ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಸೋಮವಾರ ಬಾಗಿಲು ತೆರೆಯಲಿವೆ ದೇಗುಲಗಳು

ದರ್ಶನಕ್ಕಷ್ಟೇ ಅವಕಾಶ: ಮಾಸ್ಕ್‌, ಸ್ಯಾನಿಟೈಸರ್‍ ಬಳಕೆ ಕಡ್ಡಾಯ
Last Updated 6 ಜೂನ್ 2020, 13:15 IST
ಅಕ್ಷರ ಗಾತ್ರ

ರಾಮನಗರ: ಲಾಕ್‌ಡೌನ್‌ ಕಾರಣಕ್ಕೆ ಬಾಗಿಲು ಬಂದ್ ಮಾಡಿಕೊಂಡಿದ್ದ ಜಿಲ್ಲೆಯ ದೇವಾಲಯಗಳು ಸೋಮವಾರ ತೆರೆಯಲಿವೆ. ಆದರೆ ದೇವರ ದರ್ಶನಕ್ಕೆ ಬರುವ ಭಕ್ತರಿಗೆ ನಿಯಮ ಪಾಲನೆಯೇ ಸವಾಲಾಗಿದೆ.

ದೇವಾಲಯಗಳ ಆರಂಭಕ್ಕೆ ಸರ್ಕಾರ ಷರತ್ತುಬದ್ಧ ಅನುಮತಿ ನೀಡಿದೆ. ಕೆಲವು ಸೇವೆಗಳನ್ನು ರದ್ದುಪಡಿಸಿದ್ದು, ದರ್ಶನಕ್ಕೆ ಮಾತ್ರ ಆದ್ಯತೆ ನೀಡಲಾಗಿದೆ. ಭಕ್ತರ ಭೇಟಿ ಅವಧಿಯನ್ನು ಬದಲಿಸಲು ಸಹ ಚಿಂತನೆ ನಡೆದಿದೆ. ಸಾಮಾಜಿಕ ಅಂತರ ಪಾಲನೆಯೂ ಕಡ್ಡಾಯ ಆಗಲಿದೆ.

ಯಾವುದು ರದ್ದು: ಈ ಮೊದಲು ನಡೆಯುತ್ತಿದ್ದ ಹರಕೆಗಳಾದ ಉರುಳುಸೇವೆ, ತೀರ್ಥರ್ಸ್ನಾನ, ಪ್ರಸಾದ ವಿನಿಯೋಗ, ಮುಡಿ ಸೇವೆಗಳಲ್ಲಿ ತಾತ್ಕಾಲಿಕವಾಗಿ ರದ್ದು ಪಡಿಸಲಾಗಿದೆ. ದೇವರ ದರ್ಶನದ ವಿಷಯದಲ್ಲೂ ಕೆಲವು ಬದಲಾವಣೆಗಳಿಗೆ ಸರ್ಕಾರ ಸೂಚಿಸಿದೆ.

ಅಂತರ ಕಡ್ಡಾಯ: ಎ ಹಾಗು ಬಿ ದರ್ಜೆಯ ದೇವಾಲಯಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ದೇಗುಲಕ್ಕೆ ಬರುವ ಭಕ್ತರು ಮಾಸ್ಕ್‌ ಮತ್ತು ಸ್ಯಾನಿಟೈಸರ್‍ ಸಹ ಕಡ್ಡಾಯವಾಗಿ ಬಳಸಬೇಕು. ಮಂಗಳಾರಾತಿ ತಟ್ಟೆಯನ್ನು ದೂರದಲ್ಲೇ ಇಡಬೇಕು. ತಟ್ಟೆಗೆ ದಕ್ಷಿಣೆ ಸಹ ಹಾಕುವಂತೆ ಇಲ್ಲ. ಪೂಜಾ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗುವುದಿಲ್ಲ. ಹೂವು, ಅರಿಶಿನ-ಕುಂಕುಮಕ್ಕೆ ಸಹ ದೇಗುಲಗಳಿಗೆ ಪ್ರವೇಶವಿಲ್ಲ. ವಿಶೇಷ ಪೂಜೆ, ಅಭಿಷೇಕ ಮೊದಲಾದ ಸೇವೆಗಳಿಗೂ ಅವಕಾಶ ನೀಡುವುದಿಲ್ಲ. ಭಕ್ತರು ಖಾಲಿ ಕೈಯಲ್ಲಿ ಹೋಗಿ ದೇವರಿಗೆ ಕೈ ಮುಗಿದು ಬರುವುದಷ್ಟೇ ಅವಕಾಶ ಇರಲಿದೆ. ಹುಂಡಿಗಳಿಗಷ್ಟೇ ಕಾಣಿಕೆ ಹಾಕಲು ಅವಕಾಶ ಇರಲಿದೆ.

ಆನ್‌ಲೈನ್‌ ದೇಣಿಗೆಗೆ ಅವಕಾಶ: ಲಾಕ್‌ಡೌನ್‌ನಿಂದಾಗಿ ದೇಗುಲಗಳ ಆದಾಯಕ್ಕೂ ಸಾಕಷ್ಟು ಹೊಡೆತ ಬಿದ್ದಿದೆ. ಹೀಗಾಗಿ ಆನ್‌ಲೈನ್‌ ಮೂಲಕವೇ ದೇಣಿಗೆ ಪಾವತಿಗೆ ಸರ್ಕಾರ ಅವಕಾಶ ಕಲ್ಪಿಸುತ್ತಿದೆ. ಸದ್ಯ ಕನಕಪುರ ತಾಲ್ಲೂಕಿನ ಕಬ್ಬಾಳಮ್ಮ ದೇಗುಲದಲ್ಲಿ ಈ ವ್ಯವಸ್ಥೆ ಇದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯ ಉಳಿದ ಎ ದರ್ಜೆಯ ದೇಗುಲಗಳಲ್ಲೂ ಈ ವ್ಯವಸ್ಥೆ ಜಾರಿಗೆ ಬರಲಿದೆ.

ಛತ್ರ ತೆರೆಯಲು ಅವಕಾಶ ಇಲ್ಲ

ದೇಗುಲಗಳ ಆರಂಭಕ್ಕೆ ಸರ್ಕಾರ ಅವಕಾಶ ನೀಡಿದೆಯಾದರೂ ಅಲ್ಲಿನ ಛತ್ರಗಳು, ಸಮುದಾಯ ಭವನಗಳನ್ನು ತೆರೆಯಲು ಅವಕಾಶ ಇಲ್ಲ. ಬಹುತೇಕ ದೇಗುಲಗಳು ಸಂಜೆಯೊಳಗೆ ಬಾಗಿಲು ಮುಚ್ಚಲಿವೆ. ಹೀಗಾಗಿ ಬಂದ ಭಕ್ತರು ಸಂಜೆಯೊಳಗೇ ಅಲ್ಲಿಂದ ವಾಪಸ್ ಆಗಬೇಕಿದೆ.

****

ಸೋಮವಾರದಿಂದ ದೇಗುಲಗಳ ಆರಂಭಕ್ಕೆ ಸಿದ್ಧತೆ ನಡೆದಿದೆ. ಸರ್ಕಾರದ ಸೂಚನೆ ಪಾಲಿಸುವುದು ಕಡ್ಡಾಯವಾಗಿದೆ.
ಲಕ್ಷ್ಮಿನಾರಾಯಣ

- ಸಹಾಯಕ ನಿರ್ದೇಶಕ, ಮುಜರಾಯಿ ಇಲಾಖೆ

ಅಂಕಿ-ಅಂಶ

865 - ಜಿಲ್ಲೆಯಲ್ಲಿ ಮುಜರಾಯಿ ಇಲಾಖೆ ಅಧೀನದಲ್ಲಿರುವ ದೇವಾಲಯಗಳು
7 - ಎ ದರ್ಜೆ ದೇವಾಲಯಗಳು
3 - ಬಿ ದರ್ಜೆ ದೇವಾಲಯಗಳು
855 - ಸಿ ದರ್ಜೆ ದೇವಾಲಯಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT