ಭಾನುವಾರ, ಆಗಸ್ಟ್ 14, 2022
26 °C
ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಮಾಹಿತಿ

ಬಿಡದಿ: ನ್ಯಾನೋ ಯೂರಿಯಾದಿಂದ ಹೆಚ್ಚಿನ ಇಳುವರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಿಡದಿ: ‘ಮಣ್ಣಿನ ಫಲವತ್ತತೆ ಹಾಗೂ ಬೆಳವಣಿಗೆಗೆ ಅಗತ್ಯ ಪೋಷಕಾಂಶ ಒದಗಿಸುವ ನಿಟ್ಟಿನಲ್ಲಿ ವಿಶ್ವದ ಮೊದಲ ದೇಶ ಉತ್ಪನ್ನ ನ್ಯಾನೊ ಯೂರಿಯಾ ದ್ರಾವಣ ಬಳಕೆ ಮಾಡಬೇಕು’ ಎಂದು ಕೃಷಿ ಸಂಶೋಧನಾ ವಿದ್ಯಾರ್ಥಿನಿ ಶೀತಲ್.ಜೆ.ಎಸ್ ಅವರು ರೈತರಿಗೆ ಸಲಹೆ ನೀಡಿದರು.

ರೈತ ಸಂಪರ್ಕ ಕೇಂದ್ರದ ಬಳಿ ಆಯೋಜಿಸಿದ್ದ ನ್ಯಾನೊ ಯೂರಿಯಾ ದ್ರಾವಣ ರೂಪದ ರಸಗೊಬ್ಬರದ ಉಪಯುಕ್ತತೆ ಬಗ್ಗೆ ಅವರು ಮಾಹಿತಿ ನೀಡಿದರು.

‘ಸಾರಜನಕವು (ನೈಡ್ರೋಜನ್) ಗಿಡಗಳ ಬೆಳವಣಿಗೆಗೆ ಬೇಕಾದ ಪ್ರಮುಖ ಪೋಷಕಾಂಶಗಳಲ್ಲಿ ಒಂದಾಗಿದೆ. ಇದರ ಪೂರೈಕೆ ಕಡಿಮೆಯಾದರೆ ಗಿಡಗಳ ಬೆಳವಣಿಗೆ ಕುಂಠಿತವಾಗಿದೆ. ಹಾಗಾಗಿ ಬೆಳೆಗಳಿಗೆ ಯೂರಿಯಾ ಮುಖಾಂತರ ಸಾರಜನಕವನ್ನು ಒದಗಿಸುವುದಾಗಿದೆ. ಪರಿಸರಸ್ನೇಹಿ ನ್ಯಾನೊ ಯೂರಿಯಾ ನಮ್ಮ ಭಾರತೀಯರು ತಯಾರಿಸಿದ ವಿಶ್ವದ ಮೊದಲ ರಸಗೊಬ್ಬರವಾಗಿ ಕೃಷಿಗೆ ಕಾಲಿಟ್ಟಿದೆ. ಸಾಮಾನ್ಯವಾಗಿ 100 ಕೆ.ಜಿ ಪ್ರಮಾಣದ ಯೂರಿಯಾದಲ್ಲಿ ಶೇ 46ರಷ್ಟು ಸಾರಜನಕ ಇರುತ್ತದೆ. ಸುಮಾರು ಒಂದು ಚೀಲ (45.ಕೆ.ಜಿ) ಯೂರಿಯಾ ಉಪಯೋಗಿಸಿದರೆ ಆವೀಕರಣಯಿಂದಾಗಿ ಶೇ 25-30ರಷ್ಟು ಅಂದರೆ 7 ಕೆ.ಜಿ ಪ್ರಮಾಣದಷ್ಟು ಸಾರಜನಕ ಗಿಡಗಳಿಗೆ ದೊರೆಯುತ್ತದೆ’ ಎಂದರು.

‘ನ್ಯಾನೊ ಯೂರಿಯಾದ ಪ್ರಮುಖ ಅಂಶಗಳೆಂದರೆ, ದ್ರಾವಣದ ರೂಪದಲ್ಲಿರುವ ಇದನ್ನು ಸಿಂಪಡಣೆ ಮಾಡಿದಾಗ ನ್ಯಾನೊ ಕಣವು ಎಲೆಗಳ ಮೂಲಕವೇ ನೇರವಾಗಿ ಗಿಡಗಳಿಗೆ ಸೇರುತ್ತದೆ. ಇದರಿಂದ ಶೇ 80ರಷ್ಟು ಲಭ್ಯತೆ ಆಗಿದ್ದರಿಂದ ನಾವು ಬಳಸುತ್ತಿರುವ ಬೇರೆ ಯೂರಿಯಾಗಿಂತಲೂ ಈ ದ್ರಾವಣ ಮೂರುಪಟ್ಟು ಹೆಚ್ಚು ಸಮರ್ಥವಾಗಿದೆ. ಹೆಚ್ಚಿನ ಸಾರಜನಕವು ಎಲೆಗಳಲ್ಲಿ ಉಳಿದು ಅಗತ್ಯಕ್ಕೆ ಬೇಕಾಗುವ ಸಮಯದಲ್ಲಿ ಬಿಡುಗಡೆಗೊಂಡು ಗಿಡಗಳಿಗೆ ಲಭ್ಯವಾಗುತ್ತದೆ. ಅಷ್ಟೇ ಅಲ್ಲದೆ ಸಾಮಾನ್ಯ ಯೂರಿಯಾದಿಂದ ಉಂಟಾಗುವ ಎಲೆಗಳು ಸುಡುವ ಸಮಸ್ಯೆಯಿರುವುದಿಲ್ಲ. ದ್ರಾವಣದಿಂದ ಎಲೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಬದಲಾಗಿ ಗಿಡಗಳಿಗೆ ನೇರವಾಗಿ ಪೌಷ್ಟಿಕಾಂಶವನ್ನು ತಲುಪಿಸುತ್ತದೆ. ಮಕ್ಕಳ ಬೆಳವಣಿಗೆಗೆ ಪೌಷ್ಟಿಕ ಆಹಾರ ಎಷ್ಟು ಮುಖ್ಯವೋ ಅದೇ ರೀತಿಯಲ್ಲಿ ಗಿಡಗಳ ಬೆಳವಣಿಗೆ ಸಾರಜನಕ ಅಧಿಕ ಪೋಷಕಾಂಶ ಪೂರೈಸುತ್ತದೆ’ ಎಂದರು.

‘ದೇಶವು ಶೇಕಡ 30ರಷ್ಟು ಪ್ರಮಾಣದ ಯೂರಿಯಾವನ್ನು ಅನ್ಯ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ನ್ಯಾನೊ ಯೂರಿಯಾ ಬಳಕೆಯಿಂದ ನಾವು ಆಮದನ್ನು ಕಡಿಮೆಗೊಳಿಸಿ ನಮ್ಮ ಭಾರತ ದೇಶವನ್ನು ಆತ್ಮ ನಿರ್ಭಯದ ಕಡೆ ಕೊಂಡೊಯ್ಯಬಹುದು. ಸಾಮಾನ್ಯ ಯೂರಿಯಾಗಿಂತ ಶೇ 10ರಷ್ಟು ಕಡಿಮೆ ಬೆಲೆಗೆ ನ್ಯಾನೊ ಯೂರಿಯಾ ದ್ರಾವಣ ಸಿಗುತ್ತದೆ. ಇದು ಪರಿಸರಸ್ನೇಹಿಯಾಗಿದ್ದು ಸಾಗಾಣಿಕೆಯೂ ಸುಲಭವಾಗಿದೆ. 45 ಕೆಜಿ ತೂಕದ ಚೀಲವನ್ನು ಹೊರುವ ಬದಲು ಒಂದು ಬಾಟಲಿಯನ್ನು ಕೈಯಲ್ಲಿಡಿದು ತರುವುದು ಸೂಕ್ತವಾಗಿದೆ ಸಂಶೋಧನೆಯ ಪ್ರಕಾರ ನ್ಯಾನೊ ದ್ರಾವಣದ ಬಳಕೆಯಿಂದ ಶೇಕಡ 8 ಇಳುವರಿಯನ್ನು ಹೆಚ್ಚಿಸಬಹುದಾಗಿದೆ. ಹೀಗಾಗಿ ರೈತರು ನ್ಯಾನೋ ಇವರಿಗೆ ದ್ರಾವಣವನ್ನು ಉಪಯೋಗಿಸಿ ಹೆಚ್ಚಿನ ಲಾಭಾಂಶವನ್ನು ಪಡೆಯಬಹುದಾಗಿದೆ’ ಎಂದು ರೈತರಿಗೆ ತಿಳಿವಳಿಕೆ ಮೂಡಿಸಿದರು.

‘ಹಾಸನ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯಬೇಕಿದ್ದ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರವು ಕೋವಿಡ್ ಲಾಕ್ ಡೌನ್‌ನಿಂದಾಗಿ ನಾವು ಇರುವ ಸ್ಥಳದಲ್ಲಿ ಕೃಷಿಕರ ಮನೆಮನೆಗೆ ತೆರಳಿ ಪರಿಸರಸ್ನೇಹಿ ಹಾಗೂ ದೇಶಿಯ ಉತ್ಪನ್ನ ನ್ಯಾನೊ ಯೂರಿಯಾ ದ್ರಾವಣದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು