ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮನಗರ: ‘ಕೈ’ ಕೋಟೆಯಲ್ಲಿ ‘ಕಮಲ’ ಅರಳಿಸಿದ ಮಂಜುನಾಥ್

ಬೆಂಗಳೂರು ಗ್ರಾಮಾಂತರ: ಐತಿಹಾಸಿಕ ಗೆಲುವಿನೊಂದಿಗೆ ಸಂಸತ್ ಪ್ರವೇಶಿಸಿದ ಹೃದ್ರೋಗ ತಜ್ಞ
Published 5 ಜೂನ್ 2024, 5:37 IST
Last Updated 5 ಜೂನ್ 2024, 5:37 IST
ಅಕ್ಷರ ಗಾತ್ರ

ರಾಮನಗರ: ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದ್ದ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿಯ ಡಾ. ಸಿ.ಎನ್. ಮಂಜುನಾಥ್ ಅವರು ಕಮಲ ಅರಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ತೀವ್ರ ಕುತೂಹಲ ಕೆರಳಿಸಿದ್ದ ಕ್ಷೇತ್ರದಲ್ಲಿ ಕೈ–ಕಮಲದ ನಡುವಣ ನೇರ ಹಣಾಹಣಿಯಲ್ಲಿ ಎಲ್ಲರೂ ಹುಬ್ಬೇರಿಸುವಂತೆ ಮಂಜುನಾಥ್ ಐತಿಹಾಸಿ ಗೆಲುವು ಸಾಧಿಸಿದ್ದಾರೆ.

ಇದರೊಂದಿಗೆ ಸಂಸತ್ ಪ್ರವೇಶಿಸಿದ ಎರಡನೇ ಬಿಜೆಪಿ ಪ್ರತಿನಿಧಿ ಎಂಬ ಕೀರ್ತಿಗೆ ಮಂಜುನಾಥ್ ಪಾತ್ರರಾಗಿದ್ದಾರೆ. 1998ರಲ್ಲಿ ಎಂ. ಶ್ರೀನಿವಾಸ್ ಅವರು ಹಿಂದಿನ ಕನಕಪುರ ಕ್ಷೇತ್ರದಲ್ಲಿ ಮೊದಲ ಬಾರಿಗೆ ಬಿಜೆಪಿಯಿಂದ ಗೆದ್ದಿದ್ದರು. ಬಳಿಕ, ಕಾಂಗ್ರೆಸ್ ಮತ್ತು ಜೆಡಿಎಸ್ ಕ್ಷೇತ್ರವನ್ನು ಪ್ರತಿನಿಧಿಸುತ್ತಾ ಬಂದಿದ್ದವು. ಇದೀಗ ಮಂಜುನಾಥ್ ನೇತೃತ್ವದಲ್ಲಿ 26 ವರ್ಷಗಳ ಬಳಿಕ ಕಮಲ ಮತ್ತೆ ಅರಳಿದೆ.

2008ರಲ್ಲಿ ಕ್ಷೇತ್ರ ಪುನರ್‌ವಿಂಗಡಣೆಯಾಗಿ ಬೆಂಗಳೂರು ಗ್ರಾಮಾಂತರ ಅಸ್ತಿತ್ವಕ್ಕೆ ಬಂದ ಬಳಿಕ, ಕ್ಷೇತ್ರವು ಉಪ ಚುನಾವಣೆ ಸೇರಿ 5 ಚುನಾವಣೆಗಳನ್ನು ಕಂಡಿದೆ. ಈ ಪೈಕಿ, ಅತಿ ಹೆಚ್ಚು ಮತಗಳನ್ನು ಪಡೆದ ಹಾಗೂ ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ ಹೊಸ ದಾಖಲೆಯನ್ನು ಮಂಜುನಾಥ್ ಬರೆದಿದ್ದಾರೆ. ಇದರೊಂದಿಗೆ ಅವರ ರಾಜಕೀಯ ಇನ್ನಿಂಗ್‌ಗೆ ಭರ್ಜರಿ ಓಪನಿಂಗ್ ಸಿಕ್ಕಿದೆ.

ಚುನಾವಣೆಗೆ ಕೆಲವೇ ತಿಂಗಳಿರುವಾಗ ಬಿಜೆಪಿ–ಜೆಡಿಎಸ್ ಮಧ್ಯೆ ಮೈತ್ರಿ ಏರ್ಪಟ್ಟಿತ್ತು. ಆದರೂ, ಪ್ರತಿಷ್ಠಿತ ಗ್ರಾಮಾಂತರದಲ್ಲಿ ಅಭ್ಯರ್ಥಿ ಯಾರಾಗಬೇಕೆಂಬ ಸ್ಪಷ್ಟತೆ ಎರಡೂ ಪಕ್ಷಗಳಿಗಿರಲಿಲ್ಲ. ಕ್ಷೇತ್ರ ಹಂಚಿಕೆಯೂ ಆಗಿರಲಿಲ್ಲ. ಕಾಂಗ್ರೆಸ್‌ನಿಂದ ಸುರೇಶ್‌ ಸ್ಪರ್ಧೆ ಘೋಷಣೆಗೂ ಮುಂಚೆಯೇ ನಿಶ್ಚಿತವಾಗಿತ್ತು. ಅಭ್ಯರ್ಥಿ ಆಯ್ಕೆ ಕುರಿತ ಮೈತ್ರಿಕೂಟದ ಸರಣಿ ಚರ್ಚೆಯಲ್ಲಿ ಜೆಡಿಎಸ್‌ನ ಎಚ್‌.ಡಿ. ಕುಮಾರಸ್ವಾಮಿ ಮತ್ತು ಬಿಜೆಪಿಯ ಸಿ.ಪಿ. ಯೋಗೇಶ್ವರ್ ಹೆಸರುಗಳು ಆರಂಭದಲ್ಲಿ ಮುಂಚೂಣಿಯಲ್ಲಿದ್ದವು.

ಪಳಗಿದ ರಾಜಕೀಯ ನಾಯಕರಿಬ್ಬರ ಹೆಸರುಗಳು ಚಲಾವಣೆಯಲ್ಲಿರುವಾಗಲೇ, ಮಂಜುನಾಥ್ ಅವರ ಹೆಸರನ್ನು ನಿಧಾನವಾಗಿ ಹರಿಬಿಡಲಾಯಿತು. ಜಯದೇವ ಹೃದ್ರೋಗ ಸಂಸ್ಥೆಯಲ್ಲಿನ ಸುಧೀರ್ಘ ಸೇವೆಯಿಂದಾಗಿ ಆ ಸಂಸ್ಥೆಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗುವಂತೆ ಮಾಡಿದ್ದ ಮಂಜುನಾಥ್ ಹೆಸರು ಅದಾಗಲೇ ಜನಮಾನಸದಲ್ಲಿ ನೆಲೆಸಿತ್ತು. ಗ್ರಾಮಾಂತರಕ್ಕೆ ಅವರ ಹೆಸರು ಕೇಳಿ ಬರುತ್ತಿದ್ದಂತೆ ಜನ, ‘ಡಾಕ್ಟರ್ ನಿಂತರೆ ಸುರೇಶ್ ಸೋಲು ಖಚಿತ’ ಎಂದು ಮಾತನಾಡತೊಡಗಿದರು.

ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ನ ಮತಬ್ಯಾಂಕ್‌ ಜೊತೆಗೆ, ಪಕ್ಷಾತೀತವಾದ ಮತಗಳನ್ನು ಸೆಳೆಯುವ ಮಂಜುನಾಥ್ ಜನಪ್ರಿಯತೆಯನ್ನೇ ದಾಳವಾಗಿಸಿಕೊಂಡು ಅಂತಿಮವಾಗಿ ಅವರನ್ನೇ ಅಭ್ಯರ್ಥಿಯಾಗಿ ಘೋಷಿಸಿದರು. ಈ ತಂತ್ರದ ಜೊತೆಗೆ, ರಾಮನಗರದಲ್ಲಿ ಕಳೆಗುಂದಿದ್ದ ಜೆಡಿಎಸ್‌ ಬಗ್ಗೆ ಕ್ಷೇತ್ರದಲ್ಲಿ ಎದ್ದಿದ್ದ ಅನುಕಂಪ ಹಾಗೂ ಸುರೇಶ್‌ ಮೇಲೆ ಬಿದ್ದಿದ್ದ ಬಿಜೆಪಿಯ ಕೇಂದ್ರ ನಾಯಕರ ಕಣ್ಣು, ಮಂಜುನಾಥ್ ಅವರನ್ನು ಗೆಲುವಿನ ದಡಕ್ಕೆ ಸುಲಭವಾಗಿ ತಲುಪಿಸಿತು.

ಹಿಂದಿನಿಂದಲೂ ಕಾಂಗ್ರೆಸ್ ಮತ್ತು ಜೆಡಿಎಸ್‌ ನೆಲೆಯಾಗಿದ್ದ ಕ್ಷೇತ್ರದಲ್ಲಿ, ಎಚ್‌.ಡಿ. ದೇವೇಗೌಡರ ಅಳಿಯ ಮಂಜುನಾಥ್ ಗೆಲುವಿನೊಂದಿಗೆ ಬಿಜೆಪಿಗೂ ಭದ್ರ ನೆಲೆ ಸಿಕ್ಕಂತಾಗಿದೆ. ಜೊತೆಗೆ, ಎಚ್‌ಡಿಡಿ ಮತ್ತು ಡಿಕೆಶಿ ಕುಟುಂಬಗಳ ನಡುವಣ ರಾಜಕೀಯ ಸಮರದಲ್ಲಿ ಸದ್ಯ ಗೌಡರ ಕೈ ಮೇಲಾಗಿದೆ.

3,236 ಮತಗಳನ್ನು ಹಾಗೂ ವಿಡುತಲೈ ಚಿರುತೈಗಲ್ ಕಚ್ಚಿಯ ಎಚ್‌.ವಿ. ಚಂದ್ರಶೇಖರ್ ಅತಿ ಕಡಿಮೆ 480 ಮತಗಳನ್ನು ಪಡೆದಿದ್ದಾರೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ

ನೋಟಾಗೆ ಮೂರನೇ ಸ್ಥಾನ

ಕ್ಷೇತ್ರದಲ್ಲಿ ಈ ಸಲ ಮೂರನೇ ಅತಿ ಹೆಚ್ಚು ಮತಗಳು ಬಿದ್ದಿರುವುದು ನೋಟಾಗೆ! ಅಂದಹಾಗೆ ಈ ಮತಗಳ ಸಂಖ್ಯೆ 10649. ಮತದಾರರಿಗೆ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳನ್ನು ಹೊರತುಪಡಿಸಿ ಮೂರನೇಯ ಉತ್ತಮ ಅಭ್ಯರ್ಥಿಯಾಗಿ ಯಾರೂ ಕಂಡಿಲ್ಲ ಎಂಬುದನ್ನು ನೋಟಾ ಮತಗಳು ದೃಢೀಕರಿಸುತ್ತವೆ. ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ ನೋಟಾಗೆ ಮೊದಲ ಸಲ 3ನೇ ಅತಿ ಹೆಚ್ಚು ಮತಗಳು ಬಂದಿವೆ.

13 ಮಂದಿಯ ಠೇವಣಿ ಖೋತಾ ಕ್ಷೇತ್ರದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ಜೊತೆಗೆ ಒಟ್ಟು 15 ಮಂದಿ ಸ್ಪರ್ಧಿಸಿದ್ದರು. ಈ ಪೈಕಿ ಮೂವರು ಪಕ್ಷೇತರರು ಹಾಗೂ ಇತರ 10 ಪಕ್ಷಗಳ ಸ್ಪರ್ಧಿಗಳು ಇದ್ದರು. ಆದರೆ ಎಲ್ಲರೂ ಠೇವಣಿ ಕಳೆದುಕೊಂಡಿದ್ದಾರೆ. ಈ ಪೈಕಿ 7 ಮಂದಿ ಮಾತ್ರ ನಾಲ್ಕಂಕಿ ಮತಗಳನ್ನು ಪಡೆದಿದ್ದರೆ ಉಳಿದ 6 ಮಂದಿ ಪಡೆದಿರುವ ಮತಗಳು ಕೇವಲ ಮೂರಂಕಿಯಷ್ಟಿವೆ. ಇದರಲ್ಲಿ ಪಕ್ಷೇತರ ಅಭ್ಯರ್ಥಿ ಅತಿ ಹೆಚ್ಚು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT