ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರತ್ನನ ಪದ ಆಧುನಿಕ ಸಾಹಿತ್ಯದ ಮುಕುಟ’

ಶಿವಾಜಿ ರಾವ್‌ಗೆ ಡಾ. ಜಿ.ಪಿ. ರಾಜರತ್ನಂ ಸಾಹಿತ್ಯ ಸಾಂಸ್ಕೃತಿಕ ಪರಿಚಾರಕ ಪ್ರಶಸ್ತಿ ಪ್ರದಾನ
Last Updated 5 ಡಿಸೆಂಬರ್ 2019, 12:25 IST
ಅಕ್ಷರ ಗಾತ್ರ

ರಾಮನಗರ: ‘ಡಾ.ಜಿ.ಪಿ. ರಾಜರತ್ನಂ ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದ ಪ್ರಮುಖ ಸಾಹಿತಿ. ಸುಮಾರು 250ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಇವರ ಸಾಹಿತ್ಯಕ ಸೃಷ್ಟಿ ಬಹುಮುಖಿಯಾದುದು’ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸು.ತ. ರಾಮೇಗೌಡ ಹೇಳಿದರು.

ಇಲ್ಲಿನ ಸರ್ಕಾರಿ ಮೆಯಿನ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಲೇಖಕರ ವೇದಿಕೆ ಗುರುವಾರ ಆಯೋಜಿಸಿದ್ದ ಡಾ.ಜಿ.ಪಿ. ರಾಜರತ್ನಂ ಜನ್ಮ ದಿನಾಚರಣೆ ಮತ್ತು ರಾಜರತ್ನಂ ಸಾಹಿತ್ಯ ಸಾಂಸ್ಕೃತಿಕ ಪರಿಚಾರಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾವ್ಯ, ನಾಟಕ, ಕಥೆ, ವಿಡಂಬನೆ -ಮೊದಲಾದ ಎಲ್ಲ ಸಾಹಿತ್ಯ ಪ್ರಕಾರಗಳಲ್ಲಿ ಅವರು ಸಾಹಿತ್ಯ ಕೃಷಿ ಮಾಡಿದ್ದಾರೆ. ಇವರ ‘ರತ್ನನ ಪದಗಳು’ ಕೃತಿ ಆಧುನಿಕ ಸಾಹಿತ್ಯ ಪರಂಪರೆಯಲ್ಲಿ ಒಂದು ಮಹತ್ವದ ಸ್ಥಾನ ಪಡೆದುಕೊಂಡಿದೆ ಎಂದು ತಿಳಿಸಿದರು.

ರಾಜರತ್ನಂ ಅವರು ಸಮಾಜದಲ್ಲಿ ಮೇಲುಸ್ತರವೆಂದು ಪರಿಗಣಿತವಾಗಿರುವ ಜನಾಂಗದಲ್ಲಿ ಜನಿಸಿದವರು. ಆದರೂ ಅವರು ಚಿತ್ರಿಸಿರುವ 'ರತ್ನ'ನ ವ್ಯಕ್ತಿತ್ವ ಮಾತ್ರ ಸಮಾಜದ ಕೆಳಸ್ತರದ್ದು; ತಮ್ಮ ಕಾವ್ಯಕ್ಕೆ ಅವರು ಬಳಸಿರುವ ಭಾಷೆಯೂ ತಳಸಂಸ್ಕೃತಿಯ ಜನಜೀವನದ್ದು ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸಿಂ.ಲಿಂ. ನಾಗರಾಜ್ ಮಾತನಾಡಿ, ಮಕ್ಕಳ ಸಾಹಿತ್ಯಕ್ಕೆ ಕೊಡುಗೆ ನೀಡಿದ ಮಹನೀಯರ ಪೈಕಿ ಜಿ.ಪಿ.ರಾಜರತ್ನಂ ವಿಶೇಷವಾಗಿ ಗಮನ ಸೆಳೆದಿದ್ದಾರೆ. ಅವರು ರಾಮನಗರದಲ್ಲಿ ಕೆಲ ಕಾಲ ವಾಸ ಮಾಡಿದ್ದರು. ಮೆಯಿನ್ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದರು ಎಂದು ಹಿರಿಯರು ಹೇಳಿದ್ದಾರೆ. ಇದು ಹೆಮ್ಮೆಯ ವಿಚಾರ ಎಂದು ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎನ್. ಮರಿಗೌಡ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಆಯಾ ಶಾಲೆಗಳ ಸುತ್ತಮುತ್ತಲು ಇರುವ ಸಾಹಿತಿಗಳು, ಕವಿಗಳು, ಕನ್ನಡಪರ ಹೋರಾಟಗಾರರು, ಸ್ವಾತಂತ್ರ್ಯ ಚಳವಳಿ ಹೋರಾಟಗಾರರನ್ನು ಕರೆಸಿ ಮಕ್ಕಳಿಗೆ ಅವರ ಸಾಧನೆಗಳನ್ನು ಪರಿಚಯಿಸಿ ಸ್ಪೂರ್ತಿ ತುಂಬಲು ಶಾಲೆಗಳ ಮುಖ್ಯ ಶಿಕ್ಷಕರುಗಳಿಗೆ ಸಲಹೆ ನೀಡಿದ್ದೇನೆ ಎಂದು ತಿಳಿಸಿದರು.

ಪ್ರಶಸ್ತಿ ಸ್ವೀಕರಿಸಿದ ಸಂಗೀತ ವಿದ್ವಾನ್ ಶಿವಾಜಿ ರಾವ್ ಮಾತನಾಡಿ ‘ನಾನು ಅಕ್ಷರ ಕಲಿತ ಶಾಲೆಯಲ್ಲಿ, ಜಿ.ಪಿ.ರಾಜರತ್ನಂ ರವರಂತಹ ಸಾಹಿತ್ಯ ದಿಗ್ಗಜರ ಹೆಸರಿನಲ್ಲಿ ಪ್ರಶಸ್ತಿಗೆ ಭಾಜನಾಗಿರುವುದು ಪುಣ್ಯ. ರಾಮನಗರದಲ್ಲಿ ಸಾಮಾಜಿಕವಾಗಿ ಸಾರ್ಥಕ ಜೀವನ ನಡೆಸಿದವರಿಗೆ ಕೊರತೆ ಏನಿಲ್ಲ, ಆದರೆ ಅವರನ್ನು ಸ್ಮರಿಸುವ ಕಾರ್ಯವಾಗುತ್ತಿಲ್ಲ. ರಸ್ತೆ, ವೃತ್ತಗಳಿಗೆ ಅವರುಗಳ ಹೆಸರುಗಳ ನಾಮಕರಣವಾಗಬೇಕು’ ಎಂದು ತಿಳಿಸಿದರು.

ಸ್ನೇಹ ಕೂಟ ಸಂಸ್ಥೆ ಅಧ್ಯಕ್ಷ ಎಚ್.ಪಿ. ನಂಜೇಗೌಡ ಮಾತನಾಡಿ, ಜಿ. ಪಿ.ರಾಜರತ್ನಂ ಅವರು ಸರ್ಕಾರಿ ಮೆಯಿನ್ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾರೆ, ಹೀಗಾಗಿ ಈ ಶಾಲೆಯಿರುವ ಬೀದಿಗೆ ಜಿ.ಪಿ.ರಾಜರತ್ನಂ ಅವರ ಹೆಸರು ನಾಮಕರಣವಾಗಬೇಕು. ಈ ವಿಚಾರದಲ್ಲಿ ಸಮಾನಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ನಗರಸಭೆ ಮತ್ತು ಜಿಲ್ಲಾಡಳಿತದ ಗಮನ ಸೆಳೆಯಬೇಕು ಎಂದು ತಿಳಿಸಿದರು.

ಲೇಖಕಿ ಬಿ.ಎಸ್. ರೂಪಾ ರೇವಣ್ಣ ಮಾತನಾಡಿ ಜಿ.ಪಿ.ರಾಜರತ್ನಂ ಅವರು ಮೂಲತಃ ತಮಿಳು ಮಾತೃಭಾಷೆಯವರು, ಅನೇಕ ಭಾಷೆಗಳಲ್ಲಿ ಅವರಿಗೆ ಪಾಂಡಿತ್ಯವಿತ್ತು, ಆದರೆ ಅವರು ಕನ್ನಡ ಭಾಷೆಯ ಬಗ್ಗೆ ವಿಶೇಷ ಪ್ರೀತಿ ಎಂದು ತಿಳಿಸಿದರು.

ಬಿಆರ್ ಸಿ ಜಿ.ಎಸ್. ಸಂಪತ್ ಕುಮಾರ್, ಸಾಂಸ್ಕೃತಿಕ ಸಂಘಟಕಿ ಕವಿತಾ ರಾವ್, ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕಗಳ ಅಧ್ಯಕ್ಷರಾದ ಕಲ್ಪನಾ ಶಿವಣ್ಣ, ಬಿ.ಟಿ. ದಿನೇಶ್, ಜಿಲ್ಲಾ ಲೇಖಕರ ವೇದಿಕೆಯ ಅಧ್ಯಕ್ಷ ಕೂ.ಗಿ. ಗಿರಿಯಪ್ಪ, ಪ್ರಧಾನ ಕಾರ್ಯದರ್ಶಿ ಎಸ್. ರುದ್ರೇಶ್ವರ, ಗಾಯಕರಾದ ಕೆಂಗಲ್ ವಿನಯ್ ಕುಮಾರ್, ಗೋಪಾಲ್, ನಿವೃತ್ತ ಶಿಕ್ಷಕಿ ಗಾಯಿತ್ರಿಬಾಯಿ, ಉಪನ್ಯಾಸಕ ಸಿ. ರಮೇಶ್ ಹೊಸದೊಡ್ಡಿ, ಲೇಖಕಿ ಎ.ಜಿ. ಸುನಿತಾ, ಶಾಲೆಯ ಮುಖ್ಯಶಿಕ್ಷಕ ಕೆ.ಎಂ. ಗುರುಮೂರ್ತಿ, ಶಿಕ್ಷಕರಾದ ಸಿ.ಆರ್. ರಮ್ಯಾ, ಎಸ್. ಉಮಾದೇವಿ, ಜಿ. ಶ್ರೀನಿವಾಸ್, ಬುಡಕಟ್ಟು ಸಮುದಾಯಗಳ ಹೋರಾಟಗಾರರಾದ ಕೃಷ್ಣಮೂರ್ತಿ, ಮಹದೇವಯ್ಯ, ರಾಜು, ಮುಖಂಡ ಆರ್.ಕೆ. ಸತೀಶ್, ಆನಂದಶಿವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT