ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯದಲ್ಲಿ ಗೃಹಮಂಡಳಿ ಬಡಾವಣೆ ನಿರ್ಮಾಣ

ಕನಕಪುರ ರೈತ ಮುಖಂಡರ ಆರೋಪ
Last Updated 23 ನವೆಂಬರ್ 2020, 4:23 IST
ಅಕ್ಷರ ಗಾತ್ರ

ರಾಮನಗರ: ‘ಕನಕಪುರ ತಾಲ್ಲೂಕು ಕಸಬಾ ಹೋಬಳಿ, ರಾಯಸಂದ್ರ ಗ್ರಾಮದ ಬಳಿ ಅರಣ್ಯ ಪ್ರದೇಶದ ಬಫರ್ ಝೋನ್, ಗೋಮಾಳ ಸೇರಿದಂತೆ ಭೂಸ್ವಾಧೀನವಾಗಿದ್ದು ಇಲ್ಲಿ ಕರ್ನಾಟಕ ಗೃಹ ಮಂಡಳಿ ನಿರ್ಮಿಸಿರುವ ವಸತಿ ಬಡಾವಣೆ ನಿರ್ಮಿಸಿದೆ’ ಎಂದು ಕನಕಪುರದ ರೈತ ಮುಖಂಡ ಸಂಪತ್ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ರಾಯಸಂದ್ರ ಗ್ರಾಮದ ಬಳಿ ಕರ್ನಾಟಕ ಹೌಸಿಂಗ್ ಬೋರ್ಡ್ 164 ಎಕೆರೆ ಜಮೀನು ಖರೀದಿಸಿ ವಸತಿ ಬಡಾವಣೆ ನಿರ್ಮಿಸಿದೆ. ಸರ್ವೆ ಸಂಖ್ಯೆ 101/1 ಗಂಗಾಧರನ ಗುಡ್ಡ ರಾಜ್ಯ ಅರಣ್ಯ ಪ್ರದೇಶ ವ್ಯಾಪ್ತಿಯ 38.10 ಎಕರೆ ಪ್ರದೇಶ ಅರಣ್ಯ ಬಫರ್ ಝೋನ್ ಆಗಿದ್ದು, ಇದನ್ನು ಸೇರಿಸಿಕೊಂಡು ಬಡಾವಣೆ ನಿರ್ಮಿಸಲಾಗಿದೆ’ ದೂರಿದರು.

‘ಅರಣ್ಯ ಪ್ರದೇಶದ ಬಫರ್ ಝೋನ್‌ನಲ್ಲಿ ಹಲವಾರು ರೈತರು ಉಳುಮೆ ಮಾಡಿಕೊಂಡಿದ್ದರು. ಹೀಗಾಗಿ ಅವರಿಗೆ ಸಾಗುವಳಿ ಚೀಟಿ ಸಿಕ್ಕಿರಲಿಲ್ಲ. ಈ ಭೂಮಿಗೆ ಲಗತ್ತಾದ ಇತರ ಸರ್ವೆ ಸಂಖ್ಯೆಗಳಲ್ಲಿನ ಭೂಮಿಯನ್ನು ಹೌಸಿಂಗ್ ಬೋರ್ಡು ವಸತಿ ಬಡಾವಣೆ ನಿರ್ಮಿಸಲು `ಭೂಸ್ವಾಧೀನಕ್ಕೆ ಮುಂದಾಗಿತ್ತು. ಸರ್ವೆ ಸಂಖ್ಯೆ 101/1ರ ಒಟ್ಟು ವಿಸ್ತೀರ್ಣ 249 ಎಕರೆಯಲ್ಲಿ ಅರಣ್ಯ ಮತ್ತು ಗೋಮಾಳ ಪ್ರದೇಶವಿದೆ. ಈ ಭೂಮಿಗೆ ಅಕ್ರಮ ಮತ್ತು ಬೇನಾಮಿ ಹೆಸರಿನಲ್ಲಿ ಖಾತೆಗಳನ್ನು ಸೃಜಿಸಿಕೊಂಡು ಅದನ್ನು ಹೌಸಿಂಗ್ ಬೋರ್ಡ್‌ ಗೆ ಮಾರಿ ಕೋಟ್ಯಂತರ ಲಪಾಟಯಿಸುವ ಹುನ್ನಾರ ನಡೆದಿದೆ’ ಎಂದು ಹೇಳಿದರು.

ಆರ್.ಟಿ.ಐ ಕಾರ್ಯಕರ್ತ ರಾಮಲಿಂಗಯ್ಯ ಮಾತನಾಡಿ, ‘ಹೌಸಿಂಗ್ ಬೋರ್ಡ್ ನಿರ್ಮಿಸಿರುವ ಬಡಾವಣೆಯಲ್ಲಿ ಅರಣ್ಯ ಭೂಮಿ, ಗೋಮಾಳ ಸೇರಿದೆ. ಹೀಗಾಗಿ ಇಲ್ಲಿ ನಿವೇಶನ ಖರೀದಿಸುವವರು ಎಚ್ಚರವಹಿಸಬೇಕು’ ಎಂದರು.

ಮುಖಂಡ ರಾಜೇಶ್ ಅವರು ಅರಣ್ಯ ಇಲಾಖೆಯ ದಾಖಲೆಗಳನ್ನು ತೋರಿಸಿದರು. ’ಬಫರ್‌ಝೋನ್‌ನಲ್ಲಿ ಬಡಾವಣೆ ನಿರ್ಮಾಣ ಸಾಧ್ಯವಿಲ್ಲ. ಹೀಗಾಗಿ ಯಾವುದೇ ಭೂಮಿ ಸ್ವಾಧೀನ ಕೈಗೊಳ್ಳಬಾರದು ಎಂದು ರಾಮನಗರ ಉಪವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ, ಕರ್ನಾಟಕ ಗೃಹ ಮಂಡಳಿಗೂ ಸೇರಿದಂತೆ ಜಿಲ್ಲಾಧಿಕಾರಿಯವರಿಗೂ ಲಿಖಿತವಾಗಿ ತಿಳಿಸಿದ್ದರೂ ಇಲ್ಲಿ ಬಡಾವಣೆ ನಿರ್ಮಾಣವಾಗಿದೆ’ ಎಂದು ಮಾಹಿತಿ ನೀಡಿದರು.

ರೈತ ಮುಖಂಡ ಎಂ.ಡಿ.ಶಿವಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT