ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲೇಜು ಆರಂಭ; ಆರೋಗ್ಯಕ್ಕೇ ಚಿಂತೆ

ಸರ್ಕಾರದ ನಿರ್ಧಾರಕ್ಕೆ ವಿದ್ಯಾರ್ಥಿ-ಪೋಷಕರಿಂದ ಮಿಶ್ರ ಅಭಿಪ್ರಾಯ
Last Updated 24 ಅಕ್ಟೋಬರ್ 2020, 14:43 IST
ಅಕ್ಷರ ಗಾತ್ರ

ರಾಮನಗರ: ನವೆಂಬರ್‌ 17ರಿಂದ ರಾಜ್ಯದಲ್ಲಿನ ಪದವಿ, ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್ ಮತ್ತು ಡಿಪ್ಲೊಮಾ ತರಗತಿಗಳನ್ನು ಆರಂಭಿಸುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಣ ತಜ್ಞರಿಂದ ವಿಭಿನ್ನ ಅಭಿಪ್ರಾಯ ವ್ಯಕ್ತವಾಗಿದೆ.

ಒಂದು ವರ್ಷ ವ್ಯರ್ಥವಾದರೂ ಪರವಾಗಿಲ್ಲ. ಮಕ್ಕಳ ಶಿಕ್ಷಣಕ್ಕಿಂತ ಅವರ ಆರೋಗ್ಯ ಮುಖ್ಯ ಎಂದು ಕೆಲವು ಪೋಷಕರು ಹೇಳುತ್ತಾರೆ. ಮಕ್ಕಳನ್ನು ಕಾಲೇಜಿಗೆ ಕಳುಹಿಸಲು ಅವರು ಹಿಂಜರಿಯುತ್ತಿದ್ದಾರೆ. ಸರ್ಕಾರ ಆಫ್‌ಲೈನ್‌ ತರಗತಿಗಳ ಜೊತೆಗೆ ಆನ್‌ಲೈನ್‌ ಆಯ್ಕೆಯನ್ನೂ ನೀಡಿರುವುದು ಸ್ವಾಗತಾರ್ಹ. ತರಗತಿಗೆ ಬರುವ ಇಲ್ಲವೇ ಬಿಡುವ ಆಯ್ಕೆಯನ್ನು ವಿದ್ಯಾರ್ಥಿ-ಪೋಷಕರಿಗೇ ಬಿಡಬೇಕು ಎನ್ನುವುದು ಅವರ ವಾದ. ಆದರೆ ಇನ್ನೂ ಕೆಲವರು ಕಾಲೇಜು ಆರಂಭ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಉತ್ತಮ ನಿರ್ಧಾರ ಎನ್ನುತ್ತಾರೆ.

ವಿದ್ಯಾರ್ಥಿ ಸಮೂಹದಿಂದ ತರಗತಿ ಆರಂಭಕ್ಕೆ ಮಿಶ್ರ ಪ್ರತಿಕ್ರಿಯೆ ಸಿಗುತ್ತಿದೆ. ಕಾಲೇಜಿಗೆ ಹೋದರೆ ಕೊರೊನಾ ಹರಡುವ ಭಯ ಎಂದು ಕೆಲವರು ಆತಂಕ ವ್ಯಕ್ತಪಡಿಸುತ್ತಾರೆ. ಸದ್ಯ ಕಾಲೇಜು ತರಗತಿಗಳಿಗಿಂತ ಆನ್‌ಲೈನ್‌ ಪಾಠವೇ ಉತ್ತಮ ಎನ್ನುವುದು ಅವರ ಅಭಿಪ್ರಾಯ. ಆದರೆ ಇನ್ನೂ ಕೆಲವು ವಿದ್ಯಾರ್ಥಿಗಳು ಎಂದು ಕಾಲೇಜಿನ ಬಾಗಿಲು ತೆರೆಯಲಿದೆ ಎನ್ನುವ ನಿರೀಕ್ಷೆಯಲ್ಲಿ ಇದ್ದಾರೆ. ಪ್ರಾಯೋಗಿಕ ತರಗತಿಗಳನ್ನು ಆನ್‌ಲೈನ್‌ ಮೂಲಕ ಕಲಿಯಲು ಸಾಧ್ಯವಿಲ್ಲ. ಪಾಠಕ್ಕೆ ಆನ್‌ಲೈನ್‌ಗಿಂತ ಆಫ್‌ಲೈನ್‌ ತರಗತಿಯೇ ಉತ್ತಮ ಎನ್ನುವುದು ಅವರ ಅಭಿಪ್ರಾಯ. ಕೊರೊನಾ ಬಗ್ಗೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿಕೊಂಡು ತರಗತಿ ಆರಂಭ ಮಾಡುವುದು ಒಳಿತು. ಈಗಾಗಲೇ ಹಲವು ತಿಂಗಳುಗಳೇ ಕಳೆದು ಹೋಗಿದೆ. ಹೀಗಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತಡ ಮಾಡದೇ ತರಗತಿ ಆರಂಭಿಸಬೇಕು ಎನ್ನುತ್ತಾರೆ ಕೆಲವರು.

"ಮಕ್ಕಳನ್ನು ಗುಡಾಣದಲ್ಲಿ ಇಟ್ಟು ಬೆಳಸಲು ಸಾಧ್ಯ ಇಲ್ಲ. ಹೊರ ಪ್ರವೇಶವನ್ನು ಎದುರಿಸುವ ಶಕ್ತಿ ಬೆಳೆಸಬೇಕು. ಆದಷ್ಟು ಬೇಗ ಆರಂಭಿಸಬೇಕು. ಪೋಷಕರಲ್ಲಿ ಈ ಬಗ್ಗೆ ಜಾಗೃತಿಯನ್ನೂ ಮೂಡಿಸಬೇಕು. ಕಲಿಕೆ ಮುಂದುವರಿಸುವುದರಿಂದ ಅವರನ್ನು ಇನ್ನಷ್ಟು ಕ್ರಿಯಾಶೀಲರಾಗಿ ಇಡಲು ಸಾಧ್ಯ" ಎನ್ನುತ್ತಾರೆ ಉಪನ್ಯಾಸಕರು.

ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಕಾಲೇಜು ಆರಂಭದ ಬಗ್ಗೆ ತಮ್ಮದೇ ಆದ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ. ಮಕ್ಕಳ ಶೈಕ್ಷಣಿಕ ಪ್ರಗತಿಯ ದೃಷ್ಟಿಯಿಂದ ಕಾಲೇಜು ಆರಂಭಿಸುವುದು ಒಳ್ಳೆಯ ಬೆಳವಣಿಗೆ. ಇದರಿಂದ ವಿದ್ಯಾರ್ಥಿಗಳ ಓದಿಗೆ, ಭವಿಷ್ಯಕ್ಕೆ ಅನುಕೂಲ ಆಗುತ್ತದೆ ಎನ್ನುವುದು ಅವರ ಅನಿಸಿಕೆ. ಆದರೆ ಕಾಲೇಜು ಪರಿಸರದಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸುವ ಬಗ್ಗೆ, ಪರಸ್ಪರ ಅಂತರ ಕಾಪಾಡಿಕೊಳ್ಳುವುದು, ಮಾಸ್ಕ್‌ ಮತ್ತು ಸ್ಯಾನಿಟೈಸರ್‌ಗಳ ಬಳಕೆ ಬಗ್ಗೆ ಗೊಂದಲಗಳಿದ್ದು, ಪ್ರತಿ ವಿದ್ಯಾರ್ಥಿ ಮೇಲೂ ನಿಗಾ ವಹಿಸುವುದು ಕಷ್ಟ ಎನ್ನುವುದು ಕಾಲೇಜು ಆಡಳಿತ ಮಂಡಳಿ ಸದಸ್ಯರ ಅಭಿಪ್ರಾಯ.

ಪ್ರತಿಕ್ರಿಯೆ

ಕಾಲೇಜು ಆರಂಭಿಸುವ ನಿರ್ಧಾರ ಸ್ವಾಗತಾರ್ಹ. ಆನ್‌ಲೈನ್‌ನಲ್ಲಿ ಪಾಠ ಪ್ರವಚನ ಕಷ್ಟಕರವಾಗಿದೆ. ತರಗತಿಯಲ್ಲಿ ಕಲಿಯುವುದು ಉತ್ತಮ.
- ಎಸ್.ಕಾವ್ಯಶ್ರೀ,ಬಿ.ಕಾಂ. ವಿದ್ಯಾರ್ಥಿನಿ, ಚನ್ನಪಟ್ಟಣ


ಕಾಲೇಜು ಆರಂಭದ ನಿರ್ಧಾರ ಸ್ವಾಗತಾರ್ಹ. ಇಲಾಖೆ ನಿರ್ದೇಶನದಂತೆ ತರಗತಿಗಳನ್ನು ನಡೆಸಲಾಗುವುದು
- ಸಿ. ರಮೇಶ್‌,ಕಾರ್ಯದರ್ಶಿ, ಆರ್‌ಇಎಸ್‌ ಶಿಕ್ಷಣ ಸಂಸ್ಥೆ, ಕನಕಪುರ


ವಿದ್ಯಾರ್ಥಿಗಳ ಭವಿಷ್ಯದಿಂದ ಉತ್ತಮ ನಿರ್ಧಾರ. ಶೀಘ್ರ ಶೈಕ್ಷಣಿಕ ವೇಳಾಪಟ್ಟಿ ಪ್ರಕಟಿಸಿ ಪೋಷಕರಲ್ಲಿ ಭರವಸೆ ಮೂಡಿಸಬೇಕು
- ಶಿವಣ್ಣ ಕೊತ್ತೀಪುರ,ಪ್ರಾಚಾರ್ಯ, ಬಿಎಸ್‌ವಿಪಿ ಪಿಯು ಕಾಲೇಜು, ರಾಮನಗರ


ಪದವಿ ಕಾಲೇಜು ಆರಂಭಿಸುವ ಸರ್ಕಾರ ನಿರ್ಧಾರ ಸರಿಯಾಗಿದೆ. ಮೊದಲು ಆರೋಗ್ಯ, ನಂತರ ಶಿಕ್ಷಣ ಎಂಬ ಸನ್ನಿವೇಶ ಇದ್ದಾಗ್ಯೂ ಪಾಳಿ ಆಧಾರದಲ್ಲಿ ತರಗತಿ ನಡೆಸುವುದು ಸೂಕ್ತ
- ಎಚ್‌. ಧನುಷ್ ಕುಮಾರ್,ತೃತೀಯ ಬಿಕಾಂ, ಹೊಂಬಾಳಮ್ಮನಪೇಟೆ


ನಮ್ಮ ಮಕ್ಕಳ ಆರೋಗ್ಯ ಮುಖ್ಯ. ಮಕ್ಕಳು ಜೀವಂತವಾಗಿದ್ದರೆ ಇಂದಲ್ಲ ನಾಳೆ ಶಿಕ್ಷಣ ಕೊಡಿಸಬಹುದು. ಸದ್ಯಕ್ಕೆ ಕಾಲೇಜು ಆರಂಭಿಸುವುದು ಸರಿಯಲ್ಲ
- ಶಿವಕುಮಾರ್,ಪೋಷಕರು, ಅತ್ತಿಂಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT