ರಾಮನಗರ: ‘ಸರ್ಕಾರಿ ನೌಕರರಿಗೆ ನೀಡುವ ಎಲ್ಲಾ ಸೌಲಭ್ಯಗಳನ್ನೂ ಅನುದಾನಿತ ಶಾಲಾ-ಕಾಲೇಜುಗಳ ನೌಕರರಿಗೂ ನೀಡಬೇಕು. ಇಲ್ಲದಿದ್ದರೆ ಶಾಲಾ-ಕಾಲೇಜುಗಳನ್ನು ಬಂದ್ ಮಾಡಿ ಸರ್ಕಾರದ ವಿರುದ್ಧ ಹೋರಾಟ ಹಮ್ಮಿಕೊಳ್ಳಲಾಗುವುದು’ ಎಂದು ಅಖಿಲ ಕರ್ನಾಟಕ ಅನುದಾನಿತ ಶಾಲಾ-ಕಾಲೇಜುಗಳ ನೌಕರರ ಸಂಘದ ರಾಜ್ಯಾಧ್ಯಕ್ಷ ಜಿ. ಹನುಮಂತಪ್ಪ ಎಚ್ಚರಿಕೆ ನೀಡಿದರು.

ನಗರದ ಭಾರತೀಯ ಸಂಸ್ಕಂತಿ ವಿದ್ಯಾಪೀಠ ಶಿಕ್ಷಣ ಸಂಸ್ಥೆಯಲ್ಲಿ ಇತ್ತೀಚೆಗೆ ನಡೆದ ಅನುದಾನಿತ ಶಾಲಾ-ಕಾಲೇಜುಗಳ ನೌಕರರ ಜಿಲ್ಲಾ ಮಟ್ಟದ ಸಭೆಯಲ್ಲಿ ಮಾತನಾಡಿದ ಅವರು, ‘ಹಳೆ ಪಿಂಚಣಿ ಯೋಜನೆ ಜಾರಿಯಲ್ಲಿದ್ದಾಗ ಸರ್ಕಾರಿ ನೌಕರರಿಗೆ ದೊರಕುತ್ತಿದ್ದ ಎಲ್ಲಾ ಸೌಲಭ್ಯಗಳು ನಮಗೂ ಸಿಗುತ್ತಿದ್ದವು’ ಎಂದರು.

‘ನೂತನ ಪಿಂಚಣಿ ಯೋಜನೆ ಜಾರಿ ನಂತರ ನಮಗೆ ಪಿಂಚಣಿ ಯೋಜನೆ ಕಡಿತಗೊಳಿಸಿರುವ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ. ಇದರಿಂದಾಗಿ ಅನುದಾನಿತ ನೌಕರರಿಗೆ ಹಳೆ ಪಿಂಚಣಿ ಯೋಜನೆಯೂ ಇಲ್ಲ. ಹೊಸ ಪಿಂಚಣಿ ಯೋಜನೆಯೂ ಇಲ್ಲದಂತಾಗಿದೆ. ಸರ್ಕಾರಿ ಹಾಗೂ ಅನದಾನಿತ ನೌಕರರು ಸಮಾನ ಕೆಲಸ ಮಾಡುತ್ತಿದ್ದರೂ, ನಮನ್ನು ಪಿಂಚಣಿಯಿಂದ ಹೊರಗಿಟ್ಟು ಶೋಷಿಸಲಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಈಗಾಗಲೇ 25-30 ವರ್ಷ ಸೇವೆ ಮಾಡಿದ ನೌಕರರಿಗೆ ನಿವೃತ್ತಿ ನಂತರ ಬಿಡಿಗಾಸು ಕೊಡದೆ ಬರಿಗೈಯಲ್ಲಿ ಹೊರದೂಡಿದರೆ ಅವರ ಜೀವನ ನಿರ್ವಹಣೆ ಕಷ್ಟಕರವಾಗುತ್ತದೆ. ಅಂತಿಮ ದಿನಗಳಲ್ಲಿ ವಯೋಸಹಜ ಕಾಯಿಲೆಗಳ ಚಿಕಿತ್ಸೆಗೂ ಅನ್ಯರ ಮೇಲೆ ಅವಲಂಬಿತರಾಗುವಂತಾಗಿದೆ. ಕುಟುಂಬವೂ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಲಿದೆ. ಜೀವನ ನಿರ್ವಹಣೆಗೆ ಹಣವಿಲ್ಲದೆ ಹತಾಶೆಗೆ ಒಳಗಾಗಿ ಅದೆಷ್ಟೋ ಮಂದಿ ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ’ ಎಂದರು.

ಸಂಘದ ಕಾನೂನು ಹೋರಾಟ ಸಮಿತಿ ಅಧ್ಯಕ್ಷ ಬುಕ್ಕಾಂಬುದಿ ನಾಗರಾಜಪ್ಪ ಮಾತನಾಡಿ, ‘ಸಂವಿಧಾನ 34 ಡಿ ಪ್ರಕಾರ ಸಮಾನ ಕೆಲಸಕ್ಕೆ ಸಮಾನ ವೇತನ ಕೊಡಬೇಕು ಎಂದಿದೆ. ಹಿಂದೆ ಸೇವೆಯಲ್ಲಿದ್ದ ನೌಕರರಿಗೆ ಸರ್ಕಾರ ಎಲ್ಲಾ ಸೌಲಭ್ಯಗಳನ್ನೂ ಕೊಟ್ಟಿದೆ. ಆದರೆ, ಎನ್ಪಿಎಸ್ ಬಂದ ಬಳಿಕ ಈ ತಾರತಮ್ಯ ಶುರು ಮಾಡಿದೆ’ ಎಂದು ಹೇಳಿದರು.

ಸಂಘದ ಸಂಚಾಲಕ ಜಾಲಮಂಗಲ ನಾಗರಾಜು, ‘ಪಿಂಚಣಿ ನೀಡುವ ವಿಷಯದಲ್ಲಿ ಸರ್ಕಾರ ಸಕಾರಾತ್ಮಕವಾಗಿ ಇದೆ. ಆದರೆ, ಅಧಿಕಾರಿಗಳು ಸಾವಿರಾರು ಕೋಟಿ ಹಣ ಬೇಕಾಗುತ್ತದೆ ಎಂದು ಸಬೂಬು ಹೇಳಿ ಜನಪ್ರತಿನಿಧಿಗಳ ದಾರಿ ತಪ್ಪಿಸುತ್ತಿದ್ದಾರೆ. ರಾಜಕಾರಣಿಗಳಿಗಿಂತ ಅಧಿಕಾರಿಗಳೇ ಪಿಂಚಣಿ ಜಾರಿಗೆ ವಿರೋಧ ಮಾಡುತ್ತಿದ್ದಾರೆ. ಈ ಕುರಿತು ಶಿಕ್ಷಣ ಸಚಿವರು ಮತ್ತು ವಿಧಾನ ಪರಿಷತ್ ಸದಸ್ಯರು ದನಿ ಎತ್ತಬೇಕು ’ ಎಂದು ಆಗ್ರಹಿಸಿದರು.

ಸಂಘದ ಅರಸೇಗೌಡ, ಎಂ.ಸಿ. ಗೋವಿಂದರಾಜು, ಸಿದ್ದರಾಜು, ಸುನಿಲ್ಕುಮಾರ್, ಜಯರಾಮೇಗೌಡ, ವೇಣುಗೋಪಾಲ, ಚಂದ್ರಯ್ಯ, ಚಂದ್ರೇಗೌಡ, ರವಿಕುಮಾರ್, ರಫತ್ ಜಬೀನ್, ಕೃಷ್ಣಯ್ಯ, ಅಶೋಕ್, ಹಿತ್ತಲಮನಿ, ಮಲ್ಲಿಕಾರ್ಜುನಯ್ಯ, ರಾಘವೇಂದ್ರ ನಾಯಕ್ ಹಾಗೂ ಇತರರು ಇದ್ದರು.

ನೌಕರರ ಪಿಂಚಣಿಗೆ ಸಂಬಂಧಿಸಿದಂತೆ ಅನುದಾನಿತ ನೌಕರರ ಸಭೆ ನಡೆಸಿ ನೌಕರರ ಅಂಕಿ-ಅಂಶಗಳನ್ನು ಸಂಗ್ರಹಿಸಲಾಗುತ್ತಿದೆ. ನಿಖರ ಅಂಕಿ-ಅಂಶದ ವರದಿಯನ್ನು ಸಂಘದಿಂದ ಸರ್ಕಾರಕ್ಕೆ ಸಲ್ಲಿಸಲಾಗುವುದು
ಜಿ. ಶಿವಣ್ಣ ಜಿಲ್ಲಾಧ್ಯಕ್ಷ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ

‘ಚುನಾವಣೆಗೆ ಮುಂಚೆ ಕೊಟ್ಟ ಭರವಸೆ ಮರೆತರು’

‘ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಬೆಂಗಳೂರಿನಲ್ಲಿ ಸ್ವಾತಂತ್ರ ಉದ್ಯಾನದಲ್ಲಿ ಸಾವಿರಾರು ಅನುದಾನಿತ ನೌಕರರು 143 ದಿನ ಅವಿರತ ಹೋರಾಟ ಮಾಡಿದ್ದೆವು. ಆಗ ವಿಷ ಸೇವಿಸಿ ಒಬ್ಬ ನೌಕರ ಮೃತಪಟ್ಟಿದ್ದರು. ಮತ್ತೊಬ್ಬರು ಹೃದಯಾಘಾತದಿಂದ ಅಸುನೀಗಿದರು. ಆದರೂ ಸರ್ಕಾರದ ಯಾವುದೇ ಪ್ರತಿನಿಧಿಗಳು ಬಂದು ನಮ್ಮ ಅಹವಾಲು ಆಲಿಸಿರಲಿಲ್ಲ. ಆಗ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಹೋರಾಟದ ಸ್ಥಳಕ್ಕೆ ಬಂದು ಅಹವಾಲು ಆಲಿಸಿದ್ದರು. ಕಾಂಗ್ರೆಸ್ನ ಚುನಾವಣಾ ಪ್ರಣಾಳಿಕೆಯಲ್ಲಿ ಪಿಂಚಣಿ ಸೌಲಭ್ಯ ನೀಡುವ ಭರವಸೆ ನೀಡಿದ್ದರು. ನಂತರ ಹೋರಾಟ ಅಂತ್ಯಗೊಳಿಸಲಾಗಿತ್ತು. ಆದರೆ ಅಧಿಕಾರಕ್ಕೆ ಬಂದು ಮೂರು ವರ್ಷವಾದರೂ ಭರವಸೆ ಈಡೇರಿಸಿಲ್ಲ. ಆದ್ದರಿಂದ ಮುಂದಿನ ತಿಂಗಳು ರಾಜ್ಯಮಟ್ಟದಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸಲಾಗುವುದು’ ಎಂದು ಹನುಮಂತಪ್ಪ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.