ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣರು ಕಲೆ, ಸಂಸ್ಕೃತಿಯ ಮೂಲ ರಾಯಭಾರಿಗಳು

ಚನ್ನಪಟ್ಟಣದಲ್ಲಿ ಜಾನಪದ ಕಲೋತ್ಸವಕ್ಕೆ ಚಾಲನೆ ನೀಡಿದ ಗಣ್ಯರು
Last Updated 12 ನವೆಂಬರ್ 2019, 13:01 IST
ಅಕ್ಷರ ಗಾತ್ರ

ಚನ್ನಪಟ್ಟಣ: ಗ್ರಾಮೀಣ ಪ್ರದೇಶದ ಜನರೇಕಲೆ ಮತ್ತು ಸಂಸ್ಕೃತಿಯ ಮೂಲ ರಾಯಭಾರಿಗಳು ಎಂದು ವಕೀಲ ಎಂ.ಕೆ. ನಿಂಗಪ್ಪ ಅಭಿಪ್ರಾಯಪಟ್ಟರು.

ಪಟ್ಟಣದ ಶತಮಾನೋತ್ಸವ ಭವನದಲ್ಲಿ ನವ್ಯ ಸಂಗಮ ಸಾಮಾಜಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಟ್ರಸ್ಟ್ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ಸೋಮವಾರ ಆಯೋಜಿಸಿದ್ದ ‘ಜಾನಪದ ಕಲೋತ್ಸವ’ವನ್ನು ಉದ್ಘಾಟಿಸಿ ಮಾತನಾಡಿದರು.

ವಿವಿಧ ಪ್ರದೇಶ ಹಾಗೂ ಜನಾಂಗಗಳಲ್ಲಿ ವೈವಿಧ್ಯಮಯ ಕಲೆ, ಸಂಸ್ಕೃತಿ ಮತ್ತು ಪರಂಪರೆಯಿದೆ. ಸಂಪ್ರದಾಯ ಮತ್ತು ಮನೋರಂಜನೆ ಚಟುವಟಿಕೆಗಳ ಜತೆಯಲ್ಲಿ ಮಿಳಿತವಾದ ಕಲೆಗಳು ಜತೆಗೇ ಬೆಳೆದು ಬಂದಿವೆ. ಇಂತಹ ಗ್ರಾಮೀಣ ಪ್ರದೇಶದಲ್ಲಿನ ಕಲೆಗಳನ್ನು ಉಳಿಸುವ ಕೆಲಸಕ್ಕೆ ಸರ್ಕಾರದ ಜತೆ ಸಂಘ-ಸಂಸ್ಥೆಗಳು ಕೈ ಜೋಡಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಕನ್ನಡ ಶಿಕ್ಷಕ ಯೋಗೇಶ್ ಚಕ್ಕೆರೆ ಮಾತನಾಡಿ, ಜನಪದ ಕಲೆಗಳಲ್ಲಿ ಸಂಸ್ಕೃತಿಯ ಸಾರ ಅಡಗಿದೆ. ಗ್ರಾಮೀಣ ಸಂಸ್ಕೃತಿ ಸಮೃದ್ಧವಾಗಿರುವುದು ಹಾಗೂ ಹಳ್ಳಿಗಳ ಜೀವಂತಿಕೆ ಅಡಗಿರುವುದೇಜನಪದ ಕಲೆಗಳಲ್ಲಿ. ಈಗಲೂ ಸಹ ಗ್ರಾಮೀಣ ಪ್ರದೇಶದ ಹಿರಿಯರು ಅನಕ್ಷರಸ್ಥರಾಗಿದ್ದರೂ ಜನಪದ ಕಲೆಗಳನ್ನು ತಮ್ಮ ಒಡಲಿನಲ್ಲಿ ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದಾರೆ. ಜನಪದ ಉಳಿಯಬೇಕಾದರೆ ಪಠ್ಯ ಪುಸ್ತಕದಲ್ಲಿ ಜನಪದ ಕಲೆಯನ್ನು ಅಳವಡಿಸಬೇಕಾಗಿದೆ ಎಂದರು.

ನಿವೃತ್ತ ಉಪನ್ಯಾಸಕ ವೆಂಕಟರಮಣಯ್ಯ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ ಅಧ್ಯಕ್ಷ ಜಯಸಿಂಹ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಮಂಜುನಾಥ್, ಬಾಣಗಳ್ಳಿ ಮಿಣಜಯ್ಯ, ನಿರ್ಮಲಾ ರೋಸ್ ಮೇರಿ ಅವರನ್ನು ಸನ್ಮಾನಿಸಲಾಯಿತು.

ಮುಖಂಡರಾದ ಅಕ್ಕೂರು ಶೇಖರ್, ರವಿಕುಮಾರ್, ಕಲಾವಿದರಾದ ಡಾ. ಅಕ್ರಂ ಪಾಷ, ಕಾಳಿಯಪ್ಪ, ವಿಷಕಂಠಮೂರ್ತಿ, ಚೌ.ಪು.ಸ್ವಾಮಿ, ಕರ್ಣ, ಮಂಗಾಡಹಳ್ಳಿ ಪ್ರಕಾಶ್, ಉಪನ್ಯಾಸಕ ಬಿ.ಪಿ.ಸುರೇಶ್ ಭಾಗವಹಿಸಿದ್ದರು. ಗಾಯಕ ಮಹೇಶ್ ಮೌರ್ಯ ನಿರೂಪಿಸಿದರು.

ಜನಪದ ಗೀತೆ ಗಾಯನ, ಭಕ್ತಿಗೀತೆ ಗಾಯನ, ಹೋರಾಟದ ಗೀತೆ ಗಾಯನ, ಸೋಬಾನೆ ಪದ, ಭರತನಾಟ್ಯ, ಪೂಜಾ ಕುಣಿತ, ಪಟದ ಕುಣಿತ, ಚರ್ಮ ವಾದ್ಯ, ಸೋಮನ ಕುಣಿತ, ವೀರಗಾಸೆ ಮೊದಲಾದ ಜನಪದ ಕಲೆಗಳನ್ನು ಪ್ರದರ್ಶಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT