ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂವಿಧಾನ ಕಾಪಾಡುವವರಿಗೆ ಮತ ನೀಡಿ

ಸುದ್ದಿಗೋಷ್ಠಿಯಲ್ಲಿ ಶಿಕ್ಷಣ ತಜ್ಞ ವಿ.ಪಿ. ನಿರಂಜನಾರಾಧ್ಯ ಸಲಹೆ
Published 19 ಏಪ್ರಿಲ್ 2024, 7:31 IST
Last Updated 19 ಏಪ್ರಿಲ್ 2024, 7:31 IST
ಅಕ್ಷರ ಗಾತ್ರ

ರಾಮನಗರ: ‘ಸ್ವಾತಂತ್ರ್ಯ ಹೋರಾಟ, ತ್ಯಾಗ, ಬಲಿದಾನಗಳ ಫಲವಾದ ಸಂವಿಧಾನವನ್ನು ಉಳಿಸುವ ನಿಟ್ಟಿನಲ್ಲಿ ಈ ಸಲದ ಲೋಕಸಭಾ ಚುನಾವಣೆಯು ನಿರ್ಣಾಯಕವಾಗಿದೆ. ಪ್ರಜಾಪ್ರಭುತ್ವದ ಪ್ರಭುಗಳಾದ ಮತದಾರರು ಸಂವಿಧಾನದ ಆಶಯಗಳನ್ನು ಕಾಪಾಡುವವರಿಗೆ ಮತ ಚಲಾಯಿಸಬೇಕು. ಇಲ್ಲದಿದ್ದರೆ, ಸಂವಿಧಾನಕ್ಕೆ ದ್ರೋಹ ಮಾಡಿದಂತಾಗುತ್ತದೆ’ ಎಂದು ಶಿಕ್ಷಣ ತಜ್ಞ ವಿ.ಪಿ. ನಿರಂಜನಾರಾಧ್ಯ ಹೇಳಿದರು.

‘ಸಂವಿಧಾನದ ಮೂಲ ಆಶಯಗಳಿಗೆ ಧಕ್ಕೆ ಬಂದಿದ್ದು, ಹುಸಿ ರಾಷ್ಟ್ರೀಯತೆ ಮತ್ತು ಮತಾಂಧತೆ ನೆಲೆಯೂರುತ್ತಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಕಡ್ಡಾಯ ಶಿಕ್ಷಣದ ಹಕ್ಕನ್ನು ಗೌಣಗೊಳಿಸಲಾಗಿದೆ. ಶಿಕ್ಷಣ ನೀತಿ ಹೆಸರಿನಲ್ಲಿ ಕೆಸರೀಕರಣ, ಕೋಮುವಾದೀಕರಣ, ಕೇಂದ್ರೀಕರಣ, ಖಾಸಗೀಕರಣ ಹಾಗೂ ಕಾರ್ಪೊರೇಟಿಕರಣ ನಿರಂತರವಾಗಿ ನಡೆಯುತ್ತಿವೆ’ ಎಂದು ನಗರದಲ್ಲಿ ಸಂವಿಧಾನ ರಕ್ಷಣಾ ವೇದಿಕೆ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

‘ಶೇ 40ರಷ್ಟು ಯುವಜನರಿರುವ ದೇಶದಲ್ಲಿ ನಿರುದ್ಯೋಗ ಸಮಸ್ಯೆ ದೊಡ್ಡಮಟ್ಟದಲ್ಲಿ ಕಾಡುತ್ತಿದೆ. ಖಾಸಗೀಕರಣದಿಂದಾಗಿ ಸಾರ್ವಜನಿಕ ಉದ್ಯಮಗಳ ಸಂಖ್ಯೆ ತೀವ್ರ ಕುಸಿತವಾಗುತ್ತಿದೆ. ಒಕ್ಕೂಟ ವ್ಯವಸ್ಥೆ ಹಾಗೂ ನ್ಯಾಯಾಂಗದ ಸಾರ್ವಭೌಮತೆಗೆ ಧಕ್ಕೆ ತರುವಂತಹ ಘಟನೆಗಳು ನಡೆಯುತ್ತಲೇ ಇರುವುದು ಸಂವಿಧಾನಕ್ಕೆ ಬಂದೊದಗಿರುವ ಅಪಾಯದ ಮುನ್ಸೂಚನೆಯಾಗಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಆಖಿಲ ಭಾರತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಬಸವರಾಜ ಗುರಿಕಾರ ಮಾತನಾಡಿ, ‘ಸತ್ಯ ಮತ್ತು ಸುಳ್ಳಿನ ನಡುವೆ ಈ ಸಲದ ಚುನಾವಣೆ ನಡೆಯುತ್ತಿದೆ. ಬಿಜೆಪಿ ಪ್ರಣಾಳಿಕೆಯಲ್ಲಿ ಶಿಕ್ಷಣದ ಗ್ಯಾರಂಟಿ ಇಲ್ಲವಾಗಿದೆ. ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಕಡ್ಡಾಯ ಶಿಕ್ಷಣದ ಹಕ್ಕನ್ನು ಬಿಜೆಪಿ ಸರ್ಕಾರ ದುರ್ಬಲಗೊಳಿಸಿದೆ’ ಎಂದು ಹೇಳಿದರು.

‘ನೂತನ ಶಿಕ್ಷಣ ನೀತಿಯು ಶಿಕ್ಷಣ ವ್ಯವಸ್ಥೆಯನ್ನು ಗೊಂದಲಕ್ಕೆ ದೂಡಿದೆ. ಈಗಾಗಲೇ ಆಗಿರುವ ಅನಾಹುತಗಳನ್ನು ಸರಿಪಡಿಸಿ, ದೇಶವನ್ನು ಸರಿದಾರಿಗೆ ತರಬೇಕಾದರೆ, ಮತದಾರರು ಜಾತ್ಯತೀತ ತತ್ವಕ್ಕೆ ಬದ್ಧವಾಗಿರುವ ಮತ್ತು ಸಂವಿಧಾನದ ಪರವಾಗಿರುವ ಇಂಡಿಯಾ ಅಭ್ಯರ್ಥಿಗಳಿಗೆ ಮತ ಹಾಕಿ ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

ಜೀತವಿಮುಕ್ತಿ ಸಂಘಟನೆಯ ಗೋವಿಂದರಾಜ್ ಹಾಗೂ ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯ ಅಧ್ಯಕ್ಷ ಉಮೇಶ್ ಜಿ. ಗಂಗವಾಡಿ ಇದ್ದರು.

‘ಕಣ್ಣು ಕಿವಿ ಇಲ್ಲದ ಸರ್ವಾಧಿಕಾರಿ ಮೋದಿ

‘ಬಿಜೆಪಿಯು 2014ರಲ್ಲಿ ರೈತರಿಗೆ ನೀಡಿದ್ದ ಸ್ವಾಮಿನಾಥನ್ ವರದಿ ಜಾರಿ ಭರವಸೆ ಹುಸಿಯಾಗಿದೆ. ಕೃಷಿಕರಿಗೆ ಮಾರಕವಾದ ಕಾಯ್ದೆಗಳನ್ನು ಜಾರಿಗೆ ತಂದಿತು. ಅದರ ವಿರುದ್ಧ ರೈತರು ನಡೆಸಿದ ಹೋರಾಟವನ್ನು ವಾಮ ಮಾರ್ಗಗಳನ್ನು ಬಳಸಿ ಹತ್ತಿಕ್ಕಲು ಯತ್ನಿಸಿತು. ಕೃಷಿ ಕ್ಷೇತ್ರದ ಉಳಿವಿಗಾಗಿ ನಡೆದಿದ್ದ ಹೋರಾಟದಲ್ಲಿ 735 ರೈತರು ಹುತಾತ್ಮರಾದರು. ಇಷ್ಟಾದರೂ ಕಣ್ಣು ಕಿವಿ ಇಲ್ಲದ ಸರ್ವಾಧಿಕಾರಿ ಮೋದಿ ರೈತರಿಗೆ ಮಿಡಿಯಲಿಲ್ಲ’ ಎಂದು ರೈತಪರ ಹೋರಾಟಗಾರ್ತಿ ಅನಸೂಯಮ್ಮ ಬಿ. ಆಕ್ರೋಶ ವ್ಯಕ್ತಪಡಿಸಿದರು. ‘ಮೋದಿ ಬಳಿ ದ್ವೇಷ ಇದೆಯೇ ಹೊರತು ಪ್ರೀತಿ ಇಲ್ಲ. ದ್ವೇಷ ಇರುವವರ ಬಳಿ ದೇವರ ಮೇಲೆ ನಿಜವಾದ ಭಕ್ತಿಯೂ ಇರುವುದಿಲ್ಲ. ದೇಶಕ್ಕೆ ಅನ್ನ ಹಾಕುವ ರೈತರನ್ನು ಕೇಂದ್ರ ಸರ್ಕಾರ ಹೀನಾಯವಾಗಿ ನಡೆಸಿಕೊಳ್ಳುತ್ತಿದೆ. ರೈತರು ಬೆಳೆಯುವ ಬೆಳೆಗಳಿಗೆ ಬೆಂಬಲ ಬೆಲೆ ಸಿಗಬೇಕಿದ್ದು ಅದಕ್ಕೆ ಕಾನೂನಿನ ಮಾನ್ಯತೆ ಸಿಗಬೇಕು. ಈ ನಿಟ್ಟಿನಲ್ಲಿ ಮತದಾರರು ರೈತಪರ ಹಾಗೂ ದುಡಿಯುವ ವರ್ಗದ ಪರ ಇರುವ ಅಭ್ಯರ್ಥಿಗಳಿಗೆ ಮತ ಚಲಾಯಿಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT