ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ–ಚನ್ನಪಟ್ಟಣ ರೈಲು ನಿಲ್ದಾಣಕ್ಕೆ ಕಾಯಕಲ್ಪ: ಇಂದು ಪ್ರಧಾನಿ ಮೋದಿ ಚಾಲನೆ

Published 26 ಫೆಬ್ರುವರಿ 2024, 6:04 IST
Last Updated 26 ಫೆಬ್ರುವರಿ 2024, 6:04 IST
ಅಕ್ಷರ ಗಾತ್ರ

ಚನ್ನಪಟ್ಟಣ: ನಗರದ ರೈಲ್ವೆ ನಿಲ್ದಾಣಕ್ಕೆ ಪುನರಾಭಿವೃದ್ಧಿ ಭಾಗ್ಯ ಸಿಕ್ಕಿದ್ದು, ಕೇಂದ್ರ ಸರ್ಕಾರದಿಂದ ₹ 20.93 ಕೋಟಿ ವೆಚ್ಚದಲ್ಲಿ ನಿಲ್ದಾಣದ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ (ಫೆ.26) ವೀಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ.

ನಗರದಲ್ಲಿ 143 ವರ್ಷಗಳ ಹಿಂದೆ ಅಂದರೆ 1881ರಲ್ಲಿ ನಿರ್ಮಾಣವಾಗಿದ್ದ ರೈಲ್ವೆ ನಿಲ್ದಾಣವು ಈವರೆಗೆ ಸಣ್ಣಪುಟ್ಟ ಅಭಿವೃದ್ಧಿ ಹೊರತುಪಡಿಸಿ ಆಧುನಿಕಗೊಂಡಿರಲಿಲ್ಲ. ಬ್ರಿಟಿಷ್ ಕಾಲದ ಕಟ್ಟಡದಲ್ಲೇ ಕಾರ್ಯನಿರ್ವಹಿಸುತ್ತಿದ್ದ ರೈಲ್ವೆ ನಿಲ್ದಾಣಕ್ಕೆ ಕಾಯಕಲ್ಪದ ಮೂಲಕ ಆಧುನಿಕ ಸ್ಪರ್ಶ ಸಿಗಲಿದೆ.

ಚನ್ನಪಟ್ಟಣ ರೈಲ್ವೆ ನಿಲ್ದಾಣವು ಬೆಂಗಳೂರು-ಮೈಸೂರು ರೈಲ್ವೆ ಮಾರ್ಗದಲ್ಲಿ ತನ್ನದೇ ಆದ ಸ್ಥಾನವನ್ನು ಹೊಂದಿದೆ. ಕಲ್ಲಿದ್ದಲು ಚಾಲಿತ ರೈಲಿನ ಕಾಲದಲ್ಲೇ ಆರಂಭವಾದ ಬೊಂಬೆನಾಡಿನ ರೈಲ್ವೆ ನಿಲ್ದಾಣಕ್ಕೆ ಆಧುನಿಕತೆಗೆ ತಕ್ಕಂತೆ ವಿದ್ಯುತ್ ಚಾಲಿತ ರೈಲಿನವರೆಗೆ ಕಾಯಕಲ್ಪ ಮಾಡುತ್ತಾ ಬಂದಿದ್ದ ಕೇಂದ್ರ ಸರ್ಕಾರವು ಇದೀಗ ₹ 20.93 ಕೋಟಿ ವೆಚ್ಚದಲ್ಲಿ ಹೈಟೆಕ್ ಹಾಗೂ ಸುಸಜ್ಜಿತ ರೈಲ್ವೆ ನಿಲ್ದಾಣದ ನಿರ್ಮಾಣಕ್ಕೆ ಮುಂದಾಗಿದೆ.

ಚನ್ನಪಟ್ಟಣ ನಿಲ್ದಾಣವು 17 ರೈಲ್ವೆ ಶಾಖೆಗಳ ಕೇಂದ್ರ ಸ್ಥಾನವಾಗಿದೆ. ಜೊತೆಗೆ ಪ್ರತಿನಿತ್ಯ ಬೆಂಗಳೂರು ಮತ್ತು ತುಮಕೂರು ಜಂಕ್ಷನ್‌ವರೆಗೆ (ಎರಡೂ ಮಾರ್ಗದಲ್ಲಿ) 15 ನಿಮಿಷಕ್ಕೆ ಒಂದರಂತೆ ಪ್ರತಿನಿತ್ಯ 71 ರೈಲುಗಳು ಸಂಚಾರ ಮಾಡುತ್ತಿವೆ. ಅಲ್ಲದೆ, ಈ ರೈಲ್ವೆ ನಿಲ್ದಾಣದ ಮೂಲಕ ಪ್ರತಿನಿತ್ಯ ತಾಲ್ಲೂಕಿನ 2,500ಕ್ಕೂ ಹೆಚ್ಚು ಪ್ರಯಾಣಿಕರು ಬೆಂಗಳೂರು ನಗರಕ್ಕೆ ಪ್ರಯಾಣ ಮಾಡುತ್ತಾರೆ.

ಇಂತಹ ರೈಲ್ವೆ ನಿಲ್ದಾಣದಲ್ಲಿ ಹತ್ತಾರು ಸಮಸ್ಯೆಗಳಿದ್ದು, ಪ್ರಮುಖವಾಗಿ ಮಹಿಳೆಯರಿಗೆ ಭದ್ರತೆ, ದೀಪದ ಸೌಲಭ್ಯ, ಶೌಚಾಲಯದ ವ್ಯವಸ್ಥೆ, ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆಗಳಿಲ್ಲ. ಈ ನಿಟ್ಟಿನಲ್ಲಿ ಸಂಸದ ಡಿ.ಕೆ. ಸುರೇಶ್ ಅವರ ಪ್ರಸ್ತಾವನೆ ಮೇರೆಗೆ ರಾಜ್ಯದಲ್ಲಿನ 554 ರೈಲು ನಿಲ್ದಾಣಗಳ ಪುನರಾಭಿವೃದ್ಧಿ ಯೋಜನೆಯಲ್ಲಿ ಚನ್ನಪಟ್ಟಣದ ರೈಲ್ವೆ ನಿಲ್ದಾಣವನ್ನು ಸಹ ಸೇರ್ಪಡೆ ಮಾಡಲಾಗಿದ್ದು, ಈ ನಿಟ್ಟಿನಲ್ಲಿ ಇದಕ್ಕೆ ಹೈಟೆಕ್ ಸ್ಪರ್ಶ ಸಿಗುತ್ತಿರುವುದಕ್ಕೆ ರೈಲ್ವೆ ಪ್ರಯಾಣಿಕರು ಹರ್ಷ ವ್ಯಕ್ತಪಡಿಸಿದ್ದಾರೆ.

ಮುಂಬರುವ ದಿನಗಳಲ್ಲಿ ನಿರ್ಮಾಣವಾಗಲಿರುವ ರೈಲ್ವೆ ನಿಲ್ದಾಣದ ಕಟ್ಟಡದ ನೀಲನಕ್ಷೆ
ಮುಂಬರುವ ದಿನಗಳಲ್ಲಿ ನಿರ್ಮಾಣವಾಗಲಿರುವ ರೈಲ್ವೆ ನಿಲ್ದಾಣದ ಕಟ್ಟಡದ ನೀಲನಕ್ಷೆ

ಹೀಗಿರಲಿದೆ ಆಧುನಿಕ ರೈಲ್ವೆ ನಿಲ್ದಾಣ

* ಮೂರು ಅಂತಸ್ತುಗಳ ಹೊಸ ನಿಲ್ದಾಣದ ಕಟ್ಟಡ ನಿರ್ಮಾಣ

* ಜನಸ್ನೇಹಿ ಪಾರ್ಕಿಂಗ್ ಪ್ರದೇಶ ಅಭಿವೃದ್ಧಿ

* ಕುಡಿಯುವ ನೀರಿನ ವ್ಯವಸ್ಥೆ ಶೌಚಾಲಯಗಳ ಅಭಿವೃದ್ಧಿ

* ಲಿಫ್ಟ್ ವ್ಯವಸ್ಥೆ

* 290 ಮೀಟರ್ ಪ್ಲಾಟ್ ಫಾರ್ಮ್ ವಿಸ್ತರಣೆ

* ನಿಲ್ದಾಣದ ಮುಂಭಾಗ 12 ಮೀಟರ್ ರಸ್ತೆಯ ಅಗಲೀಕರಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT