ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಪುರ: ಕಾಡಿನ ಮಧ್ಯೆ ಏರಿಬಂದು ಬಸ್ ಅಡ್ಡಗಟ್ಟಿದ ಒಂಟಿ ಸಲಗ

Last Updated 15 ಸೆಪ್ಟೆಂಬರ್ 2022, 20:27 IST
ಅಕ್ಷರ ಗಾತ್ರ

ಕನಕಪುರ: ಇಲ್ಲಿಗೆ ಸಮೀಪದ ಕಾಡು ಶಿವನಹಳ್ಳಿಯಿಂದ ಗುರು ವಾರ ಕನಕಪುರಕ್ಕೆ ಬರುತ್ತಿದ್ದ ಸಾರಿಗೆ ಬಸ್‌ಅಡ್ಡಗಟ್ಟಿದ್ದ ಒಂಟಿ ಸಲಗ ವೊಂದುಕೆಲಹೊತ್ತು ಪ್ರಯಾಣಿಕರಲ್ಲಿ ಆತಂಕ ಹುಟ್ಟಿಸಿತ್ತು.

ರಸ್ತೆ ಮಧ್ಯೆ ಬಸ್‌ ಎದುರಾಗಿ ಘೀಳಿಡುತ್ತ ನಿಂತ ಗಂಡು ಪುಂಡಾನೆ ಕಂಡ ಪ್ರಯಾಣಿಕರು ಪ್ರಾಣಭಯದಿಂದ ಕಿರುಚಾಡ ತೊಡಗಿದರು. ಆನೆಯನ್ನು ಓಡಿಸಲು ಚಾಲಕ ಜೋರಾಗಿ ಹಾರ್ನ್ ಮಾಡಿದ. ಆದರೆ, ಇದಕ್ಕೆ ಜಗ್ಗದ ಸಲಗ ಮತ್ತಷ್ಟು ರೋಷದಿಂದ ಬಸ್‌ ಮೇಲೆ ಏರಿ ಬಂತು.

‘ಬಸ್‌ ಮೇಲೆ ದಾಳಿಗೆ ಸಿದ್ಧವಾದಂತೆ ರಸ್ತೆ ಮಧ್ಯೆ ಕದಲದಂತೆ ನಿಂತ ಆನೆ ಹಾರ್ನ್‌ನಿಂದ ಕೆರಳಿ ಬಸ್‌ ಬೆನ್ನಟ್ಟಿ ಕೊಂಡು ಬಂತು. ಎಚ್ಚೆತ್ತುಕೊಂಡ ಚಾಲಕನ ಹಿಮ್ಮುಖವಾಗಿ ಬಸ್‌ ಓಡಿಸಿ ಕೊಂಡು ಬಂದರು. ಬಹಳ ಹೊತ್ತು ಆನೆ ರಸ್ತೆಯಿಂದ ಕದಲಿಲ್ಲ. ಬಸ್‌ಗೆ ಅಡ್ಡಲಾಗಿ ನಿಂತಿತ್ತು. ಅನುಭವಿ ಚಾಲಕನ ಸಮಯ ಪ್ರಜ್ಞೆಯಿಂದ ಬದುಕುಳಿದೆವು’ ಎಂದು ಪ್ರಯಾಣಿಕರು ‘ಪ್ರಜಾವಾಣಿ’ ಜತೆ ಅನುಭವ ಹಂಚಿಕೊಂಡರು.

ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಆನೆಯನ್ನು ಓಡಿಸಿದರು. ಜೀವಭಯದಿಂದ ಬಸ್‌ ನಲ್ಲಿ ಉಸಿರು ಬಿಗಿ ಹಿಡಿದು ಕುಳಿತಿದ್ದ ಪ್ರಯಾಣಿಕರು ನಿಟ್ಟಿಸಿರು ಬಿಟ್ಟರು.

ಆನೆಗಳ ಹಿಂಡಿನಿಂದ ಬೇರ್ಪಟ್ಟಿರುವ ಈ ಒಂಟಿ ಸಲಗ ಸುಮಾರು ದಿನಗಳಿಂದ ಪುಟ್ಟದಾಸದೊಡ್ಡಿ, ಬಿಜ್ಜಳ್ಳಿ ಮತ್ತು ಮರಳವಾಡಿ ಮಾರ್ಗವಾಗಿ ಹೋಗಿ ಬರುವ ವಾಹನಗಳನ್ನು ಅಡ್ಡಗಟ್ಟಿ ದಾಂದಲೆ ನಡೆಸುತ್ತಿದೆ. ತಿಂಗಳ ಹಿಂದಯಷ್ಟೇ ವಾಹನ ಸವಾರರೊಬ್ಬರ ಮೇಲೆ ದಾಳಿ ಮಾಡಿ ಕೊಂದು ಹಾಕಿದೆ.

ಬನ್ನೇರುಘಟ್ಟ ವನ್ಯಜೀವಿ ಧಾಮಕ್ಕೆ ಸೇರಿದ ಅರಣ್ಯ ಪ್ರದೇಶವು ಕಾಡು ಶಿವನಹಳ್ಳಿ, ಅರಗಡಕಲು, ಬಿಜ್ಜಳ್ಳಿ, ಗಟ್ಟಿಗುಂದ, ಕೊಳಗೊಂಡನಹಳ್ಳಿ, ಪುಟ್ಟದಾಸದೊಡ್ಡಿ ಮುಗ್ಗೂರು, ಹುಣಸನಹಳ್ಳಿ, ಬನ್ನಿಮುಕ್ಕೋಡ್ಲು, ಅರಕೆರೆ, ಹಲಸೂರು ಮೊದಲಾದ ಗ್ರಾಮಗಳನ್ನು ಒಳಗೊಂಡಿದೆ. ಈ ಗ್ರಾಮಗಳ ಜನರು ಪ್ರಯಾಣಕ್ಕೆ ಅರಣ್ಯದೊಳಗಿನ ಈ ರಸ್ತೆಯನ್ನೇ ಅವಲಂಬಿಸಿದ್ದಾರೆ. ಹಾಗಾಗಿ ವನ್ಯ ಪ್ರಾಣಿಗಳ ದಾಳಿಗೆ ತುತ್ತಾಗುತ್ತಿದ್ದಾರೆ.

ಪುಂಡಾನೆ ಸೆರೆಗೆ ಗ್ರಾಮಸ್ಥರ ಒತ್ತಾಯ

ಈ ಒಂಟಿ ಸಲಗವು ಒಂದೂವರೆ ತಿಂಗಳಿನಿಂದ ಈ ರಸ್ತೆಯಲ್ಲಿ ಕಾಣಿಸಿಕೊಂಡಿದ್ದು, ರಸ್ತೆ ಮೂಲಕ ಹಾದು ಹೋಗುವ ಪ್ರಯಾಣಿಕರಿಗೆ ತೊಂದರೆ ಕೊಡುತ್ತಿದೆ. ಹೀಗಾಗಿ ಜನರು ಈ ರಸ್ತೆಯಲ್ಲಿ ಓಡಾಡಲು ಭಯಭೀತರಾಗಿದ್ದಾರೆ.

ಈ ಭಾಗದ ಗ್ರಾಮಸ್ಥರು ಅನ್ಯ ಸ್ಥಳಗಳಿಗೆ ಹೋಗಲು ಇದೊಂದೇ ಮಾರ್ಗ ಅವಲಂಬಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸುವ ಮೂಲಕ ಈ ಪುಂಡಾನೆಯನ್ನು ಸೆರೆ ಹಿಡಿಯಬೇಕು. ಮುಂದಿನ ದಿನಗಳಲ್ಲಿ ಆಗುವ ಅನಾಹುತ ತಡೆಯಬೇಕು ಎಂದು ಜನರು ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT