ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದಿ ದಿವಸ ಆಚರಣೆಗೆ ವಿರೋಧ

ಕೇಂದ್ರದ ಭಾಷಾ ಹೇರಿಕೆ ಧೋರಣೆ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ
Last Updated 15 ಸೆಪ್ಟೆಂಬರ್ 2022, 4:16 IST
ಅಕ್ಷರ ಗಾತ್ರ

ರಾಮನಗರ: ಕೇಂದ್ರ ಸರ್ಕಾರದ ಹಿಂದಿ ದಿವಸ ಆಚರಣೆ ಕರೆಯನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಸಮತಾ ಸೈನಿಕ ದಳದ ನೇತೃತ್ವದಲ್ಲಿ ನಗರದಲ್ಲಿ ಬುಧವಾರ ಪ್ರತ್ಯೇಕ ಪ್ರತಿಭಟನೆ ನಡೆಯಿತು.

ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ ಕರವೇ ಕಾರ್ಯಕರ್ತರು, ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿರುವ, ಭಾರತದ ಐಕ್ಯತೆಗೆ ಧಕ್ಕೆಯನ್ನುಂಟು ಮಾಡುತ್ತಿರುವ ಹಿಂದಿ ದಿವಸ್ ಆಚರಣೆಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು. ಕೇಂದ್ರ ಸರ್ಕಾರ ಪ್ರತಿ ವರ್ಷ ಸೆ.14ರಂದು ಜನತೆಯ ತೆರಿಗೆ ಹಣದಲ್ಲಿ ಹಿಂದಿ ದಿವಸ್ ಆಚರಣೆ ಮಾಡುತ್ತಿದೆ. ಕೇವಲ ಹಿಂದಿ ಪ್ರೋತ್ಸಾಹಿಸಿ, ದೇಶದ ಉಳಿದೆಲ್ಲ ಭಾಷೆಗಳನ್ನು ಕಡೆಗಣಿಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿಂದಿ ದಿವಸ್, ಹಿಂದಿ ಸಪ್ತಾಹದಂತಹ ಕಾರ್ಯಕ್ರಮಗಳನ್ನು ಕೂಡಲೇ ನಿಲ್ಲಿಸಬೇಕು. ಯಾವ ಭಾಷೆಗೂ ಹೆಚ್ಚಿನ ಮಾನ್ಯತೆ ನೀಡಬಾರದು ಹಾಗೂ ನಿರ್ಲಕ್ಷ್ಯ ಮಾಡಬಾರದು ಎಂದು ಆಗ್ರಹಿಸಿದರು.

ಸಂವಿಧಾನದ ಭಾಗ 17ರ 343-351ನೇ ವಿಧಿಗಳಲ್ಲಿ ಭಾರತದ ಭಾಷಾ ನೀತಿಯ ಕುರಿತು ತಿಳಿಸಲಾಗಿದೆ. ಕೇಂದ್ರ ಸರ್ಕಾರ ಇಂಗ್ಲಿಷ್ ಮತ್ತು ಹಿಂದಿಯನ್ನು ಆಡಳಿತ ಭಾಷೆಯನ್ನಾಗಿ ಮಾತ್ರ ಮಾಡಿಕೊಂಡಿದೆ. ಒಕ್ಕೂಟ ಸರ್ಕಾರದ ಇಲಾಖೆಗಳ ನೇಮಕಾತಿಯಲ್ಲಿ ಭಾಷಾ ತಾರತಮ್ಯದಿಂದಾಗಿ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ಕೇಂದ್ರ ಸರ್ಕಾರ ಸಂವಿಧಾನಕ್ಕೆ ತಿದ್ದುಪಡಿ ತಂದು ಎಂಟನೇ ಪರಿಚ್ಛೇದದಲ್ಲಿನ ಎಲ್ಲಾ 22 ಭಾಷೆಗಳನ್ನು ಆಡಳಿತ ಭಾಷೆಯನ್ನಾಗಿ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ಕರವೇ ಜಿಲ್ಲಾ ಅಧ್ಯಕ್ಷ ಕಬ್ಬಾಳೇಗೌಡ, ಉಪಾಧ್ಯಕ್ಷ ಎಸ್‌. ಪುಟ್ಟಸ್ವಾಮಿ, ಸಾಗರ್, ಶ್ರೀನಿವಾಸ್ , ಭೀಮಲಿಂಗೇಗೌಡ, ಆನಂದ್ ,ಮಧು, ಶಂಭುಗೌಡ, ಜಯಕೃಷ್ಣಪ್ಪ, ಚನ್ನಕೇಶವ, ರಘುರಾಮ್, ಸಂಜಯ್, ಅಭಿಷೇಕ್ ಇದ್ದರು.

ಸಮತಾ ಸೈನಿಕ ದಳ ಪ್ರತಿಭಟನೆ

ಸಮತ ಸೈನಿಕ ದಳದ ಪದಾಧಿಕಾರಿಗಳು ನಗರದ ಕೆಂಗಲ್ ಹನುಮಂತಯ್ಯ ಪ್ರತಿಮೆಯ ಮುಂಭಾಗ ಪ್ರತಿಭಟನೆ ನಡೆಸಿದರು.

ಸಂಘಟನೆಯ ರಾಜ್ಯ ಘಟಕದ ಯುವ ಅಧ್ಯಕ್ಷ ಜಿ. ಗೋವಿಂದಯ್ಯ ಮಾತನಾಡಿ, ಭಾರತ ದೇಶ ಬಹು ಸಂಸ್ಕೃತಿಯ ದೇಶವಾಗಿದೆ. ಪ್ರಾದೇಶಿಕ ಭಾಷೆಗಳಿಗೆ ಅದರದೇ ಆದ ಸಾವಿರಾರು ವರ್ಷಗಳ ಚರಿತ್ರೆ ಇದೆ. ಹಿಂದಿ ಭಾಷೆ ಸ್ವಾತಂತ್ರ ನಂತರ ಒಪ್ಪಿಕೊಂಡಿರುವ ಭಾಷೆಯಾಗಿದ್ದು ಸಾಂವಿಧಾನಿಕವಾಗಿ ಅದು ರಾಷ್ಟ್ರೀಯ ಭಾಷೆ ಅಲ್ಲ ಎಂದು ಹೇಳಿದರು.

ಕರ್ನಾಟಕದಲ್ಲಿ ಕನ್ನಡವೇ ಅಧಿಕೃತವಾದ ಮಾತೃಭಾಷೆ ಹಾಗೂ ಆಡಳಿತ ಭಾಷೆಯಾಗಿದೆ. ನಮ್ಮ ರಾಜ್ಯದಲ್ಲಿ ಹಿಂದಿ ದಿವಸ ಆಚರಿಸುವುದಕ್ಕೆ ನಮ್ಮ ವಿರೋಧವಿದೆ. ಇದು ಕರ್ನಾಟಕದ ಏಕೀಕರಣಕ್ಕೋಸ್ಕರ ಶ್ರಮಿಸಿದ ಮಹನೀಯರಿಗೆ ಮಾಡುತ್ತಿರುವ ಅಪಮಾನ ಎಂದು ಖಂಡಿಸಿದರು. ಸರ್ಕಾರ ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ವೆಂಕಟೇಶ್, ಸುರೇಶ್, ರಾಜು ಕೋಟೆ, ಹುಣಸನಹಳ್ಳಿ ಕೀರ್ತಿ, ರವಿ, ನಾಗೇಶ್ ,ಲಕ್ಷ್ಮಣ್, ಅಭಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT