ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಿಂದಾಲ್‌ಗೆ BJP ನೀಡಿದ್ದು ನಿಮ್ಮಪ್ಪನ ಆಸ್ತಿನಾ? ಬೆಲ್ಲದಗೆ ಬಾಲಕೃಷ್ಣ ಪ್ರಶ್ನೆ

Published : 26 ಆಗಸ್ಟ್ 2024, 13:33 IST
Last Updated : 26 ಆಗಸ್ಟ್ 2024, 13:33 IST
ಫಾಲೋ ಮಾಡಿ
Comments

ರಾಮನಗರ: ‘ಅರವಿಂದ ಬೆಲ್ಲದ ಅವರೇ, ನಿಮ್ಮ ಹೇಳಿಕೆಯಂತೆ ಹಿಂದೆ ನಿಮ್ಮ ಬಿಜೆಪಿ ಅವಧಿಯಲ್ಲಿ ಕೊಟ್ಟಿರುವ ಜಮೀನುಗಳು ನಿಮ್ಮಪ್ಪನ ಮನೆ ಆಸ್ತಿನಾ? ಅಥವಾ ರಾಜ್ಯ ಬಿಜೆಪಿಯವರ ಆಸ್ತಿನಾ?’ ಎಂದು ಕಾಂಗ್ರೆಸ್ ಶಾಸಕ ಎಚ್‌.ಸಿ. ಬಾಲಕೃಷ್ಣ ತಿರುಗೇಟು ನೀಡಿದ್ದಾರೆ.

ರಾಜ್ಯ ಸರ್ಕಾರ ಇತ್ತೀಚೆಗೆ ಜಿಂದಾಲ್ ಕಂಪನಿಗೆ ಜಮೀನು ಮಾರಾಟ ಮಾಡಿರುವುದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ, ‘ಇದೇನು ನಿಮ್ಮಪ್ಪನ ಆಸ್ತಿನಾ?’ ಎಂದು ಪ್ರಶ್ನಿಸಿದ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ ಅವರಿಗೆ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಸೋಮವಾರ ಬಾಲಕೃಷ್ಣ ತರಾಟೆಗೆ ತೆಗೆದುಕೊಂಡಿದ್ದಾರೆ.

‘ಸರ್ಕಾರ ಯಾರೊಬ್ಬರ ಮನೆ ಆಸ್ತಿಯಲ್ಲ. ಪ್ರತಿಯೊಬ್ಬ ನಾಗರಿಕನ ಆಸ್ತಿ. ನಮ್ಮ ನಾಡಿನ ಮುಖ್ಯಮಂತ್ರಿ ಬಗ್ಗೆ ಗೌರವಯುತವಾಗಿ ಮಾತನಾಡುವುದನ್ನು ಮೊದಲು ಕಲಿತುಕೊಳ್ಳಿ. ವಿರೋಧ ಪಕ್ಷದ ಉಪ ನಾಯಕನಾಗಿ ಕನಿಷ್ಠ ಸಾಮಾನ್ಯ ಜ್ಞಾನ ಇಲ್ಲದವರಂತೆ ಮಾತನಾಡುವುದನ್ನು ಬಿಡಿ’ ಎಂದು ಸಲಹೆ ನೀಡಿದ್ದಾರೆ.

ಆ ಭಾಷೆ ನಮಗೂ ಗೊತ್ತಿದೆ: ‘ಮುಖ್ಯಮಂತ್ರಿ ಕುರಿತು ಅವಹೇಳನಕಾರಿಯಾಗಿ ಮಾತನಾಡಿದರೆ, ನಾನು ದೊಡ್ಡ ನಾಯಕನಾಗಬಹುದು ಎಂದುಕೊಂಡಿದ್ದಾರೆ. ಅವರು ಬಳಸಿರುವ ಭಾಷೆಯನ್ನು ಬಳಸಲು ನಮಗೂ ಬರುತ್ತದೆ. ಬೆಲ್ಲದ ಅವರ ಅಪ್ಪ ಸಂಪಾದನೆ ಮಾಡಿರುವ ದುಡ್ಡಲ್ಲಿ ಅವರೇನು ಕೆಲಸ ಮಾಡುತ್ತಿಲ್ಲ. ಎಲ್ಲರೂ ಕೆಲಸ ಮಾಡುತ್ತಿರುವುದು ಜನರ ತೆರಿಗೆ ಹಣದಲ್ಲಿ ಎಂಬುದರ ಅರಿವಿರಲಿ’ ಎಂದು ತಾಲ್ಲೂಕಿನ ಶ್ರೀಗಿರಿಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

‘ರಾಜ್ಯಪಾಲರು ತಮ್ಮ ನಡೆಯನ್ನು ಬದಲಾವಣೆ ಮಾಡಿಕೊಳ್ಳಬೇಕು. ಕೇವಲ ಒಂದು ಪಕ್ಷದ ವಕ್ತಾರರ ರೀತಿ‌ ಮಾತನಾಡಬಾರದು. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ರಾಜ್ಯಪಾಲ ಹಠಾವೋ, ಕರ್ನಾಟಕ ಬಚಾವೋ ಆಂದೋಲನ ಮಾಡುತ್ತೇವೆ’ ಎಂದು ಹೇಳಿದರು.

Pavitra Bhat
Pavitra Bhat

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT