ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾವಿಬ್ಬರೂ ಒಂದೇ ಎಂದು ಒಗ್ಗಟ್ಟಿನ ಮಂತ್ರ ಸಾರಿದ ನಿಖಿಲ್‌ –ಪ್ರಜ್ವಲ್‌

Last Updated 1 ಅಕ್ಟೋಬರ್ 2021, 2:20 IST
ಅಕ್ಷರ ಗಾತ್ರ

ರಾಮನಗರ: ಬಿಡದಿಯಲ್ಲಿ ಗುರುವಾರ ನಡೆದ ಜೆಡಿಎಸ್ ಯುವ ಕಾರ್ಯಾಗಾರದಲ್ಲಿ ಸಹೋದರರಾದ ನಿಖಿಲ್ ಕುಮಾರಸ್ವಾಮಿ ಹಾಗೂ ಪ್ರಜ್ವಲ್ ರೇವಣ್ಣ ಒಟ್ಟಾಗಿ ಕಾಣಿಸಿಕೊಂಡು ಒಗ್ಗಟ್ಟಿನ ಮಂತ್ರ ಸಾರಿದರು.

ಲವಲವಿಕೆಯಿಂದ ಪರಸ್ಪರ ಮಾತನಾಡಿದ ಈ ಇಬ್ಬರೂ, ಪಕ್ಷದ ಕಾರ್ಯಕರ್ತರಿಗೂ ಒಟ್ಟಾಗಿಯೇ ಕೆಲವು ಸಲಹೆಗಳನ್ನು ನೀಡಿದರು. ಪಕ್ಷ ಸಂಘಟನೆ ವಿಚಾರದಲ್ಲಿ ಇಬ್ಬರಿಗೂ ಭಿನ್ನಮತವಿದೆ ಎನ್ನುವ ಸಂದೇಹಗಳಿಗೆ ಉತ್ತರ ಕೊಟ್ಟರು.

ಮೊದಲಿಗೆ ಸಂಸದ ಪ್ರಜ್ವಲ್‌ ಮಾತನಾಡಿ ‘ಅಣ್ಣ ತಮ್ಮಂದಿರಾಗಿ ನಾವು ಯಾವತ್ತಿಗೂ ಒಂದೇ. ಕುಮಾರಣ್ಣರನ್ನು ಮತ್ತೆ ಮುಖ್ಯಮಂತ್ರಿ ಮಾಡಲು ನಾವಿಬ್ಬರೂ ಜೊತೆಯಾಗಿಯೇ ಕೆಲಸ ಮಾಡುತ್ತೇವೆ. ಮೈಸೂರಿನ ಚಾಮುಂಡೇಶ್ವರಿ ದರ್ಶನ ಪಡೆದು ಅಲ್ಲಿಂದಲೇ ಪಕ್ಷ ಸಂಘಟನೆ ಕೆಲಸ ಆರಂಭಿಸುತ್ತೇವೆ’ ಎಂದರು.

ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್‌ ಮಾತನಾಡಿ ‘ನಾವು ಬೇರೆ ಬೇರೆ ಎನ್ನುವವರಿಗೆ ಇವತ್ತು ಉತ್ತರ ಸಿಕ್ಕಿದೆ. ನನ್ನ ತಮ್ಮ ಪ್ರಜ್ವಲ್‌ ಮತ್ತು ನಾನು ಯಾವತ್ತೂ ಜೊತೆಯಲ್ಲಿ ಇರುತ್ತೇವೆ’ ಎಂದರು.

ಯುವಜನರಿಗೂ ಆದ್ಯತೆ: ಕಾರ್ಯಕ್ರಮದ ನಂತರ ಪತ್ರಕರ್ತರ ಜೊತೆ ಮಾತನಾಡಿದ ಪಕ್ಷದ ಶಾಸಕಾಂಗ ನಾಯಕ ಎಚ್‌.ಡಿ. ಕುಮಾರಸ್ವಾಮಿ ‘ಈ ಇಬ್ಬರೂ ಯುವ ನಾಯಕರು ಜೊತೆಗೂಡಿ ರಾಜ್ಯದಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟಿಸಲಿದ್ದಾರೆ. ಮುಂದಿನ ಚುನಾವಣೆಯಲ್ಲಿ ಶೇ 25ರಷ್ಟು ಸೀಟುಗಳನ್ನು ಯುವಜನರಿಗೆ ಮೀಸಲಿಡಬೇಕು ಎಂದು ನಿಖಿಲ್‌ ಕೋರಿದ್ದಾರೆ. ಈ ಬಗ್ಗೆ ಗಂಭೀರವಾಗಿ ಪರಿಶೀಲಿಸುತ್ತೇವೆ’ ಎಂದರು.

ಮತ್ತೆ ಜೆಡಿಎಸ್ ಸರ್ಕಾರ: ನಿಖಿಲ್ ವಿಶ್ವಾಸ
ರಾಮನಗರ:
ಮುಂದಿನ ಒಂದೂವರೆ ವರ್ಷದಲ್ಲಿ ರಾಜ್ಯದಾದ್ಯಂತ ಸಂಚರಿಸಿ ಜೆಡಿಎಸ್ ಅನ್ನು ಬಲಿಷ್ಠವಾಗಿ ಸಂಘಟನೆ ಮಾಡಲಾಗುವುದು ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

ಬಿಡದಿಯ ತೋಟದ ಮನೆಯಲ್ಲಿ ನಡೆಯುತ್ತಿರುವ ಜನತಾ ಪರ್ವ ಕಾರ್ಯಾಗಾರದಲ್ಲಿ ಗುರುವಾರ ಯುವ ಪ್ರತಿನಿಧಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. ಸಾಮಾಜಿಕ ಮಾಧ್ಯಮ ಬೆರಳ ತುದಿಯಲ್ಲಿ ಇದ್ದು ಅದನ್ನು ಬಳಸಿಕೊಳ್ಳೋಣ. ನಾವು ಎಲ್ಲಿ ಎಡವಿದ್ದೇವೆ ಅನ್ನೋದನ್ನು ನೋಡಿಕೊಂಡು ಪಕ್ಷದ ಕೆಲಸ ಮಾಡೋಣ ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.

ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡಿದರು. ಕೊಟ್ಟ ಮಾತನ್ನು ಉಳಿಸಿಕೊಂಡರು. ಆತ್ಮಸಾಕ್ಷಿಗೆ ದ್ರೋಹ ಮಾಡಿಕೊಳ್ಳಲ್ಲ. ನಾವೆಲ್ಲರೂ ಅವರ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡೋಣ. ಪ್ರತಿ ತಾಲೂಕಿನಲ್ಲಿ ಸದಸ್ಯತ್ವ ಆರಂಭಿಸೋಣ ಎಂದು ಸಲಹೆ ನೀಡಿದರು. ಟಿಕೆಟ್ ಹಂಚಿಕೆಯಲ್ಲಿ ಮಹಿಳೆಯರಿಗೆ 30–35 ಸ್ಥಾನ ಘೋಷಿಸಿದಂತೆ ಯುವಜನರಿಗೂ ಶೇ 25ರಷ್ಟು ಟಿಕೆಟ್ ನೀಡಬೇಕು ಎಂದು ಕೋರಿದರು.

ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಮಾತನಾಡಿ ‘ನಮ್ಮ ಪಕ್ಷದಿಂದ ರಾಜಕೀಯ ಬದುಕು ಆರಂಭಿಸಿ ಬಳಿಕ ಅನ್ಯ ಪಕ್ಷಗಳಿಗೆ ಜಿಗಿದು ಕೊನೆಗೆ ಮಾತೃ ಪಕ್ಷದ ವಿರುದ್ಧವೇ ಮಾತನಾಡುವುದು ತೀರಾ ಹಾಸ್ಯಾಸ್ಪದ’ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು. ‘ಕಾಂಗ್ರೆಸ್ ಸರ್ಕಾರದಲ್ಲಿ ರೈತರ ಸ್ಥಿತಿ ಹೇಗಿತ್ತು ಎನ್ನುವುದು ಎಲ್ಲರಿಗೂ ಗೊತ್ತಿದೆ. ಆ ಬಗ್ಗೆ ಅವರು ಮಾತನಾಡಲಿ’ ಎಂದರು.

ಹೈಕಮಾಂಡ್ ಇಲ್ಲ: ಜೆಡಿಎಸ್‌ ಸ್ಥಳೀಯವಾಗಿ ಬಲಿಷ್ಟವಾಗಿದೆ. ಇನ್ನಷ್ಟು ಬಲಗೊಳಿಸಲು ಕೆಲಸ ಮಾಡಬೇಕಿದೆ. ಬೇರೆ ಪಕ್ಷದ ವರಿಷ್ಠರನ್ನು ಭೇಟಿ ಮಾಡಲು ದೆಹಲಿಗೆ ಹೋಗಬೇಕು. ಆದರೆ ನಮ್ಮ ಪಕ್ಷದಲ್ಲಿ ವರಿಷ್ಠರನ್ನು ಭೇಟಿ ಮಾಡಬೇಕು ಅಂದರೆ ಬೆಂಗಳೂರು ಸಾಕು ಎಂದರು.

ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರದಲ್ಲಿ ಮುಳ್ಳಿನ‌ ಕುರ್ಚಿ ಮೇಲೆ ಕೂತಿದ್ದರು. ಆದರೆ ದುರ್ಬಲರ ಪರ, ಬಡವರ ಪರ ಕೆಲಸ ಮಾಡುತ್ತಿದ್ದ ಅವರ ಬದ್ಧತೆಯನ್ನು ಕಾಂಗ್ರೆಸ್ ಸಹಿಸಲಿಲ್ಲ ಎಂದು ಕಿಡಿಕಾರಿದರು.

ಕುಮಾರಸ್ವಾಮಿ ಅತ್ಯುತ್ತಮ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಪಂಚರತ್ನ ಉತ್ತಮ ಯೋಜನೆ. ಬಡವರಿಗಾಗಿ, ರಾಜ್ಯದ ಜನತೆಗಾಗಿ ಈ ಯೋಜನೆ ಮಾಡಿದ್ದಾರೆ ಎಂದು ಹೇಳಿದರು. ಪಕ್ಷದ 500ಕ್ಕೂ ಹೆಚ್ಚು ಯುವ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

*
ಯಾರೇ ಪಕ್ಷ ತೊರೆದರೂ ಹೊಸ ನಾಯಕರನ್ನು ಸೃಷ್ಟಿ ಮಾಡುವ ಶಕ್ತಿ ದೇವೇಗೌಡರಿಗೆ, ಕುಮಾರಸ್ವಾಮಿ ಅವರಿಗಿದೆ. ಹೀಗಾಗಿ ನಮ್ಮ ನಿಷ್ಠೆ ಪಕ್ಷದ ಮೇಲೆ ಇರಬೇಕು.
-ಪ್ರಜ್ವಲ್ ರೇವಣ್ಣ, ಹಾಸನ ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT