ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿತೆಗೆ ಬೇಕು ವರ್ತಮಾನದ ಸ್ಪರ್ಶ: ಸಾಹಿತಿ ಡಾ. ಎಂ. ಬೈರೇಗೌಡ

ಸಂಕ್ರಾಂತಿ ಕವಿಗೋಷ್ಠಿಯಲ್ಲಿ ಸಾಹಿತಿ ಡಾ. ಎಂ. ಬೈರೇಗೌಡ ಅಭಿಪ್ರಾಯ
Published 15 ಜನವರಿ 2024, 15:35 IST
Last Updated 15 ಜನವರಿ 2024, 15:35 IST
ಅಕ್ಷರ ಗಾತ್ರ

ರಾಮನಗರ: ‘ಕವಿತೆಗೆ ವರ್ತಮಾನದ ಸ್ಪರ್ಶ ಇರಬೇಕು. ಪ್ರಸ್ತುತತೆಯ ತುರ್ತುಗಳನ್ನು ಅರ್ಥ ಮಾಡಿಕೊಂಡು ಹುಟ್ಟಿದ ಕವಿತೆ ಸದಾಕಾಲ ಉಳಿಯುತ್ತದೆ. ಪೂರ್ವಸೂರಿಗಳಾದ ಪಂಪ, ರನ್ನ, ಬೇಂದ್ರೆ, ಕುವೆಂಪು ಅಂತಹವರ ಆಲೋಚನಾ ಕ್ರಮಗಳನ್ನು ಅರ್ಥೈಸಿಕೊಂಡು ರಚಿತವಾಗುವ ಕಾವ್ಯಕ್ಕೆ ನೆಲೆ ಜೊತೆಗೆ, ಬೆಲೆಯೂ ಬರುತ್ತದೆ’ ಎಂದು ಸಾಹಿತಿ ಡಾ. ಎಂ. ಬೈರೇಗೌಡ ಅಭಿಪ್ರಾಯಪಟ್ಟರು.

ಸಂಕ್ರಾಂತಿ ಹಬ್ಬದ ಅಂಗವಾಗಿ, ತಾಲ್ಲೂಕಿನ ಕವಣಾಪುರದ ಬಸವಣ್ಣ ದೇಗುಲದ ಆವರಣದಲ್ಲಿ ರಾಮನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಸಂಕ್ರಾಂತಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತಾನಾಡಿದರು.

‘ಸೃಜನಶೀಲ ಕ್ರಿಯೆಯಾದ ಕವಿತೆಯ ಕಟ್ಟುವಿಕೆಯಲ್ಲಿ ಕವಿಯ ಕಾಣ್ಕೆ ಅಡಕವಾಗಿರುತ್ತದೆ. ಸಾಮಾನ್ಯರಲ್ಲೂ ಒಬ್ಬ ಕವಿ ಇರುತ್ತಾನೆ. ಆದರೆ ಅಭಿವ್ಯಕ್ತಿಸುವ ಶಕ್ತಿ ಇರುವವರು ಮಾತ್ರ ಅದನ್ನು ದಾಖಲಿಸಿ ಮುಂದಿನ ತಲೆಮಾರಿಗೆ ಕೊಂಡೊಯ್ಯುತ್ತಾರೆ. ಹೀಗೆ ನಿರ್ಮಾಣವಾದ ಕಾವ್ಯದ ಗಟ್ಟಿತನವು, ಅದು ಎಷ್ಟು ಕಾಲ ಉಳಿಯಬಲ್ಲದು ಎಂಬುದರ ಮೇಲೆ ನಿರ್ಣಯವಾಗುತ್ತದೆ’ ಎಂದರು.

‘ಕಾವ್ಯ ಕಟ್ಟುವುದು ಎಂದರೆ, ಕುಶಲಿಯೊಬ್ಬನ ಕುಸುರಿ ಕೆಲಸದಂತೆ. ಇಡೀ ಸಮಾಜವನ್ನೇ ಬದಲಿಸುವ ಶಕ್ತಿ ಕಾವ್ಯಕ್ಕಿರುತ್ತದೆ. ಅಂತಹ ಕಾವ್ಯದ ರಚನೆಯ ಅವಶ್ಯಕತೆ ಸದಾ ಇರುತ್ತದೆ. ಕವಿ ತನ್ನ ಸುತ್ತಲಿನ ಸಮಾಜ ಹಾಗೂ ಜಗತ್ತಿಗೆ ಮುಖಾಮುಖಿಯಾಗುತ್ತಾ ಕಾವ್ಯ ಕಟ್ಟಬೇಕು. ಸಮಕಾಲೀನ ತಲ್ಲಣಗಳಿಗೆ ಸ್ಪಂದಿಸಬೇಕು’ ಎಂದು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಟಿ. ನಾಗೇಶ್ ಮಾತನಾಡಿ, ‘ಪ್ರೀತಿ ಮತ್ತು ಪ್ರೇಮಗಳನ್ನು ಮೀರಿದ ಕಾವ್ಯ ರಚನೆಯ ಅಗತ್ಯವಿದೆ. ಕೇವಲ ನಾನು ಕವಿಯಾಗಬೇಕೆಂಬ ಇರಾದೆ ಇದ್ದರೆ ಸಾಲದು. ಕಾವ್ಯ ಸೃಷ್ಟಿಗೆ ಆಂತರ್ಯದ ತುಡಿತ ಅತಿ ಮುಖ್ಯ. ಅದಿಲ್ಲದಿದ್ದರೆ, ಕಾವ್ಯವು ಗಟ್ಟಿತನ ಉಳಿಯುವುದಿಲ್ಲ’ ಎಂದು ಹೇಳಿದರು.

‘ನಮ್ಮ ಸಾರಸ್ವತ ಲೋಕದದ ದಿಗ್ಗಜರ ಕವಿತೆಗಳನ್ನು ಯುವಜನರು ಓದಬೇಕು. ಅವುಗಳ ಕುರಿತು ವಿಚಾರ ಮಾಡಬೇಕು. ಆಯಾ ಕಾಲಘಟ್ಟದ ಅನಿವಾರ್ಯತೆಯನ್ನು ಅರಿಯಬೇಕು. ಇದು ಯುವಜನರೊಳಗೊಬ್ಬ ಸೃಜನಶೀಲ ಹಾಗೂ ಗಟ್ಟಿ ಕಾಳಿನ ಕವಿಯ ಹುಟ್ಟಿಗೆ ಕಾರಣವಾಗುತ್ತದೆ’ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ. ಶಿವಲಿಂಗಯ್ಯ, ‘ಗ್ರಾಮೀಣ ಭಾಗದಲ್ಲಿ ನಿರಂತರವಾಗಿ ಇಂತಹ ಕಾರ್ಯಕ್ರಮಗಳನ್ನು ಸಾಹಿತ್ಯ ಪರಿಷತ್ ಆಯೋಜಿಸಿಕೊಂಡು ಬರುತ್ತಿರುವುದು ಯುವ ಕವಿಗಳಿಗೆ ಮಾರ್ಗದರ್ಶಿಯಾಗಿದೆ’ ಎಂದರು.

ಕವಿಗಳಾದ ಅರುಣ್ ಕವಣಾಪುರ, ವಿ.ಪಿ. ವರದರಾಜ್, ಗೊಲ್ಲರದೊಡ್ಡಿಯ ಪಿ.ಎನ್. ಅನಂತನಾಗ್, ಪುನೀತ್‌ಕುಮಾರ್ ಎಂ.ಎಲ್, ಸುರೇಶ್ ಸಿ, ಯೋಗೇಶ್ ದ್ಯಾವಾಪಟ್ಟಣ, ಡಾ. ಹೇಮಂತಕುಮಾರ್, ಐಶ್ವರ್ಯ ಎಂ.ಸಿ, ಕಿರಣ್, ಮೇದರದೊಡ್ಡಿ ಹನುಮಂತು, ಕಿರಣ್‌ರಾಜ್ ತುಂಬೇನಹಳ್ಳಿ, ಚೇತನ್ ಗುನ್ನೂರು, ಶರತ್ ಹಾಗೂ ಹರೀಶ್ ತಮ್ಮ ಕವನಗಳನ್ನು ವಾಚಿಸಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ.ಟಿ. ದಿನೇಶ್ ಬಿಳಗುಂಬ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷ, ರಾಜೇಶ್ ಕವಣಾಪುರ ಹಾಗೂ ಚನ್ನಪಟ್ಟಣ ತಾಲ್ಲೂಕು ಕಸಾಪ ಮಾಜಿ ಅಧ್ಯಕ್ಷ ಮತ್ತಿಕೆರೆ ಚಲುವರಾಜು ಅತಿಥಿಗಳಾಗಿ ಪಾಲ್ಗೊಂಡಿದ್ದರು. ಚೌಪು ಸ್ವಾಮಿ ಅವರ ಗಾಯನ ಸಭಿಕರನ್ನು ರಂಜಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT