ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದತ್ತ ವಲಸೆ ತಡೆಗೆ ಹಲವು ಕ್ರಮ: ಸಂಸದ ಡಿ.ಕೆ.ಸುರೇಶ್‌

ಸಂಜೀವಿನಿ ಯೋಜನೆ: ಸ್ತ್ರೀಶಕ್ತಿ ಒಕ್ಕೂಟಗಳಿಗೆ ಚೆಕ್‌ ವಿತರಣೆ
Last Updated 15 ಡಿಸೆಂಬರ್ 2019, 14:06 IST
ಅಕ್ಷರ ಗಾತ್ರ

ಮಾಗಡಿ: ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಸ್ತ್ರೀಶಕ್ತಿ ಭವನ ನಿರ್ಮಿಸಲಾಗುವುದು ಎಂದು ಸಂಸದ ಡಿ.ಕೆ.ಸುರೇಶ್‌ ತಿಳಿಸಿದರು. ‌

ಪಟ್ಟಣದ ಅಂಬೇಡ್ಕರ್‌ ಭವನದಲ್ಲಿ ಭಾನುವಾರ ನಡೆದ ದೀನದಯಾಳ್‌ ಅಂತ್ಯೋದಯ ಅಭಿಯಾನದಡಿ ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ವತಿಯಿಂದ ಪಂಚಾಯತ್‌ಮಟ್ಟದ ಸ್ತ್ರೀಶಕ್ತಿ ಒಕ್ಕೂಟಗಳಿಗೆ ಸಮುದಾಯ ಬಂಡವಾಳ ನಿಧಿ ಚೆಕ್‌ ವಿತರಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ₹ 8 ಕೋಟಿ ಸಹಾಯಧನದ ಚೆಕ್‌ ವಿತರಿಸಲಾಗಿದೆ. ಸಾಲಪಡೆದು ಬಡ್ಡಿ ವ್ಯವಹಾರ ಮಾಡುವುದು ಬೇಡ. ಸ್ವಂತ ಉದ್ಯೋಗ ಆರಂಭಿಸಿ ಸ್ವಾವಲಂಬಿಗಳಾಗಲು ಸ್ತ್ರೀಶಕ್ತಿ ಒಕ್ಕೂಟಗಳು ಮುಂದೆ ಬರಬೇಕು. ಖಾಸಗಿ ಸಂಸ್ಥೆಗಳಲ್ಲಿ ಸಾಲಪಡೆದು ಅಧಿಕ ಬಡ್ಡಿ ನೀಡುವ ಬದಲು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಲಪಡೆದು ಸದುಪಯೋಗಪಡಿಸಿಕೊಳ್ಳಬೇಕು. ಗ್ರಾಮೀಣ ಮಟ್ಟದ ಬಡವರ್ಗದ ಮಹಿಳೆಯರ ಬಲವರ್ಧನೆಗಾಗಿ ಆರ್ಥಿಕ ಸಹಾಯ ಒದಗಿಸಬೇಕು. ಜೀವನೋಪಾಯ ಕಲ್ಪಿಸಿ ಸ್ವಾವಲಂಬಿಗಳನ್ನಾಗಿ ಮಾಡಿ ಸಮಾಜದ ಮುಖ್ಯವಾಹಿನಿಗೆ ತರಬೇಕಾಗಿದೆ ಎಂದರು.

ಸಾಮಾಜಿಕ ಸುಧಾರಣೆ ಹಾಗೂ ಮಹಿಳಾ ಸಬಲೀಕರಣಕ್ಕೆ ಪ್ರೋತ್ಸಾಹ ನೀಡಲಾಗುವುದು. ಪಡೆದ ಸಾಲ ಸಕಾಲದಲ್ಲಿ ಮರುಪಾವತಿ ಮಾಡಬೇಕಾಗಿದೆ. ಮನೆಸುತ್ತ ಕೈತೋಟ ಮಾಡಲು ನರೇಗಾ ಯೋಜನೆಯಡಿ ಅನುಕೂಲ ಕಲ್ಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ನಾಟಿ ಕೋಳಿ, ಕುರಿ, ಮೇಕೆ, ದೇಸಿ ಹಸು ಸಾಕಿ ಆರ್ಥಿಕ ಸ್ಥಿತಿ ಉತ್ತಮಪಡಿಸಿಕೊಳ್ಳಲು ನರೇಗಾ ಯೋಜನೆಯಡಿ ಅವಕಾಶಗಳಿವೆ. ನಗರದತ್ತ ವಲಸೆ ಹೋಗುವುದನ್ನು ತಡೆಗಟ್ಟಲು ಇದೆಲ್ಲ ಕಾರ್ಯಕ್ರಮ ರೂಪಿಸಲಾಗಿದೆ ಎಂದು ತಿಳಿಸಿದರು.

ಶಾಸಕ ಎ.ಮಂಜುನಾಥ ಮಾತನಾಡಿ, ‘ವಿಧವೆಯರು ಮತ್ತು ಅಂಗವಿಕಲರಿಗೆ ಸರ್ಕಾರಿ ಸವಲತ್ತು ನೀಡುವಲ್ಲಿ ತಾರತಮ್ಯ ಬೇಡ. ಈ ಹಿಂದೆ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕಾಗಿ ಸಂಜೀವಿನಿ ಯೋಜನೆ ಜಾರಿಗೊಳಿಸಿದ್ದರು. ಹಣ ಕೂಡಿಡುವುದರಲ್ಲಿ ಮಹಿಳೆಯರ ಪಾತ್ರ ಬಹುಮುಖ್ಯ. ಡಬ್ಬಿಗಳಲ್ಲಿ ಹಣ ಕೂಡಿಡುವ ಮಹಿಳೆಯರು ಬ್ಯಾಂಕ್‌ ಇದ್ದಂತೆ ಎಂಬುದನ್ನು ಮರೆಯಬೇಡಿ’ ಎಂದರು.

‘ಸ್ತ್ರೀಶಕ್ತಿ ಸಂಘದಿಂದ ಸಾಲ ಪಡೆದಿದ್ದ ಪತ್ನಿಯಿಂದ ₹40 ಸಾವಿರ ಹಣ ಪಡೆದು ಕಣ್ಮರೆಯಾದ ಪತಿ ಇನ್ನು ಮನೆಗೆ ಬಂದಿಲ್ಲ. ಪತಿಯನ್ನು ಹುಡುಕಿಕೊಡುವಂತೆ ಮಹಿಳೆಯೊಬ್ಬರು ಮನೆಗೆ ಬಂದು ಕಣ್ಣೀರು ಹಾಕಿದ್ದಾರೆ. ಗಂಡಸರ ಕೈಗೆ ಕೂಡಿಟ್ಟ ಹಣ ಕೊಡದೆ ಜೋಪಾನದಿಂದ ಸಂಸಾರ ನಡೆಸುವುದು ಇಂದಿನ ಮಹಿಳೆಯರ ಜವಾಬ್ದಾರಿ’ ಎಂದು ಕಿವಿಮಾತು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಎಸ್‌.ರವಿ ಮಾತನಾಡಿ, ಬಿಡಿಸಿಸಿ ಬ್ಯಾಂಕಿನಲ್ಲಿ ಶೇ 3ರ ಬಡ್ಡಿದರದಲ್ಲಿ ಮಹಿಳೆಯರಿಗೆ ₹10 ಲಕ್ಷ ಸಾಲ ನೀಡಲಾಗುವುದು. ಸೊಸೈಟಿ ಮೂಲಕ ಅರ್ಜಿ ಸಲ್ಲಿಸಿ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಸಪ್ಪ, ಸದಸ್ಯರಾದ ನಾಗರತ್ನ ಚಂದ್ರೇಗೌಡ, ಎಚ್‌.ಎನ್‌.ಅಶೋಕ್‌, ದಿವ್ಯಗಂಗಾಧರ್‌, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಗೀತಾ ಗಂಗರಂಗಯ್ಯ, ಸದಸ್ಯರಾದ ಧನಂಜಯ ನಾಯ್ಕ್‌, ಸುಗುಣ ಕಾಮರಾಜ್‌, ರತ್ನಮ್ಮ, ದಿವ್ಯರಾಣಿ ಚಂದ್ರಶೇಖರ್‌, ತಾಲ್ಲೂಕು ಪಂಚಾಯಿತಿ ಇಒ, ಪ್ರದೀಪ್‌.ಟಿ, ದಿಶಾ ಅಧಿಕಾರಿಗಳಾದ ಸೀನಪ್ಪ, ನಾಗರಾಜು, ವಿನೋಧ್‌ ಕುಮಾರ್‌ ಸ್ತ್ರೀ ಶಕ್ತಿ ಒಕ್ಕೂಟಗಳ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT