ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉತ್ತಮ ಜೀವನಕ್ಕೆ ಮಾನವ ಹಕ್ಕುಗಳು ಅವಶ್ಯಕ’

ಡಿ.ಸಿ. ಕಚೇರಿ ಸಭಾಂಗಣದಲ್ಲಿ ಕಾನೂನು ಅರಿವು- ನೆರವು ಶಿಬಿರ
Last Updated 10 ಡಿಸೆಂಬರ್ 2019, 13:15 IST
ಅಕ್ಷರ ಗಾತ್ರ

ರಾಮನಗರ: ಸಾರ್ವಜನಿಕರು ಸಮಾಜದಲ್ಲಿ ಯಾವುದೇ ಅಡೆ ತಡೆ ಇಲ್ಲದೆ ಉತ್ತಮವಾಗಿ ಜೀವನ ನಡೆಸಲು ಮಾನವ ಹಕ್ಕುಗಳು ಅವಶ್ಯಕ ಎಂದು ಸರ್ಕಾರಿ ಕಾನೂನು ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರದೀಪ್ ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ವಕೀಲರ ಸಂಘದ ಸಹಯೋಗದಲ್ಲಿ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ಜಿಲ್ಲಾ ಕಚೇರಿಗಳ ಸಂಕೀರ್ಣದ ಸಭಾಂಗಣದಲ್ಲಿ ಮಂಗಳವಾರ ಕಾನೂನು ಅರಿವು- ನೆರವು ಶಿಬಿರದಲ್ಲಿ ಅವರು ಮಾತನಾಡಿದರು.

ಎರಡನೇ ಮಹಾಯುದ್ದದ ನಂತರ ಸಾರ್ವಜನಿಕರಲ್ಲಿ ಚೈತನ್ಯ ಬೆಳಸಬೇಕು ಎಂದು ಸ್ವಾತಂತ್ರ್ಯ ಹೋರಾಟಗಾರರು ಹಲವಾರು ಚಿಂತನೆಗಳನ್ನು ನಡೆಸಿದರು. ಅವರು ನಡೆಸಿದ ಚಿಂತನೆಗಳನ್ನು ನಾವು ಸಂವಿಧಾನದಲ್ಲಿ ನೋಡಬಹುದಾಗಿದೆ. ಜನರು ಸಂತೃಪ್ತಿಯಾಗಿ ಜೀವನ ನಡೆಸಲು 30 ಪ್ರಮುಖ ಮಾನವ ಹಕ್ಕುಗಳು ಅವಶ್ಯಕವಾಗಿವೆ ಎಂದು ತಿಳಿಸಿದರು.

ಸಂವಿಧಾನದ ಭಾಗ 3 ರಲ್ಲಿ ಮಾನವ ಹಕ್ಕುಗಳನ್ನು ನೋಡಬಹುದು. ಹಲವು ರಾಷ್ಟ್ರಗಳಲ್ಲಿ ಮೂಲಭೂತ ಮಾನವ ಹಕ್ಕುಗಳೇ ಇಲ್ಲ, ಅಭಿವ್ಯಕ್ತಿ ಸ್ವಾತಂತ್ರ್ಯವಿಲ್ಲ. ಭಾರತದ ಸಂವಿಧಾನ ಶ್ರೇಷ್ಠ ಸಂವಿಧಾನ. ನಮ್ಮ ದೇಶದ ಮೂರು ಸಾವಿರ ವರ್ಷಗಳ ಸಂಸ್ಕೃತಿ ಹಾಗೂ ಜನರ ಜೀವನವನ್ನು ಗಮನದಲ್ಲಿಟ್ಟಿಕೊಂಡು ಮಹಾನ್ ವ್ಯಕ್ತಿಗಳು ಸಂವಿಧಾನ ರಚಿಸಿದ್ದಾರೆ. ಆದ್ದರಿಂದ ಇಂದಿಗೂ ಸಹ ಭಾರತದಲ್ಲಿ ವಿವಿಧತೆಯಲ್ಲಿ ಏಕತೆಯನ್ನು ನೋಡಬಹುದು ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ವೆಂಕಟಪ್ಪ ಮಾತನಾಡಿ, ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳು, ಮೂಲಭೂತ ಕರ್ತವ್ಯಗಳು ಹಾಗೂ ರಾಜ್ಯ ನಿರ್ದೇಶನ ತತ್ವಗಳ ಬಗ್ಗೆ ಉಲ್ಲೇಖವಿದೆ. ಇವುಗಳು ಉಲ್ಲಂಘನೆಯಾಗಬಾರದು. ದೇಶ ನಮಗೇನು ಕೊಟ್ಟಿದೆ ಅನ್ನುವ ಬದಲು ನಾವೂ ದೇಶಕ್ಕೆ ಏನು ಕೊಟ್ಟಿದೇವೆ ಎಂಬುದರ ಬಗ್ಗೆ ಪ್ರತಿಯೊಬ್ಬರು ಚಿಂತನೆ ನಡೆಸಬೇಕು ಎಂದರು.

ಸಂವಿಧಾನ ತಾಯಿ ಕಾನೂನು ಇದ್ದಂತೆ. ಉಳಿದೆಲ್ಲವೂ ಮಕ್ಕಳಿದ್ದಂತೆ. ಸಂಸತ್ ಕೆಲವು ಸಂವಿಧಾನದ ಅಂಶಗಳಿಗೆ ತಿದ್ದುಪಡಿ ತರಬಹುದು. ಆದರೆ ಮೂಲ ಸಂವಿಧಾನವನ್ನು ತಿದ್ದುಪಡಿ ಮಾಡಲು ಸಾಧ್ಯವಿಲ್ಲ. ಸಾರ್ವಜನಿಕರಿಗೆ ಮಾನವ ಹಕ್ಕುಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾನವ ಹಕ್ಕುಗಳ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಕಾರ್ಯಕ್ರಮ ಉದ್ಘಾಟಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಪಿ. ವಿಜಯ್, ಉಪವಿಭಾಗಾಧಿಕಾರಿ ದಾಕ್ಷಾಯಿಣಿ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಉಮೇಶ್, ಡಿವೈಎಸ್ ಪಿ ಪುರುಷೋತ್ತಮ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಆರ್.ವಿ ದೇವರಾಜು, ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕ ವೆಂಕಟಾಚಲಪತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT