ಹಾರೋಹಳ್ಳಿ: ತಾಲೂಕಿನ ರಾಗಿಹಳ್ಳಿ ಗ್ರಾಮದ, ರಾಜ್ಯ ಅರಣ್ಯ ಪ್ರದೇಶದ ಭೂತನಹಳ್ಳಿ ಗ್ರಾಮದಲ್ಲಿ ವಾಸಿಸುತ್ತಿರುವ ಹಕ್ಕಿಪಿಕ್ಕಿ ಮತ್ತು ಇರುಳಿಗ ಜನಾಂಗದ 48 ಮಂದಿಗೆ ಕೂಡಲೇ ಹಕ್ಕು ಪತ್ರ ನೀಡದಿದ್ದರೆ ತಾಲ್ಲೂಕು ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಕರ್ನಾಟಕ ಅಲೆಮಾರಿ ಹಕ್ಕಿಪಿಕ್ಕಿ ಬುಡಕಟ್ಟು ಸಂರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಜಗ್ಗು ಎಚ್ಚರಿಸಿದರು.
ತಾಲ್ಲೂಕು ಕಚೇರಿ ಎದುರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಭೂತನಹಳ್ಳಿ ಗ್ರಾಮದಲ್ಲಿ ಹಕ್ಕಿಪಿಕ್ಕಿ ಮತ್ತು ಇರುಳಿಗ ಜನಾಂಗದವರು ಹಲವಾರು ವರ್ಷಗಳಿಂದಲೂ ವಾಸಿಸುತ್ತಿದ್ದೇವೆ. ವಸತಿಗಾಗಿ ಸರ್ಕಾರ 350 ಎಕರೆ ಭೂಮಿಯನ್ನು ಡಿನೋಟಿಫಿಕೇಶನ್ ಮಾಡಿದೆ. ಹೀಗಿದ್ದರೂ ಹಲವಾರು ಫಲಾನುವಿಗಳಿಗೆ ಹಕ್ಕುಪತ್ರ ನೀಡದೇ ತಾಲ್ಲೂಕು ಆಡಳಿತ ಸತಾಯಿಸುತ್ತಿದೆ ಎಂದರು.
ಭೂತನಹಳ್ಳಿ ಗ್ರಾಮದಲ್ಲಿ 150ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ತಾಲ್ಲೂಕು ಆಡಳಿತ 114ಮಂದಿಗೆ ಮಾತ್ರ ಹಕ್ಕು ಪತ್ರ ನೀಡಿದೆ. ಉಳಿದ ಜನರಿಗೂ ಹಕ್ಕುಪತ್ರ ವಿತರಿಸುವಂತೆ ಮನವಿ ಮಾಡಲಾಗಿದೆ. ಆದರೆ, ತಾಲ್ಲೂಕು ಆಡಳಿತ ಮನವಿಗೆ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮಸ್ಥರಾದ ವಿಷ್ಣು, ವಿಜಯ್, ಗೋಪಿ, ರಾಜ್ಯ ಪದಾಕಾರಿಗಳಾದ ಹೆಗನ್, ಮಲ್ಲಶೆಟ್ಟಿ, ಗುರುವಯ್ಯ, ಸಾಗರ್, ಸಂಜೀವಯ್ಯ ಸೇರಿದಂತೆ ಅನೇಕರು ಹಾಜರಿದ್ದರು.