ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಚನಬೆಲೆ ನಾಲೆಗಳಿಗಿಲ್ಲ ನವೀಕರಣ ಭಾಗ್ಯ

ಮಂಚನಬೆಲೆ ಜಲಾಶಯಕ್ಕೆ ಇಂದು ಬಾಗಿನ ಅರ್ಪಣೆ: ನೀರು ಪೂರೈಕೆ ಯೋಜನೆಗೂ ಶಂಕುಸ್ಥಾಪನೆ
Last Updated 27 ಆಗಸ್ಟ್ 2020, 16:24 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯ ಜಲಮೂಲಗಳಲ್ಲಿ ಒಂದಾದ ಮಂಚನಬೆಲೆ ಜಲಾಶಯ ಈ ಬಾರಿಯೂ ತುಂಬಿದ್ದು, ಬಾಗಿನ ಅರ್ಪಣೆಗೆ ಬೇದಿಕೆ ಸಿದ್ಧವಾಗಿದೆ. ಆದರೆ ಕಾಲುವೆಗಳು ದುರಸ್ತಿ ಆಗದ ಕಾರಣ ರೈತರಿಗೆ ಇದರಿಂದ ಹೆಚ್ಚಿನ ಉಪಯೋಗ ಆಗಿಲ್ಲ.

ಸುಮಾರು 365 ಹೆಕ್ಟೇರ್‌ನಷ್ಟು ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಮಂಚನಬೆಲೆ ಜಲಾಶಯವು ಒಟ್ಟು 1222 ದಶಲಕ್ಷ ಘನ ಅಡಿ (1.22 ಟಿಎಂಸಿ) ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಇದರಲ್ಲಿ ಡೆಡ್‌ ಸ್ಟೋರೇಜ್‌ 161 ಎಂಸಿಎಫ್‌ಟಿ ಹೊರತುಪಡಿಸಿದರೆ 1061 ಎಂಸಿಎಫ್‌ಟಿವರೆಗೂ ನೀರನ್ನು ಹಿಡಿದಿಟ್ಟುಕೊಳ್ಳಬಹುದಾಗಿದೆ. ಜಲಾಶಯದಲ್ಲಿ ಸದ್ಯ 1 ಟಿಎಂಸಿಯಷ್ಟು ನೀರು ಸಂಗ್ರಹವಾಗಿದೆ.

ಮಾಗಡಿ ಪಟ್ಟಣದ ಕೆಲವು ಭಾಗಕ್ಕೆ ಈ ಜಲಾಶಯದಿಂದ ನೀರು ಪೂರೈಕೆಯಾಗುತ್ತಿದ್ದು, ಇದಕ್ಕಾಗಿ ವಾರ್ಷಿಕ 100 ಎಂಸಿಎಫ್‌ಟಿಯಷ್ಟು ನೀರನ್ನು ಮಾತ್ರ ಬಳಸಿಕೊಳ್ಳಲಾಗುತ್ತಿದೆ. ಉಳಿದ ನೀರನ್ನು ಹಾಗೆಯೇ ಸಂಗ್ರಹಿಸಿ ಇಟ್ಟುಕೊಳ್ಳಲಾಗಿದೆ.

ಮಂಚನಬೆಲೆ ಜಲಾಶಯದ ನೀರನ್ನು ಬಳಸಿಕೊಂಡು ರಾಮನಗರ ಹಾಗೂ ಮಾಗಡಿಗೆ ಕುಡಿಯುವ ನೀರು ಜೊತೆಗೆ ಕಾಲುವೆಗಳ ಮೂಲಕ ಕೃಷಿಗೆ ನೀರು ಸರಬರಾಜು ಮಾಡುವ ಉದ್ದೇಶವನ್ನು ಹೊಂದಲಾಗಿತ್ತು. ಮೂಲ ಯೋಜನೆಯಂತೆ ಸುಮಾರು 52 ಕಿ.ಮೀ. ಉದ್ದದ ಎಡದಂಡೆ ಹಾಗೂ 63 ಕಿ,ಮೀ ಉದ್ದದ ಬಲದಂಡೆ ಕಾಲುವೆ ನಿರ್ಮಾಣ ಆಗಬೇಕಿತ್ತು. ಇದರಿಂದ ಕ್ರಮವಾಗಿ 1767 ಹಾಗೂ 2078 ಹೆಕ್ಟೇರ್‌ನಷ್ಟು ಕೃಷಿ ಭೂಮಿಗೆ ನೀರು ಪೂರೈಸುವ ಗುರಿ ಇತ್ತು.

ಆದರೆ ಅಗತ್ಯ ಪ್ರಮಾಣದಷ್ಟು ನೀರು ಲಭ್ಯವಾಗದು ಎಂಬ ನೆಪವೊಡ್ಡಿ ಎಡದಂಡೆ ಕಾಲುವೆಯನ್ನು 35 ಕಿ.ಮೀ ಹಾಗೂ ಬಲದಂಡೆ ಕಾಲುವೆಯನ್ನು 36 ಕಿ.ಮೀ. ಉದ್ದಕ್ಕೆ ಸೀಮಿತಗೊಳಿಸಲಾಯಿತು. ಆ ನಿರ್ಮಾಣ ಕಾಮಗಾರಿಯೂ ನೆಟ್ಟಗೆ ನಡೆಯಲಿಲ್ಲ. ಪರಿಣಾಮ ಈಗ ಈ ಎರಡೂ ದಂಡೆಯ ಕಾಲುವೆಗಳು ಬಳಕೆಯ ಸ್ಥಿತಿಯಲ್ಲಿ ಇಲ್ಲ. ನೀರು ಬಿಟ್ಟರೂ ಅದು ಒಂದೆರಡು ಕಿಲೋಮೀಟರ್‌ ದಾಟಿ ಮುಂದುವರಿಯುವುದು ಅನುಮಾನ ಎಂಬಂತ ಪರಿಸ್ಥಿತಿ ಇದೆ. ಬಹುತೇಕ ಕಡೆ ಕಾಲುವೆಗಳು ಒಡೆದುಹೋಗಿವೆ. ಹೀಗಾಗಿ ಮಗ್ಗಲಲ್ಲೇ ಜಲಾಶಯ ಇದ್ದರೂ ಜನರು ನೀರಿಗಾಗಿ ಪರದಾಡುವಂತಾಗಿದೆ.

‘ತಿಪ್ಪಗೊಂಡನಹಳ್ಳಿ ಜಲಾಶಯದಿಂದ ನೀರು ಹರಿದುಬರುವ ಕಾರಣ ಸದ್ಯ ನೀರಿಗೆ ಕೊರತೆ ಇಲ್ಲ. ಆದರೆ ಕಾಲುವೆಗೆ ಬಿಟ್ಟರೂ ಜಮೀನು ತಲುಪುವುದಿಲ್ಲ. ಬಹುತೇಕ ಕಡೆ ಕಾಲುವೆಗಳು ಒಡೆದಿದ್ದು, ನೀರು ಅಲ್ಲಿಯೇ ಬಸಿದುಹೋಗುತ್ತದೆ’ ಎಂದು ನೀರಾವರಿ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.

ಮಂಚನಬೆಲೆ ಜಲಾಶಯವು ಭರ್ತಿಯಾಗುತ್ತಲೇ ಅರ್ಕಾವತಿ ನದಿಗೆ ನೀರನ್ನು ಹರಿಬಿಡಲಾಗುತ್ತದೆ. ರಾಮನಗರದ ಕೆಲವು ವಾರ್ಡುಗಳಿಗೆ ನಿತ್ಯ ಬಳಕೆಗಾಗಿ ಇದೇ ನೀರನ್ನು ಪಡೆಯಲಾಗುತ್ತಿದೆ. ಬೇಸಿಗೆಯ ಅವಧಿಯಲ್ಲಿ ಜಾನುವಾರುಗಳ ಬಳಕೆಗೆ ಹೊರತುಪಡಿಸಿದರೆ ಈ ನದಿ ನೀರು ಹೆಚ್ಚು ಉಪಯೋಗ ಆಗುತ್ತಿಲ್ಲ. ಜಲಾಶಯದ ಕಾಲುವೆಗಳಿಗೆ ಪುನರ್ಜೀವ ನೀಡಿದರೆ ಉತ್ತಮ ಮಳೆಯಾದ ಸಂದರ್ಭಗಳಲ್ಲಿ ನೀರನ್ನು ಸದ್ಬಳಕೆ ಮಾಡಿಕೊಳ್ಳಬಹುದು ಎನ್ನುವುದು ಈ ಭಾಗದ ರೈತರ ಆಗ್ರಹವಾಗಿದೆ.

ಬಿಡದಿಗೆ ನೀರು ಪೂರೈಕೆ

ಜಿಲ್ಲೆಯ ಜಲಾಶಯಗಳ ಭರ್ತಿ ಮೂಲಕ ಅಲ್ಲಿಂದ ನಗರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ವಿವಿಧ ಯೋಜನೆಗಳು ಈಗಾಗಲೇ ಚಾಲ್ತಿಯಲ್ಲಿವೆ. ಮಂಚನಬೆಲೆ ಜಲಾಶಯದಿಂದ ಬಿಡದಿಯ ನೆಲ್ಲಿಗುಡ್ಡೆ ಕೆರೆ ತುಂಬಿಸಿ ಅಲ್ಲಿಂದ ಬಿಡದಿ ಪಟ್ಟಣಕ್ಕೆ ಹಾಗೂ ಮಾರ್ಗ ಮಧ್ಯದಲ್ಲಿನ 9 ಹಳ್ಳಿಗಳಿಗೆ ನೀರು ಪೂರೈಸುವ ಯೋಜನೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಗುರುವಾರ ಮಂಚನಬೆಲೆಯಲ್ಲಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಯೋಜನೆಯು ಕಾರ್ಯರೂಪಕ್ಕೆ ಬಂದಲ್ಲಿ ಬಿಡದಿ ಪಟ್ಟಣದ ನೀರಿನ ಸಮಸ್ಯೆ ತಗ್ಗಮಟ್ಟಿಗೆ ನೀಗಲಿದೆ. ಅತಿ ವೇಗದಲ್ಲಿ ಬೆಳೆಯುತ್ತಿರುವ ಪಟ್ಟಣಕ್ಕೆ ಈ ಯೋಜನೆ ಅತ್ಯಗತ್ಯವೂ ಆಗಿದೆ.

ಅನುಷ್ಠಾನಗೊಳ್ಳದ ಬಜೆಟ್‌ ಯೋಜನೆ

ಎರಡನೇ ಬಾರಿಗೆ ಮುಖ್ಯಮಂತ್ರಿಯಾದ ಎಚ್‌.ಡಿ. ಕುಮಾರಸ್ವಾಮಿ ಮಂಚನಬೆಲೆ ಜಲಾಶಯವನ್ನು ಕೆಆರ್‌ಎಸ್‌ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಕನಸನ್ನು ತಮ್ಮ ಬಜೆಟ್‌ ಮೂಲಕ ಬಿತ್ತಿದ್ದರು. ಇದಕ್ಕಾಗಿ 125 ಕೋಟಿ ರೂಪಾಯಿ ಅನುದಾನವನ್ನೂ ಘೋಷಿಸಿದ್ದರು. ಜೊತೆಗೆ ಮಂಚನಬೆಲೆ, ವೈ.ಜಿ. ಗುಡ್ಡ ಕಾಲುವೆಗಳ ನವೀಕರಣಕ್ಕೆ 40 ಕೋಟಿ ರೂಪಾಯಿಯನ್ನೂ ಪ್ರಕಟಿಸಿದ್ದರು. ಇದರಿಂದ ಪ್ರವಾಸೋದ್ಯಮ ಚಟುವಟಿಕೆಗಳು ಗರಿಗೆದರಲಿವೆ ಎಂದೂ ನಿರೀಕ್ಷಿಸಲಾಗಿತ್ತು. ಆದರೆ ಈ ಯೋಜನೆ ಕೇವಲ ಕಾಗದದ ರೂಪದಲ್ಲೇ ಉಳಿದುಹೋಗಿದೆ. ಕಾಲುವೆಗಳ ನವೀಕರಣವೂ ಮರೀಚಿಕೆ ಆಗಿರುವುದು ರೈತರಲ್ಲಿ ನಿರಾಸೆ ಮೂಡಿಸಿದೆ.

ಅಂಕಿ–ಅಂಶ

1.22 ಟಿಎಂಸಿ–ಮಂಚನಬೆಲೆ ಜಲಾಶಯದ ನೀರು ಸಂಗ್ರಹಣಾ ಸಾಮರ್ಥ್ಯ
161 ಎಂಸಿಎಫ್‌ಟಿ–ಜಲಾಶಯದ ಡೆಡ್‌ ಸ್ಟೋರೆಜ್‌
1.05 ಟಿಎಂಸಿ–ಸದ್ಯಕ್ಕೆ ಸಂಗ್ರಹವಾಗಿರುವ ನೀರಿನ ಪ್ರಮಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT