ಶುಕ್ರವಾರ, ಜೂಲೈ 10, 2020
22 °C
ಮಹಿಳಾ, ಮಕ್ಕಳ ಅಭಿವೃದ್ಧಿ ಇಲಾಖೆ, ಗ್ರಾ,ಪಂ ಅನುದಾನ ಬಳಕೆ

ಚನ್ನಪಟ್ಟಣ: ಅಂಗನವಾಡಿ ಕಟ್ಟಡಕ್ಕೆ ಹೈಟೆಕ್ ಸ್ಪರ್ಶ

ಎಚ್.ಎಂ. ರಮೇಶ್ Updated:

ಅಕ್ಷರ ಗಾತ್ರ : | |

Prajavani

ಚನ್ನಪಟ್ಟಣ: ಮಂಗಾಡಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಿರುವ ಅಂಗನವಾಡಿ ಕೇಂದ್ರ ಹೈಟೆಕ್‌ ಸ್ಪರ್ಶದೊಂದಿಗೆ ಎಲ್ಲರ ಗಮನ ಸೆಳೆಯುತ್ತಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿರುಪಾಕ್ಷಿಪುರ ಗ್ರಾಮ ಪಂಚಾಯಿತಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಒಟ್ಟು ₹8ಲಕ್ಷ ಅನುದಾನದಲ್ಲಿ ಈ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ.

ತಾಲ್ಲೂಕಿನಲ್ಲಿಯೇ ಅತಿ ಸುಸಜ್ಜಿತ ಅಂಗನವಾಡಿ ಕಟ್ಟಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 25*30 ಅಡಿ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಪಾಠದ ಕೋಣೆ, ಅಡುಗೆಮನೆ, ಸಾಮಗ್ರಿ ಸಂಗ್ರಹ ಕೊಠಡಿ, ಒಂದು ಶೌಚಾಲಯ ನಿರ್ಮಿಸಲಾಗಿದೆ. ನೆಲಕ್ಕೆ ಸಂಪೂರ್ಣವಾಗಿ ಟೈಲ್ಸ್ ಹಾಕಲಾಗಿದೆ.

ಕಟ್ಟಡದ ಹೊರಗೆ ವಿವಿಧ ಬಣ್ಣಗಳಲ್ಲಿ ಚಿತ್ತಾರ ಮೂಡಿಸಲಾಗಿದೆ. ಪ್ರಕೃತಿ ಹಾಗೂ ಪ್ರಾಣಿಗಳ ಚಿತ್ರಗಳು ಮಕ್ಕಳ ಮನೋಭಿತ್ತಿಯಲ್ಲಿ ಉಳಿಯುವಂತೆ ಚಿತ್ರಿಸಲಾಗಿದೆ. ಅಲ್ಲಲ್ಲಿ ಮಕ್ಕಳ ಚಿತ್ರಗಳು, ಕೋತಿ, ಗಿಡಮರಗಳನ್ನು ಬಿಡಿಸಲಾಗಿದೆ. ಮತ್ತೊಂದು ಗೋಡೆಯಲ್ಲಿ ನದಿ, ಸಿಂಹ, ಹುಲಿ, ಆನೆ, ಜಿಂಕೆ, ಕರಡಿ ಚಿತ್ರಗಳು ಗಮನ ಸೆಳೆಯುತ್ತವೆ. 

ಗ್ರಾಮದಲ್ಲಿ ಎರಡು ಅಂಗನವಾಡಿ ಕಟ್ಟಡಗಳಿದ್ದು ಒಟ್ಟು 60ಮಕ್ಕಳು ಇದ್ದಾರೆ. ಎರಡನೇ ಅಂಗನವಾಡಿ ಕೇಂದ್ರ ಶಿಥಿಲಗೊಂಡಿತ್ತು. ಗ್ರಾಮ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಅನುದಾನ ತಂದು ನಿರ್ಮಿಸಲಾಗಿದೆ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಿನ್ನಮ್ಮ, ಸದಸ್ಯರಾದ ಸುಜಾತಾ, ಚಂದ್ರಶೇಖರ್, ಎಂ.ಎಸ್.ಕೃಷ್ಣ.

ಮಕ್ಕಳ ಶೈಕ್ಷಣಿಕ ವಾತಾವರಣಕ್ಕೆ ಪೂರಕವಾಗಿ ನಿರ್ಮಿಸಲಾಗಿರುವ ಅಂಗನವಾಡಿ ಕಟ್ಟಡ ಗ್ರಾಮಕ್ಕೆ ಹೆಮ್ಮೆ ವಿಷಯ. ಸರ್ಕಾರದ ಅನುದಾನ ಇಂತಹ ವಿಚಾರಗಳಿಗೆ ಸದುಪಯೋಗವಾಗಬೇಕು ಎಂದು ಗ್ರಾಮದ ಮುಖಂಡರಾದ ಶಿವು, ವೆಂಕಟೇಶ್, ಯತೀಶ್ ಕುಮಾರ್, ಎಂ.ಜೆ.ಮಹೇಶ್, ಪುಟ್ಟಸ್ವಾಮಿ ಅಭಿಪ್ರಾಯಪಡುತ್ತಾರೆ.

ಕಟ್ಟಡ ಬಹುತೇಕ ಪೂರ್ಣಗೊಂಡಿದ್ದು ಉದ್ಘಾಟನೆ ಬಾಕಿ ಇದೆ. ಗೋಡೆ ಮೇಲೆ ಚಿತ್ರ ಬರೆಸಲು ಗ್ರಾಮ ಪಂಚಾಯಿತಿ ವತಿಯಿಂದ ಹಣ ನೀಡಲಾಗಿದೆ. ಸಣ್ಣಪುಟ್ಟ ಕೆಲಸಗಳು ಬಾಕಿ ಇದ್ದು ಶೀಘ್ರದಲ್ಲಿಯೇ ಕಟ್ಟಡವನ್ನು ಮಕ್ಕಳ ಕಲಿಕೆಗೆ ಒಪ್ಪಿಸಲಾಗುವುದು ಎಂದು ಗುತ್ತಿಗೆದಾರ ಬಸವರಾಜು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು