ಚನ್ನಪಟ್ಟಣ: ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಆ.30ರಂದು ಆಯೋಜಿಸಲಾಗಿರುವ ಬೃಹತ್ ಉದ್ಯೋಗ ಮೇಳಕ್ಕೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತ ನಾಯಕ್ ತಿಳಿಸಿದರು.
ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯ ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತೀರ್ಣ ಅಥವಾ ಅನುತ್ತೀರ್ಣರಾದ ಉದ್ಯೋಗಾಕಾಂಕ್ಷಿಗಳು ಯಾವುದೇ ಹಿಂಜರಿಕೆ ಇಲ್ಲದೆ ಇಂಗ್ಲೀಷ್ ಭಾಷೆ ಕಡ್ಡಾಯವಾಗಿ ಬರಲೇಬೇಕು ಎನ್ನುವ ಮನೋಭಾವ ಬಿಟ್ಟು ಉದ್ಯೋಗ ಮೇಳದಲ್ಲಿ ಭಾಗವಹಿಸಿದರೆ ಅಗತ್ಯವಿರುವ ಕಂಪನಿಯಿಂದ ಅಂದು ಸಂಜೆಯೊಳಗೆ ನೇಮಕಾತಿ ಪತ್ರವನ್ನು ಪಡೆಯಬಹುದು. ಪಿಯುಸಿ, ಐಟಿಐ, ಡಿಪ್ಲೋಮೊ, ಪದವಿ, ಎಂಜಿನಿಯರಿಂಗ್, ಸ್ನಾತಕೊತ್ತರ ಪದವಿ ಉತ್ತೀರ್ಣ ಅಥವಾ ಅನುತ್ತೀರ್ಣರಾದ ಉದ್ಯೋಗಾಕಾಂಕ್ಷಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು ಎಂದರು.
ಉದ್ಯೋಗ ಮೇಳಕ್ಕೆ ಜಿಲ್ಲೆಯಲ್ಲಿ ಈಗಾಗಲೇ 5,253 ಜನ ಯುವಕ ಹಾಗೂ ಯುವತಿಯರು ಆನ್ ಲೈನ್ ಮೂಲಕ ನೋಂದಣಿಯಾಗಿದ್ದಾರೆ. 2,035 ಮಹಿಳೆಯರು ಇದೂವರೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಈ ಬೃಹತ್ ಉದ್ಯೋಗ ಮೇಳದಲ್ಲಿ ಸುಮಾರು 120ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸುತ್ತಿವೆ. ಅದರಲ್ಲಿ ಕೋಶಾ ಟೆಕ್ನೋ ಹಬ್ ಪ್ರೈ ಲಿ., ಲುಮಾಕ್ಸ್ ಇಂಡಸ್ಟ್ರಿಯಲ್ ಲಿಮಿಟೆಡ್, ಟಯೋಟಾ ಕಿರ್ಲೋಸ್ಕರ್ ಆಟೋ ಪಾರ್ಟ್ಸ್ ಪ್ರೈ. ಲಿ., ಎಚ್.ಸಿ.ಎಲ್ ಟೆಕ್, ಓನ್ ರೋಲ್ ಇಂಡಿಯಾ ಪ್ರೈವೇಟ್. ಲಿ., ಲಿರೋಸ್ ಟೆಕ್ನಾಲಜೀಸ್ ಪ್ರೈ ಸೇರಿದಂತೆ ಇತರೆ ಸಂಸ್ಥೆಗಳು ಭಾಗವಹಿಸಲಿದ್ದು, ಅದರಲ್ಲಿ ಅರ್ಹ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶವನ್ನು ಕಲ್ಪಿಸುವುದೇ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ 29ಕ್ಕೂ ಹೆಚ್ಚಿನ ಕೈಗಾರಿಕಾ ಸೆಕ್ಟರ್ಗಳು ಈಗಾಗಲೇ ನೋಂದಣಿಯಾಗಿದೆ. ವಿಶೇಷಚೇತನರಿಗೆ ವಿಶೇಷ ವ್ಯವಸ್ಥೆ ಕಲ್ಪಿಸುವ ಪ್ರತ್ಯೇಕ ಪ್ರವೇಶ ದ್ವಾರ, ಶೌಚಾಲಯ ವ್ಯವಸ್ಥೆ, ವಿಶೇಷವಾದ ಸಾರಿಗೆ ವ್ಯವಸ್ಥೆ, ಯಾವುದೇ ರೀತಿ ಶುಲ್ಕ ಭರಿಸುವ ಅಗತ್ಯವಿಲ್ಲ, ಉದ್ಯೋಗ ಮೇಳ ಸಂಪೂರ್ಣ ಉಚಿತವಾಗಿದ್ದು, ಈಗಾಗಲೇ ಕೌಶಲ್ಯಾಭಿವೃದ್ಧಿ ಇಲಾಖೆಯ ವೆಬ್ ಸ್ಶೆಟ್ https://udyogmela.skillconnect.kaushalkar.com ಮೂಲಕ ನೋಂದಣಿಯಾಗಿರುವ ರಾಮನಗರ ಜಿಲ್ಲೆಯ ಉದ್ಯೋಗಕಾಂಕ್ಷಿಗಳಿಗೆ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ. ವಿದೇಶಗಳಲ್ಲಿ ಉದ್ಯೋಗ ಬಯಸುವವರಿಗೆ ಭಾಷಾ ಸಮಸ್ಯೆಯಿದ್ದಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆಯ ವೆಬ್ ಸೈಟ್ ನಲ್ಲಿ ನೋಂದಣಿಯಾದರೆ ಅವರಿಗೆ ವಿದೇಶಿ ಭಾಷೆಗಳ ತರಬೇತಿಯನ್ನು ನೀಡಲಾಗುವುದು ಎಂದು ಅವರು ಹೇಳಿದರು.
ಕೌಶಲ್ಯಾಭಿವೃದ್ಧಿ ಅಧಿಕಾರಿ ಎಂ.ಸಿ. ಪುಷ್ಪಲತಾ, ಮುಖಂಡರಾದ ಗಂಗಾಧರ್, ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್, ಇತರೆ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.