ಗುರುವಾರ , ಅಕ್ಟೋಬರ್ 29, 2020
21 °C
ಅವರೇಮಾಳ ರಾಂಪುರದ ಕೆರೆ ತುಂಬಿಸಲು ಗ್ರಾಮಸ್ಥರ ಒತ್ತಾಯ

ಗಟ್ಟಾಳ್‌ ಕೆರೆಗೆ ನೀರು ತುಂಬಿಸಿ ಶಾಶ್ವತ ನೀರಾವರಿ ಕಲ್ಪಿಸಿ; ಜನರ ಗುಳೆ ತಪ್ಪಿಸಿ

ಬರಡನಹಳ್ಳಿ ಕೃಷ್ಣಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಕನಕಪುರ: ಹತ್ತಾರು ಹಳ್ಳಿಗಳಿಗೆ ನೀರಿನ ಸೆಲೆಯಾಗಿ ಅಂತರ್ಜಲ ವೃದ್ಧಿಯಾಗುತ್ತಿದ್ದ ಕೆರೆ ಈಗ ಬತ್ತಿ ಹೋಗಿದೆ. ಕೆರೆಗೆ ನೀರು ತುಂಬಿಸಿ ರೈತರಿಗೆ ಅನುಕೂಲ ಮಾಡಬೇಕೆಂದು ತಾಲ್ಲೂಕಿನ ಅವರೆಮಾಳ ರಾಂಪುರ ಗ್ರಾಮದ ಜನರ ಒತ್ತಾಯವಾಗಿದೆ.

ಮರಳವಾಡಿ ಹೋಬಳಿ ವ್ಯಾಪ್ತಿಯಲ್ಲಿ ಬರುವ ಅವರೆಮಾಳ ರಾಂಪುರದ ಗಟ್ಟಾಳಕೆರೆ 58.27ಎಕೆರೆ ವಿಸ್ತೀರ್ಣದಲ್ಲಿದೆ. ಸದಾ ತುಂಬಿರುತ್ತಿದ್ದ ಕೆರೆ ಈಗ ಹಲವು ವರ್ಷಗಳಿಂದ ಮಳೆಗಾಲದಲ್ಲೂ ತುಂಬದೆ ಬಣಗುಡುತ್ತಿದೆ. ‌ರೈತರ ಕೃಷಿ ಚಟುವಟಿಕೆ ಹಾಗೂ ಜನ ಜಾನುವಾರಗಳ ನೀರಿಗಾಗಿ ಹತ್ತಾರು ಹಳ್ಳಿಗಳಿಗೆ ಒಂದು ಕೆರೆಯನ್ನು ಹಿಂದಿನ ಕಾಲದಲ್ಲಿ ನಿರ್ಮಾಣ ಮಾಡಲಾಗಿದೆ. ಕಾಲ ಕ್ರಮೇಣ ಮಳೆ ಇಲ್ಲದೆ ಕೆರೆಗಳು ಈಗ ಬತ್ತುತ್ತಿವೆ. 100 ಅಡಿಯಲ್ಲಿ ಸಿಗುತ್ತಿದ್ದ ಅಂತರ್ಜಲ ಈಗ 1000 ಅಡಿಗಳು ಕೊರೆದರೂ ಸಿಗುತ್ತಿಲ್ಲ. 1200-1300 ಅಡಿಯಲ್ಲಿ ಅಲ್ಪಸ್ವಲ್ಪ ನೀರು ಸಿಗುತ್ತಿದೆ. ಇದನ್ನೇ ನಂಬಿಕೊಂಡು ರೈತರು ರೇಷ್ಮೆ, ಬಾಳೆ, ತೆಂಗಿನ ಮರಗಳನ್ನು ಬೆಳೆಸಿದ್ದಾರೆ. ಬೇಸಿಗೆಯಲ್ಲಿ ಕೊಳವೆ ಬಾವಿಗಳು ಬತ್ತಿ ಹೋಗುತ್ತಿವೆ. ಪರಿಣಾಮ ತೆಂಗಿನ ಮರಗಳು ನೀರಿಲ್ಲದೆ ಒಣಗಿ ಹೋಗುತ್ತಿವೆ.

ಗಟ್ಟಾಳಕೆರೆಯಲ್ಲಿ ನೀರು ಇರುವಷ್ಟು ದಿನವೂ ಸುತ್ತಲಿನ ಜಕ್ಕಸಂದ್ರ, ಅಂಕೇಗೌಡನದೊಡ್ಡಿ, ದ್ಯಾವಸಂದ್ರ, ಅತ್ತಿಗುಪ್ಪೆ, ಶಂಕನದಾಸನದೊಡ್ಡಿ, ಬೆಣಚಕಲ್‌‌ದೊಡ್ಡಿ, ಚಿಕ್ಕನದೊಡ್ಡಿ, ಕೋನಸಂದ್ರ, ಭೀಮಸಂದ್ರ, ಗಾದಾರನಹಳ್ಳಿ, ಅವರೇಮಾಳರಾಂಪುರ, ಗುಂಡನಗೊಲ್ಳಹಳ್ಳಿ, ದೊಡ್ಡಸಾದೇನಹಳ್ಳಿ, ಚಿಕ್ಕಸಾದೇನಹಳ್ಳಿ, ಎಡತ್ತೂರುದೊಡ್ಡಿ, ಆನೆಹೊಸಳ್ಳಿ, ಮಲ್ಲಿಗೆಮೆಟ್ಟಿಲು,ತೋಕಸಂದ್ರ, ಮಣಿಯಂಬಾಳು ಗ್ರಾಮಗಳ ಕೊಳವೆ ಬಾವಿಗಳಲ್ಲಿ ಸಮೃದ್ಧ ನೀರು ಸಿಗುತ್ತಿತ್ತು.

ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ವ್ಯವಸಾಯ ಮಾಡಿರುವ ರೈತರು ಕೊಳವೆ ಬಾವಿ ಬತ್ತಿರುವುದರಿಂದ ಕಂಗಾಲಾಗಿದ್ದಾರೆ. ವ್ಯವಸಾಯ ನಷ್ಟದಿಂದ ಜಮೀನು ಮಾರಾಟ ಮಾಡುವುದು ಇಲ್ಲವೇ ಹಣ ಸಂಪಾದನೆಗಾಗಿ ಬೆಂಗಳೂರಿಗೆ ಕುಟುಂಬ ಸಮೇತ ವಲಸೆ ಹೋಗುವ ಅನಿವಾರ್ಯತೆ ಎದುರಾಗಿದೆ.

ಕೃಷಿಯನ್ನೇ ನಂಬಿರುವ ಈ ಭಾಗದ ರೈತರು ಇಲ್ಲಿಯೇ ಉಳಿಯಬೇಕಾದರೆ ಬತ್ತಿರುವ ಕೆರೆಯಲ್ಲಿ ನೀರು ತುಂಬಿಸುವ ಕೆಲಸವಾಗಬೇಕು. ಬನ್ನೇರುಘಟ್ಟ ನ್ಯಾಷನಲ್‌ ಪಾರ್ಕ್‌ನಿಂದ ಹರಿದು ಬರುವ ಸುವರ್ಣಮುಖಿ ನದಿ ವರ್ಷ ಪೂರ್ತಿ ಹರಿಯುತ್ತದೆ. ಮಳೆಗಾಲದಲ್ಲಿ ವ್ಯರ್ಥವಾಗಿ ನೀರು ಹರಿದು ನದಿ ಸೇರುತ್ತಿದೆ. ಇದರ ಬದಲಾಗಿ ಕೆರೆಯನ್ನು ತುಂಬಿಸುವ ಯೋಜನೆಯಡಿ ನೀರು ತುಂಬಿಸಿದರೆ ಈ ಭಾಗದ ಜನರಿಗೆ ಅನುಕೂಲವಾಗಲಿದೆ ಎನ್ನುವುದು ಈ ಭಾಗದ ರೈತರ ಒತ್ತಾಯ.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಈ ಭಾಗದ ಶಾಸಕಿಯಾಗಿದ್ದಾರೆ. ಡಿ.ಕೆ.ಸುರೇಶ್‌ ಸಂಸದರಾಗಿದ್ದಾರೆ. ಸಚಿವ ಡಿ.ಕೆ.ಶಿವಕುಮಾರ್‌ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಇವರೆಲ್ಲಾ ಸೇರಿದರೆ ಕೆರೆಗೆ ನೀರು ತುಂಬಿಸುವುದು ದೊಡ್ಡ ಕೆಲಸವಲ್ಲ. ಅಂತಹ ಪ್ರಯತ್ನ ತುಂಬಾ ಜರೂರಾಗಿ ಆಗಬೇಕೆಂದು ಗ್ರಾಮಸ್ಥರು ಒತ್ತಾಯವಾಗಿದೆ.

ನೂರು ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಕೆರೆಯಲ್ಲಿ ಸದಾ ನೀರು ತುಂಬಿರುತ್ತಿತ್ತು. ಆಗ 20ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇರಲಿಲ್ಲ. ನೀರಿನ ಅನುಕೂಲ ಇದ್ದ ಸಂದರ್ಭದಲ್ಲಿ ಅತಿ ಹೆಚ್ಚು ತೆಂಗಿನ ಮರಗಳನ್ನು ಬೆಳೆಸಲಾಗಿದೆ. 10 ವರ್ಷಗಳಿಂದ ಕೆರೆಯಲ್ಲಿ ನೀರು ತುಂಬುತ್ತಿಲ್ಲ. ಕೆರೆಗೆ ನೀರು ಬರುವ ಜಾಗವೇ ಮುಚ್ಚಿಹೋಗಿದೆ. ಕೆರೆಯಲ್ಲಿ ನೀರಿದ್ದರೆ 300 ಅಡಿಯಲ್ಲಿ ನೀರು ಸಿಗುತ್ತದೆ. ಇಲ್ಲವಾದರೆ 1300 ಅಡಿಯಲ್ಲಿ ಸ್ವಲ್ಪ ನೀರು ಸಿಗುತ್ತದೆ. ಈ ಭಾಗದ ರೈತರ ಬದುಕು ಹಸನಾಗಬೇಕಾದರೆ ಈ ಕೆರೆಗೆ ನೀರು ತುಂಬಿಸಬೇಕು ಎನ್ನುತ್ತಾರೆ ಗ್ರಾಮದ ಹಿರಿಯ ಮುಖಂಡ ಬಿ.ಸಿದ್ದೇಗೌಡ. 

ಗಟ್ಟಾಳಕೆರೆಯನ್ನು ರಾಜರ ಕಾಲದಲ್ಲಿ ಕಟ್ಟಲಾಗಿದೆ. ಒಮ್ಮೆ ತುಂಬಿದರೆ ವರ್ಷ ಪೂರ್ತಿ ನೀರು ತುಂಬಿರುತ್ತದೆ. ಸಾವಿರಾರು ಕೊಳವೆಬಾವಿಗಳ ಅಂತರ್ಜಲ ಹೆಚ್ಚಳವಾಗುತ್ತದೆ. ಲಕ್ಷಾಂತರ ರೂಪಾಯಿ ಅಂತರ್ಜಲ ಹೆಚ್ಚಳಕ್ಕೆ ಖರ್ಚು ಮಾಡುವ ಸರ್ಕಾರ ಕೆರೆ ಅಭಿವೃದ್ಧಿಗೆ ಒತ್ತು ನೀಡಬೇಕು. 58.27ಎಕರೆ ಭೂ ಪ್ರದೇಶದಲ್ಲಿ ಈ ಕೆರೆ ಇದೆ. ಇದರಲ್ಲಿ 20 ಎಕರೆಯಷ್ಟು ಒತ್ತುವರಿಯಾಗಿದೆ. ಇದನ್ನು ತೆರವುಗೊಳಿಸಿ ಕೆರೆಗೆ ನೀರು ತುಂಬಿಸಬೇಕು ಎನ್ನುತ್ತಾರೆ ರೈತ ಪರ ಹೋರಾಟ ಸಂಘದ ಅಧ್ಯಕ್ಷ ಲೋಕೇಶ್‌ಗೌಡ ರಾಂಪುರ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು