ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಜಾನಪದ ಲೋಕದಲ್ಲಿ ಸುಗ್ಗಿ ಸಂಭ್ರಮ

ಕಿಚ್ಚು ಹಾಯ್ದ ರಾಸುಗಳು: ಹಳ್ಳಿ ಸೊಗಡು ಸವಿದ ಪ್ರವಾಸಿಗರು
Last Updated 14 ಜನವರಿ 2021, 12:57 IST
ಅಕ್ಷರ ಗಾತ್ರ

ರಾಮನಗರ: ಸುಗ್ಗಿ ಸಂಭ್ರಮ ನೆನಪಿಸುವ ಕಣದ ರಾಶಿ, ಸುಗ್ಗಿ ಕಾರ್ಯಕ್ಕೆ ಧನಿಯಾದ ಪದಗಳು, ಕಿಚ್ಚು ಹಾಯುತ್ತ ನೋಡುಗರನ್ನು ಮುದಗೊಳಿಸಿದ ರಾಸುಗಳು...

ಇಂತಹದ್ದೊಂದು ಸಂಪ್ರದಾಯಿಕ ಸುಗ್ಗಿ ಸಂಕ್ರಾಂತಿ ಆಚರಣೆಗೆ ಗುರುವಾರ ಇಲ್ಲಿನ ಜಾನಪದ ಲೋಕವು ಸಾಕ್ಷಿ ಆಯಿತು. ಒಕ್ಕಲುತನದ ಆಚರಣೆಗಳು ನೆರೆದ ಪ್ರವಾಸಿಗರಿಗೆ ಹಬ್ಬವನ್ನು ನೆನಪಿಸಿದವು.

ಎಂದಿನಂತೆ ಈ ವರ್ಷ ಸಹ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಜಾನಪದ ಲೋಕದಲ್ಲಿ ಸಂಕ್ರಾಂತಿ ಆಚರಣೆ ಹಮ್ಮಿಕೊಳ್ಳಲಾಗಿತ್ತು. ಕಣದ ರಾಶಿ, ರಾಸು ಪೂಜೆ ಮೊದಲಾದ ಕಾರ್ಯಕ್ರಮಗಳು ನಡೆದವು.ಮಹಿಳಾ ಡೊಳ್ಳು ಕುಣಿತ ತಂಡ, ತಮಟೆ ಮೊದಲಾದ ಕಲಾತಂಡಗಳು ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರುಗು ತುಂಬಿದವು.

ರಾಶಿ ಹಾಗೂ ರಾಸು ಪೂಜೆ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಉದ್ಘಾಟಿಸಿದರು. ಈ ಸಂದರ್ಭ ಜಿಲ್ಲಾಧಿಕಾರಿಗೆ ಸಾಂಪ್ರದಾಯಿಕವಾಗಿ ಬಾಗಿನ ನೀಡಲಾಯಿತು. ‘ಕೊರೊನಾ ಕಾಲದಲ್ಲಿಯೂ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜನೆ ಮಾಡಲಾಗಿದೆ. ಜಾನಪದ ಲೋಕದ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದೇ ಒಂದು ಖುಷಿಯ ವಿಚಾರ. ಈ ದಿಕ್ಕಿನಲ್ಲಿ ಸುಗ್ಗಿಯ ಹಬ್ಬಸಂಕ್ರಾಂತಿಯನ್ನು ರಾಸುಗಳ ಕಿಚ್ಚು ಹಾಯಿಸುವ ಜೊತೆಗೆ, ರಾಗಿ ರಾಶಿ ಹಾಕಿ, ಅದರ ಸುತ್ತಲೂ ಭತ್ತ, ಕಡಲೆಕಾಯಿ, ಗೆಣಸು, ಕಬ್ಬು ಸೇರಿದಂತೆ ಸಿರಿಧಾನ್ಯಗಳನ್ನು ಇಟ್ಟು ರಾಶಿಗೆ ಪೂಜೆ ಸಲ್ಲಿಸಿದ್ದು, ಮತ್ತೆ ನಮ್ಮನ್ನುಜಾನಪದರ ಕಾಲಕ್ಕೇ ಕರೆದುಕೊಂಡು ಹೋದ ಅನುಭವ ನೀಡಿತು’ ಎಂದು ಜಿಲ್ಲಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದರು.

ಕೋವಿಡ್ ಕಾರಣಕ್ಕೆ ಈ ವರ್ಷ ಕೆಂಗಲ್ ಜಾನುವಾರು ಜಾತ್ರೆ ರದ್ದಾಗಿದೆ. ಮುಂದಿನ ವರ್ಷ ಜಿಲ್ಲೆಯ ಜನತೆ ಹಾಗೂ ರಾಸುಗಳನ್ನು ಸೇರಿಸಿ ಅದ್ದೂರಿಯಾಗಿ ಕಾರ್ಯಕ್ರಮ ಆಯೋಜನೆ ಮಾಡಿ ಎಂದು ಸಲಹೆ ನೀಡಿದರು.

ಜಾನಪದ ಪರಿಷತ್‍ನ ಅಧ್ಯಕ್ಷ ಟಿ.ತಿಮ್ಮೇಗೌಡ ಮಾತನಾಡಿ, ಸಂಕ್ರಾಂತಿ ಹಬ್ಬವು ಗ್ರಾಮಾಂತರ ಪ್ರದೇಶದ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಇದು ಗ್ರಾಮೀಣರ ಹಬ್ಬವಾಗಿದ್ದು, ಬೆಳೆದ ಧಾನ್ಯವನ್ನು ರಾಶಿ ಮಾಡಿ ಪೂಜೆ ಮಾಡಲಾಗುತ್ತದೆ. ಈ ಸುಗ್ಗಿ ಹಬ್ಬದ ಮೂಲಕವೇ ಗ್ರಾಮೀಣ ಆಚರಣೆಗಳು ಪ್ರಪಂಚಕ್ಕೆ ತೆರೆದುಕೊಳ್ಳುತ್ತದೆ ಎಂದರು. ಈ ವರ್ಷ ಕೊರೊನಾ ಕಾರಣಕ್ಕೆ ಹಲವು ಕಾರ್ಯಕ್ರಮಗಳನ್ನು ಮೊಟಕುಗೊಳಿಸಲಾಗಿದೆ.ರಾಸುಗಳ ಪ್ರದರ್ಶನ ಮತ್ತು ಸ್ಪರ್ಧೆ ಈ ಬಾರಿ ನಡೆದಿಲ್ಲ ಎಂದರು.

ಕಲಾವಿದರು ಸಂಕಷ್ಟದಲ್ಲಿದ್ದಾರೆ. ಅವರನ್ನು ಕಷ್ಟಕ್ಕೆ ನೆರವಾಗುವುದು ಎಲ್ಲರ ಕರ್ತವ್ಯವಾಗಿದೆ. ಕೊರೊನಾ ಸಂಪೂರ್ಣವಾಗಿ ನಾಶವಾಗಿಲ್ಲ. ಹಾಗಾಗಿ ಎಲ್ಲರೂ ಎಚ್ಚರಿಕೆಯಿಂದ ಇರುವುದು ಇಂದಿನ ಅಗತ್ಯಗಳಲ್ಲಿ ಒಂದುಎಂದು ಕಿವಿಮಾತು ಹೇಳಿದರು. ಜಾನಪದ ಲೋಕದ ಆಡಳಿತಾಧಿಕಾರಿ ರುದ್ರಪ್ಪ, ರಂಗಸಹಾಯಕ ಪ್ರದೀಪ್, ಜಿಲ್ಲಾ ಜಾನಪದ ಪರಿಷತ್‌ ಅಧ್ಯಕ್ಷ ಸು.ತ. ರಾಮೇಗೌಡ ಇದ್ದರು.

ಕಲಾವಿದರಿಂದ ಜಿಲ್ಲಾಧಿಕಾರಿಗೆ ಮನವಿ: ಕಾರ್ಯಕ್ರಮದ ಸಂದರ್ಭ ಜಾನಪದ ಕಲಾವಿದರು ಮಾಸಿಕ ಪಿಂಚಣಿ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೀಡುವಂತೆ ಕೋರಿ ಜಿಲ್ಲಾಧಿಕಾರಿ ಅರ್ಚನಾ ಅವರಿಗೆ ಮನವಿಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ, ನೆರವಾಗುವ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT