ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಗಡಿ ಹೊಂಬಾಳಮ್ಮನ ಕೆರೆ ಕಲುಷಿತ, ಜಲಚರ, ಪಕ್ಷಿ ಸಂಕುಲಕ್ಕೆ ಆಪತ್ತು

Last Updated 30 ಏಪ್ರಿಲ್ 2021, 5:44 IST
ಅಕ್ಷರ ಗಾತ್ರ

ಮಾಗಡಿ: ಪಟ್ಟಣದ ಕೋಟೆ ಕಂದಕಕ್ಕೆ ನೀರು ತುಂಬಿಸುತ್ತಿದ್ದ ಹೊಂಬಾಳಮ್ಮನ ಕೆರೆಯಲ್ಲಿ ಜೊಂಡು ಹುಲ್ಲು ಸೇರಿದಂತೆ ಕಳೆಸಸ್ಯಗಳು ಬೆಳೆದಿದ್ದು ರೋಗ ಹರಡುವ ತಾಣವಾಗಿದೆ. ಚರಂಡಿಯ ಕಲುಷಿತ ನೀರು ತುಂಬಿರುವುದರಿಂದ ಜಲಚರಗಳು, ಪಕ್ಷಿಸಂಕುಲ ಆತಂಕಕ್ಕೆ ಸಿಲುಕಿದೆ.

ಕೋಟೆಯ ದಕ್ಷಿಣ ದಿಕ್ಕಿನಲ್ಲಿರುವ ಈ ಕೆರೆಯ ವಿಸ್ತೀರ್ಣ 98 ಎಕರೆ. ಸುಮಾರು 123 ಎಕರೆ ಅಚ್ಚುಕಟ್ಟು ಪ್ರದೇಶ ಹೊಂದಿದೆ. ಈ ಹಿಂದೆ ರೈತರು ವೀಳ್ಯದೆಲೆ, ಅಡಿಕೆ, ತೆಂಗು, ಸೊಪ್ಪು, ತರಕಾರಿ, ಹೂವು ಬೆಳೆದು ಬದುಕು ಕಂಡುಕೊಂಡಿದ್ದರು. ಕೆರೆಯ ಸುತ್ತಲೂ ಇದ್ದ ಹಚ್ಚ ಹಸಿರು ನೋಡುಗರಿಗೆ ಸಂತಸ ತರುತ್ತಿತ್ತು.

ಪಟ್ಟಣ ಬೆಳೆದಂತೆಲ್ಲಾ ಕೆರೆಯ ಅಂಗಳವೂ ಕಿರಿದಾಯಿತು. ಅಂಗಳ ಒತ್ತುವರಿಯಾಗಿದೆ. ಇದರ ತೆರವಿಗೆ ಅಧಿಕಾರಿಗಳು ಮುಂದಾಗಿಲ್ಲ. ಕಲ್ಯಾಬಾಗಿಲು, ಹೊಸ ಮಸೀದಿ ಮೊಹಲ್ಲಾದಿಂದ ಹರಿದು ಬರುವ ಚರಂಡಿ ನೀರು ಕೆರೆಯ ಒಡಲಿಗೆ ಸೇರಿ ಮಲಿನವಾಗಿದೆ. ನೀರು ಮುಟ್ಟಿದರೆ ತುರಿಕೆಯಾಗುತ್ತದೆ. ಕೈ, ಕಾಲಿನ ಮೇಲೆ ಬೊಬ್ಬೆಗಳು ಏಳುತ್ತವೆ. ಈ ಕೆರೆಯಲ್ಲಿಯೇ ಮೀನು ಸಾಕಲಾಗುತ್ತಿದೆ.

ಹಿನ್ನೆಲೆ: ಪಟ್ಟಣದಲ್ಲಿ ಮಣ್ಣಿನ ಕೋಟೆ ಕಟ್ಟಿಸಿದ ಪಾಳೇಗಾರ ತಳಾರಿ ಗಂಗಪ್ಪನಾಯಕ, ಕೋಟೆಯ ಕಂದಕಕ್ಕೆ ನೀರು ತುಂಬಿಸಲು ಈ ಕೆರೆ ಕಟ್ಟಿಸಿದರು. ರೈತಾಪಿ ವರ್ಗದವರಿಗೆ ಕೃಷಿಗೆ ಅನುಕೂಲ ಮಾಡಿಕೊಟ್ಟಿದ್ದ. ಹೊಯ್ಸಳರ ದೊರೆ ಮೂರನೇ ವೀರಬಲ್ಲಾಳನ ಕಾಲದಲ್ಲಿ ನಿರ್ಮಾಣವಾಗಿದ್ದ ಚೆಲುವರಾಯ ಪಟ್ಣ ಇಂದು ಹೊಂಬಾಳಮ್ಮನ ಪೇಟೆಯಾಗಿದೆ. ಇಂದಿಗೂ ಚೆಲುವರಾಯ ಸ್ವಾಮಿ ದೇಗುಲವಿದೆ.

ಚೆಲುವರಾಯ ಪಟ್ಣದಲ್ಲಿ ಪ್ಲೇಗ್‌ ರೋಗ ಕಾಣಿಸಿಕೊಂಡು ಊರಿನ ಜನರು ವಾಂತಿ, ಭೇದಿಗೆ ತುತ್ತಾದರಂತೆ. ಆಗ ಹೊಂಬಾಳಮ್ಮ ಎಂಬಾಕೆ ತನ್ನ ಮೊಮ್ಮಕ್ಕಳೊಂದಿಗೆ ಚೆಲುವರಾಯ ಪಟ್ಣ ತೊರೆದು ಬೆಟ್ಟದ ಆಚೆ ಗುಡಿಸಲು ಕಟ್ಟಿಕೊಂಡು ವಾಸಿಸಿದಳು. ಆಕೆಯ ಹೆಸರನ್ನೇ ಗ್ರಾಮಕ್ಕೆ ಇಡಲಾಗಿದೆ ಎಂದು ಚರಿತ್ರೆಯ ದಾಖಲೆಗಳು ಹೇಳುತ್ತವೆ.

ಕಲುಷಿತಗೊಂಡಿದ್ದು ಹೇಗೆ?: 1987ರಿಂದಲೂ ಬಾಬು ಜಗಜೀವನರಾಮ್‌ ನಗರ, ಬಿ.ಕೆ. ರಸ್ತೆ, ಗಾಣಿಗರ ಬೀದಿ, ಸುಣ್ಣಕಲ್ಲು ಬೀದಿ, ಹೊಸಮಸೀದಿ ಸುತ್ತಮುತ್ತಲಿನ ಪ್ರದೇಶಗಳ ಚರಂಡಿ ನೀರನ್ನು ಕೆರೆಗೆ ಹರಿಸಿದ್ದರಿಂದ ಮಲಿನವಾಯಿತು.

ಮಾಗಡಿ ಯೋಜನಾ ಪ್ರಾಧಿಕಾರ ರಚನೆಯಾದ ಮೇಲೆ ₹ 1.50 ಕೋಟಿ ವೆಚ್ಚದಲ್ಲಿ ಕೆರೆಯ ಅಭಿವೃದ್ಧಿಗೆ ನೀಲನಕ್ಷೆ ತಯಾರಿಸಿ ಚಾಲನೆ ನೀಡಲಾಯಿತು. ಕೆರೆಯ ಸುತ್ತಲೂ ತಂತಿಬೇಲಿ ನಿರ್ಮಿಸಲಾಯಿತು. ಆದರೆ, ಕಲುಷಿತಗೊಂಡಿರುವ ಕೆರೆಯ ಶುದ್ಧೀಕರಣಕ್ಕೆ ಯಾರೊಬ್ಬರು ಮುಂದಾಗಲಿಲ್ಲ. ಕೋಟೆ ಮತ್ತು ಕೆರೆಗೆ ಸೇರಿದ್ದ ಭೂಮಿ ಒತ್ತುವರಿಯಾಗಿದೆ. ಇದರ ತೆರವಿಗೂ ಅಧಿಕಾರಶಾಹಿ ಮತ್ತು ಜನಪ್ರತಿನಿಧಿಗಳು ಮುಂದಾಗಿಲ್ಲ ಎನ್ನುವುದು ಜನರ ದೂರು.

‘ಚರಂಡಿಯ ಕಲುಷಿತ ನೀರು ಕೆರೆಗೆ ಹರಿಯದಂತೆ ಪುರಸಭೆ ಅಧಿಕಾರಿಗಳು ಗಮಹ ಹರಿಸಬೇಕಿದೆ. ಕೆರೆಯಲ್ಲಿನ ಮಲಿನ ನೀರನ್ನು ಹೊರತೆಗೆದು, ಜೊಂಡು ಹುಲ್ಲು ಮತ್ತು ಹೂಳು ತೆಗೆಸಿ ಶುದ್ಧೀಕರಿಸಬೇಕು. ನಮ್ಮ ಬಾಲ್ಯದಲ್ಲಿ ಮನೆಗಳಿಗೆ ಕುಡಿಯಲು ಕೆರೆಯ ನೀರನ್ನೇ ಬಳಸುತ್ತಿದ್ದೆವು. ಗಂಗಾ ಪೂಜೆ ಮಾಡಿ ಕೆರೆಯನ್ನು ಪವಿತ್ರವಾಗಿಟ್ಟುಕೊಂಡಿದ್ದೆವು. ಕೆರೆ ಉಳಿಸಬೇಕಿದೆ’ ಎನ್ನುತ್ತಾರೆ ಹೊಂಬಾಳಮ್ಮನಪೇಟೆಯ ಗೌಡ ರಂಗಪ್ಪ.

ನೀಲನಕ್ಷೆ: ‘ಹೊಂಬಾಳಮ್ಮನ ಕೆರೆಯನ್ನು ಬೆಂಗಳೂರಿನ ಲಯನ್ಸ್ ಕ್ಲಬ್ ವತಿಯಿಂದ ಅಭಿವೃದ್ಧಿ ಪಡಿಸಲಾಗುವುದು. ವಾಯವಿಹಾರಕ್ಕೆ ಅನುಕೂಲ ಮಾಡಿಕೊಡುವುದರ ಜೊತೆಗೆ ಕೆರೆಯ ಮಧ್ಯದಲ್ಲಿ ಅಶ್ವಾರೂಢ ಕೆಂಪೇಗೌಡರ ಪುತ್ಥಳಿ ಸ್ಥಾಪಿಸಲು ನೀಲನಕ್ಷೆ ತಯಾರಿಸಿದ್ದೇವೆ’ ಎಂದು ಶಾಸಕ ಎ. ಮಂಜುನಾಥ್‌ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT