ರಾಮನಗರ: ಸುಸಜ್ಜಿತ ಕಟ್ಟಡ ಸೇರಿದಂತೆ ಎಲ್ಲ ಮೂಲಸೌಕರ್ಯಗಳಿದ್ದರೂ ವಿದ್ಯಾರ್ಥಿಗಳ ಶೂನ್ಯ ದಾಖಲಾತಿ ಕಾರಣ ಎರಡು ವರ್ಷದಲ್ಲಿ ಜಿಲ್ಲೆಯ ಐದು ಸರ್ಕಾರಿ ಪದವಿ ಪೂರ್ವ ಕಾಲೇಜುಗಳು ಮುಚ್ಚಿವೆ.
ಇದರಲ್ಲಿ ರಾಮನಗರ ತಾಲ್ಲೂಕಿನಲ್ಲಿ ನಾಲ್ಕು ಹಾಗೂ ಮಾಗಡಿಯ ಒಂದು ಕಾಲೇಜು ಸೇರಿದೆ. ಕಳೆದ ವರ್ಷ ಯಾವ ವಿದ್ಯಾರ್ಥಿ ಪ್ರವೇಶ ಪಡೆಯದ ಕಾರಣ ರಾಮನಗರ ತಾಲ್ಲೂಕಿನ ಯರೇಹಳ್ಳಿ ಮತ್ತು ಮಾಗಡಿ ತಾಲ್ಲೂಕಿನ ಮಂಚನಬೆಲೆ ಪದವಿ ಪೂರ್ವ ಕಾಲೇಜು ಮುಚ್ಚಿದ್ದವು.
ಈ ಸಾಲಿನಲ್ಲಿ ರಾಮನಗರದ ಅಣ್ಣಹಳ್ಳಿ, ಕೆ. ಬನ್ನಿಕುಪ್ಪೆ ಹಾಗೂ ಕೂನಗಲ್ ಕಾಲೇಜುಗಳಿಗೆ ಬೀಗ ಹಾಕಲಾಗಿದೆ. ಗ್ರಾಮೀಣ ಭಾಗದ ಈ ಐದೂ ಕಾಲೇಜುಗಳು ಕಲಾ ವಿಭಾಗವನ್ನು ಮಾತ್ರ ಹೊಂದಿದ್ದವು.
ಒಂದೆಡೆ ಸರ್ಕಾರಿ ಪಿಯು ಕಾಲೇಜುಗಳಿಗೆ ಬೀಗ ಬಿದ್ದಿದ್ದರೆ, ಮತ್ತೊಂದೆಡೆ ಐದು ಖಾಸಗಿ ಪಿಯು ಕಾಲೇಜುಗಳು ರಾಮನಗರದಲ್ಲಿ ಹೊಸದಾಗಿ ಶುರುವಾಗಿವೆ. ಅಲ್ಲಿ ವಿದ್ಯಾರ್ಥಿಗಳ
ತಲೆ ಎತ್ತಿವೆ. ಇಲ್ಲಿ ಬಹುತೇಕ ವಿಜ್ಞಾನ ಮತ್ತು ವಾಣಿಜ್ಯ ವಿಭಾಗ ಮಾತ್ರ ಇದೆ. ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜು, ಯೂನಿವರ್ಸಲ್ ಪದವಿ ಪೂರ್ವ ಕಾಲೇಜು (ಅರ್ಚಕರಹಳ್ಳಿ), ಬೇಥಲ್ ಪದವಿ ಪೂರ್ವ ಕಾಲೇಜು, ಗೌಸಿಯಾ ಪದವಿ ಪೂರ್ವ ಕಾಲೇಜು ಹಾಗೂ ಹೋಲಿ ಕ್ರೆಸೆಂಟ್ ಪದವಿ ಪೂರ್ವ ಕಾಲೇಜುಗಳಿಗೆ ಹೊಸದಾಗಿ ಶುರುವಾಗಿವೆ.
ಚನ್ನಪಟ್ಟಣ ಶಾಸಕ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ 2006–07ರಲ್ಲಿ ಜಿಲ್ಲೆಗೆ ಈ ಕಾಲೇಜು ಮಂಜೂರಾಗಿದ್ದವು.
ವಿದ್ಯಾರ್ಥಿಗಳ ಕೊರತೆಯೊಂದೇ ಕಾಲೇಜುಗಳು ಬಾಗಿಲು ಮುಚ್ಚಲು ಕಾರಣ ಅಲ್ಲ. ಉಪನ್ಯಾಸಕರ ಕೊರತೆಯೂ ವಿದ್ಯಾರ್ಥಿಗಳ ದಾಖಲಾತಿ ಶೂನ್ಯಕ್ಕೆ ಕಾರಣ ಎನ್ನುವುದು ಯರೇಹಳ್ಳಿ ಸರ್ಕಾರಿ ಪಿಯು ಕಾಲೇಜಿನ ಕಾಲೇಜು ಅಭಿವೃದ್ಧಿ ಸಮಿತಿಯ ಚರಣ್ ವಾದ.
‘ಯರೇಹಳ್ಳಿ ಸರ್ಕಾರಿ ಪಿಯು ಕಾಲೇಜಿನಲ್ಲಿದ್ದ ಇಂಗ್ಲಿಷ್ ಉಪನ್ಯಾಸಕರು ವರ್ಗಾವಣೆಯಾದ ಬಳಿಕ ಮತ್ತೆ ಯಾರೂ ಬರಲಿಲ್ಲ. ಇಲಾಖೆ ಮತ್ತೊಬ್ಬ ಉಪನ್ಯಾಸಕರನ್ನು ಕೊಡಲಿಲ್ಲ. ನಾವೇ ಸಂಬಳ ಕೊಟ್ಟು ಅತಿಥಿ ಉಪನ್ಯಾಸಕರನ್ನು ಕರೆತರುವ ಪ್ರಯತ್ನ ಮಾಡಿ ವಿಫಲರಾದೆವು. ಕಡೆಗೆ ಪೋಷಕರು ತಮ್ಮ ಮಕ್ಕಳನ್ನು ಬೇರೆಡೆಗೆ ಸೇರಿಸಿದರು. ಮನೆಮನೆಗೆ ಹೋಗಿ ಪೋಷಕರ ಮನವೊಲಿಸಿ ವಿದ್ಯಾರ್ಥಿಗಳನ್ನು ಕಾಲೇಜಿಗೆ ಸೇರಿಸಿದ್ದೆವು. ಸತತ ಪ್ರಯತ್ನ ನಡೆಸಿದರೂ ನಮ್ಮೂರ ಕಾಲೇಜನ್ನು ಉಳಿಸಿಕೊಳ್ಳಲಾಗಲಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.
‘ಈ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಬೆರಳೆಣಿಕೆಯಿಂದ ಶೂನ್ಯಕ್ಕೆ ಇಳಿದಿದೆ. ಕಾಲೇಜುಗಳು ಸ್ಥಳೀಯ ಸರ್ಕಾರಿ ಪ್ರೌಢಶಾಲೆಗಳಿಗೆ ಹೊಂದಿಕೊಂಡಂತಿದ್ದರೂ, ಅಲ್ಲಿ ಎಸ್‌ಎಸ್‌ಎಲ್‌ಸಿ ಪಾಸಾದವರು ಪಕ್ಕದ ಕಾಲೇಜಿಗೆ ಪ್ರವೇಶ ಪಡೆದಿಲ್ಲ’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಗೋವಿಂದರಾಜು ‘ಪ್ರಜಾವಾಣಿ’ಗೆ ತಿಳಿಸಿದರು.
‘ದಾಖಲಾತಿಗಾಗಿ ಅಭಿಯಾನ ನಡೆಸಿದರೂ ಪ್ರಯೋಜನವಾಗಿಲ್ಲ. ಹಲವು ಕಾಲೇಜುಗಳಲ್ಲಿ ದಾಖಲಾತಿ ಎರಡಂಕಿ ದಾಟಿಲ್ಲ. ಕೆಲವೆಡೆ ಬಲವಂತವಾಗಿ ವಿದ್ಯಾರ್ಥಿಗಳನ್ನು ಸೇರಿಸಲಾಗಿದೆ. ಬೀಗ ಹಾಕಿದ ಕಾಲೇಜುಗಳ ಉಪನ್ಯಾಸಕರನ್ನು ಬೇರೆ ಕಡೆಗೆ ನಿಯೋಜಿಸಲಾಗಿದೆ’ ಎಂದು ಅವರು ಹೇಳಿದರು.
ಪೋಷಕರು ಹಿಂಜರಿಕೆ: ‘ಕಡಿಮೆ ವಿದ್ಯಾರ್ಥಿಗಳಿರುವ ಗ್ರಾಮೀಣ ಕಾಲೇಜುಗಳಿಗೆ ಮಕ್ಕಳನ್ನು ಸೇರಿಸಲು ಪೋಷಕರು ಸಹ ಹಿಂಜರಿಯುತ್ತಿದ್ದಾರೆ. ಹಳ್ಳಿ ಬದಲು ನಗರದ ಕಾಲೇಜು ಸೇರುವ ಹಂಬಲ ವಿದ್ಯಾರ್ಥಿಗಳಲ್ಲಿಯೂ ಹೆಚ್ಚಾಗಿದೆ. ಕೆಲವೆಡೆ ಕಾಲೇಜು ಅಭಿವೃದ್ಧಿ ಸಮಿತಿಯವರೇ ಕಾಲೇಜು ಮುಚ್ಚಲು ಮನವಿ ಮಾಡಿದ್ದಾರೆ’ ಎಂದು ರಾಮನಗರ ಜಿಲ್ಲಾ ಪಿಯು ಉಪನ್ಯಾಸಕರ ಸಂಘದ ಅಧ್ಯಕ್ಷ ಜಿ. ಶಿವಣ್ಣ ಕೊತ್ತಿಪುರ ಹೇಳಿದರು.
‘ಈ ಕಾಲೇಜುಗಳು ಮುಚ್ಚಲು ಉಪನ್ಯಾಸಕರೂ ಒಂದು ರೀತಿ ಕಾರಣ. ಬೆಂಗಳೂರಿನಿಂದಲೇ ಓಡಾಡುವ ಹೆಚ್ಚಿನ ಉಪನ್ಯಾಸಕರು ಬೇಕೆಂತಲೇ ಕಾಲೇಜಿಗೆ ವಿದ್ಯಾರ್ಥಿಗಳು ದಾಖಲಾಗದಂತೆ ನೋಡಿಕೊಳ್ಳುತ್ತಾರೆ. ಇದರಿಂದ, ಅವರಿಗೆ ವರ್ಗಾವಣೆಯಲ್ಲಿ ಮೊದಲ ಆದ್ಯತೆ ಸಿಗಲಿದೆ. ಆಗ ತಮಗೆ ಬೇಕಾದ ಸ್ಥಳಕ್ಕೆ ಹೋಗುತ್ತಾರೆ’ ಎಂದು ಹೆಸರು ಹೇಳಲು ಇಚ್ಛಿಸದ ಉಪನ್ಯಾಸಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ ವರ್ಷ ಅನಿವಾರ್ಯವಾಗಿ ಎರಡು ಕಾಲೇಜು ಮುಚ್ಚಬೇಕಾಯಿತು. ಈ ಸಾಲಿನಲ್ಲಿ ಶೂನ್ಯ ದಾಖಲಾತಿ ಇರುವ ಕಾಲೇಜುಗಳ ಕುರಿತು ಇಲಾಖೆಯ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ – ಗೋವಿಂದರಾಜು ಉಪ ನಿರ್ದೇಶಕ ಪದವಿ ಪೂರ್ವ ಶಿಕ್ಷಣ ಇಲಾಖೆ ರಾಮನಗರ
ಗ್ರಾಮೀಣ ಭಾಗದ ಕಾಲೇಜುಗಳನ್ನು ಮುಚ್ಚಿರುವ ಕುರಿತು ಅಧ್ಯಯನ ನಡೆಸಬೇಕು. ಮುಂದೆ ಹೀಗಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು – ಜಿ. ಉಮೇಶ್ ಅಧ್ಯಕ್ಷ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.