ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಕಿ ವೇತನಕ್ಕಾಗಿ ಮೈ ಮೇಲೆ ಮಲ ಸುರಿದುಕೊಂಡ ಪೌರ ಕಾರ್ಮಿಕರು

ಡಿಸಿಎಂ ತವರಲ್ಲಿ ಘಟನೆ: ಪ್ರತಿಭಟನೆ ಬೆನ್ನಲ್ಲೇ 14 ತಿಂಗಳ ಬಾಕಿ ವೇತನ ಪಾವತಿ
Published 22 ಆಗಸ್ಟ್ 2023, 13:33 IST
Last Updated 22 ಆಗಸ್ಟ್ 2023, 13:33 IST
ಅಕ್ಷರ ಗಾತ್ರ

ಕನಕಪುರ: ಹದಿನಾಲ್ಕು ತಿಂಗಳ ಬಾಕಿ ವೇತನಕ್ಕೆ ಆಗ್ರಹಿಸಿ ಪೌರ ಕಾರ್ಮಿಕರಿಬ್ಬರು ಮೈ ಮೇಲೆ ಮಲ ಸುರಿದುಕೊಂಡು ಪ್ರತಿಭಟಿಸಿದ್ದಾರೆ. ತಾಲ್ಲೂಕಿನ ಕಸಬಾ ಹೋಬಳಿಯ ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಮಂಗಳವಾರ ಮಧ್ಯಾಹ್ನ ಘಟನೆ ನಡೆದಿದ್ದು, ಇದಾದ ಒಂದೇ ತಾಸಿನಲ್ಲಿ ಇಬ್ಬರ ವೇತನವನ್ನು ಪಾವತಿಸಲಾಗಿದೆ.

ಪಂಚಾಯಿತಿಯಲ್ಲಿ ಸ್ವಚ್ಛಗಾರರಾಗಿ ಕೆಲಸ ಮಾಡುತ್ತಿದ್ದ ಎನ್. ಸುರೇಶ್ ಮತ್ತು ವಿ. ರಂಗಯ್ಯ ಪ್ರತಿಭಟನೆ ನಡೆಸಿದ ಪೌರ ಕಾರ್ಮಿಕರು. 2020ರಿಂದ ಕೆಲಸ ಮಾಡುತ್ತಿದ್ದ ಇಬ್ಬರಿಗೂ ಒಂದೂವರೆ ವರ್ಷದ ಹಿಂದಿನ ತಲಾ ₹1.60 ಲಕ್ಷ ವೇತನ ಬಾಕಿ ಇತ್ತು.

ವೇತನಕ್ಕಾಗಿ ಪಂಚಾಯಿತಿ ಅಧಿಕಾರಿಗಳನ್ನು ಕೇಳಿ ಬೇಸತ್ತ ಕಾರ್ಮಿಕರು, ಮಧ್ಯಾಹ್ನ ಬಿಂದಿಗೆಯಲ್ಲಿ ಮಲ ತೆಗೆದುಕೊಂಡು ಬಂದು ಪಂಚಾಯಿತಿ ಎದುರು ಮೈ ಮೇಲೆ ಸುರಿದುಕೊಂಡಿದ್ದಾರೆ. ಬಳಿಕ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಅಧ್ಯಕ್ಷರು ಇಬ್ಬರ ವೇತನವನ್ನು ಲೆಕ್ಕಾಚಾರ ಮಾಡಿ, ಚೆಕ್ ಮತ್ತು ನಗದು ಮೂಲಕ ಪಾವತಿಸಿದ್ದಾರೆ.

‘ಬಾಕಿ ವೇತನ ಕುರಿತು ನನಗೂ ತಿಳಿಸದ ಪೌರ ಕಾರ್ಮಿಕರು, ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ ಕಾರ್ಯಕರ್ತರೊಂದಿಗೆ ಪಂಚಾಯಿತಿಗೆ ಬಂದು ಮಲ ಸುರಿದುಕೊಂಡು ಪ್ರತಿಭಟಿಸಿದ್ದಾರೆ. ನಂತರ, ಇಬ್ಬರಿಗೆ ತಲಾ ₹1,10,400 ಮೊತ್ತದ ಚೆಕ್ ಮತ್ತು ₹50 ಸಾವಿರ ಕೊಟ್ಟು ಬಾಕಿ ಸಂಬಳ ಪಾವತಿಸಿದ್ದೇವೆ’ ಎಂದು ಕಲ್ಲಹಳ್ಲಿ ಪಿಡಿಒ ಶ್ರೀನಿವಾಸ್ ‘ಪ್ರಜಾವಾಣಿ’ಗೆ ತಿಳಿಸಿದರು.

ಬಾಕಿ ವೇತನಕ್ಕಾಗಿ ಮೈ ಮೇಲೆ ಮಲ ಸುರಿದುಕೊಂಡ ಪೌರ ಕಾರ್ಮಿಕರು

‘ಇಬ್ಬರೂ ಕಾರ್ಮಿಕರಿಗೆ 2021ರಿಂದ 14 ತಿಂಗಳ ಸಂಬಳವನ್ನು ಹಿಂದಿನ ಪಿಡಿಒಗಳು ಬಾಕಿ ಉಳಿಸಿದ್ದರು. ನನ್ನ ಅವಧಿಯಲ್ಲಿ ಯಾವುದೇ ಬಾಕಿ ಇರಲಿಲ್ಲ. ಕಾರ್ಮಿಕರಿಗೆ ತಲಾ ₹15 ಸಾವಿರ ಸಂಬಳ ನೀಡಲಾಗುತ್ತಿತ್ತು. ಎರಡು ತಿಂಗಳಿಂದ ಕೆಲಸಕ್ಕೆ ಹಾಜರಾಗದ ಕಾರ್ಮಿಕರು, ಕನಕಪುರದಲ್ಲಿ ಕೆಲಸ ಮಾಡುತ್ತಿರುವ ಮಾಹಿತಿ ಬಂದಿತ್ತು’ ಎಂದು ಹೇಳಿದರು.

‘ಬಾಕಿ ವೇತನಕ್ಕಾಗಿ ಕಾರ್ಮಿಕರು ಮೈ ಮೇಲೆ ಸುರಿದುಕೊಳ್ಳಬಾರದಿತ್ತು. ವಿಷಯವನ್ನು ನನ್ನ ಗಮನಕ್ಕೆ ತಂದಿದ್ದರೆ, ಕೂಡಲೇ ಪಾವತಿಸಲು ಕ್ರಮ ಕೈಗೊಳ್ಳುತ್ತಿದ್ದೆ’ ಎಂದು ಕನಕಪುರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಭೈರಪ್ಪ ತಿಳಿಸಿದರು.

ಕಾರ್ಮಿಕರು ಮಲ ಸುರಿದುಕೊಳ್ಳುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿದೆ.

ಘಟನೆ ನಡೆದ ತಕ್ಷಣ ಪೌರ ಕಾರ್ಮಿಕರಿಗೆ ವೇತನ ಪಾವತಿಸಲಾಗಿದೆ. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ, ಸಕಾಲದಲ್ಲಿ ವೇತನ ಪಾವತಿಸಲು ಗ್ರಾ.ಪಂ.ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
– ದಿಗ್ವಿಜಯ್ ಬೋಡ್ಕೆ, ಸಿಇಒ, ಜಿ.ಪಂ. ರಾಮನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT