ಸೋಮವಾರ, ಜನವರಿ 24, 2022
29 °C
ಸಂಗಮದಿಂದ ಬೆಳಿಗ್ಗೆ 8ಗಂಟೆಗೆ ಆರಂಭ

ಮೇಕೆದಾಟು ಪಾದಯಾತ್ರೆ: ಬಿಜೆಪಿ ಪಿತೂರಿಗೆ ಜಗ್ಗಲ್ಲ -ಡಿ.ಕೆ. ಶಿವಕುಮಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನಕಪುರ: ‘ಮೇಕೆದಾಟು ಪಾದಯಾತ್ರೆಯನ್ನು ಸಂಗಮದಿಂದ ಶನಿವಾರ ಬೆಳಿಗ್ಗೆ 8 ಗಂಟೆಗೆ ಪೂಜೆ ನೆರವೇರಿಸಿ ಪ್ರಾರಂಭಿಸಲಾಗುವುದು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಪಾದಯಾತ್ರೆ ನಡೆಸುವ ಸಂಬಂಧ ಕನಕಪುರದಲ್ಲಿನ ತಮ್ಮ ನಿವಾಸದಲ್ಲಿ ಸಿಎಲ್‌ಪಿ ನಾಯಕ ಸಿದ್ದರಾಮಯ್ಯ, ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ, ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಸೇರಿದಂತೆ ಪಕ್ಷದ ಶಾಸಕರು, ಮಾಜಿ ಸಚಿವರು, ಮುಖಂಡರೊಂದಿಗೆ ಶನಿವಾರ ಸಂಜೆ ಸಭೆ ನಡೆಸಿದ ನಂತರ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ರಾಜ್ಯದ ಜನತೆಯ ಹಿತದೃಷ್ಟಿಯಿಂದಲೇ ಕುಡಿಯುವ ನೀರಿನ ಯೋಜನೆಯಾದ ಮೇಕೆದಾಟು ಅಣೆಕಟ್ಟೆಗಾಗಿ ಪಾದಯಾತ್ರೆ ನಡೆಸುವುದಾಗಿ ಎರಡು ತಿಂಗಳ ಹಿಂದೆಯೇ ಸಿದ್ದರಾಮಯ್ಯ ಮತ್ತು ನಾನು ತಿಳಿಸಿದ್ದೇವು. ಅದಕ್ಕೆ ರಾಜ್ಯ ವಿವಿಧ ಜಿಲ್ಲೆಗಳಿಂದ ಪಕ್ಷಾತೀತವಾಗಿ ಬೆಂಬಲ ಸೂಚಿಸಿದ್ದಾರೆ. ತಾಲ್ಲೂಕಿನ ಜನತೆ ಪಾದಯಾತ್ರೆಗೆ ಎಲ್ಲಾ ಸಿದ್ಧತೆ ನಡೆಸಿದ್ದಾರೆ’ ಎಂದರು.

ಪಾದಯಾತ್ರೆಗೆ ಅವಕಾಶ ಕೊಡಬಾರದು ಎಂದು ಬಿಜೆಪಿಯವರು ಪಿತೂರಿ ಮಾಡಿ ರಾಮನಗರ ಜಿಲ್ಲೆಯಲ್ಲಿ ಕೋವಿಡ್‌ ಇಲ್ಲದಿದ್ದರೂ ವೀಕೆಂಡ್‌ ಕರ್ಫ್ಯೂ ಜಾರಿ ಮಾಡಿದ್ದಾರೆ. ನಮಗೆ ಕೆಟ್ಟ ಹೆಸರು ಬರಬೇಕೆಂದು ಮತ್ತು ಪಾದಯಾತ್ರೆ ತಡೆಯುವ ದುರುದ್ದೇಶದಿಂದ ಈ ರೀತಿ ಮಾಡಿದ್ದಾರೆ. ನಾವು ಅದನ್ನು ಜನತೆಗೆ ತಿಳಿಸಬೇಕಲ್ಲವೇ ಎಂದು ಹೇಳಿದರು.

ನಾವು ಕೋವಿಡ್‌ ನಿಯಮಾನುಸಾರವೇ ಪಾದಯಾತ್ರೆ ಮಾಡುತ್ತೇವೆ. ಒಂದು ಲಕ್ಷ ಮಾಸ್ಕ್‌ ವ್ಯವಸ್ಥೆ ಮಾಡಿದ್ದು, ಸ್ಯಾನಿಟೈಸರ್‌ ಬಳಸಿ ಅಂತರ ಕಾಪಾಡುವುದರೊಂದಗೆ ಪಾದಯಾತ್ರೆ ಮಾಡುತ್ತೇವೆ. ಒಂದೂವರೆ ಸಾವಿರ ಜನರು ಪಾದಯಾತ್ರೆಯ ಎಲ್ಲಾ ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡುತ್ತಿದ್ದಾರೆ. ಪಾದಯಾತ್ರೆ ಯಶಸ್ವಿಯಾಗಿ ನಡೆಯಲಿದೆ ಎಂದು ತಿಳಿಸಿದರು.

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ‘ನಾವು ಮೇಕೆದಾಟು ಜಲಾಶಯ ನಿರ್ಮಾಣಕ್ಕಾಗಿ ಪಾದಯಾತ್ರೆ ನಡೆಸುವ ಅಚಲ ನಿರ್ಧಾರ ಮಾಡಿದ್ದೇವೆ. ನಮ್ಮ ನೀರಿಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ ಹೊರತು ರಾಜಕೀಯಕ್ಕಾಗಿ ಅಲ್ಲ. ರಾಜ್ಯದ ಜನರ ಹಿತಕ್ಕಾಗಿ ಮಾಡುತ್ತಿದ್ದೇವೆ’ ಎಂದು ಹೇಳಿದರು.

ಇದೊಂದು ಐತಿಹಾಸಿಕ ಪಾದಯಾತ್ರೆ. ಇದಕ್ಕೆ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಇದರಲ್ಲಿ ಪಾಲ್ಗೊಳ್ಳುವವರು ಕಡ್ಡಾಯವಾಗಿ ಕೋವಿಡ್‌ ನಿಯಮ ಪಾಲಿಸುವ ಮೂಲಕ ತಮ್ಮೊಂದಿಗೆ ಹೆಜ್ಜೆ ಹಾಕಿ ಬೆಂಬಲಿಸುವಂತೆ ಮನವಿ ಮಾಡಿದರು.

ಬಿಜೆಪಿಯವರು ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಗೊತ್ತು ಗುರಿಯಿಲ್ಲದ ರೀತಿಯಲ್ಲಿ ಮೇಕೆದಾಟು ಸಂಬಂಧ ಜಾಹೀರಾತು ನೀಡಿ ಜನರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಅದನ್ನು ಯಾರು ಕೊಟ್ಟಿದ್ದಾರೆ ಎಂಬ ಸ್ಪಷ್ಟ ಮಾಹಿತಿಯಿಲ್ಲ ಎಂದರು.

ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಅವರದೇ ಇರುವುದರಿಂದ ತ್ವರಿತವಾಗಿ ಅಣೆಕಟ್ಟೆ ನಿರ್ಮಾಣ ಮಾಡಬಹುದಿತ್ತು.  ನಮ್ಮ ಸರ್ಕಾರದಲ್ಲೇ ಯೋಜನೆಗೆ ಚಾಲನೆ ಕೊಟ್ಟಿದ್ದೇವೆ. ಇವರ ಕೊಡುಗೆ ಏನು, ತಮ್ಮಿಂದ ಆಗಿರುವ ತಪ್ಪನ್ನು ಮುಚ್ಚಿಕೊಳ್ಳಲು ಸುಳ್ಳು ಹೇಳುತ್ತಿದ್ದಾರೆ ಎಂದು ದೂರಿದರು.

2 ಗಂಟೆ ಕಾಲ ನಡೆದ ಸಭೆಯಲ್ಲಿ ಪಕ್ಷದ ಎಲ್ಲಾ ಶಾಸಕರು, ಮಾಜಿ ಸಚಿವರು, ಮುಖಂಡರು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು