯಾಲಯಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT