ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಾಗಡಿ: ಇಲಾಖೆಯ ವಿಸ್ತರಣಾ ಕಾರ್ಯಕರ್ತರಿಗೆ ತರಬೇತಿ

Published 21 ಜನವರಿ 2024, 12:49 IST
Last Updated 21 ಜನವರಿ 2024, 12:49 IST
ಅಕ್ಷರ ಗಾತ್ರ

ಮಾಗಡಿ: ತಾಲ್ಲೂಕಿನ ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಐಸಿಎಆರ್‌ ಸಹಯೋಗದಲ್ಲಿ ಶನಿವಾರ ರೇಷ್ಮೆ ಕೃಷಿಯಲ್ಲಿ ಸಂಪನ್ಮೂಲ ನಿರ್ವಹಣೆ ಮತ್ತು ಆಧುನಿಕ ತಂತ್ರಜ್ಞಾನ ಕುರಿತು ರೇಷ್ಮೆ ಇಲಾಖೆಯ ವಿಸ್ತರಣಾ ಕಾರ್ಯಕರ್ತರಿಗೆ ತರಬೇತಿ ನಡೆಯಿತು.

ಈ ವೇಳೆ ಮಣ್ಣು ವಿಜ್ಞಾನಿ ಪ್ರೀತು ಡಿ. ಸಿ. ಮಾತನಾಡಿ, ರೇಷ್ಮೆ ಕೃಷಿಯಲ್ಲಿ ರಸಗೊಬ್ಬರ ಮತ್ತು ಕೀಟನಾಶಕಗಳಿಗೆ ಅಧಿಕ ಖರ್ಚು ಮಾಡಲಾಗುತ್ತಿದೆ. ಸಮರ್ಪಕ ನೈಸರ್ಗಿಕ ಸಂಪನ್ಮೂಲ ಬಳಕೆಯಿಂದ ಬೇಸಾಯ ವೆಚ್ಚ ಕಡಿತಗೊಳಿಸಬಹುದಾಗಿದೆ. ಎರೆಹುಳು ಗೊಬ್ಬರ ಬಳಕೆಯಿಂದ ಮಣ್ಣಿನ ಫಲವತ್ತತೆ ವೃದ್ಧಿಗೊಳಿಸುವುದರ ಮೂಲಕ ಹಿಪ್ಪುನೇರಳೆ ಉತ್ಪಾದನೆ ಹೆಚ್ಚಿಸಬಹುದು ಎಂದು ತಿಳಿಸಿದರು.

ಕೆವಿಕೆ ಮುಖ್ಯಸ್ಥೆ ಡಾ.ಲತಾ ಆರ್. ಕುಲಕರ್ಣಿ ಮಾತನಾಡಿ, ರೇಷ್ಮೆ ಗೂಡಿನ ಮೌಲ್ಯವರ್ಧನೆಗೆ ಬಹಳಷ್ಟು ಬೇಡಿಕೆ ಇರುವುದರಿಂದ ರೈತರು ಇದರ ಮೌಲ್ಯವರ್ಧನೆ ಕೈಗೊಳ್ಳಬೇಕು ಎಂದರು.

ಜಿಕೆವಿಕೆ ಕೃಷಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಭಾನುಪ್ರಕಾಶ್, ರೇಷ್ಮೆ ಕೃಷಿಯಲ್ಲಿ ಪ್ರಸ್ತುತ ಸ್ಥಿತಿಗತಿ, ಆಧುನಿಕ ಬೇಸಾಯ ಕ್ರಮಗಳು, ರೇಷ್ಮ ಹುಳು ಸಾಕಾಣಿಕೆಯಲ್ಲಿ ತಂತ್ರಜ್ಞಾನದ ಬಳಕೆ ಕುರಿತು ಮಾಹಿತಿ ನೀಡಿದರು.

ಚಾಮರಾಜನಗರ ಸಸ್ಯ ಸಂರಕ್ಷಣೆ ವಿಜ್ಞಾನಿ ನವೀನ್ ಮಾತನಾಡಿ, ಹಿಪ್ಪುನೇರಳೆಗೆ ಬಾಧಿಸುವ ಪ್ರಮುಖ ಕೀಟಗಳಾದ ಎಲೆ ಸುರುಳಿ ಕೀಟ, ಪರಂಗಿ ತುಪ್ಪಳದ ತಿಗಣೆ, ರಸ ಹೀರುವ ಕೀಟಗಳಾದ ಥ್ರಿಪ್ಸ್, ನುಸಿ, ಹೇನು ಹಾಗೂ ಜೇಡ ನುಸಿಗಳು ಹೆಚ್ಚು ಕಾಡುತ್ತವೆ. ಇದನ್ನು ಯಾವ ರೀತಿ ರಕ್ಷಿಸಬೇಕು ಎಂದು ವಿವರಿಸಿದರು.

ರೇಷ್ಮೆ ಇಲಾಖೆ ಉಪ ನಿರ್ದೇಶಕ ರವಿ ಕೆ.ಎನ್. ಮಾತನಾಡಿ, ರೈತರು ವೈಜ್ಞಾನಿಕ ಕ್ರಮ ಅನುಸರಿಸಿ ಬೆಳೆ ರಕ್ಷಿಸಿಕೊಳ್ಳಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT