ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಾತೃ ಭಾಷಾ ಶಿಕ್ಷಣ ಪರಿಣಾಮಕಾರಿ’

Published 24 ಫೆಬ್ರುವರಿ 2024, 6:58 IST
Last Updated 24 ಫೆಬ್ರುವರಿ 2024, 6:58 IST
ಅಕ್ಷರ ಗಾತ್ರ

ರಾಮನಗರ: ‘ಬೇರೆಲ್ಲಾ ಭಾಷೆಗಳಿಗಿಂತ ಮಾತೃಭಾಷೆಯ ಶಿಕ್ಷಣ ಅತ್ಯಂತ ಪರಿಣಾಮಕಾರಿಯಾಗಿದೆ. ನಮ್ಮ ಬದುಕನ್ನು ನಿರ್ಧರಿಸುವಲ್ಲಿ ಭಾಷೆ ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತದೆ. ಮಾತೃ ಭಾಷೆಯ ಶಿಕ್ಷಣವು ವಿದ್ಯಾರ್ಥಿಯ ಹೃದಯಕ್ಕೆ ಮುಟ್ಟುತ್ತದೆ’ ಎಂದು ಸಮೂಹ ಸಂಪನ್ಮೂಲ ವ್ಯಕ್ತಿ ಚಿಕ್ಕವೀರಯ್ಯ ಟಿ.ಎನ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಕೂನ ಮುದ್ದನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಇತ್ತೀಚೆಗೆ ನಡೆದ ವಿಶ್ವ ಮಾತೃಭಾಷೆ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ವಿಶ್ವದಲ್ಲಿ ಹಲವು ಭಾಷೆಗಳು ಅಳಿವಿನಂಚಿನಲ್ಲಿವೆ. ಯಾವುದೇ ಭಾಷೆ ಉಳಿಯಬೇಕಾದರೆ ಅದನ್ನು ಹೆಚ್ಚಾಗಿ ಬಳಸಬೇಕು. ಜಪಾನ್ ತನ್ನ ಮಾತೃಭಾಷೆಯನ್ನು ಉಳಿಸಲು ಪ್ರತಿ ವಿಶ್ವವಿದ್ಯಾನಿಲಯದಲ್ಲೂ ಭಾಷಾಂತರಕ್ಕಾಗಿಯೇ ಪ್ರತ್ಯೇಕ ವಿಭಾಗ ತೆರೆದಿದೆ’ ಎಂದರು.

‘ವಿಜ್ಞಾನ ಅಥವಾ ಯಾವುದೇ ವಿಷಯದಲ್ಲಿ ಹೊಸದಾಗಿ ನಿಯತಕಾಲಿಕೆ ಬಂದರೆ, ಜಪಾನ್‌ನಲ್ಲಿ ಕೆಲವೇ ದಿನಗಳಲ್ಲಿ ಭಾಷಾಂತರಿಸಿ ಅಲ್ಲಿನ ವಿದ್ಯಾರ್ಥಿಗಳಿಗೆ ನೀಡುತ್ತಾರೆ. ಇಂತಹ ಪ್ರವೃತ್ತಿ ನಮ್ಮ ಕನ್ನಡ ನೆಲದಲ್ಲೂ ಆರಂಭವಾಗಬೇಕಿದೆ’ ಎಂದು ತಿಳಿಸಿದರು.

‘ನಾವು ಕೂಡ ಭಾಷೆ ಉಳಿವಿಗೆ ಇಂತಹ ಮಾದರಿಯನ್ನು ಅನುಸರಿಸಬೇಕಿದೆ. ಮಕ್ಕಳೊಡನೆ ಕನ್ನಡದಲ್ಲೇ ಮಾತನಾಡುವ ಅಭ್ಯಾಸವನ್ನು ರೂಢಿ ಮಾಡಿಕೊಳ್ಳಬೇಕಿದೆ. ಕಷ್ಟಪಟ್ಟು ಇಂಗ್ಲಿಷ್ ಕಲಿಸುವ ಬದಲು ಇಷ್ಟಪಟ್ಟು ಕನ್ನಡ ಮಾತನಾಡಲು ಹೇಳಿಕೊಡಬೇಕು. ಮನೆ ಮತ್ತು ಶಾಲೆಯಲ್ಲಿ ಮಾತೃಭಾಷೆಯ ವಾತಾವರಣ ನಿರ್ಮಿಸಬೇಕಾಗಿದೆ’ ಎಂದು ಹೇಳಿದರು.

ಮುಖ್ಯ ಶಿಕ್ಷಕ ಕೃಷ್ಣಮೂರ್ತಿ ಮಾತನಾಡಿ, ‘ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷಾ ಶಿಕ್ಷಣವು ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತದೆ. ನಾವೆಲ್ಲರೂ ಇಷ್ಟಪಟ್ಟು ಮಾತೃ ಭಾಷೆಯನ್ನು ಮಾತನಾಡಬೇಕು’ ಎಂದರು.

ಸ್ಥಳೀಯ ಮುಖಂಡ ವೇದರಾಜ್, ಅತಿಥಿ ಶಿಕ್ಷಕಿ ಮಮತಾ, ಅಂಗನವಾಡಿ ಶಿಕ್ಷಕಿ ಮಾಲಾ, ಸಹಾಯಕರಾದ ಭಾಗ್ಯಮ್ಮ, ಅಡುಗೆ ಸಿಬ್ಬಂದಿ ನೀಲಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT