ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ | ಬುಲೆಟ್ ರೈಲಿಗೆ ಭೂಸ್ವಾಧೀನ: ಮತ್ತೆ ರೈತರಿಗೆ ಆತಂಕ!

ರಾಜ್ಯದಲ್ಲಿ 223 ಕಿ.ಮೀ. ರೈಲು ಮಾರ್ಗ ನಿರ್ಮಾಣ * 9 ಕಡೆ ತಲೆ ಎತ್ತಲಿದೆ ನಿಲ್ದಾಣ
Published 9 ಮಾರ್ಚ್ 2024, 22:39 IST
Last Updated 9 ಮಾರ್ಚ್ 2024, 22:39 IST
ಅಕ್ಷರ ಗಾತ್ರ

ರಾಮನಗರ: ಮಹತ್ವಕಾಂಕ್ಷಿಯ ಚೆನ್ನೈ–ಮೈಸೂರು ನಡುವಣ ಬುಲೆಟ್ ರೈಲು ಯೋಜನೆಗೆ ಜಿಲ್ಲೆಯ 28 ಗ್ರಾಮಗಳಲ್ಲಿ ಭೂಸ್ವಾಧೀನಕ್ಕೆ  ಜಿಲ್ಲಾಡಳಿತವು ರೈತರಿಗೆ ನೋಟಿಸ್ ಜಾರಿ ಮಾಡಿದೆ. ಈಗಾಗಲೇ ಬೆಂಗಳೂರು–ಮೈಸೂರು ಹೆದ್ದಾರಿಗಾಗಿ ಜಮೀನು ಕಳೆದುಕೊಂಡಿರುವ ರೈತರು ಮತ್ತೇ ಇದೀಗ ಬುಲೆಟ್ ರೈಲಿಗಾಗಿ ಫಲವತ್ತಾದ ಭೂಮಿ ಬಿಟ್ಟು ಕೊಡಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ.

ರೈಲು ಯೋಜನೆಗೆ ಭೂ ಸ್ವಾಧೀನ, ಸಾಮಾಜಿಕ ಮೌಲ್ಯ ಪರಿಣಾಮ ಹಾಗೂ ಪುನರ್ವಸತಿ ಕ್ರಿಯಾ ಯೋಜನೆ ಕುರಿತು ರಾಷ್ಟ್ರೀಯ ಹೈಸ್ಪೀಡ್ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ (ಎನ್‌ಎಚ್‌ಎಸ್‌ಆರ್‌ಸಿಎಲ್) ಜಿಲ್ಲಾಡಳಿತಕ್ಕೆ ಕಳೆದ ಸೆಪ್ಟೆಂಬರ್‌ನಲ್ಲಿ ಪತ್ರ ಬರೆದಿದೆ. ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಕಳೆದ ತಿಂಗಳು ಉಪ ವಿಭಾಗಾಧಿಕಾರಿಗೆ ಪತ್ರ ಬರೆದಿದ್ದಾರೆ.

ರೈಲು ಮಾರ್ಗ ಹಾದು ಹೋಗುವ ಗ್ರಾಮಗಳ ಭೂಮಿ ಮಾಹಿತಿ ಹಾಗೂ ನಕಾಶೆಯನ್ನು ಜಿಲ್ಲಾಡಳಿತ ಒದಗಿಸಿದೆ. ಅದರಂತೆ ನಿಗಮವು ಈಗಾಗಲೇ ಚನ್ನಪಟ್ಟಣ ತಾಲ್ಲೂಕಿನ ಬ್ರಹ್ಮಣಿಪುರ ಸೇರಿದಂತೆ ಕೆಲ ಗ್ರಾಮಗಳ ರೈತರಿಗೆ ಭೂ ಸ್ವಾಧೀನದ ನೋಟಿಸ್ ನೀಡಿದೆ.

‘ಯೋಜನೆಯಡಿ ರಾಜ್ಯದ ಬಂಗಾರಪೇಟೆ, ಬೆಂಗಳೂರು, ಚನ್ನಪಟ್ಟಣ, ಮಂಡ್ಯ ಹಾಗೂ ಮೈಸೂರು ಸೇರಿದಂತೆ ಒಂಬತ್ತು ಕಡೆ ಬುಲೆಟ್‌ ರೈಲು ನಿಲ್ದಾಣಗಳು ತಲೆ ಎತ್ತಲಿವೆ’ ಎಂದು ಹೆಸರು ಹೇಳಲಿಚ್ಛಿಸದ ರೈಲ್ವೆ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಬುಲೆಟ್ ರೈಲು ಯೋಜನೆಗೆ ಭೂಸ್ವಾಧೀನಕ್ಕೆ ಸಹಕರಿಸಲು ಎನ್‌ಎಚ್‌ಎಸ್‌ಆರ್‌ಸಿಎಲ್ ಜಿಲ್ಲಾಡಳಿತಕ್ಕೆ ಪತ್ರ ಬರೆದಿದೆ. ಮಾಹಿತಿ ಹಂಚಿಕೊಳ್ಳಲಾಗಿದೆ. ಸ್ವಾಧೀನ ಪ್ರಕ್ರಿಯೆ ಅವರೇ ಮಾಡಲಿದ್ದಾರೆ
ಬಿ.ಸಿ. ಶಿವಾನಂದ ಮೂರ್ತಿ ಹೆಚ್ಚುವರಿ ಜಿಲ್ಲಾಧಿಕಾರಿ ರಾಮನಗರ
ಯೋಜನೆಗೆ ಭೂಮಿ ಕಳೆದುಕೊಳ್ಳುವ ರೈತರಿಗೆ ಈಗಿನ ಮಾರುಕಟ್ಟೆ ಮೌಲ್ಯದ ನಾಲ್ಕು ಪಟ್ಟು ಪರಿಹಾರ ನೀಡಲಾಗುವುದು
ರೈಲ್ವೆ ಇಲಾಖೆ ಅಧಿಕಾರಿ
ತಲಾ ತಲಾಂತರದಿಂದ ಈ ಭೂಮಿಯಲ್ಲಿ ಕೃಷಿ ಮಾಡಿ ಬದುಕು ಕಂಡುಕೊಂಡಿದ್ದೇವೆ. ರೈಲು ಯೋಜನೆಗೆ ಈ ಫಲವತ್ತಾದ ಭೂಮಿಯೇ ಬೇಕಾ? ರೈಲ್ವೆಯವರು ಎಷ್ಟೇ ದುಡ್ಡು ಕೊಟ್ಟರೂ ಅದು ಉಳಿಯದು. ಭೂಮಿ ಬದುಕಿಗೆ ಆಧಾರ
ಬ್ರಹ್ಮಣಿಪುರದ ರೈತರು ಚನ್ನಪಟ್ಟಣ ತಾಲ್ಲೂಕು

ರೈಲು ಮಾರ್ಗ

ತಾಳಕುಪ್ಪೆ, ಕೆ.ಜಿ. ಭೀಮನಹಳ್ಳಿ, ಬಿಲ್ಲಕೆಂಪನಹಳ್ಳಿ, ಬಾನಂದೂರು, ಬಿಡದಿ, ಕೆಂಚನಕುಪ್ಪೆ, ಕಲ್ಲುಗೋಪನಹಳ್ಳಿ, ಕೆಂಪನಹಳ್ಳಿ, ಮಾಯಾಗಾನಹಳ್ಳಿ, ಕೇತೋಹಳ್ಳಿ, ಬಸವನಪುರ, ಕೊತ್ತಿಪುರ, ಶಿಡ್ಲಕಲ್ಲು, ಅಚ್ಚಲು, ಅಚ್ಚಲು ಅರಣ್ಯ ಪ್ರದೇಶ, ವಿಭೂತಿಕೆರೆ.

ಚನ್ನಪಟ್ಟಣ ತಾಲ್ಲೂಕು: ಬೊಮ್ಮನಹಳ್ಳಿ, ಬ್ರಹ್ಮಣಿಪುರ, ತಗಚಗೆರೆ, ತಿಮ್ಮಸಂದ್ರ, ಸುಣ್ಣಘಟ್ಟ, ಹೊಂಗನೂರು, ಕೂಡ್ಲೂರು, ಹೊಟ್ಟಿಗನಹೊಸಹಳ್ಳಿ, ಚಕ್ಕೆರೆ, ಕೂರಣಗೆರೆ, ಚಕ್ಕಲೂರು, ಕುಕ್ಕೂರು.

ಡಿಪಿಆರ್‌ ಸಿದ್ಧ

ಯೋಜನೆಗೆ ಸಂಬಂಧಿಸಿದ ಡಿಪಿಐಆರ್ ಈಗಾಗಲೇ ಸಿದ್ಧವಾಗಿದೆ. ಉದ್ದೇಶಿತ ಹೊಸ ರೈಲು ಮಾರ್ಗವು 435 ಕಿ.ಮೀ. ವ್ಯಾಪ್ತಿ ಹೊಂದಿದೆ. ಈ ಪೈಕಿ ತಮಿಳುನಾಡಿನಲ್ಲಿ 131 ಕಿ.ಮೀ., ಆಂಧ್ರಪ್ರದೇಶದಲ್ಲಿ 92 ಕಿ.ಮೀ. ಹಾಗೂ ಕರ್ನಾಟಕದಲ್ಲಿ 223 ಕಿ.ಮೀ. ಇರಲಿದೆ.

ರಾಜ್ಯದಲ್ಲಿ ರಾಮನಗರದ 28 ಮತ್ತು ಪಕ್ಕದ ಮಂಡ್ಯ ಜಿಲ್ಲೆಯ 34 ಗ್ರಾಮಗಳು ಸೇರಿದಂತೆ ಒಟ್ಟು 62 ಹಳ್ಳಿಗಳಲ್ಲಿ ರೈಲು ಮಾರ್ಗ ಹಾದು ಹೋಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT