ಗುರುವಾರ , ಅಕ್ಟೋಬರ್ 21, 2021
27 °C
ಪಕ್ಷದ ಸಂಘಟನಾ ಕಾರ್ಯಾಗಾರ

ಅಲ್ಪಸಂಖ್ಯಾತರು ಜೆಡಿಎಸ್ ಮೇಲೆ ನಂಬಿಕೆ ಇಡಿ: ಎಚ್‌.ಡಿ. ದೇವೇಗೌಡ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಕಾಂಗ್ರೆಸ್‌ ಸೋಲಿಸುವ ಸಲುವಾಗಿಯೇ ಜೆಡಿಎಸ್‌ ಉಪ ಚುನಾವಣೆಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಹಾಕಲಾಗುತ್ತಿದೆ ಎಂಬುದು ಸುಳ್ಳು ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

ಬಿಡದಿಯಲ್ಲಿನ ತೋಟದ ಮನೆಯಲ್ಲಿ ಭಾನುವಾರ ನಡೆದ ಅಲ್ಪಸಂಖ್ಯಾತ ಪ್ರತಿನಿಧಿಗಳು ಹಾಗೂ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.

ಬಸವಕಲ್ಯಾಣ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲಲು ಜೆಡಿಎಸ್ ಕಾರಣ ಎಂದು ಆರೋಪಿಸಲಾಯಿತು. ನಮ್ಮ ಸಮಾಜದವರನ್ನು ಸೋಲಿಸಲು ಬೇಕೆಂದೇ ಅಭ್ಯರ್ಥಿ ಹಾಕುತ್ತಿದ್ದೀರಿ ಎಂದು ಹಿಂದೊಮ್ಮೆ ಮುಸ್ಲಿಂ ಧರ್ಮಗುರುಗಳು ನನಗೆ ಗಂಟೆಗಟ್ಟಲೆ ಕ್ಲಾಸ್‌ ತೆಗೆದುಕೊಂಡಿದ್ದರು. ಇಂತಹ ಸನ್ನಿವೇಶಗಳನ್ನು ಸಾಕಷ್ಟು ಎದುರಿಸಿದ್ದೇನೆ. ಸಿ.ಎಂ. ಇಬ್ರಾಹಿಂ, ಜಮೀರ್‌ ಅಹಮ್ಮದ್‌ರಂತಹ ನಾಯಕರನ್ನು ಗೆಲ್ಲಿಸುತ್ತಾ ಬೆಳೆಸಿದ್ದು ನಾವು ಎಂದರು.

ಮುಸ್ಲಿಮರನ್ನು ರಾಜಕೀಯ ಮುಖ್ಯವಾಹಿನಿಗೆ ಎಳೆತರುವುದೇ ಇಂದಿನ ಸವಾಲಾಗಿದೆ. ಅಲ್ಪಸಂಖ್ಯಾತ ಸಮುದಾಯದ ಜನರಿಗೆ ಪಕ್ಷದ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ನಮ್ಮ ಕಾರ್ಯಕರ್ತರು ಮಾಡಬೇಕಿದೆ ಎಂದರು.

ದೇಶದಲ್ಲಿ ನೆಹರೂ ಕಾಲದಿಂದಲೂ ಯಾವೊಂದು ಪಕ್ಷವೂ ಮುಸ್ಲಿಮರನ್ನು ತನ್ನ ಪಕ್ಷದ ಅಧ್ಯಕ್ಷರನ್ನಾಗಿ ಮಾಡಿಲ್ಲ. ಜನತಾದಳ ಮಾತ್ರ ಆ ಕಾರ್ಯ ಮಾಡಿದೆ. ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ಕೇವಲ ಬಳಸಿಕೊಂಡಿದೆ. ಆದರೆ ಅವರ ಏಳ್ಗೆಗೆ ಅಡ್ಡಿ ಮಾಡುತ್ತ ಬಂದಿದೆ. ರೆಹಮಾನ್ ಖಾನ್‌ ಟಿಪ್ಪು ವಿ.ವಿ. ಮಾಡುತ್ತೇನೆ ಎಂದಾಗ ಅದಕ್ಕೆ ಅಡ್ಡಗಾಲು ಹಾಕಿದ್ದೇ ಕಾಂಗ್ರೆಸ್‌ ಎಂದು ಟೀಕಿಸಿದರು.

ಬೆಂಗಳೂರಿನಲ್ಲಿ ಹಿಂದೊಮ್ಮೆ 12 ಕ್ಷೇತ್ರದಲ್ಲಿ ಮುಸ್ಲಿಂ ಶಾಸಕರು ಆರಿಸಿ ಬಂದಿದ್ದರು. ಇಂದು ಆ ಕ್ಷೇತ್ರಗಳನ್ನು ಮರು ವಿಂಗಡನೆ ನೆಪದಲ್ಲಿ ಒಡೆಯಲಾಗಿದ್ದು, ಇಂದು ನಾಲ್ಕೈದು ಮಂದಿ ಗೆಲ್ಲಬಹುದಷ್ಟೇ ಎಂದು ಹೇಳಿದರು.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಮಾತನಾಡಿ ‘ದೇಶದಲ್ಲಿರುವ ಶೇ 19 ಜನರನ್ನು ದೇಶದ್ರೋಹಿಗಳು ಎಂದು ಬಿಂಬಿಸುವ ಕೆಲಸ ಈಗ ನಡೆಯುತ್ತಿದೆ. ನಾವೆಲ್ಲರೂ ಒಂದು ಎಂದು ಸಂವಿಧಾನ ಹೇಳಿದರೂ ಬಿಜೆಪಿ ತನ್ನ ಹಿಡನ್ ಅಜೆಂಡಾ ಜಾರಿ ಮಾಡುತ್ತಿದೆ. ನಿಮ್ಮನ್ನು ಸದಾ ಅನುಮಾನದಿಂದ ನೋಡುತ್ತಿದೆ. ಇದನ್ನು ನೋಡುತ್ತಾ ಕಾಂಗ್ರೆಸ್ ಜಾಣ ಮೌನದಲ್ಲಿ ಮುಳುಗಿದೆ’ ಎಂದು ಟೀಕಿಸಿದರು.

ಗೋಧ್ರಾ ಘಟನೆ ನಡೆದಾಗ ಹಿಂಸಾಚಾರಕ್ಕೆ ಬಿಜೆಪಿ ಕುಮ್ಮಕ್ಕು ಕೊಟ್ಟರೆ ಕಾಂಗ್ರೆಸ್ ಸುಮ್ಮನೆ ಇತ್ತು, ಅಂತಹ ವೇಳೆ ದೇವೇಗೌಡರು ಗುಜರಾತ್ ಗಲಭೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಪಸಂಖ್ಯಾತರ ಮನೆಗಳಿಗೆ ತೆರಳಿ ಸಾಂತ್ವನ ಹೇಳಿದ್ದರು ಎಂದು ಸ್ಮರಿಸಿದರು.

ಕಾಂಗ್ರೆಸ್ ದಿನೇದಿನೇ ನಶಿಸಿಹೋಗುತ್ತಿದೆ. ಅದು ಆ ಪಕ್ಷದ ಸ್ವಯಂಕೃತ ಅಪರಾಧ. ರಾಷ್ಟ್ರೀಯ ಪಕ್ಷವಾಗಿದ್ದ ಕಾಂಗ್ರೆಸ್ ಇಂದು ಪ್ರಾದೇಶಿಕ ಪಕ್ಷಗಳಿಗಿಂತ ಕೆಳಗೆ ಬಂದಿದೆ. ಜನತಾ ಪರಿವಾರ ದುರ್ಬಲ ಆಗಲು ಬಿಜೆಪಿ ಕೊಡುಗೆಯೂ ಇದೆ. ಈಗ ದೇಶ ಕವಲು ದಾರಿಯಲ್ಲಿದ್ದು, ಬಿಜೆಪಿ ಬರಲು ಕಾರಣ ಯಾರು ಎಂಬುದನ್ನು ಮುಸ್ಲಿಂ ಸಮುದಾಯ ಅರ್ಥ ಮಾಡಿಕೊಳ್ಳಬೇಕಿದೆ ಎಂದರು.

ಬಿಜೆಪಿ ಜತೆ ಇದ್ದಾಗಲೂ ನಾವು ಮುಸ್ಲಿಂ ಸಮುದಾಯದ ಹಿತ ಕಡೆಗಣಿಸಿಲ್ಲ. ಬಿಜೆಪಿ ಮೈತ್ರಿ ಸರ್ಕಾರ ಇದ್ದಾಗಲೇ ಸದಾನಂದ ಗೌಡರು ನ್ಯಾಯಾಲಯದ ಆದೇಶ ಉಲ್ಲಂಘಿಸಿ ದತ್ತಪೀಠ ಪ್ರವೇಶ ಮಾಡಲು ಹೋದರು. ಆವತ್ತು ಉಪ ಮುಖ್ಯಮಂತ್ರಿ ಆಗಿದ್ದವರು ನನ್ನ ಪಕ್ಕ ಕೂತಿದ್ದರು. ವಿಷಯ ಗೊತ್ತಾದ ಕೂಡಲೇ ಅರೆಸ್ಟ್ ಮಾಡಿ ಎಂದು ಪೊಲೀಸರಿಗೆ ಹೇಳಿದೆ. ಸದಾನಂದ ಗೌಡರು ಜೈಲಲ್ಲಿ ಕೂರಬೇಕಾಯಿತು ಎಂದು ಹೇಳಿದರು.

ಸಿದ್ದರಾಮಯ್ಯ ಸ್ವಂತ ಶಕ್ತಿಯಿಂದ ಮುಖ್ಯಮಂತ್ರಿ ಆಗಲಿಲ್ಲ. ಆಗ ಯಡಿಯೂರಪ್ಪ ನಡೆಸಿದ ಅಕ್ರಮಗಳನ್ನು ನಾವು ದಾಖಲೆ ಸಮೇತ ಜನರ ಮುಂದೆ ಇಟ್ಟೆವು. ಅವರು ಜೈಲಿಗೆ ಹೋದರು. ಬಳಿಕ ಕೆಜೆಪಿ ಕಟ್ಟಿದರು. ಶ್ರೀರಾಮುಲು ಹೊಸ ಪಕ್ಷ ಕಟ್ಟಿದರು. ಆ ಗ್ಯಾಪಿನಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆದರು ಎಂದು ಟೀಕಿಸಿದರು.

ಮಾಜಿ ಸಚಿವ ನಬಿ, ವಿಧಾನ ಪರಿಷತ್‌ ಸದಸ್ಯ ಬಿ.ಎಂ. ಫಾರೂಕ್‌, ಪಕ್ಷದ ಮುಖಂಡರಾದ ಜಫ್ರುಲ್ಲಾ ಖಾನ್‌, ಸಯ್ಯದ್ ಮೊಹಮ್ಮದ್ ಅಲ್ತಾಫ್‌, ನಾಸಿರ್ ಹುಸೇನ್‌ ಉಸ್ತಾದ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು