ಕನಕಪುರ: ಕುಂಬಾರಗುಂಡಿ ಕೆರೆ ತುಂಬಿಸಿದ ರೈತ

ಕನಕಪುರ: ಮಳೆಗಾಲದಲ್ಲಿ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಕೆರೆ, ಕುಂಟೆಗಳಲ್ಲಿ ತುಂಬಿಸಿದರೆ ಆಪತ್ಕಾಲದಲ್ಲಿ ಉಪಯೋಗಕ್ಕೆ ಬರುತ್ತದೆ. ಪ್ರಾಣಿ, ಪಕ್ಷಿಗಳಿಗೂ ಕುಡಿಯಲು ಉಪಯುಕ್ತವಾಗುತ್ತದೆ. ಮತ್ತೊಂದೆಡೆ ಅಂತರ್ಜಲ ಮಟ್ಟವೂ ಹೆಚ್ಚುತ್ತದೆ.
ಆದರೆ, ಇಂದಿನ ದಿನಗಳಲ್ಲಿ ಇಂತಹ ಕೆಲಸ ಮಾಡುವವರ ಸಂಖ್ಯೆ ವಿರಳ. ಆ ರೀತಿ ಮಾಡುವುದರಿಂದ ನಮಗೇನು ಲಾಭ ಎಂದು ಲೆಕ್ಕ ಹಾಕುವವರೇ ಹೆಚ್ಚು. ಇದಕ್ಕೆ ತಾಲ್ಲೂಕಿನ ಮರಳವಾಡಿ ಹೋಬಳಿಯ ತೋಕಸಂದ್ರ ಗ್ರಾಮದ ರೈತ ಶಿವರುದ್ರೇಗೌಡ ಅಪವಾದವಾಗಿದ್ದಾರೆ.
ಪಕ್ಕದ ಹೊಳೆಯಲ್ಲಿ ವ್ಯರ್ಥವಾಗಿ ಹರಿಯುವ ನೀರನ್ನು ಕೃಷಿ ಪಂಪ್‌ಸೆಟ್ ಮೂಲಕ ಕೆರೆಗೆ ತುಂಬಿಸುವ ಸಾರ್ಥಕ ಕೆಲಸ ಮಾಡಿದ್ದಾರೆ. ಮಳೆಗಾಲವಾದ್ದರಿಂದ ಹಳ್ಳದಲ್ಲಿ ನೀರು ಈಗ ಹರಿಯುತ್ತಿದೆ. ಆ ನೀರನ್ನು ಗ್ರಾಮದ ಕುಂಬಾರಗುಂಡಿ ಕೆರೆಗೆ ತುಂಬಿಸುತ್ತಿದ್ದಾರೆ.
ಗ್ರಾಮ ಹೊರವಲಯದ ಬೆಟ್ಟದ ಸಮೀಪ ಸುಮಾರು 5 ಎಕರೆಯಲ್ಲಿ ಕುಂಬಾರಗುಂಡಿ ಕೆರೆಯಿದೆ. ಹಲವು ವರ್ಷಗಳಿಂದ ಈ ಕೆರೆ ತುಂಬುತ್ತಿರಲಿಲ್ಲ. ಈ ವರ್ಷ ಉತ್ತಮ ಮಳೆಯಾಗಿರುವುದರಿಂದ ಬಸವನಹೊಳೆಯೂ ಹರಿಯುತ್ತಿದೆ. ಇದನ್ನು ಗಮನಿಸಿದ ಶಿವರುದ್ರೇಗೌಡ ಅವರು ಕೆರೆಗೆ ನೀರು ತುಂಬಿಸುವ ಪ್ರಯತ್ನಕ್ಕೆ ಮುಂದಾದರು.
ಆರಂಭದಲ್ಲಿ ಗ್ರಾಮಸ್ಥರು ಇವರಿಗೆ ಬುದ್ಧಿಯಿಲ್ಲ. ಇಷ್ಟು ದೊಡ್ಡ ಕೆರೆ ತುಂಬಿಸಲು ಸಾಧ್ಯವೇ ಎಂದು ಮೂದಲಿಸಿದರು. ಇನ್ನೂ ಕೆಲವರು ಇದರಿಂದ ಇವನಿಗೇನೋ ಲಾಭವಿದೆ ಎಂದು ಮಾತನಾಡಿಕೊಂಡರು. ಆದರೆ, ಅದ್ಯಾವುದನ್ನು ಮನಸ್ಸಿಗೆ ತೆಗೆದುಕೊಳ್ಳದೆ ನೀರು ತುಂಬಿಸಲು ಮುಂದಾಗಿದ್ದರಿಂದ ಒಂದು ತಿಂಗಳ ಅವಧಿಯಲ್ಲಿ ಕೆರೆ ಪೂರ್ಣ
ತುಂಬಿದೆ.
ಗ್ರಾಮದಲ್ಲಿ ಇದೇ ರೀತಿ ಇನ್ನೂ ನಾಲ್ಕು ಕೆರೆಗಳಿದ್ದು ಅವುಗಳನ್ನು ತುಂಬಿಸಿದರೆ ಒಳ್ಳೆಯದು. ವ್ಯರ್ಥವಾಗುವ ನೀರು ಶೇಖರಣೆಯಾಗಿ ಗ್ರಾಮಕ್ಕೆ ಉಪಯೋಗವಾಗುತ್ತದೆ. ಪ್ರಾಣಿ, ಪಕ್ಷಿಗಳಿಗೆ ಉಪಯೋಗವಾಗುತ್ತದೆ. ಶಿವರುದ್ರೇಗೌಡ ಒಳ್ಳೆಯ ಸಾರ್ಥಕ ಕೆಲಸ ಮಾಡಿದ್ದಾರೆ ಎನ್ನುತ್ತಾರೆ ಗ್ರಾಮಸ್ಥರು.
‘ಕುಂಬಾರಗುಂಡಿ ಕೆರೆಯು ಹಲವು ವರ್ಷಗಳಿಂದ ತುಂಬಿರಲಿಲ್ಲ. ಈ ಬಾರಿ ಏನಾದರೂ ಮಾಡಿ ತುಂಬಿಸಬೇಕೆಂದು ಮನಸ್ಸಿಗೆ ಬಂತು. ಬಸವನಹೊಳೆಗೆ ಕೃಷಿ ಪಂಟ್‌ಸೆಟ್ ಜೋಡಿಸಿ ಅಲ್ಲಿಂದ ಪೈಪ್ ಮೂಲಕ ಕೆರೆಗೆ ನೀರು ಬಿಡಲಾಗಿದೆ’ ಎಂದು ಶಿವರುದ್ರೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.
‘ಪ್ರಾರಂಭದಲ್ಲಿ ಕೆರೆ ತುಂಬಿಸಲು ಸಾಧ್ಯವೇ ಎಂಬ ಪ್ರಶ್ನೆ ಕಾಡುತ್ತಿತ್ತು. 15 ದಿನಗಳಲ್ಲಿ ಮುಕ್ಕಾಲು ಕೆರೆ ತುಂಬಿದಾಗ ನಂಬಿಕೆ ಬಂತು. ಪಂಪ್, ಮೋಟಾರ್, ವೈರ್ ಎಲ್ಲಾ ಸೇರಿ ಸುಮಾರು ₹ 1 ಲಕ್ಷದಷ್ಟು ಸ್ವಂತ ಹಣ ಖರ್ಚಾಗಿದೆ. ಆದರೂ ಕೆರೆ ತುಂಬಿಸಿದ ಖುಷಿಯಿದೆ’ ಎಂದು ಸಂತಸ ಹಂಚಿಕೊಂಡರು.
‘ಮಳೆಗಾಲದಲ್ಲಿ ಪ್ರತಿವರ್ಷ ಇದೇ ರೀತಿ ಮರಳವಾಡಿ ಕೆರೆಯಿಂದ ಬರುವ ನೀರು ಬಸವನಹೊಳೆಯಲ್ಲಿ ವ್ಯರ್ಥವಾಗಿ ಹರಿದು ಹೋಗುತ್ತದೆ. ಶಿವರುದ್ರೇಗೌಡ ಸ್ವಂತ ಹಣದಿಂದ ಗ್ರಾಮದ ಹಿತಕ್ಕಾಗಿ ಕೆರೆಗೆ ನೀರು ತುಂಬಿಸಿದ್ದಾರೆ. ಇದನ್ನು ಕೆಲವರು ಗೇಲಿ ಮಾಡಿದರು. ಗ್ರಾಮಕ್ಕೆ ಒಳ್ಳೆಯದಾಗುವ ಕೆಲಸ ಯಾರು ಬೇಕಾದರೂ ಮಾಡಬಹುದು. ಇದು ಒಳ್ಳೆಯ ಮಾದರಿ ಕೆಲಸ’ ಎಂದು ತೋಕಸಂದ್ರ ಗ್ರಾಮದ ಚಿಕ್ಕರಾಜು ಪ್ರತಿಕ್ರಿಯಿಸಿದರು.
‘ಗ್ರಾಮದಲ್ಲಿ ಕುಂಬಾರಗುಂಡಿ ಸೇರಿದಂತೆ ಅರಳೇಕಟ್ಟೆಕೆರೆ, ವಡೇರಕೆರೆ, ಕೆಂಪಶೆಟ್ಟಿಕೆರೆ, ಗೊಡಮಂಜಿ ಕೆರೆಗಳಿವೆ. ಪಕ್ಕದ ಹೊಳೆಯಲ್ಲಿ ನೀರು ಹರಿಯುತ್ತಿರುವುದರಿಂದ ಸುಲಭವಾಗಿ ತುಂಬಿಸಬಹುದು. ಮಳೆಗಾಲದಲ್ಲಿ ತುಂಬಿಸಿದರೆ ಬೇಸಿಗೆಯಲ್ಲೂ ನೀರು ಇರುತ್ತದೆ’ ಎಂದು ಅಭಿಪ್ರಾಯಪಡುತ್ತಾರೆ ಗ್ರಾಮಸ್ಥ ಶ್ರೀನಿವಾಸ್.
‘ಸರ್ಕಾರ ಕೆರೆಗಳ ಒತ್ತುವರಿ ತೆರವುಗೊಳಿಸಿ ಅಭಿವೃದ್ಧಿಪಡಿಸುವಂತೆ ಗ್ರಾಮ ಪಂಚಾಯಿತಿಗಳಿಗೆ ನಿರ್ದೇಶನ ನೀಡಿದೆ. ಗ್ರಾಮ ಪಂಚಾಯಿತಿ ಆಡಳಿತ ಮೊದಲು ಕೆರೆಗಳ ಜಾಗವನ್ನು ಅಳತೆ ಮಾಡಿಸಿ ಒತ್ತುವರಿಯನ್ನು ತೆರವುಗೊಳಿಸಬೇಕು. ಪಂಚಾಯಿತಿಯೇ ಕೆರೆಗಳಿಗೆ ನೀರು ತುಂಬಿಸಲು ಮುಂದಾಗಬೇಕು. ಇದರಿಂದ ಲಕ್ಷಾಂತರ ಲೀಟರ್ ನೀರು ಭೂಮಿಯಲ್ಲಿ ಇಂಗುತ್ತದೆ. ಅಂತರ್ಜಲ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯುತ್ತದೆ’ ಎಂದು
ಒತ್ತಾಯಿಸುತ್ತಾರೆ ಗ್ರಾಮಸ್ಥ
ಪ್ರದೀಪ್.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.