ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಮೆಡಿಕಲ್ ಕಾಲೇಜು ಮಾತ್ರ ಚಿಕ್ಕಬಳ್ಳಾಪುರಕ್ಕೆ ಉಳಿದ ಯೋಜನೆಗಳು ರದ್ದಾಗಿಲ್ಲ'

Last Updated 15 ಡಿಸೆಂಬರ್ 2019, 13:59 IST
ಅಕ್ಷರ ಗಾತ್ರ

ರಾಮನಗರ: ‘ಕನಕಪುರಕ್ಕೆ ಮೆಡಿಕಲ್ ಕಾಲೇಜು ಹೊರತುಪಡಿಸಿ ರಾಮನಗರ ಜಿಲ್ಲೆಗೆ ಮಂಜೂರಾಗಿರುವ ಯಾವ ಯೋಜನೆಯನ್ನು ರದ್ದುಗೊಳಿಸಿಲ್ಲ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ. ರುದ್ರೇಶ್‌ ಹೇಳಿದರು.

ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ರಾಮನಗರಕ್ಕೆ ಅತಿ ಹೆಚ್ಚು ಅನುದಾನ, ಯೋಜನೆಗಳು ಬಿಡುಗಡೆಯಾಗಿವೆ ಎಂಬುದನ್ನು ಕುಮಾರಸ್ವಾಮಿ ಮರೆಯಬಾರದು. ಕಾಂಗ್ರೆಸ್ ಪಕ್ಷದೊಂದಿಗೆ ಮಾಡಿಕೊಂಡ ಮೈತ್ರಿ ವೇಳೆ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿ ಆಗಿದ್ದರೂ ಪ್ರಮುಖ ಯೋಜನೆಗಳು ಜಾರಿಯಾಗಲಿಲ್ಲ. ಹೀಗಿದ್ದು ಬಿಜೆಪಿ ಸರ್ಕಾರದ ವಿರುದ್ಧ ಆರೋಪ ಹೊರೆಸುವುದು ಸರಿಯಲ್ಲ’ ಎಂದರು.

‘ಜಿಲ್ಲೆಗೊಂದು ಮೆಡಿಕಲ್ ಕಾಲೇಜು ಮಾಡಬೇಕು. ಜಿಲ್ಲೆಯಲ್ಲಿ ರಾಜೀವ್ ಗಾಂಧಿ ವಿವಿ ಸ್ಥಾಪನೆ ಜತೆಗೆ ಮೆಡಿಕಲ್ ಕಾಲೇಜು ಸ್ಥಾಪನೆಯಾಗಲಿದೆ. ಇದರಿಂದ ಬಿಜೆಪಿ ಸರ್ಕಾರ ಕನಕಪುರ ತಾಲ್ಲೂಕಿಗೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜನ್ನು ಚಿಕ್ಕಬಳ್ಳಾಪುರ ಜಿಲ್ಲೆಗೆ ಕೊಟ್ಟಿದೆ. ಇದರಲ್ಲಿ ದ್ವೇಷ ಭಾವನೆ ಏನೂ ಇಲ್ಲ’ ಎಂದು ಸ್ಪಷ್ಟಪಡಿಸಿದರು.

‘ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಜಿಲ್ಲೆಗೆ ಫಿಲಂ ಸಿಟಿ ಮಂಜೂರಾಯಿತು. ಆದರೆ ಫಿಲಂ ಸಿಟಿಗೆ ಬೇಕಾದ ಸ್ಥಳ ಇಲ್ಲಿ ಸಿಗಲಿಲ್ಲ. ಸ್ಥಳ ಗುರುತಿಸಿದೆ ಯೋಜನೆ ಮಂಜೂರು ಮಾಡುವುದು ಸರಿಯಲ್ಲ. ಇದು ಗೊತ್ತಾದ ಮೇಲೆಯೇ ಅವರು ಫಿಲಂ ಸಿಟಿಯನ್ನು ಬೇರೆಡೆ ವರ್ಗಾಯಿಸಿದರು’ ಎಂದು ತಿಳಿಸಿದರು.

‘ಕಣ್ವ ಜಲಾಶಯದ ಬಳಿ ಮಕ್ಕಳ ಪ್ರಪಂಚ ಸ್ಥಾಪನೆಗೆ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರ ₹ 3 ಕೋಟಿ ಬಿಡುಗಡೆ ಮಾಡಿದೆ. ಆದರೆ ಈ ಹಣ ಸಾಲುವುದಿಲ್ಲ. ಆದರೆ ಈಗ ಮಂಜೂರಾಗಿರುವ 3 ಕೋಟಿ ಹಣವನ್ನು ನಗರದ ರಂಗರಾಯರದೊಡ್ಡಿ ಕೆರೆ ಅಭಿವೃದ್ಧಿಗೆ ಬಳಸಿಕೊಳ್ಳಲು ಸರ್ಕಾರ ಉದ್ದೇಶಿಸಿದೆ. ಇಲ್ಲಿ ಬಸವಣ್ಣ ಮತ್ತು ಕೆಂಗಲ್ ಹನುಮಂತಯ್ಯ ಅವರ ಪ್ರತಿಮೆಗಳನ್ನು ಸ್ಥಾಪನೆ ಮಾಡಿ ರಂಗರಾಯರದೊಡ್ಡಿ ಕೆರೆಯ ಪ್ರದೇಶವನ್ನು ಪ್ರೇಕ್ಷಣೀಯ ಸ್ಥಳವನ್ನಾಗಿ ಪರಿವರ್ತಿಸಲು ಸಹ ಉದ್ದೇಶಿಸಲಾಗಿದೆ’ ಎಂದರು.

‘ಶಿವಕುಮಾರಸ್ವಾಮೀಜಿ ಅವರು ಜನಿಸಿದ ವೀರಾಪುರ ಮತ್ತು ಬಾಲಗಂಗಾಧರನಾಥ ಸ್ವಾಮೀಜಿ ಅವರ ಹುಟ್ಟೂರು ಬಾನಂದೂರು ಅಭಿವೃದ್ದಿ ಬಗ್ಗೆ ಕುಮಾರಸ್ವಾಮಿ ಕೇವಲ ಬಾಯಿ ಮಾತಿಗಷ್ಟೇ ಸೀಮಿತವಾಗಿದ್ದರು. ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಈ ವಿಚಾರದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಶಿವಕುಮಾರಸ್ವಾಮೀಜಿ ಅವರ 111 ಅಡಿ ಎತ್ತರದ ಪ್ರತಿಮೆ ಸ್ಥಾಪನೆಗೆ ಸರ್ಕಾರ ಮುಂದಾಗಿದ್ದು, ಕೆಲವು ದಿನಗಳಲ್ಲಿ ಕಾಮಗಾರಿ ಆರಂಭವಾಗಲಿದೆ. ಬಾನಂದೂರು ಅಭಿವೃದ್ಧಿಗೆ ರೂಪು ರೇಷೆ ಸಿದ್ಧವಾಗುತ್ತಿದೆ’ ಎಂದರು.

‘ಮೇಕೆದಾಟು ಯೋಜನೆ ವಿಚಾರದಲ್ಲಿ ಶಾಸಕ ಡಿ.ಕೆ.ಶಿವಕುಮಾರ್ ವಿನಾಕಾರಣ ಕೇಂದ್ರ ಸರ್ಕಾರವನ್ನು ದೂಷಿಸುತ್ತಿದ್ದಾರೆ. ಮೇಕೆದಾಟು ಯೋಜನೆಯ ಡಿ.ಪಿ.ಆರ್ ನ್ನು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಕೇಂದ್ರಕ್ಕೆ ಸಲ್ಲಿಸದೇ ಕೇಂದ್ರದ ವಿರುದ್ಧ ಮಾತನಾಡುವುದು ಸರಿಯಲ್ಲ’ ಎಂದು ಅವರು ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ವಿರುದ್ಧ ಹರಿಹಾಯ್ದರು.

ಈಚೆಗೆ ನಡೆದ ದಿಶಾ ಸಭೆಯಲ್ಲಿ ಸಂಸದ ಡಿ.ಕೆ.ಸುರೇಶ್ ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದು ಸರಿಯಲ್ಲ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಎಲ್ಲಾ ಅಧಿಕಾರಿಗಳು ಚುರುಕಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.

‘ಗೋವಾದಲ್ಲಿ ಕುಳಿತುಕೊಂಡು ಬಿಜೆಪಿ ಸರ್ಕಾರದ ವಿರುದ್ಧ ಟ್ಟೀಟ್ ಮಾಡುತ್ತಿರುವ ಕುಮಾರಸ್ವಾಮಿ ಜನರ ದಿಕ್ಕನ್ನು ತಪ್ಪಿಸುತ್ತಿದ್ದಾರೆ. ಉಪಚುನಾವಣೆಯ ಫಲಿತಾಂಶ ಎಚ್.ಡಿ.ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಅವರನ್ನು ದಿಗ್ಭ್ರಮೆಗೊಳಿಸಿದೆ. ರಾಮನಗರದಿಂದ ಗೆದ್ದು ಅಧಿಕಾರ ಅನುಭವಿಸಿದ ಎಚ್.ಡಿ.ಕುಮಾರಸ್ವಾಮಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲಿಲ್ಲವೇಕೆ’ ಎಂದು ಪ್ರಶ್ನಿಸಿದ ಅವರು, ‘ಅಧಿಕಾರದ ಸುಖ ಆನಂದಿಸಲು ಕುಮಾರಸ್ವಾಮಿ ಅನ್ಯ ಸ್ಥಳಗಳಿಗೆ ಹೋಗುತ್ತಾರೆ. ಅಳೋಕೆ ರಾಮನಗರಕ್ಕೆ ಬರುತ್ತಾರೆ’ ಎಂದು ಲೇವಡಿಯಾಡಿದರು.

‘ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥನಾರಾಯಣ ಮಾಗಡಿಗೆ ಮಾತ್ರ ಸೀಮಿತರಾಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಬದಲಾವಣೆಯಾಗುತ್ತಾರೊ ಇಲ್ಲವೊ ತಮಗೆ ಗೊತ್ತಿಲ್ಲ. ರಾಜ್ಯ ಮತ್ತು ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಜಿಲ್ಲೆಯ ಅಭಿವೃದ್ದಿಗೆ ಬದ್ಧವಾಗಿದೆ’ ಎಂದು ತಿಳಿಸಿದರು.

ಬಿಜೆಪಿ ಮುಖಂಡರಾದ ಎಸ್.ಆರ್. ನಾಗರಾಜ್, ಮುರುಳೀಧರ್, ಪ್ರವೀಣ್ ಗೌಡ, ಮಂಜುನಾಥ್, ವರದರಾಜುಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT