ಪೋಲೋಹಳ್ಳಿ ಸೀಬನಕಲ್ಲು ಬೆಟ್ಟದಲ್ಲಿ ಬಂಡೆ ಸ್ಫೋಟಕ್ಕೆ ಆಕ್ಷೇಪ

ಬುಧವಾರ, ಏಪ್ರಿಲ್ 24, 2019
29 °C
ಕಲ್ಗೋರಿ ನಾಶವಾಗುವ ಭೀತಿ– ರೈತಾಪಿವರ್ಗದ ಬದುಕಿಗೆ ಸಮಸ್ಯೆಯ ದೂರು

ಪೋಲೋಹಳ್ಳಿ ಸೀಬನಕಲ್ಲು ಬೆಟ್ಟದಲ್ಲಿ ಬಂಡೆ ಸ್ಫೋಟಕ್ಕೆ ಆಕ್ಷೇಪ

Published:
Updated:
Prajavani

ಮಾಡಬಾಳ್‌ (ಮಾಗಡಿ): ಹೋಬಳಿಯ ಸಾವನವದುರ್ಗದ ತಪ್ಪಲಿನಲ್ಲಿ ಇರುವ ಕಾಡುಗೊಲ್ಲರ ಪೋಲೋಹಳ್ಳಿ ಸೀಬನ ಕಲ್ಲು ಬೆಟ್ಟಕ್ಕೆ ಕ್ರಷರ್‌ ಇಟ್ಟು ಬಂಡೆ ಸಿಡಿಸುವುದರಿಂದ ಬುಡಕಟ್ಟು ಸಮುದಾಯವರ ಬದುಕು ಹೈರಾಣಾಗಲಿದೆ ಎಂದು ಪರಿಸರವಾದಿ ಕೆ.ಜಯರಾಮು ತಿಳಿಸಿದರು.

ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಬೆಟ್ಟದ ಬಂಡೆಯ ಮೇಲೆ ಪ್ರಾಗೈತಿಹಾಸಿಕ ಕಲ್ಗೋರಿಗಳಿವೆ. ಸ್ಥಳೀಯರು ಪಾಂಡವರ ಗುಡಿಗಳು ಎಂದು ಯುಗಾದಿ ಹಬ್ಬದಂದು ಪೂಜಿಸಿಕೊಂಡು ಬಂದಿದ್ದಾರೆ. ಅದೆ ಬೆಟ್ಟದ ತಪ್ಪಲಿನ್ನಲಿ ರಾಮಕೃಷ್ಣ ಆಶ್ರಮದ ಭವತಾರಿಣಿ ಆಶ್ರಮ ಮತ್ತು ಕಾಳಿಮಾತೆಯ ಭವ್ಯ ದೇಗುಲಗಳಿವೆ ಎಂದರು.

ಭವತಾರಿಣಿ ಆಶ್ರಮದಲ್ಲಿ ಸದಾ ದೇಶದ ಭವ್ಯ ಸಂಸ್ಕೃತಿ ಪರಂಪರೆಯನ್ನು ಬಿಂಬಿಸುವ ಧಾರ್ಮಿಕ ಮತ್ತು ಆಧ್ಯಾತ್ಮಿಕ ಹಾಗೂ ಮಕ್ಕಳ ಮನಸ್ಸನ್ನು ಸಂಸ್ಕಾರಗೊಳಿಸುವ ತರಬೇತಿ ಶಿಬಿರಗಳು ನಡೆಯುತ್ತಿವೆ. ಬೆಟ್ಟದಲ್ಲಿ ಪುರಾಣ ಪ್ರಸಿದ್ಧ ಗಾಳಿ ಆಂಜನೇಯಸ್ವಾಮಿ ವಿಗ್ರಹವಿದೆ. ವಿಶೇಷ ಪೂಜೆ ಉತ್ಸವಗಳು ನಡೆಯುತ್ತಿವೆ. ಬೆಟ್ಟದ ಬಂಡೆಯನ್ನು ಸಿಡಿಸುವುದರಿಂದ ನವಿಲು, ಜಿಂಕೆ, ಮೊಲ, ಚಿರತೆ, ಕರಡಿ, ಆನೆಗಳು ನಾಶವಾಗಲಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಬೆಟ್ಟದಲ್ಲಿ ಅಮೂಲ್ಯವಾದ ಗಿಡಮೂಲಿಕಾ ಔಷಧಿ ಸಸ್ಯಗಳಿವೆ. ಅಲ್ಲದೆ ಬೆಟ್ಟದ ತಪ್ಪಲಿನಲ್ಲಿ ಇರುವ ಗುಡ್ಡಹಳ್ಳಿ, ಮರಲಗೊಂಡಲ, ವೆಂಗಳಪ್ಪನತಾಂಡ್ಯ, ಪೋಲೋಹಳ್ಳಿ ಗ್ರಾಮಗಳ ರೈತಾಪಿವರ್ಗದವರ ಬದುಕು ನಾಶವಾಗಲಿದೆ. ವೆಂಗಳಪ್ಪನ ತಾಂಡ್ಯ ಉತ್ತರಕ್ಕೆ ಇರುವ ತಿಮ್ಮಪ್ಪನ ಬೆಟ್ಟದಲ್ಲಿ 18 ಕ್ರಷರ್‌ಗಳು ಹಗಲು ರಾತ್ರಿ ಸಿಡಿಮದ್ದು ಬಳಸಿ ಗಣಿಗಾರಿಕೆ ನಡೆಸುತ್ತಿದ್ದು, ರಂಗನಾಥ ಸ್ವಾಮಿ ಪೂರ್ವದ್ವಾರದ ಮೇಲಿನ ರಾಯಗೋಪುರ ಶಿಥಿಲವಾಗಿತ್ತು ಎಂದು ವಿವರಿಸಿದರು.

ಪಣಕನಹಲ್ಲು, ತಿರುಮಲೆ ಗ್ರಾಮದವರ ಮನೆಗಳ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡು, ಬಡವರ ಬದುಕು ಬೀದಿಗೆ ಬಿದ್ದಿತ್ತು. ಜಿಲ್ಲಾ ಮಟ್ಟದ ಗಣಿಗಾರಿಕೆ ಮತ್ತು ಪರಿಸರ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದೆ, ಕ್ರಷರ್‌ ಮಾಲೀಕರು ನೀಡುವ ಆಮಿಷಗಳಿಗೆ ಬಲಿಯಾಗಿ ಗ್ರಾಮೀಣ ಜನತೆಯ ಬದುಕನ್ನು ನಾಶ ಮಾಡುತ್ತಿದ್ದಾರೆ. ಪೋಲೋಹಳ್ಳಿ ಬಂಡೆ ಒಡೆಯಲು ಕ್ರಷರ್‌ ಇಡುವುದನ್ನು ವಿರೋಧಿಸಿ ಹೋರಾಟ ರೂಪಿಸಲಾಗುವುದು ಎಂದರು.

ವಿರೋಧ: ಪೋಲೋಹಳ್ಳಿ ಬೆಟ್ಟಕ್ಕೆ ಕ್ರಷರ್‌ ಇಡುವುದರಿಂದ ನಮ್ಮ ಬದುಕು ನಾಶವಾಗಲಿದೆ ಎಂದು ಪೋಲೋಹಳ್ಳಿ, ಗುಡ್ಡಹಳ್ಳಿ, ಮರಲಗೊಂಡಲ, ವೆಂಗಳಪ್ಪನತಾಂಡ್ಯ, ರಂಗನಾಥ ಪುರ ಸುತ್ತಲಿನ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !