ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಒಂದೇ ಮಳೆಗೆ ಹೆದ್ದಾರಿಯ ಬಣ್ಣ ಬಯಲು!

ಹಾನಿಗೊಳಗಾದ ಕೆರೆ–ಕಟ್ಟೆಗಳಿಂದ ಪ್ರವಾಹ: ಸುಗಮಗೊಳ್ಳದ ಒಳಚರಂಡಿ ವ್ಯವಸ್ಥೆ
Last Updated 18 ಸೆಪ್ಟೆಂಬರ್ 2022, 4:07 IST
ಅಕ್ಷರ ಗಾತ್ರ

ರಾಮನಗರ: ಈಚೆಗೆ ಸುರಿದ ಒಂದೇ ಮಳೆಗೆ ಬೆಂಗಳೂರು–ಮೈಸೂರು ಹತ್ತು ಪಥದ ಹೆದ್ದಾರಿಯ ಬಣ್ಣ ಬಯಲಾಗಿದೆ. ಇಡೀ ಹೆದ್ದಾರಿ ಅಲ್ಲಲ್ಲಿ ಮುಳುಗಿತ್ತು.

ಅನೇಕ ಕೆರೆ, ಕಟ್ಟೆಗಳನ್ನು ಸೀಳಿಕೊಂಡು ಹೊಸ ಹೆದ್ದಾರಿ ಸಾಗಿದೆ. ಹೀಗೆ ಜಲಮೂಲಗಳ ಸ್ವರೂಪವನ್ನು ಅಸ್ತವ್ಯಸ್ತಗೊಳಿಸಿ ರಸ್ತೆ ನಿರ್ಮಿಸುವಾಗ ವೈಜ್ಞಾನಿಕ ಕ್ರಮಗಳನ್ನು ಅನುಸರಿಸಿಲ್ಲ. ಹೀಗಾಗಿ, ಅನೇಕ ಕಡೆ ಕೆರೆಗಳೇ ಹೆದ್ದಾರಿಗೆ ಬಂದಿವೆ, ಹೆದ್ದಾರಿಗಳೇ ಕೆರೆಗಳಾಗುತ್ತಿವೆ.

ಬೆಂಗಳೂರು ಹೊರವಲಯದಲ್ಲಿ ಹೆದ್ದಾರಿ ಕಾಮಗಾರಿಯಿಂದಾಗಿ ಸಾಕಷ್ಟು ಹಾನಿಯಾಗಿತ್ತು. ಕಣ್ಮಿಣಿಕೆ ಟೋಲ್‌ ಬಳಿ ಕೆರೆ ನೀರು ಹೆದ್ದಾರಿಗೆ ನುಗ್ಗಿ ಪ್ರವಾಹದಂತೆ ನಿಂತಿತ್ತು. ಚನ್ನಪಟ್ಟಣ ತಾಲ್ಲೂಕಿನ ತಿಟ್ಟಮಾರನಹಳ್ಳಿ ಸಮೀಪ ರಾಮಮ್ಮನ ಕೆರೆಗೆ ಅಂಟಿಕೊಂಡಂತೆಯೇ ಬೈಪಾಸ್ ರಸ್ತೆ ನಿರ್ಮಿಸಿದ್ದು, ಇದರಿಂದ ಕೆರೆಯ ಹರಿವಿನ ದಿಕ್ಕೇ ಬದಲಾಗಿದೆ. ಕೋಡಿ ಪ್ರದೇಶಕ್ಕೆ ಹಾನಿಯಾಗಿ, ಮಳೆ ನೀರು ಊರಿಗೆಲ್ಲ ನುಗ್ಗಿ ಅವಾಂತರ ಸೃಷ್ಟಿಸಿದೆ. ಮಂಡ್ಯ ತಾಲ್ಲೂಕಿನ ಹೊಸ ಬೂದನೂರು ಈ ಹೆದ್ದಾರಿಯ ಅತಿದೊಡ್ಡ ಸಂತ್ರಸ್ತ ಗ್ರಾಮ. ಮನೆ ಕಳೆದುಕೊಂಡ ನೂರಾರು ಮಂದಿ ಇದೀಗ ಕಾಮಗಾರಿ ಅವಾಂತರದಿಂದ ಕೆರೆ ನೀರು ಜಮೀನಿಗೆ ನುಗ್ಗಿ ಬೆಳೆ ನಷ್ಟವನ್ನೂ ಅನುಭವಿಸಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಾಮಗಾರಿಯಿಂದಾಗಿ ಮದ್ದೂರು ಕೆರೆ ಒಡೆದಿದ್ದು, ಹೆದ್ದಾರಿಗೆ ನೀರು ಹರಿದ ಕಾರಣ ಕೆಲ ದಿನ ಈ ಭಾಗದ ಸಂಚಾರ ಮಾರ್ಗವೇ ಬದಲಾಗಿತ್ತು.

ಕಾಮಗಾರಿ ಕಿರಿಕಿರಿ: ಮದ್ದೂರು ತಾಲ್ಲೂಕಿನ ನಿಡಘಟ್ಟದಿಂದ ಮೈಸೂರಿನ ಮಣಿಪಾಲ್ ಜಂಕ್ಷನ್‌ವರೆಗೆ ಎರಡನೇ ಹಂತದ ಕಾಮಗಾರಿ ಪ್ರಗತಿಯಲ್ಲಿದ್ದು, ಕಿರಿದಾದ ಸರ್ವೀಸ್ ರಸ್ತೆಗಳಲ್ಲೇ ವಾಹನ ಸಂಚಾರಕ್ಕೆ ಸರ್ಕಸ್ ನಡೆದಿದೆ. ಈ ನಡುವೆ ಗ್ಯಾಸ್ ಪೈಪ್‌ಲೈನ್ ಕಾಮಗಾರಿಯೂ ನಡೆದಿದ್ದು, ಜನರು ಪರದಾಡು ವಂತಾಗಿದೆ. ಮದ್ದೂರು ಪಟ್ಟಣದೊಳಗೆ ಎಲಿವೇಟೆಡ್‌ ಕಾರಿಡಾರ್ ಕಾಮಗಾರಿ ನಡೆದಿದ್ದು, ಸಂಚಾರಕ್ಕೆ ಅಡಚಣೆ ಆಗಿದೆ.

ಅಂಡರ್‌ಪಾಸ್‌ ಅವಾಂತರ: ಹೊಸ ಹೆದ್ದಾರಿಯ 49 ಕಡೆಗಳಲ್ಲಿ ಸ್ಥಳೀಯರ ಓಡಾಟಕ್ಕೆ ಅಂಡರ್‌ಪಾಸ್‌ ನಿರ್ಮಿಸಲಾಗಿದೆ. ಇವುಗಳಲ್ಲಿ ಸಾಕಷ್ಟು ಕಡೆ ಮಳೆ ನೀರು ನಿಲ್ಲುತ್ತಿದೆ. ನೀರು ಸುಗಮವಾಗಿ ಹರಿದು ಹೋಗುವಂತೆ ಚರಂಡಿಗಳನ್ನು ವಿನ್ಯಾಸಗೊಳಿಸಿಲ್ಲ. ಮಳೆ ನೀರಿನ ರಭಸಕ್ಕೆ ಅಲ್ಲಲ್ಲಿ ಚರಂಡಿ ಒಡೆದಿದೆ. ಡ್ರೇನ್‌ ಬಾಕ್ಸ್‌ ಕಿತ್ತು ಹೋಗಿವೆ. ಕೆಳ ಸೇತುವೆಗಳು ಕೆರೆಗಳಾಗಿದ್ದು, ಸುತ್ತಲಿನ ಜಮೀನಿಗೂ ನೀರು ನುಗ್ಗಿದೆ. ಮೈಸೂರು ಹೊರವಲಯದ ಕಳಸ್ತವಾಡಿ ಯಲ್ಲಿ ಉದ್ಘಾಟನೆಗೂ ಮುನ್ನವೇ ಅಂಡರ್‌ಪಾಸ್‌ ಜಲಾವೃತಗೊಳ್ಳುತ್ತಿದೆ.

ಎಕ್ಸ್‌ಪ್ರೆಸ್‌ ವೇ ಸುತ್ತ ತಂತಿಬೇಲಿ ಇರುವ ಕಾರಣ ಜನರು ರಸ್ತೆ ದಾಟು ವಂತಿಲ್ಲ. ರಸ್ತೆಯ ಮತ್ತೊಂದು ತುದಿಗೆ ಹೋಗಬೇಕಾದರೂ ಅಂಡರ್‌ ಪಾಸ್‌ ಬಳಸಿ ಬರಬೇಕು. ಇದರಿಂದ ಸ್ಥಳೀಯ ಜನ–ಜಾನುವಾರುಗಳ ಓಡಾಟಕ್ಕೆ ತೊಂದರೆ ಆಗಿದೆ.

ಸರ್ವೀಸ್ ರಸ್ತೆ ಅಧ್ವಾನ: ಸಾಕಷ್ಟು ಕಡೆ ಸರ್ವೀಸ್ ರಸ್ತೆಗಳನ್ನು ಕಾಟಾಚಾರಕ್ಕೆ ಎಂಬಂತೆ ವಿನ್ಯಾಸಗೊಳಿಸಿದ್ದು, ಇದರಿಂದ ಸ್ಥಳೀಯರ ಓಡಾಟಕ್ಕೆ ಅಡ್ಡಿಯಾಗಿದೆ. ಕಳಪೆ ಗುಣಮಟ್ಟದ ಕಾಮಗಾರಿ: ಕಾಡುಮನೆ ಸಮೀಪ ಬಿಡದಿ ಬೈಪಾಸ್ ಆರಂಭದಲ್ಲೇ ರಸ್ತೆ ಮೇಲ್ಮೈ ಜಾರುತ್ತಿದ್ದು, ಇಲ್ಲಿ ಲಾರಿ ಉರುಳಿಬಿದ್ದು, ಬಸ್ ಸೇರಿದಂತೆ ಅನೇಕ ವಾಹನಗಳು ಜಾರಿವೆ. ಕಾಮಗಾರಿ ಲೋಪದ ಕುರಿತು ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ. ಮಳೆಯಿಂದಾಗಿ ಸರ್ವೀಸ್ ರಸ್ತೆಗೆ ಹಾನಿ ಯಾಗಿದ್ದು, ಅಲ್ಲಲ್ಲಿ ಕೊಚ್ಚಿ ಹೋಗಿದೆ.

ಇನ್ನೂ ಸಿಕ್ಕಿಲ್ಲ ಸೇಫ್ಟಿ ಕ್ಲಿಯರೆನ್ಸ್‌: ರಸ್ತೆ ಸುರಕ್ಷತೆ ಬಗ್ಗೆ ಕೇಂದ್ರ ತಂಡವು ಪರಿಶೀಲಿಸಿ ಹಸಿರು ನಿಶಾನೆ ತೋರುವ ಮುನ್ನವೇ ಬೈಪಾಸ್‌ಗಳನ್ನು ಮುಕ್ತಗೊಳಿಸಲಾಗಿದೆ. ಕುಂಬಳಗೋಡಿನಿಂದ ಮುದಗೆರೆಗೆ ಕಳೆದ ಹದಿನೈದು ದಿನದಲ್ಲೇ ಆರಕ್ಕೂ ಹೆಚ್ಚು ಅಪಘಾತ ಸಂಭವಿಸಿದ್ದು, ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ವೇಗಕ್ಕೆ ಮಿತಿ ಇಲ್ಲ. ಹೀಗಾಗಿ ವೇಗ ಹೆಚ್ಚಿದಷ್ಟೂ ಅಪಘಾತವೂ ಹೆಚ್ಚಾಗುವ ಸಾಧ್ಯತೆ ಇದೆ.

ದಿಕ್ಕು ತಪ್ಪುವ ಸಾಧ್ಯತೆ: ಹೊಸ ಬೈಪಾಸ್‌ ಗಳಲ್ಲಿ ಪ್ರಯಾಣಿಕರಿಗೆ ತಾವು ಎಲ್ಲಿದ್ದೇವೆ ಎಂಬುದನ್ನು ಪತ್ತೆ ಹಚ್ಚುವುದೇ ಕಷ್ಟವಾಗಿದೆ. ಅಗತ್ಯಕ್ಕೆ ತಕ್ಕಂತೆ ಫಲಕಗಳನ್ನು ಹಾಕಿಲ್ಲ. ಯೂ ಟರ್ನ್‌ಗಳ ಸಂಖ್ಯೆ ತೀರ ಕಡಿಮೆ. ಪ್ರವೇಶ–ನಿರ್ಗಮನ ದ್ವಾರಗಳು ಇನ್ನೂ ವಿನ್ಯಾಸಗೊಂಡಿಲ್ಲ. ಹೀಗಾಗಿ ಪ್ರಯಾಣಿಕರು ಸರ್ವೀಸ್‌ ರಸ್ತೆಗೆ ಮರಳುವುದು ಕಷ್ಟ. ಸದ್ಯ ಬೈಪಾಸ್‌ಗಳಲ್ಲಿ ವಾಹನ ಸಂಚಾರ ಆರಂಭಗೊಂಡಿದ್ದರೂ ಯಾತ್ರಿಕರಿಗೆ ಬೇಕಾದ ಮೂಲ ಸೌಕರ್ಯ ಇಲ್ಲ. ವಾಹನ ಕೆಟ್ಟು ನಿಂತರೆ ಟೋಯಿಂಗ್‌ ವ್ಯವಸ್ಥೆ ಇಲ್ಲ. ಮಧ್ಯೆ ಪೆಟ್ರೋಲ್ ಬಂಕ್‌ಗಳೂ ಇಲ್ಲ. ರಾತ್ರಿ ಹೊತ್ತು ಸುರಕ್ಷತೆ ಕೊರತೆಯೂ ಕಾಡುತ್ತಿದೆ.

ವನ್ಯಜೀವಿಗಳಿಗೂ ಅಡ್ಡಿ–ಆತಂಕ: ಪರಿಸರ ಸೂಕ್ಷ್ಮ ವಲಯವಾಗಿರುವ ರಾಮದೇವರ ಬೆಟ್ಟದ ಮಗ್ಗಲಿನಲ್ಲೇ ಹೊಸ ಬೈಪಾಸ್ ಹಾದು ಹೋಗಿದೆ. ಕಾಮಗಾರಿ ವೇಳೆ ಬ್ಲಾಸ್ಟಿಂಗ್‌ನಿಂದ ಅಳಿವಿನಂಚಿನಲ್ಲಿರುವ ರಣಹದ್ದುಗಳು ಬೆದರಿದ್ದು, ಹೆದ್ದಾರಿಯಲ್ಲಿ ವಾಹನ ಸಂಚಾರ ಹೆಚ್ಚಿದಷ್ಟೂ ಅವು ಗಾಸಿಯಾಗುವ ಸಾಧ್ಯತೆ ಇದೆ.

ನಿರ್ಬಂಧ

ಎಕ್ಸ್‌ಪ್ರೆಸ್‌ ವೇನಲ್ಲಿ ಆಟೊ, ಟ್ರ್ಯಾಕ್ಟರ್, ಎತ್ತಿನಗಾಡಿ, 200 ಸಿ.ಸಿ.ಗಿಂತ ಕಡಿಮೆ ಸಾಮರ್ಥ್ಯದ ಬೈಕ್‌ಗಳಿಗೆ ಪ್ರವೇಶ ನಿರ್ಬಂಧಿಸಲು ಹೆದ್ದಾರಿ ಪ್ರಾಧಿಕಾರ ಚಿಂತಿಸಿದೆ. ಇಂತಹ ವಾಹನಗಳು ಸರ್ವೀಸ್ ರಸ್ತೆಯಲ್ಲೇ ಚಲಿಸಬೇಕಾಗುತ್ತದೆ. ಹೀಗಾಗಿ ದೊಡ್ಡ ವಾಹನಗಳ ಮಾಲೀಕರಿಗಷ್ಟೇ ಅನುಕೂಲ ಆಗಲಿದೆ.

ಬೆಂಗಳೂರು–ಮೈಸೂರು ನಡುವೆ ಸಂಚರಿಸುವ ತಡೆರಹಿತ ಬಸ್‌ಗಳನ್ನು ಹೊರತುಪಡಿಸಿ, ಪ್ರಮುಖ ನಗರಗಳ ಮೂಲಕ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಕೆಲವೊಮ್ಮೆ ಸರ್ವೀಸ್ ರಸ್ತೆ ಪ್ರಯಾಣ ಅನಿವಾರ್ಯ ಆಗಲಿದೆ. ಸ್ಥಳೀಯ ಪ್ರಯಾಣಿಕರಿಗೆ ಇದರಿಂದ ಅನನೂಕೂಲ ಆಗಲಿದೆ.

ಕುಸಿದ ಮಳೆ ಕಾಲುವೆ

ಬೆಂಗಳೂರು ನಗರದ ಕುಂಬಳಗೋಡು ಬಳಿ ಕಣ್ಮಿಣಿಕೆ ಕೆರೆ ಕೋಡಿ ಹರಿದು ನೀರು ಸಾರಾಗವಾಗಿ ಹರಿದು ಹೋಗಲು ವ್ಯವಸ್ಥೆ ಇಲ್ಲದೆ ಹೊಸದಾಗಿ ನಿರ್ಮಿಸಿದ್ದ ರಸ್ತೆ ಬದಿಯ ಚರಂಡಿ ಕುಸಿದಿದೆ.

ಬೆಂಗಳೂರು – ಮೈಸೂರು ದಶಪಥ ಆರಂಭವಾಗುವ ಸ್ಥಳ ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು ಸಮೀಪ ಸದಾ ಮಳೆ ನೀರು ತುಂಬಿಕೊಳ್ಳುತ್ತದೆ. ರಸ್ತೆಯ ಮಧ್ಯೆ ಸಾಗಬೇಕಿದ್ದ ರಾಜಕಾಲುವೆ ವ್ಯವಸ್ಥೆ ಸರಿ ಇಲ್ಲ. ಹೀಗಾಗಿ ರಸ್ತೆ ಮೇಲೆ ನೀರು ನಿಲ್ಲುತ್ತದೆ. ಇನ್ನು, ವಿಶ್ವೇಶ್ವರಯ್ಯ ಬಿಡಿಎ ಬಡಾವಣೆ ಸೇರಿದಂತೆ ಹಲವು ಭಾಗದಿಂದ ಮಳೆ ನೀರು ಬಂದು ಸೇರಿಕೊಳ್ಳುವ ಕಣ್ಮಿಣಿಕೆ ಕೆರೆ ಕೋಡಿಗೂ ಜಾಗವಿಲ್ಲ. ಒಳಚರಂಡಿಯ ಛೇಂಬರ್ ನಲ್ಲಿ ಮಳೆ ನೀರು ಹೋಗಲು ಜಾಗ ಮಾಡಿದ್ದಾರೆ. ಇತ್ತೀಚೆಗೆ ಸುರಿದ ಮಳೆಯಿಂದ ನೀರು ಹೋಗಲು ಸಾಧ್ಯವಾಗದೆ ಸ್ವಾಮಿ ನಾರಾಯಣ ಗುರುಕುಲವೂ ಸೇರಿದಂತೆ ರಸ್ತೆ ತುಂಬಿಕೊಂಡಿತ್ತು. ವಾಹನ ಸಂಚಾರ ಸಾಧ್ಯವಾಗಿರಲಿಲ್ಲ.

ಪ್ರಯಾಣಿಕರಿಗೆ ಟೋಲ್‌ ಹೊರೆ!

ಹೆದ್ದಾರಿ ಕಾಮಗಾರಿ ಪೂರ್ಣಗೊಂಡ ಬಳಿಕ ಬೆಂಗಳೂರು–ಮೈಸೂರು ಪ್ರಯಾಣಿಕರಿಗೆ ಟೋಲ್‌ ಹೊರೆ ಬೀಳುವುದು ಗ್ಯಾರಂಟಿ. ನಾಲ್ಕು ಚಕ್ರದ ವಾಹನಗಳಿಗೆ ಸರಾಸರಿ ₹200–250ರವರೆಗೂ ಟೋಲ್ ಸಂಗ್ರಹಿಸುವ ಸಾಧ್ಯತೆ ಇದೆ. ಭಾರಿ ವಾಹನಗಳಿಗೆ ಹೆಚ್ಚಿನ ಟೋಲ್‌ ಇರಲಿದ್ದು, ಬಸ್ ದರವೂ ಏರಿಕೆ ಆಗಲಿದೆ. ಮುಂದಿನ ವರ್ಷದಿಂದ ಟೋಲ್ ಸಂಗ್ರಹ ಆರಂಭವಾಗುವ ಸಾಧ್ಯತೆ ಇದೆ.

ಸದ್ಯ ಕಣಮಿಣಕಿ (ಕುಂಬಳಗೋಡು), ಶೇಷಗಿರಿಹಳ್ಳಿ (ವಂಡರ್‌ಲಾ ಗೇಟ್‌) ಹಾಗೂ ಗಣಂಗೂರು (ಶ್ರೀರಂಗಪಟ್ಟಣ) ಸಮೀಪ ಟೋಲ್ ಕೇಂದ್ರಗಳು ತಲೆ ಎತ್ತಿವೆ. ನಗುವನಹಳ್ಳಿ ಗೇಟ್ ಬಳಿ (ಶ್ರೀರಂಗಪಟ್ಟಣ–ಮೈಸೂರು ಗಡಿ) ಭಾರತ್‌ ಬೆಂಜ್‌ ಶೋರೂಮ್ ಸಮೀಪ ಮತ್ತೊಂದು ಟೋಲ್‌ ಕೇಂದ್ರ ಸ್ಥಾಪನೆಯಾಗುವ ಸಾಧ್ಯತೆ ಇದೆ. ಇದಲ್ಲದೆ ಮಾರ್ಗ ಮಧ್ಯದ ನಗರಗಳಲ್ಲಿ ಎಂಟ್ರಿ– ಎಕ್ಸಿಟ್‌ ಟೋಲ್‌ ಇರಲಿದ್ದು, ಪ್ರಯಾಣಿಕರು ತಾವು ಕ್ರಮಿಸಿದ ದೂರಕ್ಕೆ ತಕ್ಕಂತೆ ಟೋಲ್‌ ಕಟ್ಟಬೇಕಾಗುತ್ತದೆ.

₹ 1,201 ಕೋಟಿ ಹೆಚ್ಚುವರಿ ವೆಚ್ಚ

ಸದ್ಯ ಹಾಳಾಗಿರುವ ಚರಂಡಿ ಹಾಗೂ ಸರ್ವೀಸ್ ರಸ್ತೆಗಳ ದುರಸ್ತಿ ಜೊತೆಗೆ ಈ ಮಾರ್ಗದಲ್ಲಿನ ಪ್ರತಿ ನಗರಕ್ಕೂ ಪ್ರವೇಶ–ನಿರ್ಗಮನ ದ್ವಾರಗಳ ನಿರ್ಮಾಣಕ್ಕಾಗಿ ₹ 1,201 ಕೋಟಿ ವೆಚ್ಚದ ಯೋಜನೆಯ ಪ್ರಸ್ತಾವವನ್ನು ಹೆದ್ದಾರಿ ಪ್ರಾಧಿಕಾರವು ಸರ್ಕಾರದ ಮುಂದೆ ಇಟ್ಟಿದ್ದು, ಇನ್ನಷ್ಟೇ ಅನುಮತಿ ಸಿಗಬೇಕಿದೆ. ಬೈಪಾಸ್ ರಸ್ತೆಗಳಲ್ಲಿ ಬಿಡದಿ, ರಾಮನಗರ, ಚನ್ನಪಟ್ಟಣ, ಮಂಡ್ಯ, ಮದ್ದೂರು ಹಾಗೂ ಶ್ರೀರಂಗಪಟ್ಟಣಕ್ಕೆ ಪ್ರವೇಶ– ನಿರ್ಗಮನ ದ್ವಾರ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT