ಶುಕ್ರವಾರ, ಜುಲೈ 30, 2021
20 °C
ಕೆಎಸ್‌ಆರ್‌ಟಿಸಿ ಬಸ್ ಹತ್ತಲು ಪ್ರಯಾಣಿಕರ ಹಿಂಜರಿಕೆ; ಯಥಾಸ್ಥಿತಿಗೆ ಬಾರದ ಸಂಚಾರ

ರಾಮನಗರ ಘಟಕಕ್ಕೆ ನಿತ್ಯ ₹38 ಲಕ್ಷ ನಷ್ಟ!

ಆರ್‌. ಜಿತೇಂದ್ರ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭಗೊಂಡು ವಾರಗಳೇ ಕಳೆದರೂ ಇನ್ನೂ ಯಥಾಸ್ಥಿತಿಗೆ ಬಂದಿಲ್ಲ. ಇದರಿಂದ ರಾಮನಗರ ಘಟಕ ನಿತ್ಯ ಬರೋಬ್ಬರಿ ₹38 ಲಕ್ಷದಷ್ಟು ನಷ್ಟ ಅನುಭವಿಸತೊಡಗಿದೆ.

ಕೊರೊನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸಾರ್ವಜನಿಕ ಸಾರಿಗೆ ಸೇವೆಗೆ ಸರ್ಕಾರ ಕಳೆದ ಮಾರ್ಚ್‌ 23ರಂದು ನಿರ್ಬಂಧ ಹೇರಿತ್ತು. ಎರಡು ತಿಂಗಳ ಬಳಿಕ ಮತ್ತೆ ಹಸಿರು ನಿಶಾನೆ ತೋರಿದೆಯಾದರೂ ಪ್ರಯಾಣಿಕರಲ್ಲಿನ ಭೀತಿ ಮಾತ್ರ ಕಡಿಮೆಯಾಗಿಲ್ಲ. ಸದ್ಯ ಅರ್ಧದಷ್ಟು ಬಸ್‌ಗಳು ಮಾತ್ರವೇ ಕಾರ್ಯಾಚರಣೆ ನಡೆಸುತ್ತಿವೆ. ಅದರಲ್ಲೂ ನಿರೀಕ್ಷಿತ ಮಟ್ಟದ ಆದಾಯ ದೊರೆಯುತ್ತಿಲ್ಲ ಎನ್ನುತ್ತಾರೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು.

ರಾಮನಗರ ಘಟಕದ ವ್ಯಾಪ್ತಿಯಲ್ಲಿ ರಾಮನಗರ, ಚನ್ನಪಟ್ಟಣ. ಮಾಗಡಿ, ಕನಕಪುರ, ಆನೇಕಲ್‌ ಸೇರಿದಂತೆ ಒಟ್ಟು ಆರು ಡಿಪೊಗಳಿವೆ. ಲಾಕ್‌ಡೌನ್‌ಗೆ ಮುನ್ನ ಇವುಗಳಲ್ಲಿ ನಿತ್ಯ 500 ಬಸ್‌ಗಳು ಸಂಚರಿಸುತ್ತಿದ್ದವು. ದಿನವೊಂದಕ್ಕೆ ಸರಾಸರಿ 2.10 ಲಕ್ಷ ಮಂದಿ ಪ್ರಯಾಣಿಸುತ್ತಿದ್ದರು. ಈಗ ಕೇವಲ 220 ಬಸ್‌ಗಳು ಮಾತ್ರ ಪ್ರತಿ ದಿನ ರಸ್ತೆಗೆ ಇಳಿಯುತ್ತಿವೆ. ನಿತ್ಯ ₨50 ಲಕ್ಷದಷ್ಟು ಆದಾಯ ಗಳಿಸುತ್ತಿದ್ದ ರಾಮನಗರ ಘಟಕವೀಗ ದಿನಕ್ಕೆ ಕೇವಲ  ₹12 ಲಕ್ಷ ಗಳಿಕೆಗೆ ಬಂದು ನಿಂತಿದೆ.

ನಿಯಮ ಪಾಲನೆ ಸಂಕಷ್ಟ: ಸಾಮಾನ್ಯವಾಗಿ ಒಂದು ಬಸ್‌ನಲ್ಲಿ 55-60 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಆದರೀಗ ಗರಿಷ್ಠ 30 ಪ್ರಯಾಣಿಕರಿಗೆ ಮಾತ್ರ ಅವಕಾಶ ಕಲ್ಪಿಸಬೇಕು ಎಂದು ಸರ್ಕಾರ ನಿರ್ಬಂಧ ಹೇರಿದೆ. ಇದರಿಂದಾಗಿ ಸಾರಿಗೆ ಸಂಸ್ಥೆಗೆ ನಷ್ಟ ಹೆಚ್ಚಾಗಿದೆ. 220 ಬಸ್ ಓಡಿಸಿದರೂ ದಿನಕ್ಕೆ  ₹20 ಲಕ್ಷದಷ್ಟು ಆದಾಯ ಬರಬೇಕಿತ್ತು. ಆದರೆ  ₹12 ಲಕ್ಷ ಮಾತ್ರ ಸಿಗುತ್ತದೆ. ಇಲ್ಲಿಯೇ ಇನ್ನೂ ₨8 ಲಕ್ಷ ಆದಾಯ ಕೈತಪ್ಪುತ್ತಿದೆ ಎನ್ನುತ್ತಾರೆ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ರಾಜ್‌ಕುಮಾರ್‍.

ಶೇ 50 ಸಿಬ್ಬಂದಿ ಬಳಕೆ: ಕೇವಲ ಅರ್ಧದಷ್ಟು ಬಸ್‌ಗಳು ಓಡುತ್ತಿರುವ ಕಾರಣ ಸಾರಿಗೆ ಸಂಸ್ಥೆಯು ತನ್ನ ಅರ್ಧದಷ್ಟು ಸಿಬ್ಬಂದಿಯ ಸೇವೆಯನ್ನು ಮಾತ್ರ ಬಳಸಿಕೊಳ್ಳುತ್ತಿದೆ. ರಾಮನಗರ ಘಟಕದಲ್ಲಿ ಒಟ್ಟು 1650 ಚಾಲಕರು ಹಾಗೂ ನಿರ್ವಾಹಕರು ಇದ್ದಾರೆ. ಇವರಲ್ಲಿ ಅರ್ಧಕ್ಕೂ ಹೆಚ್ಚು ಮಂದಿಗೆ ದಿನ ಬಿಟ್ಟು ದಿನ ರಜೆ ಸಿಗುತ್ತಿದೆ. ಆರೋಗ್ಯ ಸಮಸ್ಯೆಯುಳ್ಳವರಿಗೆ ವಿನಾಯಿತಿಯೂ ಇದೆ. ಕಚೇರಿ ಸಿಬ್ಬಂದಿ, ಮೆಕ್ಯಾನಿಕ್‌ಗಳು ಸೇರಿದಂತೆ ಉಳಿದ ಸಿಬ್ಬಂದಿ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ.

ಮುಂದಿದೆ ಸವಾಲು: ಸದ್ಯ ಲಾಕ್‌ಡೌನ್‌ ನಡುವೆಯೂ ಅಲ್ಲಲ್ಲಿ ಶುಭ ಸಮಾರಂಭಗಳು ನಡೆದಿವೆ. ಹೀಗಾಗಿ ಜನರ ಓಡಾಟ ತುಸು ಹೆಚ್ಚಾಗಿಯೇ ಇದೆ. ಆದರೆ ಇನ್ನೊಂದು ವಾರಕ್ಕೆ ಆಷಾಢ ಮಾಸ ಬರಲಿದೆ. ಆಗ ಹೊರ ಊರುಗಳಿಗೆ ಪ್ರಯಾಣಿಸುವವರ ಸಂಖ್ಯೆ ಸಹಜವಾಗಿಯೇ ತಗ್ಗಲಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಪ್ರಯಾಣಿಕರ ಸಂಖ್ಯೆ ಇನ್ನಷ್ಟು ಕುಸಿಯಬಹುದು ಎನ್ನುವುದು ಅಧಿಕಾರಿಗಳ ಆತಂಕ.

"ಸದ್ಯ ಜನರ ಓಡಾಟ ಹೆಚ್ಚಿದೆಯಾದರೂ ಬಸ್‌ಗಳಲ್ಲಿ ಪ್ರಯಾಣಿಸಲು ಮನಸ್ಸು ಮಾಡುತ್ತಿಲ್ಲ. ಇದೇ 18ರಂದು ದ್ವಿತೀಯ ಪಿಯು ಪರೀಕ್ಷೆ ಹಾಗೂ 25ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಇದೆ. ಹೀಗಾಗಿ ಆ ಸಂದರ್ಭದಲ್ಲಿ ಆದರೂ ಪ್ರಯಾಣಿಕರ ಸಂಖ್ಯೆ ಹೆಚ್ಚಬಹುದು’ ಎನ್ನುತ್ತಾರೆ ರಾಜ್‌ಕುಮಾರ್.

ಗ್ರಾಮೀಣ ಪ್ರದೇಶದಲ್ಲಿ ಸಂಕಷ್ಟ

ಗ್ರಾಮೀಣ ಭಾಗದಲ್ಲಿ ಪ್ರಮುಖ ಊರುಗಳಿಗಷ್ಟೇ ಬಸ್‌ಗಳು ಸಂಚರಿಸುತ್ತಿವೆ. ಹಳ್ಳಿಗಾಡಿನ ಜನರಿಗೆ ಮೊದಲಿನಂತೆ ಸಾರಿಗೆ ಸೌಲಭ್ಯ ಸಿಗುತ್ತಿಲ್ಲ. ಆದರೆ ಆದಾಯವೇ ಇಲ್ಲದ ಕಾರಣ ಹೆಚ್ಚು ಹಳ್ಳಿಗಳಿಗೆ ಬಸ್‌ ಓಡಿಸಲು ಕೆಎಸ್‌ಆರ್‌ಟಿಸಿ ಸಹ ಸಿದ್ಧವಿಲ್ಲ. "ಗ್ರಾಮೀಣ ಭಾಗಗಳಿಗೂ ಸಾಧ್ಯವಾದಷ್ಟು ಮಟ್ಟಿಗೆ ಸಾರಿಗೆ ಸೇವೆಯನ್ನು ಒದಗಿಸುತ್ತಿದ್ದೇವೆ. ಬೇಡಿಕೆ ಹೆಚ್ಚಿದಲ್ಲಿ ಇನ್ನಷ್ಟು ಭಾಗಕ್ಕೆ ಬಸ್‌ ಸೇವೆ ವಿಸ್ತರಿಸಲು ಸಿದ್ಧರಿದ್ದೇವೆ’ ಎನ್ನುತ್ತಾರೆ ಅಧಿಕಾರಿಗಳು.

ಅಂಕಿ-ಅಂಶ

6-ಕೆಎಸ್‌ಆರ್‌ಟಿಸಿ ರಾಮನಗರ ಘಟಕ ವ್ಯಾಪ್ತಿಯ ಬಸ್ ಡಿಪೊಗಳು
500- ಡಿಪೊ ವ್ಯಾಪ್ತಿಯಲ್ಲಿನ ಬಸ್‌ಗಳು
220- ಸದ್ಯ ನಿತ್ಯ ಸಂಚಾರ ಕೈಗೊಂಡಿರುವ ಬಸ್‌ಗಳು
 ₹50 ಲಕ್ಷ- ಲಾಕ್‌ಡೌನ್‌ಗೆ ಮುನ್ನ ದಿನವೊಂದರ ಸರಾಸರಿ ಗಳಿಕೆ
 ₹12 ಲಕ್ಷ- ಸದ್ಯದ ಸರಾಸರಿ ಗಳಿಕೆ
2250-ರಾಮನಗರ ಘಟಕ ವ್ಯಾಪ್ತಿಯಲ್ಲಿನ ಒಟ್ಟು ಸಿಬ್ಬಂದಿ

ಅರ್ಧದಷ್ಟು ಬಸ್ ಮಾತ್ರ ಸಂಚಾರ
ರಾಮನಗರ ಘಟಕದಲ್ಲಿ ಸದ್ಯ ಅರ್ಧದಷ್ಟು ಬಸ್‌ ಮಾತ್ರವೇ ಸಂಚರಿಸುತ್ತಿವೆ. ಬೇಡಿಕೆ ಬಂದರೆ ಇನ್ನಷ್ಟು ವಾಹನಗಳನ್ನು ಬಿಡುತ್ತೇವೆ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ರಾಜ್‌ಕುಮಾರ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು