ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ನಲ್ಲಿ ಮದ್ಯ ಮಾರಾಟಕ್ಕೆ ವಿರೋಧ

ಜಿಲ್ಲೆಯ ಮದ್ಯ ಮಾರಾಟಗಾರರ ಸಂಘದ ಪ್ರತಿನಿಧಿಗಳಿಂದ ಸರ್ಕಾರಕ್ಕೆ ಮನವಿ
Last Updated 2 ಫೆಬ್ರುವರಿ 2021, 14:10 IST
ಅಕ್ಷರ ಗಾತ್ರ

ರಾಮನಗರ: ಆನ್‌ಲೈನ್‌ನಲ್ಲಿ ಮದ್ಯ ಮಾರಾಟಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಬಾರದು ಎಂದು ಒತ್ತಾಯಿಸಿ ರಾಮನಗರ ಜಿಲ್ಲಾ ವೈನ್ ಮರ್ಚೆಂಟ್ಸ್‌ ಅಸೋಸಿಯೇಷನ್ ಪದಾಧಿಕಾರಿಗಳು ‘ಅಬಕಾರಿ ಉದ್ಯಮ ಉಳಿಸಿ’ ಹೆಸರಿನಲ್ಲಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮಂಗಳವಾರ ಮೌನ ಪ್ರತಿಭಟನೆ ನಡೆಸಿದರು.

ಕನಕಪುರ ಮದ್ಯ ಮಾರಾಟ ಸಂಘದ ಅಧ್ಯಕ್ಷ ರಮೇಶ್ ಮಾತನಾಡಿ ‘ರಾಜ್ಯದ ಚಿಲ್ಲರೆ ಮದ್ಯ ಮಾರಾಟಗಾರರು ಈಗಾಗಲೇ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಆನ್‌ಲೈನ್‌ನಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿದಲ್ಲಿ, ಲಕ್ಷಾಂತರ ರೂಪಾಯಿ ತೆರಿಗೆ ನೀಡಿ ವ್ಯಾಪಾರ ಮಾಡುತ್ತಿರುವ ಅಂಗಡಿಗಳು ಬಾಗಿಲು ಹಾಕುವ ಪರಿಸ್ಥಿತಿಗೆ ಬರುತ್ತದೆ ಎಂದು ಹೇಳಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತಿ ಬಜೆಟ್ ಗಳಲ್ಲಿ ಅಬಕಾರಿ ಸುಂಕ ಹೆಚ್ಚಿಸುತ್ತಿರುವುದು ಮದ್ಯ ಮಾರಾಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. 2011ರ ಜನಗಣತಿಯ ಅನ್ವಯ 5 ಸಾವಿರ ಅಥವಾ ಅದಕ್ಕಿಂತ ಹೆಚ್ಚು ಜನಸಂಖ್ಯೆಯುಳ್ಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಾದುಹೋಗುವ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಸಿ ಎಲ್ 6ಎ ಮತ್ತು ಸಿ ಎಲ್ 7 ಸನ್ನದ್ದುಗಳನ್ನ ಆರಂಭಿಸಲು ನೀಡಿರುವ ಆದೇಶವನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಕಾರ್ಯದರ್ಶಿ ಮುನಿಸ್ವಾಮಿ ಮಾತನಾಡಿ, ಸರ್ಕಾರದ ಆದೇಶದ ಪ್ರಕಾರ ಸಿಎಲ್ 7 ಸನ್ನದುಗಳು ಪ್ರವಾಸೋದ್ಯಮ ನೀತಿ ಪ್ರಕಾರ ಗುರುತಿಸಲ್ಪಟ್ಟಿರುವ ಪ್ರದೇಶದಲ್ಲಿ ಮಾತ್ರ ನೀಡಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಸರ್ಕಾರದ ನೀತಿ ನಿಯಮಗಳನ್ನು ಪಾಲಿಸದ ಕಾರಣ ನಾಯಿಕೊಡೆಯಂತೆ ತಲೆ ಎತ್ತುತ್ತಿವೆ. ಇದರಿಂದ ಮುಂದಿನ ದಿನಗಳಲ್ಲಿ ಮದ್ಯ ಮಾರಾಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದರು.

ಕೋವಿಡ್ 19 ಲಾಕ್ ಡೌನ್ ಸಮಸ್ಯೆಯಿಂದಾಗಿ ಮದ್ಯ ಮಾರಾಟಗಾರರಿಗೆ ಸಾಕಷ್ಟು ನಷ್ಟವಾಗಿದೆ. ಇದಕ್ಕೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿಯವರನ್ನು ಎರಡು ಬಾರಿ ಭೇಟಿಯಾಗಿದ್ದರೂ ಸರ್ಕಾರ ನಮ್ಮ ಬಗ್ಗೆ ಗಮನ ನೀಡಿಲ್ಲ. ಕೂಡಲೇ ಸಮಸ್ಯೆ ಪರಿಹಾರದ ಕಡೆಗೆ ಗಮನ ಹರಿಸಬೇಕು. ಇಲ್ಲವಾದರೇ, ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದರು.

ಎಂ ವಿ. ಮುನಿವೆಂಕಟಪ್ಪ. ಕಿರಣ್ ಬಿಳಗುಂಬ, ನಾಗಣ್ಣ, ಪ್ರಕಾಶ್, ಗೋಪಾಲಯ್ಯ, ರಾಮಣ್ಣ, ಶಿವಕುಮಾರ್, ಬಸವರಾಜ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT