ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಪುರದಲ್ಲೂ ಸರ್ಕಾರಿ ವೈದ್ಯಕೀಯ ಕಾಲೇಜು: ಸಿಂಡಿಕೇಟ್‌ ಅನುಮೋದನೆ

ರಾಮನಗರ ಜಿಲ್ಲೆಗೆ 2 ಸರ್ಕಾರಿ ವೈದ್ಯಕೀಯ ಕಾಲೇಜು ಭಾಗ್ಯ; ರಾಜೀವ್ ಗಾಂಧಿ ಆರೋಗ್ಯ ವಿ.ವಿ ಸಿಂಡಿಕೇಟ್ ಸಭೆಯಲ್ಲಿ ಶಿಫಾರಸು
Published 27 ನವೆಂಬರ್ 2023, 19:51 IST
Last Updated 27 ನವೆಂಬರ್ 2023, 19:51 IST
ಅಕ್ಷರ ಗಾತ್ರ

ರಾಮನಗರ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿನಿಧಿಸುವ ಕನಕಪುರದಲ್ಲಿ ಹೊಸದಾಗಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಲು ನ. 24ರಂದು ನಡೆದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (ಆರ್‌ಜಿಯುಎಚ್‌ಎಸ್‌) ಸಿಂಡಿಕೇಟ್ ಸಭೆ ಅನುಮೋದನೆ ನೀಡಿದೆ.

ರಾಮನಗರದ ವಿ.ವಿ ಕ್ಯಾಂಪಸ್ ನಲ್ಲೊಂದು ಹಾಗೂ ಕನಕಪುರದಲ್ಲಿ ಮತ್ತೊಂದು ಹೀಗೆ ರಾಮನಗರ ಜಿಲ್ಲೆಯೊಂದರಲ್ಲಿಯೇ ಎರಡು ಸರ್ಕಾರಿ ವೈದ್ಯಕೀಯ ಕಾಲೇಜುಗಳು ತಲೆ ಎತ್ತಲಿವೆ. 

ಇದರೊಂದಿಗೆ ರಾಮನಗರ ವೈದ್ಯಕೀಯ ಕಾಲೇಜು ಕನಕಪುರಕ್ಕೆ ಸ್ಥಳಾಂತರವಾಗಿದೆ ಎಂಬ ಗೊಂದಲಗಳಿಗೆ ತೆರೆ ಬಿದ್ದಿದೆ. ವೈದ್ಯಕೀಯ ಕಾಲೇಜು ಸ್ಥಳಾಂತರ ವಿವಾದ ತೀವ್ರ ರಾಜಕೀಯ ಬಣ್ಣ ಪಡೆದುಕೊಂಡಿತ್ತು. ಸ್ಥಳಾಂತರ ವಿರೋಧಿಸಿ ಬಿಜೆಪಿ, ಜೆಡಿಎಸ್‌ ಜಂಟಿ ನೇತೃತ್ವದಲ್ಲಿ ಹೋರಾಟ ನಡೆದು, ರಾಮನಗರ ಬಂದ್ ಕೂಡ ಮಾಡಲಾಗಿತ್ತು.

ಹೊಸ ವೈದ್ಯಕೀಯ ಕಾಲೇಜು ಆರಂಭಕ್ಕೆ ಆರ್‌ಜಿಯುಎಚ್‌ಎಸ್‌ ಇತ್ತೀಚೆಗೆ ತನ್ನ ಪೋರ್ಟಲ್‌ನಲ್ಲಿ ಅರ್ಜಿ ಆಹ್ವಾನಿಸಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯ ವಿಚಾರಣಾ ಸಮಿತಿಯು ವಿ.ವಿ.ಯ ಸಿಂಡಿಕೇಟ್ ಮತ್ತು ವಿದ್ಯಾವಿಷಯಕ ಪರಿಷತ್‌ ಸದಸ್ಯರನ್ನು ಭೇಟಿ ಮಾಡಿ ಕನಕಪುರದಲ್ಲಿ ವೈದ್ಯಕೀಯ ಕಾಲೇಜಿನ ಅಗತ್ಯ ಮತ್ತು ಕಾರ್ಯಸಾಧ್ಯತೆ ಕುರಿತು ವರದಿ ನೀಡಿತ್ತು. ಆ ಮೇರೆಗೆ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದು ವಿ.ವಿ ಮೂಲಗಳು ತಿಳಿಸಿವೆ.

150 ಸೀಟಿಗೆ ಕೋರಿಕೆ‌: ರಾಜ್ಯ ಸರ್ಕಾರವು ರಾಮನಗರ ಮತ್ತು ಕನಕಪುರ ವೈದ್ಯಕೀಯ ಕಾಲೇಜಿಗೆ ತಲಾ 150 ಸೀಟುಗಳನ್ನು ಕೋರಿ ಅರ್ಜಿ ಹಾಕಿದೆ. ರಾಷ್ಟ್ರೀಯ ವೈದ್ಯಕೀಯ ಆಯೋಗವು (ಎನ್‌ಎಂಸಿ) ಸದ್ಯ 10 ಲಕ್ಷ ಜನಸಂಖ್ಯೆಗೆ 100 ಸೀಟುಗಳ ಮಿತಿ ಹಾಕಿದೆ. ಸರ್ಕಾರ ಅರ್ಜಿಯಲ್ಲಿ ಪ್ರಸ್ತಾಪಿಸಿರುವ ಹೆಚ್ಚುವರಿ ತಲಾ 50 ಸೀಟುಗಳ ಕುರಿತು ಆಯೋಗವೇ ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ.

ಹದಿನಾರು ವರ್ಷಗಳಿಂದ ರಾಮನಗರದ ಆರ್‌ಜಿಯುಎಚ್‌ಎಸ್‌ ಕ್ಯಾಂಪಸ್‌ ಮತ್ತು ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ನಾಲ್ಕು ಸಲ ಭೂಮಿ ಪೂಜೆ ನಡೆದರೂ, ಕಾಮಗಾರಿ ಶುರುವಾಗದೆ ನನೆಗುದಿಗೆ ಬಿದ್ದಿತ್ತು.  ಎರಡು ತಿಂಗಳ ಹಿಂದೆಯಷ್ಟೇ ಸ್ಥಳೀಯ ಶಾಸಕ ಎಚ್‌.ಎ. ಇಕ್ಬಾಲ್ ಹುಸೇನ್ ಮತ್ತೇ ಐದನೇ ಸಲ ಭೂಮಿ ಪೂಜೆ ನೆರವೇರಿಸಿದ್ದರು. ಸದ್ಯ ಕಾಮಗಾರಿ ಪ್ರಗತಿಯಲ್ಲಿದೆ.

ವರದಿ ಶಿಫಾರಸಿನ ಮೇರೆಗೆ ಅನುಮೋದನೆ: ಕುಲಪತಿ

‌‘ಕನಕಪುರದಲ್ಲೂ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಕೋರಿ ಸರ್ಕಾರವು ವಿ.ವಿ.ಗೆ ಅರ್ಜಿ ಹಾಕಿತ್ತು. ಆ ಹಿನ್ನೆಲೆಯಲ್ಲಿ ತಜ್ಞರ ತಂಡವನ್ನು ಸ್ಥಳಕ್ಕೆ ಕಳಿಸಿ ಪರಿಶೀಲನೆ ನಡೆಸಲಾಗಿತ್ತು. ವಿವಿಧ ಮಾನದಂಡಗಳ ಮೇರೆಗೆ ತಂಡವು ನೀಡಿದ ವರದಿ ಮೇರೆಗೆ ಸಿಂಡಿಕೇಟ್ ಸಭೆಯಲ್ಲಿ ಕಾಲೇಜಿಗೆ ಅನುಮೋದನೆ ಕೊಟ್ಟಿದ್ದೇವೆ. ಮುಂದಿನ ಹಂತವಾಗಿ ಸರ್ಕಾರವು ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ ಅರ್ಜಿ ಹಾಕಬೇಕು. ಅಲ್ಲಿ ಅಂತಿಮ ಅನುಮತಿ ಸಿಗಬೇಕಿದೆ’ ಎಂದು ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ಕೆ. ರಮೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಅಭಿವೃದ್ಧಿಯ ಬದ್ಧತೆಗೆ ಸಾಕ್ಷಿ: ಶಾಸಕ

‘ಜನರ ಗಮನ ತಮ್ಮತ್ತ ಸೆಳೆಯಲು ಕೆಲವರು ವೈದ್ಯಕೀಯ ಕಾಲೇಜು ಸ್ಥಳಾಂತರ ಕುರಿತು ಅನಗತ್ಯ ಗೊಂದಲ ಸೃಷ್ಟಿಸಿದ್ದರು. ಸ್ವಾರ್ಥ ರಾಜಕಾರಣಕ್ಕಾಗಿ ಕಾಲೇಜು ಹೋರಾಟದ ನೆಪದಲ್ಲಿ ರಾಮನಗರ ಬಂದ್ ಕೂಡ ಮಾಡಿದ್ದರು. ಈಗ ಅದಕ್ಕೆ ಉತ್ತರ ಸಿಕ್ಕಿದೆ. ರಾಮನಗರದ ಜೊತೆಗೆ ಕನಕಪುರದಲ್ಲೂ ಪ್ರತ್ಯೇಕ ವೈದ್ಯಕೀಯ ಕಾಲೇಜಿಗೆ ಅನುಮೋದನೆ ಸಿಕ್ಕಿದೆ’ ಎಂದು ರಾಮನಗರ ಶಾಸಕ ಎಚ್‌.ಎ. ಇಕ್ಬಾಲ್ ಹುಸೇನ್ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT