ಗುರುವಾರ , ಆಗಸ್ಟ್ 5, 2021
24 °C
ಚಂದೂರಾಯನಹಳ್ಳಿ ಕೆವಿಕೆಯಲ್ಲಿ ರಾಷ್ಟ್ರೀಯ ಮೀನು ಕೃಷಿಕರ ದಿನಾಚರಣೆ

ಒಳನಾಡು ಮೀನುಗಾರಿಕೆಗೆ ಒತ್ತು ನೀಡಿ: ಕೆವಿಕೆ ಮುಖ್ಯಸ್ಥೆ ಡಾ.ಸವಿತಾ ಎಸ್‌.ಎಂ.

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಗಡಿ: ‘ಒಳನಾಡಿನ ಕೆರೆ, ಕಟ್ಟೆ, ಕಲ್ಯಾಣಿ ಹಾಗೂ ಗ್ರಾಮೀಣ ಜಲ ಸಂಪನ್ಮೂಲಗಳಲ್ಲಿ ಮೀನು ಸಾಕಾಣಿಕೆಗೆ ವಿಪುಲ ಅವಕಾಶಗಳಿವೆ. ಖಡಿಮೆ ಖರ್ಚಿನಲ್ಲಿ ಮೀನು ಮರಿ ಸಾಕುವುದು ಆರ್ಥಿಕ ಅಭಿವೃದ್ಧಿಗೆ ಸಹಕಾರಿ’ ಎಂದು ಕೆವಿಕೆ ಮುಖ್ಯಸ್ಥೆ ಡಾ.ಸವಿತಾ ಎಸ್‌.ಎಂ. ತಿಳಿಸಿದರು.

ತಾಲ್ಲೂಕಿನ ಚಂದೂರಾಯನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಮೀನು ಕೃಷಿಕರ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ತಾಲ್ಲೂಕಿನ ಎಲ್ಲಾ ಕೆರೆ, ಕಲ್ಯಾಣಿ, ಗೋಕಟ್ಟೆಗಳಲ್ಲಿ ಮೀನು ಮರಿ ಸಾಕುವುದನ್ನು ರೂಢಿಸಿಕೊಂಡರೆ ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಆಹಾರ ದೊರೆಯಲಿದೆ ಎಂದರು.

ವಿಜ್ಞಾನಿ ಬಿ.ವಿ. ಕೃಷ್ಣಮೂರ್ತಿ ಮಾತನಾಡಿ, ಇಂದು ಮೀನು ಕೃಷಿಕರ ದಿನ ಆಚರಿಸಲಾಗುತ್ತಿದೆ. 2ನೇ ಮಹಾಯುದ್ಧದ ನಂತರ ಇಡೀ ಭಾರತ ಆಹಾರ ಹಾಗೂ ಪೌಷ್ಟಿಕತೆಯ ಕೊರತೆ ಎದುರಿಸಿತ್ತು. 1947ರಲ್ಲಿ ಕೇಂದ್ರ ಸರ್ಕಾರವು ಒಳನಾಡು ಮೀನುಗಾರಿಕಾ ಸಂಶೋಧನಾ ಕೇಂದ್ರ ಸಂಸ್ಥೆ ಸ್ಥಾಪಿಸಿತು. ಈ ಸಂಸ್ಥೆಯ ಸ್ಥಾಪನೆಯೊಂದಿಗೆ ಹಲವಾರು ಮೀನುಮರಿ ಉತ್ಪಾದನಾ ಕೇಂದ್ರಗಳು ಕೋಲ್ಕತ್ತದ (ಹೌರಾ) ಸುತ್ತಮುತ್ತಲಿನ ಪ್ರದೇಶದಲ್ಲಿ ಹಬ್ಬಿಕೊಂಡವು. ಇಲ್ಲಿಂದ ಮೀನು ಮರಿಗಳನ್ನು ಬೇರೆ ರಾಜ್ಯಗಳಿಗೆ ಕಳುಹಿಸಲಾಯಿತು’ ಎಂದು ಮಾಹಿತಿ ನೀಡಿದರು.

ನೈಸರ್ಗಿಕ ನೀರಿನ ಸಂಪನ್ಮೂಲಗಳಲ್ಲಿ ಉತ್ತಮ ಗುಣಮಟ್ಟದ ಅತಿಚಿಕ್ಕ ಮೀನು ಮರಿಗಳು ದೊರೆಯದಿರುವ ಕಾರಣ ಕೃತಕ ಮೀನು ಮರಿ ಉತ್ಪಾದನೆಗೆ ಪ್ರಾಮುಖ್ಯತೆ ನೀಡಲಾಯಿತು. ಇದರ ಪ್ರತಿಫಲವಾಗಿ ದೇಶದಲ್ಲಿ 1957ರ ಜುಲೈ 10ರಂದು ಡಾ.ಹೀರಾಲಾಲ್ ಚೌದರಿ ಹಾಗೂ ಡಾ.ಆಲಿಕುನ್ನಿ ಮಾರ್ಗದರ್ಶನದಲ್ಲಿ ಪ್ರಪ್ರಥಮ ಬಾರಿಗೆ ಭಾರತದ ಗೆಂಡೆ ಮೀನುಮರಿಗಳ ಪ್ರಚೋದಿತ ಮೀನುಮರಿ ಉತ್ಪಾದನೆಯನ್ನು ಯಶಸ್ವಿಯಾಗಿ ಮಾಡಲಾಯಿತು ಎಂದು ವಿವರಿಸಿದರು

ಈ ಮಹತ್ವದ ಸಾಧನೆಯು ರಾಷ್ಟ್ರದಾದ್ಯಂತ ಒಳನಾಡು ಮೀನು ಉತ್ಪಾದನೆಗೆ ಪೂರಕವಾಗಿ ನೀಲಿಕ್ರಾಂತಿಗೆ ನಾಂದಿಯಾಯಿತು. ಈಗ ಒಳನಾಡು ಮೀನು ಕೃಷಿ ಉತ್ಪನ್ನದಲ್ಲಿ 2ನೇ ಸ್ಥಾನ ಪಡೆದಿದೆ. ಕಳೆದ 5 ದಶಕದಲ್ಲಿ ಮೀನು ಉತ್ಪಾದನೆಯು ಸುಮಾರು 16 ಪಟ್ಟು ಹೆಚ್ಚಿದೆ. ಅಲ್ಲದೇ, ಲಕ್ಷಾಂತರ ಜನರಿಗೆ ಗುಣಮಟ್ಟದ ಆಹಾರ ಮತ್ತು ಉದ್ಯೋಗ ಒದಗಿಸುವಲ್ಲಿ ಪ್ರಮುಖ ಪಾತ್ರವಾಗಿದೆ ಎಂದರು.

ಕೇಂದ್ರ ಸರ್ಕಾರ 2001ರ ಜುಲೈ 10 ಅನ್ನು ರಾಷ್ಟ್ರೀಯ ಮೀನು ಕೃಷಿಕರ ದಿನವೆಂದು ಘೋಷಿಸಿದೆ. ಸಮಗ್ರ ಕೃಷಿ ಪದ್ಧತಿಯಲ್ಲಿ ಮೀನು ಸಾಕಾಣಿಕೆ ವಿಧಾನಗಳು, ಕೊಳವೆಬಾವಿ ನೀರು ಸಂಗ್ರಹಣಾ ಕೊಳಗಳಲ್ಲಿ ಮೀನು ಕೃಷಿ ಮಾಡುವ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಮೀನುಗಳಿಗೆ ಪೂರಕ ಆಹಾರವಾಗಿ ಅಕ್ಕಿ ತೌಡು, ಗೋಧಿ ಬೂಸ, ಜೋಳದ ಪುಡಿ ಮುಂತಾದ ಸ್ಥಳೀಯವಾಗಿ ಸಿಗುವ ಆಹಾರ ಪದಾರ್ಥ ನೀಡಬಹುದು. ರೈತರು ಹೆಚ್ಚಿನ ಆದಾಯ ಕೂಡ ಗಳಿಸಬಹುದು ಎಂದು ತಿಳಿಸಿದರು.

ವಿವಿಧ ಜಿಲ್ಲೆಗಳಿಂದ 45ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು. ಕೆವಿಕೆ ವಿಸ್ತರಣಾ ವಿಜ್ಞಾನಿ ಚೈತ್ರಶ್ರೀ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು