ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಆರ್‌ಐಡಿಎಲ್‌ ಕಾಮಗಾರಿ ಪರಿಶೀಲನೆಗೆ ಸೂಚನೆ

ರಾಮನಗರ ತಾ.ಪಂ. ಸಭೆ: ಅಧಿಕಾರಿಗಳ ವಿರುದ್ಧ ಪಿಡಿಒಗಳ ಆರೋಪ
Last Updated 31 ಜುಲೈ 2019, 14:11 IST
ಅಕ್ಷರ ಗಾತ್ರ

ರಾಮನಗರ: ಮುಖ್ಯಮಂತ್ರಿಗಳ ಗ್ರಾಮ ವಿಕಾಸ ಯೋಜನೆ ಮತ್ತು ಗ್ರಾಮ ವಿಕಾಸ ಯೋಜನೆಯಡಿ ಕೆ.ಆರ್.ಐ.ಡಿ.ಎಲ್ ಕೈಗೊಂಡಿರುವ ಕಾಮಗಾರಿಗಳನ್ನು ಮೂರನೇ ಏಜೆನ್ಸಿಯಿಂದ ಪರಿಶೀಲನೆ ನಡೆಸಬೇಕು ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಗಾಣಕಲ್ ನಟರಾಜ್ ಸೂಚಿಸಿದರು.

ಇಲ್ಲಿನ ಮಿನಿವಿಧಾನ ಸೌಧದಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಗ್ರಾಮ ವಿಕಾಸ ಯೋಜನೆಯಡಿ ಗ್ರಾಮ ಪಂಚಾಯಿತಿಗಳು ವಿವಿಧ ಕಾಮಗಾರಿಗಳನ್ನು ಮಾಡಿಕೊಡುವಂತೆ ಕೆಆರ್ಐಡಿಎಲ್ ಸಂಸ್ಥೆಗೆ ಅನುದಾನವನ್ನು ಬಿಡುಗಡೆ ಮಾಡಿವೆ. ಆದರೆ ಸದರಿ ಸಂಸ್ಥೆ ತಾನು ಕೈಗೊಂಡಿರುವ ಕಾಮಗಾರಿಗಳ ಮಾಹಿತಿ ನೀಡದೇ ನಿರ್ಲಕ್ಷ ವಹಿಸುತ್ತಿದೆ ಎಂದು ವಿವಿಧ ಗ್ರಾಮಪಂಚಾಯಿತಿ ಪಿಡಿಒಗಳು ದೂರಿದರು. ಈ ಹಿನ್ನೆಲೆಯಲ್ಲಿ ಗಾಣಕಲ್ ನಟರಾಜ್ ಕಾಮಗಾರಿ ಗುಣಮಟ್ಟ ಪರಿಶೀಲನೆಯ ನಿರ್ಧಾರ ಕೈಗೊಂಡರು.

ಕೆ.ಆರ್.ಐ.ಡಿ.ಎಲ್‌ನ ಜೂನಿಯರ್ ಎಂಜಿನಿಯರ್ ಉದಯ್ ಮಾಹಿತಿ ನೀಡಿ ‘2015–-16ನೇ ಸಾಲಿನ ಗ್ರಾಮವಿಕಾಸ ಯೋಜನೆಯಡಿ ತಾಲ್ಲೂಕಿನ ರಾಜೀವ್‌ಗಾಂಧಿ ಪುರ, ಕೆಂಪೇಗೌಡನದೊಡ್ಡಿ, ಹುಣಸನಹಳ್ಳಿ ಹಾಗೂ ಲಕ್ಕಪ್ಪನಹಳ್ಳಿಯಲ್ಲಿ ತಲಾ ₨37.50 ಲಕ್ಷ ಅನುದಾನವನ್ನು ಆಯಾ ಗ್ರಾಮ ಪಂಚಾಯಿತಿಗಳು ನಮ್ಮ ಸಂಸ್ಥೆಗೆ ಬಿಡುಗಡೆ ಮಾಡಿದ್ದವು. ಈ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ’ ಎಂದರು.

‘2017–-18ನೇ ಸಾಲಿನಲ್ಲಿ ಮುಖ್ಯಮಂತ್ರಿಗಳ ಗ್ರಾಮ ವಿಕಾಸ ಯೋಜನೆಯಡಿ ಕಂಚುಗಾರನಹಳ್ಳಿ, ವಿರೂಪಸಂದ್ರ, ಬಸವನಪುರ, ಜಯಪುರ, ಅಂಕನಹಳ್ಳಿ, ದಾಸರಹಳ್ಳಿ ಮತ್ತು ಕುಂಬಾಪುರ ಕಾಲೊನಿಗಳಲ್ಲಿ ತಲಾ ₨50 ಲಕ್ಷ ಸೇರಿ ಒಟ್ಟು ₨3.5 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವಂತೆಯೂ ಸೂಚಸಿಲಾಗಿತ್ತು. ಇದರಲ್ಲಿ ₨2.91 ಕೋಟಿ ಅನುದಾನ ಬಿಡುಗಡೆ ಆಗಿದೆ. ಅದರಲ್ಲಿ ₨2.69 ಕೋಟಿ ವೆಚ್ಚದ ಕಾಮಗಾರಿಗಳು ಪೂರ್ಣವಾಗಿವೆ. ಉಳಿದ ಕಾಮಗಾರಿಗಳು ಬಾಕಿ ಇವೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ವಿವಿಧ ಗ್ರಾಮ ಪಂಚಾಯಿತಿಗಳ ಪಿಡಿಒಗಳು ‘ಕೆ.ಆರ್.ಐ.ಡಿ.ಎಲ್ ಅಧಿಕಾರಿಗಳು ತಾವು ಕೈಗೊಂಡಿರುವ ಕಾಮಗಾರಿಗಳನ್ನು ತೋರಿಸಿಲ್ಲ. ಜಂಟಿ ಪರಿಶೀಲನೆ ಮಾಡಿಲ್ಲ. ಗ್ರಾ.ಪಂ.ಗಳಿಗೂ ಹಸ್ತಾಂತರ ಮಾಡಿಲ್ಲ’ ಎಂದು ದೂರಿದರು.

ಕೈಲಾಂಚ ಬನ್ನಿಕುಪ್ಪೆ ಗ್ರಾಮ ಪಂಚಾಯಿತಿ ಪಿಡಿಒ ಜಯಶಂಕರ್ ಮಾತನಾಡಿ ‘730 ಮೀಟರ್ ಉದ್ದದ ಚರಂಡಿ ಮಾಡಿರುವುದಾಗಿ ಕೆ.ಆರ್.ಐ.ಡಿ.ಎಲ್ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಅಲ್ಲಿರೋದು ಕೇವಲ 530 ಮೀಟರ್ ಉದ್ದದ ಚರಂಡಿ, ಖುದ್ದು ಬಂದು ಕಾಮಗಾರಿ ತೋರಿಸಿ ಎಂದರೆ ಅವರು ಮುಂದೆ ಬರುತ್ತಿಲ್ಲ’ ಎಂದು ಆಪಾದಿಸಿದರು.

ಕೃಷಿ ಇಲಾಖೆ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಯ ಅಧಿಕಾರಿಗಳು ರೈತರಿಗೆ ತೊಂದರೆಯಾಗದಂತೆ ಕಾರ್ಯ ನಿರ್ವಹಿಸಬೇಕು. ಇಲಾಖೆಯಲ್ಲಿನ ಸವಲತ್ತುಗಳನ್ನು ಒಂದು ಬಾರಿ ಪಡೆದವರಿಗೆ ಇನ್ನೊಂದು ಬಾರಿ ನೀಡಬಾರದು. ಅಧಿಕಾರಿಗಳು ಸಾಮಾಜಿಕ ಕಳಕಳಿಯನ್ನು ಇಟ್ಟುಕೊಂಡು ಕೆಲಸ ಮಾಡಬೇಕು ಎಂದು ತಿಳಿಸಿದರು.

ಹೋಬಳಿಗೆ 70 ರಿಂದ 80 ಟಾರ್ಪಲ್ ನೀಡುತ್ತಿರುವುದರಿಂದ ತೊಂದರೆಯಾಗುತ್ತಿದೆ. ಹೋಬಳಿಗೆ ಸಾವಿರ ಟಾರ್ಪಲ್ ಗಳನ್ನು ವಿತರಣೆ ಮಾಡಲು ಅವಕಾಶ ಮಾಡಿಕೊಟ್ಟರೆ ರೈತರಿಗೆ ಅನುಕೂಲವಾಗುತ್ತದೆ. ಪ್ರಧಾನಮಂತ್ರಿ ಕೃಷಿ ಸಮ್ಮಾನ್‌ ಯೋಜನೆಯಲ್ಲಿ 22,913 ಮಂದಿ ರೈತರು ನೋಂದಾಯಿಸಿಕೊಂಡಿದ್ದಾರೆ. ಆದರೆ ವಿಮೆ ಮಾಡಿಸಲು ರೈತರು ಆಸಕ್ತಿ ತೋರಿಸುತ್ತಿಲ್ಲ ಎಂದು ಕೃಷಿ ಇಲಾಖೆಯ ಅಧಿಕಾರಿ ಮಾಹಿತಿ ನೀಡಿದರು.

ರಾಗಿ, ಮಾವು ಸೇರಿದಂತೆ ಇತರೆ ಬೆಳೆಗಳಿಗೆ ವಿಮೆ ಮಾಡಿಸುವ ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಹಿಪ್ಪುನೇರಳೆ ಬೆಳೆಗಳಿಗೆ ಹುಳುಗಳ ಕಾಟ ಶುರುವಾಗಿದೆ. ಅದು ವ್ಯಾಪಕವಾಗಿ ಹರಡಲಾರಂಭಿಸಿದೆ. ಜಿಲ್ಲೆಯ ಎಷ್ಟು ಎಕರೆ ಹಿಪ್ಪುನೇರಳೆ ಬೆಳೆ ಹುಳುಗಳ ಬಾಧೆಗೆ ಒಳಗಾಗಿದೆ ಎಂಬ ಬಗ್ಗೆ ಅಧಿಕಾರಿಗಳು ಸಮೀಕ್ಷೆಯನ್ನೇ ನಡೆಸಿಲ್ಲ ಎಂದು ಗಾಣಕಲ್ ನಟರಾಜ್ ಬೇಸರ ವ್ಯಕ್ತಪಡಿಸಿದರು.

ಮಳೆ ಕೊರತೆ ಎದುರಾದ ಸಂದರ್ಭದಲ್ಲಿ ಬೆಳೆಗಳಿಗೆ ಎದುರಾಗಬಹುದಾದ ರೋಗ, ವಹಿಸಬೇಕಾದ ಮುಂಜಾಗ್ರತಾ ಕ್ರಮದ ಬಗ್ಗೆ ಬೆಳೆಗಾರರಿಗೆ ಮಾಹಿತಿ ನೀಡಬೇಕು. ಪ್ರಾತ್ಯಕ್ಷಿಕೆ ನಡೆಸುವ ಮೂಲಕ ರೋಗ ಹರಡದಂತೆ ತಡೆಯುವ ವಿಧಾನವನ್ನು ತಿಳಿಸಬೇಕು ಎಂದು ರೇಷ್ಮೆ ಇಲಾಖೆಯ ಅಧಿಕಾರಿಗೆ ಸೂಚಿಸಿದರು.

ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ರಮಾಮಣಿ, ಕಾರ್ಯನಿರ್ವಹಣಾಧಿಕಾರಿ ಬಾಬು ಇದ್ದರು.


ಜಾಗೃತಿ ಮೂಡಿಸಿ
‘ತಾಲ್ಲೂಕಿನಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿವೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು, ಜತೆಗೆ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಚಿಕಿತ್ಸೆ ದೊರೆಯಬೇಕು’ ಎಂದು ಗಾಣಕಲ್ ನಟರಾಜ್ ತಿಳಿಸಿದರು.

ತಾಲ್ಲೂಕಿನಲ್ಲಿರುವ ಎಲ್ಲಾ ಶಾಲಾ ಮಕ್ಕಳು ಇದೇ 3ರಂದು ತಮ್ಮ ಶಾಲೆಗಳಲ್ಲಿ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವಂತೆ ಹಾಗೂ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಮಾಡಬೇಕು. ಇದಕ್ಕಾಗಿ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮವನ್ನು ರೂಪಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT