ಮಂಗಳವಾರ, ಡಿಸೆಂಬರ್ 1, 2020
26 °C
ಅವಳಿ ನಗರದಿಂದ ವಿಧಾನಸಭೆಗೆ ಸ್ಪರ್ಧಿಸುವ ಇಚ್ಛೆ ಸದ್ಯಕ್ಕಿಲ್ಲ: ನಿಖಿಲ್‌

ಯುವಜನರಿಗೆ ಜೆಡಿಎಸ್‌ ಆದ್ಯತೆ: ನಿಖಿಲ್ ಕುಮಾರಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಮುಂಬರುವ ಚುನಾವಣೆಗಳಲ್ಲಿ ಪಕ್ಷದಿಂದ ಯುವಜನರಿಗೆ ಹೆಚ್ಚು ಅವಕಾಶ ನೀಡಲು ಶಿಫಾರಸು ಮಾಡುವುದಾಗಿ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ನಮ್ಮ ಮೂಲಗಳ ಪ್ರಕಾರ ಇದೇ 20ರಂದು ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆ ಆಗುವ ಸಾಧ್ಯತೆ ಇದೆ. ಈ ಚುನಾವಣೆಯಲ್ಲಿ ಯುವ ಅಭ್ಯರ್ಥಿಗಳಿಗೆ ಬೆಂಬಲ ನೀಡುತ್ತೇವೆ. ಮುಂಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲೂ ಯುವಕ-ಯುವತಿಯರಿಗೆ ಅವಕಾಶ ನೀಡುವಂತೆ ಪಕ್ಷದ ವರಿಷ್ಠರಿಗೆ ಕೋರುತ್ತೇನೆ ಎಂದರು.

2023ರ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವುದು ತಮ್ಮ ಗುರಿ. ಈ ಹಿನ್ನಲೆಯಲ್ಲಿ ರಾಜ್ಯದಾದ್ಯಂತ ಪ್ರವಾಸ ಹಮ್ಮಿಕೊಂಡಿದ್ದು, ಯುವ ಕಾರ್ಯಕರ್ತರನ್ನು ಸಂಘಟಿಸುತ್ತೇನೆ. ನಮ್ಮ ಕುಟುಂಬಕ್ಕೆ ರಾಜಕೀಯವಾಗಿ ಜನ್ಮ ನೀಡಿದ ರಾಮನಗರದಿಂದಲೇ ಈ ಕೆಲಸ ಆರಂಭಿಸುತ್ತೇನೆ’ ಎಂದರು.

"ರಾಮನಗರ ಅಥವಾ ಚನ್ನಪಟ್ಟಣ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಉದ್ದೇಶ ಇಲ್ಲ. ಆದರೆ ಈಗಲೇ ಈ ಬಗ್ಗೆ ಏನನ್ನೂ ಹೇಳಲಾರೆ. ರಾಮನಗರ ಕ್ಷೇತ್ರದ ಪ್ರವಾಸದ ವೇಳೆಯಲ್ಲಿ ಜನರ ಅಹವಾಲು ಆಲಿಸಿ, ಕ್ಷೇತ್ರದ ಸಮಸ್ಯೆಗಳನ್ನು ಇಲ್ಲಿನ ಶಾಸಕರಾದ ಅನಿತಾ ಕುಮಾರಸ್ವಾಮಿ ಗಮನಕ್ಕೆ ತರುತ್ತೇನೆ’ ಎಂದರು. ಕೋವಿಡ್‌ ಕಾರಣಕ್ಕೆ ನನ್ನ ಪೋಷಕರು ತಮ್ಮ ಕ್ಷೇತ್ರಗಳಿಗೆ ಹೆಚ್ಚು ಭೇಟಿ ಕೊಡಲು ಆಗಿಲ್ಲ. ಆದರೆ ಅಧಿಕಾರಿಗಳ ಬಳಿ ಇಬ್ಬರೂ ಶಾಸಕರು ನಿರಂತರ ಚರ್ಚೆ ಮಾಡುತ್ತಿದ್ದಾರೆ. ಸಾಕಷ್ಟು ಅಭಿವೃದ್ದಿ ಕಾಮಗಾರಿಗಳು ನಡೆಯುತ್ತಿವೆ ಎಂದು ಹೇಳಿದರು.

ರಾಮನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕನಕಪುರ ತಾಲ್ಲೂಕಿನ ಶಿವನಹಳ್ಳಿ ಗ್ರಾಮದಲ್ಲಿ ಸೇತುವೆ ನಿರ್ಮಾಣಕ್ಕೆ ಎಚ್.ಡಿ. ಕುಮಾರಸ್ವಾಮಿ ಅವರ ಅಧಿಕಾರಾವಧಿಯಲ್ಲಿ ಅನುದಾನ ಮಂಜೂರಾಗಿದೆ. ಆದರೆ ಕಾಮಗಾರಿ ಆರಂಭವಾಗಿಲ್ಲ. ಈ ವಿಚಾರವನ್ನು ಕ್ಷೇತ್ರದ ಶಾಸಕರ ಗಮನಕ್ಕೆ ತಂದಿದ್ದು, ಅವರು ಅಧಿಕಾರಿಗಳ ಬಳಿ ಚರ್ಚಿಸಿದ್ದಾರೆ. ಇನ್ನು 15 ದಿನಗಳಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದರು.

ಮತದಾರರ ತೀರ್ಪಿಗೆ ಗೌರವ
ಶಿರಾ ಮತ್ತು ಆರ್.ಆರ್.ನಗರ ಉಪಚುನಾವಣೆ ಫಲಿತಾಂಶದ ಕುರಿತು ಪ್ರತಿಕ್ರಿಯಿಸಿದ ನಿಖಿಲ್‌ "ಶಿರಾ ವಿಧಾನಸಭಾ ಕ್ಷೇತ್ರ ಕೈಬಿಟ್ಟಿದ್ದಕ್ಕೆ ಬೇಸರವಿದೆ. ಉಪಚುನಾವಣೆಗಳಲ್ಲಿ ಮತದಾರರು ಆಡಳಿತ ಪಕ್ಷದ ಪರ ನಿಲ್ಲುತ್ತಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಅಧಿಕಾರವಧಿಯಲ್ಲಿ ನುಡಿದಂತೆ ನಡೆದುಕೊಂಡಿದ್ದಾರೆ. ಆದರೆ ಮತದಾರರೇಕೋ ಕೈ ಹಿಡಿಯುತ್ತಿಲ್ಲ ಎಂಬ ನೋವಿದೆ. ಈ ಬಗ್ಗೆ ಪಕ್ಷದಲ್ಲಿ ಆತ್ಮಾವಲೋಕನ ನಡೆಯುತ್ತಿದೆ" ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು