ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಜಿಲ್ಲೆಯ ಬಿಜೆಪಿ ನೂತನ ಅಧ್ಯಕ್ಷರಾಗಿ ಚನ್ನಪಟ್ಟಣದ ಎಂ.ಎನ್. ಆನಂದಸ್ವಾಮಿ

Published 16 ಜನವರಿ 2024, 6:01 IST
Last Updated 16 ಜನವರಿ 2024, 6:01 IST
ಅಕ್ಷರ ಗಾತ್ರ

ಚನ್ನಪಟ್ಟಣ: ರಾಮನಗರ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷರನ್ನಾಗಿ ತಾಲ್ಲೂಕಿನ ಎಂ.ಎನ್. ಆನಂದಸ್ವಾಮಿ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ನೇಮಕ ಮಾಡಿದ್ದಾರೆ. ಇದರೊಂದಿಗೆ ಪಕ್ಷ ನಿಷ್ಠೆಯ ಕಾರ್ಯಕರ್ತರೊಬ್ಬರಿಗೆ ಅಧ್ಯಕ್ಷಗಿರಿ ಜವಾಬ್ದಾರಿ ನೀಡಲಾಗಿದೆ. ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಸಂಘಟನೆಗೆ ಒತ್ತು ನೀಡಿರುವ ವರಿಷ್ಠರು, ಪಕ್ಷನ ನಿಷ್ಠರಿಗೆ ಮಣೆ ಹಾಕಿದ್ದಾರೆ.

ತಾಲ್ಲೂಕಿನ ಮೊಗೇನಹಳ್ಳಿ (ಎಸ್.ಎಂ. ಹಳ್ಳಿ) ಗ್ರಾಮದವರಾದ ಆನಂದಸ್ವಾಮಿ ಅವರು ಸುಮಾರು 16 ವರ್ಷಗಳಿಂದ ಬಿಜೆಪಿ ಕಾರ್ಯಕರ್ತರಾಗಿ, ಎರಡು ಅವಧಿಗೆ ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷರಾಗಿ, 2023ರ ವಿಧಾನಸಭಾ ಚುನಾವಣೆಯಲ್ಲಿ ಕನಕಪುರ ಕ್ಷೇತ್ರದ ಚುನಾವಣಾ ಪ್ರಭಾರಿಯಾಗಿ ಕಾರ್ಯನಿರ್ವಹಿಸಿದವರು.

2008 ರಲ್ಲಿ ಕೂಡ್ಲೂರು ಗ್ರಾ.ಪಂ. ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಬಿಜೆಪಿ ಸೇರಿದ್ದ ಆನಂದಸ್ವಾಮಿ ಅವರು 2009 ರಿಂದ 2013 ರವರೆಗೆ ಹಾಗೂ 2016 ರಿಂದ 2020 ರವರೆಗೆ ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಇವರು ಅಧ್ಯಕ್ಷರಾಗಿದ್ದ 2011 ರಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆ ವೇಳೆ ಬಿಜೆಪಿ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಅವರು ಜಯ ಗಳಿಸಿದ್ದರು.

2008ಕ್ಕೂ ಮೊದಲು ಆನಂದಸ್ವಾಮಿ ಕಾಂಗ್ರೆಸ್ ನಲ್ಲಿ ಗುರ್ತಿಸಿಕೊಂಡಿದ್ದರು. ಆಗ ಕಾಂಗ್ರೆಸ್ ನಿಂದ ಗೆದ್ದು ಶಾಸಕರಾಗಿದ್ದ ಸಿ.ಪಿ. ಯೋಗೇಶ್ವರ್ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದಾಗ ಆನಂದಸ್ವಾಮಿ ಸಹ ಬಿಜೆಪಿ ಸೇರಿದ್ದರು. ಅಲ್ಲಿಂದ ಬಿಜೆಪಿಯ ನಿಷ್ಟಾವಂತ ಕಾರ್ಯಕರ್ತರಾಗಿ ದುಡಿದಿದ್ದು ಇವರ ಹೆಗ್ಗಳಿಕೆ. ತಾಲ್ಲೂಕಿನಲ್ಲಿ ಬಿಜೆಪಿಗೆ ಮೂಲ ನೆಲೆ ಇಲ್ಲದ ವೇಳೆಯಲ್ಲಿಯೂ ಪಕ್ಷ ಸಂಘಟನೆಗೆ ಒತ್ತು ನೀಡಿದವರು ಆನಂದಸ್ವಾಮಿ.

ಮೂಲ ಬಿಜೆಪಿಯಲ್ಲದವರಾಗಿದ್ದರೂ ಆನಂದಸ್ವಾಮಿ ಜಿಲ್ಲಾ ಅಧ್ಯಕ್ಷ ಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದು, ಮತ್ತೊಬ್ಬ ಆಕಾಂಕ್ಷಿಯಾಗಿದ್ದ ಮಾಗಡಿ ತಾಲ್ಲೂಕಿನ ಪ್ರಸಾದ್ ಗೌಡ ಅವರನ್ನು ಹಿಂದಿಕ್ಕಿರುವುದು ವಿಶೇಷವಾಗಿದೆ. ಆನಂದಸ್ವಾಮಿ ಅವರು ಎರಡು ಬಾರಿ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ತೋರಿದ ಸಂಘಟನಾ ಚತುರತೆಗೆ ಜಿಲ್ಲಾ ಅಧ್ಯಕ್ಷಸ್ಥಾನ ದೊರೆತಿದೆ ಎಂದು ಬಿಜೆಪಿ ವಲಯ ಅರ್ಥೈಸುತ್ತಿದೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲೆಯಲ್ಲಿ ಮೂಲ ಬಿಜೆಪಿ ಮತಗಳು ಚದುರದಂತೆ ನೋಡಿಕೊಳ್ಳಲು ಸಂಘಟನಾ ಚತುರರಾದ ಆನಂದಸ್ವಾಮಿ ಅವರೆ ಸೂಕ್ತ ವ್ಯಕ್ತಿ ಎಂದು ಅರಿತಿರುವ ಬಿಜೆಪಿ ವರಿಷ್ಟರು ಅವರಿಗೆ ಮಣೆ ಹಾಕಿದ್ದಾರೆ. ಆನಂದಸ್ವಾಮಿ ಆ ಸ್ಥಾನಕ್ಕೆ ಸೂಕ್ತ ವ್ಯಕ್ತಿ ಎನ್ನುವುದು ಬಿಜೆಪಿ ವಲಯದಲ್ಲಿ ಚರ್ಚೆಯಾಗುತ್ತಿದೆ.

ಆನಂದಸ್ವಾಮಿ ಅವರನ್ನು ಜಿಲ್ಲಾ ಘಟಕಕ್ಕೆ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವ ಹಿಂದೆ ಅಶ್ವತ್ಥ್ ನಾರಾಯಣಗೌಡ ಅವರ ಕೃಪಾಕಟಾಕ್ಷ ಇದೆ. ಅಶ್ವತ್ಥ್ ನಾರಾಯಣಗೌಡ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗುವುದು ಖಚಿತವಾಗಿರುವ ಹಿನ್ನೆಲೆಯಲ್ಲಿ ಸಂಘಟನೆಗೆ ಒತ್ತು ನೀಡುವ ಉದ್ದೇಶದಿಂದ ಆನಂದಸ್ವಾಮಿ ಅವರನ್ನು ಜಿಲ್ಲಾ ಘಟಕಕ್ಕೆ ನೇಮಿಸಿಕೊಳ್ಳಲು ಪ್ರಭಾವ ಬೀರಿದ್ದಾರೆ ಎನ್ನುವ ಮಾತುಗಳು ಸಹ ಕೇಳಿ ಬರುತ್ತಿವೆ.

ಆನಂದಸ್ವಾಮಿ ಅವರು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ನೇಮಕವಾಗಿರುವ ಕಾರಣ ಜಿಲ್ಲಾ ಬಿಜೆಪಿಯಲ್ಲಿ ಇದ್ದ ವೈಮನಸ್ಯ ದೂರ ಮಾಡುತ್ತಾರೆ. ಎಲ್ಲರನ್ನೂ ಒಗ್ಗೂಡಿಸಿ ಬಿಜೆಪಿಯನ್ನು ತಳಮಟ್ಟದಿಂದ ಕಟ್ಟುತ್ತಾರೆ ಎನ್ನುವ ಆಶಾವಾದ ಗರಿಗೆದರಿರುವುದಂತೂ ಸತ್ಯ. ಆನಂದಸ್ವಾಮಿ ಅವರ ನೇಮಕಕ್ಕೆ ಬಿಜೆಪಿಯ ಬಹುತೇಕ ಹಿರಿಯ ಮುಖಂಡರು, ವಿವಿಧ ಘಟಕಗಳ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ.

‘ಲೋಕಸಭೆ ಅಭ್ಯರ್ಥಿ ಗೆಲುವಿನ ಗುರಿ’
‘ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಅವರು ನನ್ನ ಮೇಲೆ ನಂಬಿಕೆ ಇಟ್ಟು ಜಿಲ್ಲಾ ಅಧ್ಯಕ್ಷ ಸ್ಥಾನದಂತಹ ದೊಡ್ಡ ಜವಾಬ್ದಾರಿಯನ್ನು ನೀಡಿದ್ದಾರೆ. ಅವರ ನಂಬಿಕೆಗೆ ಚ್ಯುತಿ ಬಾರದಂತೆ ಕೆಲಸ ಮಾಡುವೆ. ನಾಯಕರ ಮಾರ್ಗದರ್ಶನದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಬೂತ್ ಮಟ್ಟದಿಂದ ಪಕ್ಷವನ್ನು ಸಂಘಟಿಸುವೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಗೆ ಜಿಲ್ಲೆಯಲ್ಲಿ ಅತಿ ಹೆಚ್ಚು ಮತ ಪಡೆದು ಗೆಲುವಿನ ದಡ ಸೇರುವಂತೆ ಮಾಡುವುದೇ ನನ್ನ ಗುರಿಯಾಗಿದೆ’ ಎಂದು ನೂತನ ಅಧ್ಯಕ್ಷ ಎಂ.ಎನ್.  ಆನಂದಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT