ಮಾಗಡಿ: ಮತ್ತೆ ಬರುತ್ತಿದ್ದಾನೆ ಗಣೇಶ. ಗೌರಿಗಣೇಶನ ಹಬ್ಬ ಎಂದರೆ ಈ ಭಾಗದ ಜನರಿಗೆ ನೆನಪಾಗುವುದೇ ಮಾಗಡಿ ಗಣೇಶ. ಇಲ್ಲಿ ತಯಾರಿಸುವ ಜೇಡಿ ಮಣ್ಣಿನ ನೈಸರ್ಗಿಕ ಗಣೇಶನಿಗೆ ರಾಮನಗರ ಜಿಲ್ಲೆಯಾದ್ಯಂತ ಭಾರೀ ಬೇಡಿಕೆ ಇದೆ. ಮಾತ್ರವಲ್ಲ, ಬೇರೆಬೇರೆ ಜಿಲ್ಲೆಗಳಿಂದಲೂ ಜನ ಗಣೇಶನ ಮೂರ್ತಿ ಕೊಳ್ಳಲು ಇಲ್ಲಿಗೆ ಬರುತ್ತಾರೆ. ಈ ಬೇಡಿಕೆಗೆ ತಕ್ಕಂತೆ ಕಲಾವಿದರು ವಿವಿಧ ಆಕೃತಿಯ ಗಣಪನನ್ನು ತಯಾರಿಸುತ್ತ ಬಂದಿದ್ದಾರೆ.
ಸೆ. 6 ಮತ್ತು 7 ರಂದು ಗಣೇಶ ಹಬ್ಬ ಇರುವುದರಿಂದ ಗಣಪತಿಯನ್ನು ಕೂರಿಸುವ ಸಂಪ್ರದಾಯವಿರುವ ಸಾರ್ವಜನಿಕರು ಗಣಪತಿ ಮೂರ್ತಿಗಾಗಿ ಮಾಗಡಿಯತ್ತ ಬರುತ್ತಾರೆ. ವಿವಿಧ ಸಂಘಟನೆಯ ಮುಖಂಡರು, ಸಂಘ–ಸಂಸ್ಥೆಗಳೂ ತಮಗೆ ಬೇಕಾದ ಆಕೃತಿಯ ಗಣಪತಿಯನ್ನು ತಯಾರಿಸಿ ಕೊಡುವಂತೆ ಮುಂಚಿತವಾಗಿಯೇ ಹೇಳಿ ಹೋಗುವುದೂ ಇದೆ. ಮುಂಗಡವಾಗಿ ಹಣ ಕೊಟ್ಟವರಿಗೆ ಅವರವರ ಅಗತ್ಯ, ಬೇಡಿಕೆಗೆ ತಕ್ಕಂತೆ ವಿವಿಧ ಆಕೃತಿಯ, ವಿವಿಧ ಗಾತ್ರದ ಗಣಪನನ್ನು ತಯಾರಿಸಿ, ಹೇಳಿದ ಸಮಯಕ್ಕೆ ಕೊಡಲಾಗುತ್ತದೆ.
ಮಾಗಡಿ ಗಣಪತಿಯ ತಯಾರಿಕೆಯಲ್ಲಿ ಹೆಸರು ಮಾಡಿರುವ ಕಲಾವಿದರಾದ ಮಲ್ಲಿಕಾರ್ಜುನ ಮತ್ತು ಶಿವಕುಮಾರ ಅವರ ಇಡೀ ಕುಟುಂಬದ ಎಲ್ಲಾ ಸದಸ್ಯರು ಆರು ತಿಂಗಳು ಮುಂಚಿತವಾಗಿಯೇ ಗಣಪತಿ ಮೂರ್ತಿ ತಯಾರಿಕೆಯಲ್ಲಿ ತೊಡಗುತ್ತಾರೆ. ಕಳೆದ ನಾಲ್ಕು ತಲೆಮಾರುಗಳಿಂದ ಇದೇ ವೃತ್ತಿಯಲ್ಲಿರುವ ಈ ಕುಟುಂಬಕ್ಕೆ ವರ್ಷದ ಆರು ತಿಂಗಳು ಗಣೇಶನ ಮೂರ್ತಿ ತಯಾರಿಸುವುದೇ ಕೆಲಸ. ಈ ಸಲ ಪಿಒಪಿ ಗಣೇಶನ ಬೇಡಿಕೆ ಸಾಕಷ್ಟು ಕುಗ್ಗಿದ್ದರೂ, ಜೇಡಿ ಮಣ್ಣಿನ ನೈಸರ್ಗಿಕ ಮೂರ್ತಿಗಳನ್ನೇ ಹೆಚ್ಚು ಜನ ಕೇಳುತ್ತಿದ್ದಾರೆ. ಇದು ಪರಿಸರಸ್ನೇಹಿಯೂ ಹೌದು, ಮೂರ್ತಿ ತಯಾರಕರಿಗೂ ಅಚ್ಚುಮೆಚ್ಚು ಎನ್ನುತ್ತಾರೆ ಅವರು.
‘ಕಳೆದ ಬಾರಿ ರಾಮನಗರ, ಬೆಂಗಳೂರು ಹಾಗೂ ಸುತ್ತಮುತ್ತಲಿನ ಭಾಗಗಳಿಂದ ಗ್ರಾಹಕರು ನಮ್ಮ ಗಣಪತಿ ಮೂರ್ತಿಗಳಿಗೆ ಹುಡುಕಿಕೊಂಡು ಬಂದಿದ್ದರು. ಈ ವರ್ಷ ವಿಶೇಷವಾಗಿ ಗದಗ, ಬೀದರ್, ಹುಬ್ಬಳ್ಳಿ, ಬೆಳಗಾವಿ, ಶಿವಮೊಗ್ಗ, ಶಿರಸಿ, ಹೊನ್ನಾಳಿಯಿಂದಲೂ ಬೇಡಿಕೆ ಬಂದಿದ್ದು ಗಣೇಶನ ಮೂರ್ತಿ ತಯಾರಿಕೆಯ ಉತ್ಸಾಹ ಹೆಚ್ಚಿದೆ. ಕನಿಷ್ಠ ಎರಡು ತಿಂಗಳು ಮುಂಚಿತವಾಗಿ ಆರ್ಡರ್ ಕೊಟ್ಟವರಿಗೆ ಬೇಡಿಕೆಗೆ ತಕ್ಕಂತೆ ಗಣಪತಿ ಮೂರ್ತಿಯನ್ನು ಮಾಡಿ ಕೊಡುತ್ತೇವೆ. ಆದರೆ, ಹಬ್ಬದ 15 ದಿನ ಇರುವಾಗ ಗಣಪತಿ ಬೇಕು ಎಂದು ಕೇಳಿದರೆ ಪೂರೈಸುವುದು ಕಷ್ಟ’ ಎನ್ನುತ್ತಾರೆ ಕಲಾವಿದ ಮಲ್ಲಿಕಾರ್ಜುನ.
ಅಯೋಧ್ಯೆಯ ರಾಮಲಲ್ಲಾ ಗಣೇಶನಿಗೆ ಬೇಡಿಕೆ: ಈ ಬಾರಿ ಅಯೋಧ್ಯೆಯ ರಾಮಲಲ್ಲಾ ಗಣಪತಿಗೆ ಭಾರಿ ಬೇಡಿಕೆ ಬಂದಿದೆ. ಇಲ್ಲಿವರೆಗೆ ಬಾರಿ 13ಕ್ಕೂ ಹೆಚ್ಚು ರಾಮಲಲ್ಲಾ ಗಣಪತಿಗೆ ಆರ್ಡರ್ ಬಂದಿವೆ. ಅಯೋಧ್ಯೆಯಲ್ಲಿರುವ ರಾಮಲಲ್ಲಾ ರೀತಿಯಲ್ಲಿಯೇ ಗಣೇಶನನ್ನು ಮಾಡಿರುವುದು ವಿಶೇಷವಾಗಿದ್ದು, ಜೊತೆಗೆ ಅರ್ಧನಾರೀಶ್ವರ, ಚೌತಿ ಗಣಪತಿ, ಬಜರಂಗಿ, ಪೂರಿ ಜಗನ್ನಾಥ, ಪಂಚಮುಖಿ, ಚಾಮರಾಜಪೇಟೆಯ ಬಂಡಿ ಮಾಕಾಳಮ್ಮ, ರಾಘವೇಂದ್ರ ಸ್ವಾಮಿ, ನರಸಿಂಹಸ್ವಾಮಿ, ಡಾ. ರಾಜಕುಮಾರ್ ಮತ್ತು ಅಪ್ಪು ಜೊತೆಯಲ್ಲಿರುವ ಗಣಪತಿ, ಮಲೆ ಮಾದೇಶ್ವರ, ಭರತನಾಟ್ಯ ಗಣಪತಿ ಸೇರಿದಂತೆ ವಿವಿಧ ಆಕೃತಿಯಲ್ಲಿ ತಯಾರಿಸಲಾಗಿದೆ. 12 ಅಡಿ ಎತ್ತರದ ಗಣಪತಿಯೂ ಈ ಸಲದ ವಿಶೇಷತೆಗಳಲ್ಲೊಂದು ಎಂದು ಕಲಾವಿದರು ತಿಳಿಸುತ್ತಾರೆ.
ಕಲಾವಿದರಾದ ಶಿವಕುಮಾರ ಹಾಗೂ ಮಲ್ಲಿಕಾರ್ಜುನ ಅವರ ಜೊತೆ ಅವರ ಕುಟುಂಬಸ್ಥರಾದ ಸುಬ್ರಹ್ಮಣ್ಯ, ಅನುಶ್ರೀ, ಮಣಿಕಂಠ, ಮನೋಜ್ ಕುಮಾರ್ ತಿಂಗಳುಗಳಿಂದ ಗಣಪತಿ ತಯಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.