ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಕೆದಾಟು ಪಾದಯಾತ್ರೆ: ಜೆಡಿಎಸ್‌ ಕೋಟೆಯಲ್ಲಿ ಕಾಂಗ್ರೆಸ್‌ ಸದ್ದು

ಹೈಕೋರ್ಟ್‌ ಸೂಚನೆಯಿಂದ ಕಾಂಗ್ರೆಸ್ ಪಾಳಯದಲ್ಲಿ ಆತಂಕ; ಗುರುವಾರ ನಡಿಗೆ ಮುಂದುವರಿಕೆ
Last Updated 12 ಜನವರಿ 2022, 19:52 IST
ಅಕ್ಷರ ಗಾತ್ರ

ರಾಮನಗರ: ಕಾಂಗ್ರೆಸ್‌ಗೆ ಹೈಕೋರ್ಟ್ ತರಾಟೆ ನಂತರ ಪಕ್ಷದ ನಾಯಕರ ವರಸೆ ಬದಲಾಗಿದ್ದು, ಮೇಕೆದಾಟು ಪಾದಯಾತ್ರೆಯ ನಾಲ್ಕನೇ ದಿನವಾದ ಬುಧವಾರದ ನಡಿಗೆ ಸಂದರ್ಭವೂ ಅದು ವ್ಯಕ್ತವಾಯಿತು. ಸರ್ಕಾರ ಪಾದಯಾತ್ರೆಗೆ ತಡೆಯೊಡ್ಡಲಿದೆ ಎಂಬ ಆತಂಕದ ನಡುವೆಯೂ ನಾಯಕರು ನೀರಿಗಾಗಿ ನಡಿಗೆ ಮುಂದುವರಿಸಿದರು.

ಬೆಳಿಗ್ಗೆ 11.30ಕ್ಕೆ ತಡವಾಗಿ ಪಾದಯಾತ್ರೆ ಆರಂಭಗೊಂಡಿತು. ಕನಕಪುರದಲ್ಲಿ ವಾಸ್ತವ್ಯ ಹೂಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಜೊತೆಯಾಗಿ ಚಿಕ್ಕೇನಹಳ್ಳಿಗೆ ಬಂದರು. ಅಲ್ಲಿಂದ ಸುಮಾರು 7 ಕಿ.ಮೀ. ಉದ್ದಕ್ಕೂ ಇಬ್ಬರೂ ಜೊತೆಯಾಗಿಯೇ ಹೆಜ್ಜೆ ಹಾಕಿದರು. ರಾಮನಗರ ತಾಲ್ಲೂಕಿನ ಕೆ.ಪಿ. ದೊಡ್ಡಿ ರೇಷ್ಮೆ ಫಾರಂ ಬಳಿ ಊಟದ ವಿರಾಮ ದೊರೆಯಿತು. ಅಷ್ಟರಲ್ಲಿ ಆಗಲೇ ಹೈಕೋರ್ಟ್‌ ಛಿಮಾರಿ ಸುದ್ದಿ ನಾಯಕರಿಗೆ ತಲುಪಿದ್ದು, ಅಲರ್ಟ್‌ ಆದ ಸಿದ್ದರಾಮಯ್ಯ, ಡಿಕೆಶಿ ಜೊತೆಗೂಡಿ ಪಕ್ಷದ ಇತರ ನಾಯಕರೊಂದಿಗೆ ಅಲ್ಲಿಯೇ ಸಭೆ ನಡೆಸಿದರು. ‘ಪಾದಯಾತ್ರೆಯನ್ನು ನಾವೇ ನಿಲ್ಲಿಸುವುದು ಬೇಡ. ಬೇಕಿದ್ದರೆ ಸರ್ಕಾರವೇ ತಡೆಯಲಿ. ಮುಂದೆ ಹೈಕೋರ್ಟ್‌ ನಿರ್ಧಾರದಂತೆ ನಡೆಯೋಣ’ ಎಂಬ ಒಮ್ಮತದ ನಿರ್ಧಾರಕ್ಕೆ ಬರಲಾಯಿತು.

ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಪೊನ್ನಣ್ಣ ಪಾದಯಾತ್ರೆ ಸ್ಥಳಕ್ಕೆ ಭೇಟಿ ನೀಡಿ ಸಿದ್ದರಾಮಯ್ಯ ಹಾಗೂ ಡಿಕೆಶಿ ಜೊತೆ ಚರ್ಚಿಸಿದರು. ಪಾದಯಾತ್ರೆ ಕುರಿತು ಕೈಗೊಳ್ಳಬಹುದಾದ ಕಾನೂನು ಕ್ರಮಗಳ ಬಗ್ಗೆ ಚರ್ಚೆ ನಡೆಯಿತು. ‘ಹೈಕೋರ್ಟ್‌ಗೆ ಸಲ್ಲಿಕೆಯಾದ ಪಿಐಎಲ್‌ನಲ್ಲಿ ಕೆಪಿಸಿಸಿ ಅಧ್ಯಕ್ಷರನ್ನು ಆರನೇ ಪ್ರತಿವಾದಿಗಳನ್ನಾಗಿಸಲಾಗಿದೆ. ಪಾದಯಾತ್ರೆ ಮುಂದುವರಿಸುವ ಬಗ್ಗೆ ಪಕ್ಷ ಕೈಗೊಳ್ಳುವ ನಿಲುವನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತೇವೆ. ನ್ಯಾಯಾಲಯವು ನೀಡುವ ಆದೇಶ
ವನ್ನು ತಪ್ಪದೇ ಪಾಲಿಸುತ್ತೇವೆ’ ಎಂದು ಪೊನ್ನಣ್ಣ ಪತ್ರಕರ್ತರಿಗೆ ತಿಳಿಸಿದರು.

ಊಟದ ತರುವಾಯ ಸಿದ್ದರಾಮಯ್ಯ ಬೆನ್ನು ನೋವಿನ ಕಾರಣಕ್ಕೆ ಪಾದಯಾತ್ರೆ ಮೊಟಕುಗೊಳಿಸಿ ಬೆಂಗಳೂರಿಗೆ ತೆರಳಿದರು. ಡಿ.ಕೆ. ಶಿವಕುಮಾರ್ ತಮ್ಮ ಬೆಂಬಲಿಗರೊಂದಿಗೆ ನಡಿಗೆ ಮುಂದುವರಿಸಿದರು.

ದಶಕಗಳಿಂದ ಜೆಡಿಎಸ್ ನಾಯಕ ಎಚ್‌.ಡಿ. ಕುಮಾರಸ್ವಾಮಿ ಮತ್ತವರ ಕುಟುಂಬದವರು ಪ್ರತಿನಿಧಿಸುತ್ತಿರುವ ರಾಮನಗರ ಕ್ಷೇತ್ರಕ್ಕೆ ಬುಧವಾರ ಹಾಸನ ಜಿಲ್ಲೆಯ ಜನರನ್ನೇ ಹೆಚ್ಚಿನ ಸಂಖ್ಯೆಯಲ್ಲಿ ಕರೆಸಿದ್ದು ವಿಶೇಷ. ಇವರೊಟ್ಟಿಗೆ ತುಮಕೂರು, ಆನೇಕಲ್‌ ಭಾಗದಿಂದಲೂ ಬಸ್‌ಗಳಲ್ಲಿ ಜನರನ್ನು ಕರೆತರಲಾಗಿತ್ತು.

64 ಮಂದಿ‌ ವಿರುದ್ಧ ಎಫ್‌ಐಆರ್

ರಾಮನಗರ: ಮೇಕೆದಾಟು ಪಾದಯಾತ್ರೆಯ ಮೂರನೇ ದಿನವಾದ ಸೋಮವಾರ ನೀರಿಗಾಗಿ ನಡಿಗೆಯ ನೇತೃತ್ವ ವಹಿಸಿದ್ದ ಕಾಂಗ್ರೆಸ್ ನ 64 ನಾಯಕರ ವಿರುದ್ಧ ಕನಕಪುರ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ, ಡಿ.ಕೆ. ಸುರೇಶ್, ಎಸ್. ರವಿ, ಧ್ರುವನಾರಾಯಣ ಜೊತೆಗೆ ಮೈಸೂರು ಭಾಗದ ನಾಯಕರಾದ ಎಚ್‌.ಸಿ. ಮಹದೇವಪ್ಪ, ಮಂಜುನಾಥ್, ಯತೀಂದ್ರ ಸಿದ್ದರಾಮಯ್ಯ, ತನ್ವೀರ್ ಸೇಠ್, ಅನಿಲ್ ಚಿಕ್ಕಮಾದು ಮೊದಲಾದ ಮುಖಂಡರ ಮೇಲೂ ಪೊಲೀಸರು ಎಫ್ ಐಆರ್ ದಾಖಲು ಮಾಡಿದ್ದಾರೆ.

ಹೆಚ್ಚಿನ ಭದ್ರತೆ ಸಾಧ್ಯತೆ
ನ್ಯಾಯಾಲಯದ ಸೂಚನೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗುತ್ತಿದೆ. ಹೊರ ಜಿಲ್ಲೆಗಳಿಂದ ಪೊಲೀಸ್ ಸಿಬ್ಬಂದಿಯನ್ನು ಕರೆಯಿಸಿಕೊಳ್ಳಲಾಗುತ್ತಿದೆ. ಪಾದಯಾತ್ರೆ ಮೇಲೆ ಕಣ್ಣಿಡಲು ಭದ್ರತೆಗಾಗಿ ಕೆಎಸ್‌ಆರ್‌ಪಿ, ಡಿಎಆರ್‌ ತುಕಡಿ ಸೇರಿದಂತೆ ಈಗಾಗಲೇ ಎರಡು ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ.

ಬೆಂಗಳೂರು- ಮೈಸೂರು ಹೆದ್ದಾರಿ: ವಾಹನ ಸಂಚಾರ ಮಾರ್ಗ ಬದಲು

ಕಾಂಗ್ರೆಸ್ ಪಾದಯಾತ್ರೆ ರಾಮನಗರ ಪ್ರವೇಶಿಸಿದ್ದು, ಇದೇ 13 ಹಾಗೂ 14ರಂದು ಬೆಂಗಳೂರು - ಮೈಸೂರು ಹೆದ್ದಾರಿ ಮಾರ್ಗದಲ್ಲಿ ಸಾಗಲಿದೆ.ಈ‌ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ವಾಹನ ಸಂಚಾರ ಮಾರ್ಗ ವನ್ನು ಬದಲಾಯಿಸಿದೆ.

ಈ ಪಾದಯಾತ್ರೆಯು ಬೆಂಗಳೂರು ನಗರ ತಲುಪುವವರೆಗೂ ಮೈಸೂರು, ಚಾಮರಾಜನಗರ, ಮಡಿಕೇರಿ ಕಡೆಯಿಂದ ಬೆಂಗಳೂರು ಕಡೆಗೆ ಹಾಗೂ ಬೆಂಗಳೂರು ಕಡೆಯಿಂದ ಮೈಸೂರು, ಚಾಮರಾಜನಗರ, ಮಡಿಕೇರಿ ಕಡೆಗೆ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಲಿರುವ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ಇದಕ್ಕೆ ಪರ್ಯಾಯವಾಗಿ ಮೈಸೂರು-ಬನ್ನೂರು– ಕಿರುಗಾವಲು- ಮಳವಳ್ಳಿ- ಹಲಗೂರು- ಸಾತನೂರು-ಕನಕಪುರ -ಹಾರೋಹಳ್ಳಿ -ಕಗ್ಗಲೀಪುರ- ಬನಶಂಕರಿ- ಸಾರಕ್ಕಿ ಮಾರ್ಗವಾಗಿ ಅಥವಾ ಮೈಸೂರು- ಶ್ರೀರಂಗಪಟ್ಟಣ- ಪಾಂಡವಪುರ- ನಾಗಮಂಗಲ- ಬೆಳ್ಳೂರು ಕ್ರಾಸ್- ಕುಣಿಗಲ್ ನೆಲಮಂಗಲ ಮಾರ್ಗವಾಗಿ ಸಂಚರಿಸಬಹುದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT