ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಟೆಲ್, ಮಾಂಸ ಮಾರಾಟ ಮಳಿಗೆ ಬಂದ್, ಕೊರೊನಾ ಹರಡದಂತೆ ಜಿಲ್ಲಾಡಳಿತದ ಮುಂಜಾಗ್ರತೆ

Last Updated 17 ಮಾರ್ಚ್ 2020, 13:57 IST
ಅಕ್ಷರ ಗಾತ್ರ

ರಾಮನಗರ: ಕೋವಿಡ್-19 ವೈರಸ್ ಸೋಂಕು ಹರಡದಂತೆ ಮುಂಜಾಗೃತಾ ಕ್ರಮ ಕೈಗೊಳ್ಳುತ್ತಿರುವ ನಗರ ಸ್ಥಳೀಯ ಸಂಸ್ಥೆ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಹೋಟೆಲ್, ಬೀದಿ ಬದಿ ವ್ಯಾಪಾರ, ಮಾಂಸ ಮಾರಾಟ ಮಳಿಗೆಗಳನ್ನು ಮಂಗಳವಾರ ಬಂದ್ ಮಾಡಿಸಿದರು.

ಈ ಸಂಬಂಧ ಸೋಮವಾರ ತಡರಾತ್ರಿವರೆಗೂ ಎಲ್ಲಾ ಹೋಟೆಲ್, ಬೇಕರಿ, ಟೀ ಶಾಪ್, ಬೀದಿ ಬದಿ ವ್ಯಾಪಾರಿಗಳಿಗೆ, ಮಾಂಸ ಮಾರಾಟ ಮಳಿಗೆಗಳ ಮಾಲೀಕರಿಗೆ ತಿಳಿವಳಿಕೆ ಪತ್ರ ನೀಡಿ ಮುಂದಿನ ಆದೇಶದವರೆಗೆ ಕಡ್ಡಾಯ ಬಂದ್ ಮಾಡುವಂತೆ ಸೂಚಿಸಿದ್ದಾರೆ.

ಈ ವಿಷಯ ಕುರಿತು ನಗರಸಭೆಯ ಪ್ರಶಸ್ತಿ ಭವನದಲ್ಲಿ ಮಳಿಗೆ ಮಾಲೀಕರ ಸಭೆ ಕರೆದು ಕೋವಿಡ್-19 ಜಾಗೃತಿ ಮೂಡಿಸುವುದರ ಜತೆಗೆ ಮುಂದಿನ ಆದೇಶದವರೆಗೆ ಕಡ್ಡಾಯವಾಗಿ ಬಂದ್ ಮಾಡುವಂತೆ ಸೂಚಿಸಿದರು. ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

‘ಕೋವಿಡ್-19 ವೈರಸ್ ಸೋಂಕು ವ್ಯಾಪಕವಾಗದಂತೆ ತಡೆಯಲು ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳ ಜತೆಗೆ ವ್ಯಾಪಾರಿಗಳು, ಸಾರ್ವಜನಿಕರು ಸಹ ಸಹಕಾರ ನೀಡಬೇಕು. ಎಲ್ಲರ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರ ಹೊರಡಿಸುವ ಆದೇಶಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು. ಎಲ್ಲಾ ಮಳಿಗೆಗಳು ಶುಚಿತ್ವ ಕಾಪಾಡಿಕೊಳ್ಳಬೇಕು’ ಎಂದು ನಗರಸಭೆ ಪೌರಾಯುಕ್ತೆ ಶುಭಾ ತಿಳಿಸಿದರು.

ಸಭೆಯ ನಂತರ ಕೆಲ ಮಳಿಗೆ ಮಾಲೀಕರು ನಮ್ಮ ಆರೋಗ್ಯಕ್ಕಿಂತ ವ್ಯಾಪಾರ ಮುಖ್ಯವಲ್ಲ ಎಂದು ಸ್ವಯಂ ಪ್ರೇರಿತರಾಗಿ ಮಳಿಗೆ ಬಂದ್ ಮಾಡಲು ಸಮ್ಮತಿಸಿದರು. ಕೆಲವರು ವ್ಯಾಪಾರ ನಷ್ಟದ ಬಗ್ಗೆ ಚಿಂತಿಸುತ್ತಾ ಜಿಲ್ಲಾಧಿಕಾರಿಗಳ ಕಚೇರಿ ಬಳಿಗೆ ನಡೆದರಾದರೂ ಅಲ್ಲೂ ಇವರ ಬೇಡಿಕೆಗೆ ಸ್ಪಂದನೆ ದೊರೆಯಲಿಲ್ಲ. ನಗರಸಭೆ ಎಚ್ಚರಿಕೆ ನಡುವೆಯೂ ಇಂದು ಕಾರ್ಯನಿರ್ವಹಿಸುತ್ತಿದ್ದ ಟೀ ಶಾಪ್, ಹೋಟೆಲ್, ಮಾಂಸದಂಗಡಿಗಳ ಮೇಲೆ ದಾಳಿ ನಡೆಸಿ ಮಳಿಗೆಗಳನ್ನು ಬಂದ್ ಮಾಡಿಸಿದರು.

ಅಘೋಷಿತ ಬಂದ್ ವಾತಾವರಣ: ನಗರದಲ್ಲಿ ಮಂಗಳವಾರ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದ್ದು, ನಗರಸಭೆ ಸೂಚನೆ ಮೇರೆಗೆ ಬಹುತೇಕ ಹೋಟೆಲ್, ಬೇಕರಿ, ಟೀ ಶಾಪ್‌ಗಳು ಬಂದ್ ಆಗಿದ್ದವು. ಜನ ಸಂದಣಿಯೂ ಕಡಿಮೆಯಾಗಿತ್ತು. ಕೆಲ ಮಳಿಗೆಗಳು ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದರೂ ನಂತರ ಅಧಿಕಾರಿಗಳು ಅವುಗಳನ್ನೂ ಬಂದ್ ಮಾಡಿಸಿ ಎಚ್ಚರಿಕೆ ನೀಡಿದ್ದಾರೆ.

ನಗರಸಭೆ ಪರಿಸರ ಎಂಜಿನಿಯರ್ ರಾಜಶ್ರೀ, ಆರೋಗ್ಯ ನಿರೀಕ್ಷಕರು, ಪೌರಕಾರ್ಮಿಕರು, ಮಳಿಗೆ ಮಾಲೀಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT