ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಜಾನ್: ಕಳೆಗಟ್ಟಿದ ವ್ಯಾಪಾರ, ಈದ್‌ ಉಲ್‌ ಫಿತ್ರ್‌ ಆಚರಣೆಗೆ ಸಿದ್ಧತೆ

Last Updated 1 ಮೇ 2022, 6:01 IST
ಅಕ್ಷರ ಗಾತ್ರ

ರಾಮನಗರ: ಮುಸ್ಲಿಮರ ಪವಿತ್ರ ರಂಜಾನ್‌ ಉಪವಾಸದ ಮುಕ್ತಾಯ ಹಾಗೂ ಈದ್ ಉಲ್‌ ಫಿತ್ರ್‌ ಆಚರಣೆಗೆ ದಿನಗಣನೆ ಆರಂಭವಾಗಿದ್ದು, ನಗರದಲ್ಲಿ ಅದಕ್ಕಾಗಿ ಸಿದ್ಧತೆಗಳು ನಡೆದಿವೆ.

ಬೆಂಗಳೂರು–ಮೈಸೂರು ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸುತ್ತ ಬಂದಿದ್ದಾರೆ. ಆದರೆ, ಮೈದಾನ ಕಿರಿದಾದ ಕಾರಣ ಮಿನಿ ವಿಧಾನಸೌಧಕ್ಕೆ ಹೊಂದಿಕೊಂಡಂತೆ ಇರುವ ಖಾಲಿ ಜಾಗದಲ್ಲೂ ಅಂದು ಪ್ರಾರ್ಥನೆಗೆ ಜನರು ಕೂರುವ ಕಾರಣ ಆ ಜಾಗವನ್ನು ಸ್ವಚ್ಛಗೊಳಿಸುವ ಕಾರ್ಯ ಶನಿವಾರ ನಡೆದಿತ್ತು.

ರಂಜಾನ್‌ ಮಾಸವು ಮುಸ್ಲಿಮರಿಗೆ ಅತ್ಯಂತ ಪವಿತ್ರವಾದ ಆಚರಣೆಯ ಮಾಸವಾಗಿದೆ. ದೇಹ ಮತ್ತು ಮನಸ್ಸಿನ ಶುದ್ಧಿಗಾಗಿ ಇಡೀ ತಿಂಗಳು ಮುಸ್ಲಿಮರು ಉಪವಾಸ ಕೈಗೊಳ್ಳುತ್ತಾರೆ. ಬೆಳಿಗ್ಗೆ ಸೂರ್ಯೋದಯಕ್ಕೂ ಮುನ್ನವೇ ಆಹಾರ ಸೇವಿಸಿ ನಂತರ ಸೂರ್ಯೋದಯದಿಂದ ಸೂರ್ಯಾಸ್ತದವರೆಗೂ ಕಠಿಣ ಉಪವಾಸ ಕೈಗೊಳ್ಳುತ್ತಾರೆ. ಮಕ್ಕಳು, ವೃದ್ಧರು, ಗರ್ಭಿಣಿಯರು ಸೇರಿದಂತೆ ಕೆಲವರಿಗಷ್ಟೇ ಈ ಉಪವಾಸದಿಂದ ವಿನಾಯಿತಿ ಇದೆ.

ರಾಮನಗರದಲ್ಲೂ ಸಾಕಷ್ಟು ಸಂಖ್ಯೆಯಲ್ಲಿ ಮುಸ್ಲಿಮರು ವಾಸವಿದ್ದು, ಉಪವಾಸ ಕೈಗೊಂಡಿದ್ದಾರೆ. ಉಪವಾಸದ ಮಾಸದಲ್ಲಿ ಸಿಹಿ–ಖಾರ ಖಾದ್ಯಗಳು, ಹಣ್ಣುಗಳ ಮಾರಾಟ ತುಸು ಹೆಚ್ಚಾಗಿಯೇ ನಡೆಯುತ್ತಿದೆ. ಜೊತೆಗೆ, ಖರ್ಜೂರ ಮೊದಲಾದ ಒಣ ಹಣ್ಣುಗಳ ಮಾರಾಟವೂ ಜೋರಾಗಿದೆ.

ನಗರದ ರೈಲು ನಿಲ್ದಾಣ ಸುತ್ತಮುತ್ತ ಹಾಗೂ ಸ್ಟೇಷನ್‌ ರಸ್ತೆಯಲ್ಲಿ ಸಮೋಸ ಸೇರಿದಂತೆ ನಾನಾ ಬಗೆಯ ಖಾದ್ಯ ಗಳನ್ನು ರಂಜಾನ್‌ಗೆಂದೇ ಸಿದ್ಧಪಡಿಸಲಾಗುತ್ತಿದೆ. ದಿನವಿಡೀ ಉಪವಾಸ ಇರುವ ಮುಸ್ಲಿಮರು ಸಂಜೆ ಉಪವಾಸ ವ್ರತ ಮುಕ್ತಾಯದ ಬಳಿಕ ಇಲ್ಲಿ ಸಮೋಸ, ಕಲ್ಲಂಗಡಿ–ಖರ್ಬೂಜ, ಖರ್ಜೂರ ಮೊದಲಾದವುಗಳನ್ನು ಖರೀದಿಸಿ ಹೋಗುತ್ತಿದ್ದಾರೆ. ಇದಲ್ಲದೇ ಅಂಗಡಿಗಳಲ್ಲಿ ಹೊಸ ಬಟ್ಟೆ, ಮಹಿಳೆಯರಿಂದ ಬಳೆ ಮೊದಲಾದ ಅಲಂಕಾರಿಕ ಸಾಮಗ್ರಿಗಳ ಖರೀದಿಗೂ ಜೋರಾಗಿದೆ. ‘ರಂಜಾನ್‌ ಅವಧಿಯಲ್ಲಿ ಸಮೋಸಕ್ಕೆ ವಿಶಿಷ್ಟ ಸ್ಥಾನ ಇದೆ. ಎಲ್ಲೆಡೆ ಸಾಮಾನ್ಯವಾಗಿ ಈ ತಿನಿಸು ಇದ್ದೇ ಇರುತ್ತದೆ. ಇದರೊಟ್ಟಿಗೆ ಕೆಲವು ವಿಶೇಷವಾದ ಪಾನೀಯಗಳನ್ನೂ ತಯಾರಿಸುತ್ತೇವೆ. ಸಂಜೆ ಉಪವಾಸ ಕೈಬಿಟ್ಟ ಬಳಿಕ ವ್ಯಾಪಾರ ಆರಂಭ ಗೊಂಡು ರಾತ್ರಿವರೆಗೂ ನಡೆಯುತ್ತದೆ’ ಎನ್ನುತ್ತಾರೆ ಸ್ಟೇಷನ್‌ ರಸ್ತೆಯ ವ್ಯಾಪಾರಿ ಮೊಹಮ್ಮದ್.

ಮಸೀದಿಗಳಲ್ಲಿ ಈದ್ ಉಲ್‌ ಫಿತ್ರ್‌ ಆಚರಣೆಗೆ ದೀಪಾಲಂಕಾರ ಸೇರಿದಂತೆ ಅಗತ್ಯ ಸಿದ್ಧತಾ ಕಾರ್ಯಕ್ರಮಗಳು ಇನ್ನಷ್ಟೇ ಆರಂಭ ಆಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT